ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ನೌಕರರಿಗೆ ಸಂಕಷ್ಟ ತಂದ ವೇತನ ವಿಳಂಬ

2500ಕ್ಕೂ ಹೆಚ್ಚು ನೌಕರರಿಗೆ ಬಾರದ ವೇತನ*ಮಾರ್ಚ್-ಏಪ್ರಿಲ್ ತಿಂಗಳ ವೇತನ ಪಾವತಿ ಬಾಕಿ
ಅಕ್ಷರ ಗಾತ್ರ

ಹರಪನಹಳ್ಳಿ: ರಾಜ್ಯ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಹರಪನಹಳ್ಳಿ ತಾಲ್ಲೂಕಿನ ರಾಜ್ಯ ಸರ್ಕಾರಿ ನೌಕರರಿಗೆ ಎರಡು ತಿಂಗಳಿಂದ ವೇತನ ಬಾರದೇ ತೊಂದರೆ ಅನುಭವಿಸುತ್ತಿದ್ದಾರೆ.

ಸಂವಿಧಾನದ 371ಜೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹರಪನಹಳ್ಳಿ ತಾಲ್ಲೂಕನ್ನು ದಾವಣಗೆರೆ ಜಿಲ್ಲೆಯಿಂದ ವರ್ಗಾಯಿಸಿ ಮೂಲ ಜಿಲ್ಲೆ ಬಳ್ಳಾರಿಗೆ ಸೇರ್ಪಡೆಗೊಳಿಸಿತ್ತು. ಇದಾದ ನಂತರ ತಾಲ್ಲೂಕಿನ ಒಂದೊಂದೇ ಇಲಾಖೆಗಳು ಬಳ್ಳಾರಿ ಜಿಲ್ಲೆಗೆ ವರ್ಗಾವಣೆಗೊಂಡಿವೆ. ಆದರೆ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುವ ರಾಜ್ಯ ಸರ್ಕಾರಿ ನೌಕರರ ವೇತನ ಪಾವತಿಯಲ್ಲಿ ತಾಂತ್ರಿಕ ಸಮಸ್ಯೆ ಉದ್ಭವಿಸಿ ನಿಗದಿತ ದಿನಾಂಕಕ್ಕೆ ವೇತನ ಪಾವತಿ ಆಗದಿರುವುದು ನೌಕರರಿಗೆ ಸಂಕಷ್ಟ ತಂದಿದೆ.

ತಾಲ್ಲೂಕು ಪಂಚಾಯಿತಿ, ಶಿಕ್ಷಣ ಇಲಾಖೆ, ಕೃಷಿ, ತೋಟಗಾರಿಕೆ, ಲೋಕೋಪಯೋಗಿ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ, ಪಶು ಸಂಗೋಪನೆ, ಪದವಿ, ಪದವಿಪೂರ್ವ ಇಲಾಖೆ, ಪಶು ಸಂಗೋಪನೆ, ಕಂದಾಯ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ, ಬಿಸಿಎಂ, ಅರಣ್ಯ, ಅಬಕಾರಿ, ತೋಟಗಾರಿಕೆ, ಖಜಾನೆ, ಸರ್ವೆ, ಕೋರ್ಟ್, ಸಿಡಿಪಿಒ, ಸಹಕಾರಿ, ಲೆಕ್ಕಪತ್ರ, ನೋಂದಣಿ, ಎಪಿಎಂಸಿ, ಗ್ರಂಥಾಲಯ, ರೇಷ್ಮೆ ಇಲಾಖೆಗಳ ನೌಕರರಿಗೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳುಗಳ ವೇತನ ಪಾವತಿ ಆಗಿಲ್ಲ.

ತಾಲ್ಲೂಕಿನಲ್ಲಿ ಕಾರ್ಯ ನಿರ್ವಹಿಸುವ 2500ಕ್ಕೂ ಹೆಚ್ಚು ನೌಕರರು ವೇತನ ಸಮಸ್ಯೆ ಎದುರಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯೊಂದರಲ್ಲೇ ಸುಮಾರು 1500 ಶಿಕ್ಷಕರಿದ್ದಾರೆ. ನಾಲ್ಕೈದು ತಿಂಗಳ ಹಿಂದೆ ಶಿಕ್ಷಕರು ವೇತನ ಪಾವತಿ ಆಗದೇ ತೊಂದರೆಗೆ ಸಿಲುಕಿದ್ದು, ಈಗ ಮತ್ತೆ ಎರಡು ತಿಂಗಳ ವೇತನ ಪಾವತಿ ಬಾಕಿ ಉಳಿದಿದೆ. ಈ ಬಾರಿ ಶಿಕ್ಷಣ ಇಲಾಖೆ ಸೇರಿ ತಾಲ್ಲೂಕಿನ ಎಲ್ಲ ಇಲಾಖೆಗಳ ನೌಕರರಿಗೆ ವೇತನ ಪಾವತಿ ಆಗಿಲ್ಲ. ಸಂಬಳವನ್ನೇ ನಂಬಿ ಜೀವನ ನಡೆಸುವ ಕುಟುಂಬಗಳಿಗೆ ವೇತನ ವಿಳಂಬ ಆಗಿರುವುದರಿಂದ ತೀವ್ರ ತೊಂದರೆ ಆಗಿದೆ.

ಹರಪನಹಳ್ಳಿ ತಾಲ್ಲೂಕು ಬಳ್ಳಾರಿಗೆ ಸೇರಿರುವುದರಿಂದ ಎಲ್ಲ ಇಲಾಖೆಗಳ ದಾಖಲೆಗಳು ದಾವಣಗೆರೆಯಿಂದ ಬಳ್ಳಾರಿಗೆ ವರ್ಗಾವಣೆಗೊಳ್ಳುವ ಪ್ರಕ್ರಿಯೆ ನಡೆದು ತುಂಬಾ ದಿನಗಳು ಆಗಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೇ ದಾವಣಗೆರೆ ಜಿಲ್ಲೆಯ ಜಿಲ್ಲಾ ಖಜಾನೆಯಿಂದ ಬಳ್ಳಾರಿ ಜಿಲ್ಲಾ ಖಜಾನೆಗೆ ವರ್ಗಾಯಿಸುವ ಪ್ರಕ್ರಿಯೆ ವಿಳಂಬವಾಗಿದೆ. ಹೀಗಾಗಿ ನೌಕರರ ವೇತನ ಪಾವತಿ ವಿಷಯದಲ್ಲಿ ಪದೇ ಪದೇ ತೊಂದರೆ ಆಗುತ್ತಿದೆ ಎಂಬ ಆರೋಪಗಳು ನೌಕರರಲ್ಲಿ ಕೇಳಿಬಂದಿವೆ.

‘ವೇತನ ಬಾರದಿರುವುದರಿಂದ ನೌಕರರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಮನೆ ಬಾಡಿಗೆ, ರೇಷನ್, ಮಕ್ಕಳ ಶಾಲಾ ಶುಲ್ಕ ಸೇರಿ ದಿನನಿತ್ಯದ ವಸ್ತುಗಳ ಖರೀದಿಗೆ ಹಣದ ಕೊರತೆ ಎದುರಾಗಿದೆ. ನೌಕರರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು’ ಎಂದು ತಾಲ್ಲೂಕಿನ ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ.

**

ದಾವಣಗೆರೆ ಜಿಲ್ಲಾ ಖಜಾನೆಯಿಂದ ಬಳ್ಳಾರಿ ಜಿಲ್ಲಾ ಖಜಾನೆಗೆ ಲಿಂಕ್ ಆಗಿದೆ. ಆದರೆ ಇನ್ನೂ ಹಣ ವರ್ಗಾವಣೆ ಆಗಿಲ್ಲ. ಈ ಕುರಿತು ರಾಜ್ಯ ಹಣಕಾಸು ಇಲಾಖೆ ಜತೆ ಮಾತನಾಡಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇನೆ.
-ಡಾ.ವಿ. ರಾಮಪ್ರಸಾದ್ ಮನೋಹರ್, ಜಿಲ್ಲಾಧಿಕಾರಿ, ಬಳ್ಳಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT