ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ವಿಳಂಬ: ಕೃಷಿ ಕೆಲಸದಲ್ಲಿ ವ್ಯತ್ಯಾಸ

ಅಡಿಕೆ ಬೆಳೆ ಉಳಿಸಿಕೊಳ್ಳಲು ಬೆಳೆಗಾರರ ಪ್ರಯತ್ನ– ಸಕಾಲಕ್ಕೆ ಔಷಧಿ ಸಿಂಪಡಣೆ
Last Updated 14 ಜೂನ್ 2019, 19:30 IST
ಅಕ್ಷರ ಗಾತ್ರ

ಕಳಸ: ‘ಕೊಳೆ ರೋಗಕ್ಕೆ ಹೆದ್ರಿ ಈ ವರ್ಷ ಅಡಿಕೆ ಬೆಳೆಗೆ ಒಂದ್ ರೌಂಡ್ ಔಷಧಿ ಹೊಡೆದೇ ಬಿಟ್ವಿ. ಮಳೆ ಸ್ವಲ್ಪ ಲೇಟಾಗಿ ಶುರು ಆಗಿದ್ದು ಒಂದು ಲೆಕ್ಕಕ್ಕೆ ಒಳ್ಳೆಯದೇ ಆಯ್ತು’

ಇದು ನೆಲ್ಲಿಬೀಡಿನ ಅಡಿಕೆ ಬೆಳೆಗಾರ ಜಗದೀಶ್ ಅವರ ಮಾತು. ಕಳೆದ ವರ್ಷದ ಮಳೆಗಾಲದಲ್ಲಿ ಅಡಿಕೆ ಬೆಳೆಗೆ ಕೊಳೆರೋಗ ಕಾಣಿಸಿಕೊಂಡು ಬೆಳೆಗಾರರು ತತ್ತರಿಸಿ ಹೋಗಿದ್ದರು. ಈ ವರ್ಷವೂ ಅದೇ ಆತಂಕ ಅಡಿಕೆ ಬೆಳೆಗಾರರನ್ನು ಕಾಡುತ್ತಿದೆ.

ಹೋದ ವರ್ಷ ಜೂನ್ 1ರಂದೇ ಮುಂಗಾರು ಶುರು ಆಗಿತ್ತು. ಆ ನಂತರ ಆಗಸ್ಟ್‌ವರೆಗೂ ಮಳೆ ಬಿಡುವನ್ನೇ ನೀಡದ್ದಿದ್ದರಿಂದ ಅಡಿಕೆಗೆ ಕೊಳೆ ರೋಗ ತೀವ್ರವಾಗಿ ಬಾಧಿಸಿ, ಫಸಲಿಗೆ ಶೇ 30 ರಿಂದ 90ರವರೆಗೂ ಹಾನಿ ತಂದಿತ್ತು. ಈ ವರ್ಷ ಜೂನ್ 10ರವರೆಗೆ ಆರಂಭವಾಗದ ಮಳೆಯು ಅಡಿಕೆಗೆ ಸಕಾಲಕ್ಕೆ ಬೋರ್ಡೊ ದ್ರಾವಣ ಅಥವಾ ಪೊಟ್ಯಾಶಿಯಮ್ ಪಾಸ್ಪೋನೆಟ್ ದ್ರಾವಣ ಸಿಂಪಡಿಸಲು ಅನುವು ಮಾಡಿಕೊಟ್ಟಂತಾಗಿದೆ.

ಈಗಾಗಲೇ ಒಂದು ಸುತ್ತಿನ ಅಡಿಕೆ ಔಷಧಿ ಸಿಂಪಡಿಸಿರುವವರು ಮಳೆಗಾಲ ಕಳೆಯುವುದರ ಒಳಗೆ ಪ್ರತಿ 45 ದಿನಕ್ಕೊಮ್ಮೆ ಎಂಬಂತೆ ಇನ್ನೆರಡು ಸುತ್ತಿನ ಔಷಧಿ ಸಿಂಪಡಿಸುವುದು ಅನಿವಾರ್ಯ ಆಗುತ್ತದೆ. ಆದರೆ, ಕೆಲವರು ಮೊದಲ ಸಿಂಪಡಣೆಯನ್ನು ಜೂನ್ ಕೊನೆ ವಾರದವರೆಗೂ ಮಾಡದೆ ಒಂದು ಸುತ್ತು ಔಷಧಿ ಉಳಿಸುವ ಬುದ್ಧಿವಂತಿಕೆಯನ್ನೂ ತೋರುತ್ತಿದ್ದಾರೆ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 8-12 ಇಂಚು ಮಳೆ ಮಾತ್ರ ಸುರಿದಿದ್ದಿರಿಂದ ಕಾಫಿ ತೋಟಕ್ಕೆ ರಸಗೊಬ್ಬರ ನೀಡಲು ಸರಿಯಾದ ತೇವಾಂಶವೇ ಸೃಷ್ಟಿಯಾಗಲಿಲ್ಲ. ಇದರಿಂದ ಬಹುತೇಕ ಬೆಳೆಗಾರರು ತೋಟಕ್ಕೆ ಸಕಾಲಕ್ಕೆ ಗೊಬ್ಬರ ನೀಡದಂತಾಯಿತು. ಇದೀಗ ಮಳೆ ಹಿಡಿದ ಕೂಡಲೇ ರಸಗೊಬ್ಬರ ನೀಡುವ ತರಾತುರಿ ಕಂಡು ಬಂದಿದೆ.
ಭತ್ತದ ಬೇಸಾಯಕ್ಕೆ ವಿಶೇಷ ಆಸಕ್ತಿ ಇಲ್ಲದಿದ್ದರೂ ಕೆಲ ಸಂಪ್ರದಾಯಸ್ಥ ಕೃಷಿ ಕುಟುಂಬಗಳು ತಮ್ಮ ಊಟಕ್ಕೆ ತಕ್ಕಷ್ಟು ಗದ್ದೆ ಮಾಡಲು ಸಜ್ಜಾಗಿದ್ದಾರೆ. ಒಂದು ಸುತ್ತಿನ ಉಳುಮೆಯನ್ನು ಈಗಾಗಲೇ ಆರಂಭಿಸಿರುವ ರೈತರು ಸಸಿ ಮಡಿ (ಅಗಡಿ) ಸಿದ್ಧತೆಗೂ ತೊಡಗಿದ್ದಾರೆ.

‘ಕಾಳುಮೆಣಸಿನ ಬೆಲೆ ಕುಸಿತದಿದಾಗಿ ಮೆಣಸಿನ ಕೃಷಿಗೆ ಬೆಳೆಗಾರರು ವಿಶೇಷ ಪ್ರಯತ್ನವನ್ನು ಮಾಡುತ್ತಿಲ್ಲ. ಕಳೆದ ಮಳೆಗಾಲವಿಡೀ ಮೆಣಸಿನ ಬಳ್ಳಿ ಉಳಿಸಿಕೊಳ್ಳಲು ಎಲ್ಲ ಪ್ರಯತ್ನ ಮಾಡಿದೆವು. ಔಷಧಿ ಮತ್ತು ಕಾರ್ಮಿಕರಿಗೆ ಲಕ್ಷಗಟ್ಟಲೆ ಖರ್ಚು ಮಾಡಿದರೂ ಹೆಚ್ಚಿನ ಬಳ್ಳಿಗಳು ಸತ್ತುಹೋದವು. ಧಾರಣೆಯೂ ಕುಸಿದಿದೆ. ಇನ್ನು ಮೆಣಸಿನ ಬಳ್ಳಿ ನೆಡುವುದು ಬಿಟ್ಟರೆ ಯಾವ ವಿಶೇಷ ಕೆಲಸವನ್ನೂ ಮೆಣಸಿಗೆ ಮಾಡುವುದಿಲ್ಲ' ಎಂದು ಮೆಣಸಿನ ಬೇಸಾಯದಲ್ಲಿ ಬೇಸತ್ತಿರುವ ಅನಂತ ಕಾಮತ್ ಹೇಳುತ್ತಾರೆ.

ಜೂನ್ ಎರಡನೇ ವಾರದವರೆಗೆ ಕಳಸ ತಾಲ್ಲೂಕಿನ ವಿವಿಧೆಡೆ ಒಟ್ಟು ಮಳೆ ಪ್ರಮಾಣ 12-20 ಇಂಚು ಮಾತ್ರ ಆಗಿದೆ. ಮಳೆಯ ಲಕ್ಷಣ ಗಮನಿಸಿದರೆ ಈ ವರ್ಷ ಮಳೆ ಹಿಂದಿನ ವರ್ಷಕ್ಕಿಂತ ಕಡಿಮೆ ಎಂದೇ ಅನುಭವಿಗಳು ಹೇಳುತ್ತಿದ್ದಾರೆ. ಕಳೆದ ಜೂನ್ 13ರಂದು ಭದ್ರಾ ನದಿಯು ವರ್ಷದ ಗರಿಷ್ಟ ಮಟ್ಟದಲ್ಲಿ ಹರಿದು ಕೋಟಿತೀರ್ಥದ ಸೇತುವೆಯ ಮೇಲೂ ಹರಿದಿತ್ತು. ಮಲೆನಾಡಿಗೆ ಮಳೆಯಿಂದಲೇ ಲಕ್ಷಣ ಮತ್ತು ವೈಶಿಷ್ಟ್ಯ ಬರುತ್ತದೆ. ಆದರೂ ಹೋದ ವರ್ಷದ ಅತಿವೃಷ್ಟಿ ಈ ವರ್ಷ ಅನುಭವಕ್ಕೆ ಬಾರದು ಎಂಬ ವಿಶ್ವಾಸದಲ್ಲಿ ಕೃಷಿಕರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT