ಕೇಂದ್ರದ ಮುಂದೆ ‘ಕಾವೇರಿ’ಗೆ ಯಾಚನೆ

ಮಂಗಳವಾರ, ಜೂನ್ 18, 2019
30 °C
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯ ಪರಿಣಾಮ, ಸಿಡಬ್ಲ್ಯುಸಿ ನಿರ್ಧಾರ ಅಂತಿಮ

ಕೇಂದ್ರದ ಮುಂದೆ ‘ಕಾವೇರಿ’ಗೆ ಯಾಚನೆ

Published:
Updated:
Prajavani

ಮಂಡ್ಯ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ಬಳಿಕ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರ ಜಮೀನಿಗೆ ಕೆಆರ್‌ಎಸ್‌ ಜಲಾಶಯದಿಂದ ಒಂದು ಕಟ್ಟು ನೀರು ಹರಿಸಲು ರಾಜ್ಯ ಸರ್ಕಾರವು ಕೇಂದ್ರ ಜಲಸಂಪನ್ಮೂಲ ಇಲಾಖೆ ಮುಂದೆ ನೀರಿಗಾಗಿ ಯಾಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸುಪ್ರೀಂ ಕೋರ್ಟ್‌ ತೀರ್ಪಿನ ಅನ್ವಯ ಕೇಂದ್ರ ಸರ್ಕಾರವು ಕರ್ನಾಟಕದ ವಿರೋಧದ ನಡುವೆಯೂ 10 ತಿಂಗಳ ಹಿಂದೆ ಪ್ರಾಧಿಕಾರ ರಚಿಸಿತ್ತು. ಇದಕ್ಕೂ ಮೊದಲು ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ನೀರಿನ ಅಗತ್ಯವಿದ್ದಾಗ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯು ನಿರ್ಣಯ ಕೈಗೊಳ್ಳುತಿತ್ತು. ಬೆಳೆ ಮಾಹಿತಿ, ನೀರಿನ ಲಭ್ಯತೆ ಆಧಾರದ ಮೇಲೆ ನೀರು ಹರಿಸುವ ವೇಳಾಪಟ್ಟಿ ಬಿಡುಗಡೆ ಮಾಡುತಿತ್ತು.

ಪ್ರಾಧಿಕಾರ ರಚನೆ ನಂತರ ಕಾವೇರಿ ನೀರು ನಿರ್ವಹಣೆ, ಹಂಚಿಕೆಯ ಮೇಲೆ ರಾಜ್ಯ ಸರ್ಕಾರಕ್ಕೆ ಇದ್ದ ಅಧಿಕಾರ ಕೈತಪ್ಪಿದೆ. ಜನಪ್ರತಿನಿಧಿಗಳಿಗೂ ಅಧಿಕಾರ ಇಲ್ಲವಾಗಿದೆ. ಹೀಗಾಗಿ, ರೈತರು ನೀರಿಗಾಗಿ ಅಧಿಕಾರಿಗಳ ಎದುರು ಬೇಡುವಂತಾಗಿದೆ.

ಮುಂಗಾರು ಮಳೆ ತಡವಾಗಿದ್ದು, ಬೆಳೆದು ನಿಂತಿರುವ ಕಬ್ಬು, ಭತ್ತ, ರಾಗಿ ಒಣಗುತ್ತಿವೆ. ಬೆಳೆ ರಕ್ಷಣೆಗಾಗಿ ತಕ್ಷಣಕ್ಕೆ ಒಂದು ಕಟ್ಟು ನೀರಿನ ಅವಶ್ಯವಿದೆ. ಇಂತಹ ಸಂದರ್ಭದಲ್ಲಿ ನೀರು ಹರಿಸುವ ನಿರ್ಧಾರ ಕೈಗೊಳ್ಳುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ನೀರಾವರಿ ಸಲಹಾ ಸಮಿತಿಯೂ ಅಧಿಕಾರ ಕಳೆದುಕೊಂಡಿದೆ. ನೀರು ನಿರ್ವಹಣಾ ಪ್ರಾಧಿಕಾರದ ನಿಯಮದಂತೆ ಕರ್ನಾಟಕ, ತಮಿಳುನಾಡು,ಆಂಧ್ರಪ್ರದೇಶ, ಪುದುಚೇರಿ (ಕೇಂದ್ರಾಡಳಿತ ಪ್ರದೇಶ) ರಾಜ್ಯಗಳ ಕೇಂದ್ರ ನೀರು ನಿರ್ವಹಣಾ ಸಮಿತಿ (ಸಿಡಬ್ಲ್ಯುಡಿ) ನೀರು ಹರಿಸುವ ನಿರ್ಧಾರ ಕೈಗೊಳ್ಳಬೇಕಾಗಿದೆ.

ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಕೊರತೆ ಇರುವ ಬಗ್ಗೆ ಕಾವೇರಿ ನೀರಾವರಿ ನಿಗಮ ಪ್ರಾಧಿಕಾರಕ್ಕೆ ವರದಿ ನೀಡಬೇಕು. ವರದಿ ಅನ್ವಯ ತಜ್ಞರು ಅಧ್ಯಯನ ನಡೆಸಬೇಕು. ನಂತರವಷ್ಟೇ ನೀರು ಹರಿಸುವ ನಿರ್ಧಾರ ಕೈಗೊಳ್ಳಬೇಕು. ಈ ಪ್ರಕ್ರಿಯೆ ನಡೆಯುವ ಹೊತ್ತಿಗೆ ರೈತರ ಬೆಳೆ ಒಣಗಿರುತ್ತದೆ. ತುರ್ತು ಕ್ರಮ ಕೈಗೊಳ್ಳುವ ಅವಕಾಶ ಇಲ್ಲದ ಕಾರಣ ಈ ಭಾಗದ ರೈತರು ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಸಮಸ್ಯೆ ಬಗೆಹರಿಸುವಂತೆ ಶಾಸಕರಲ್ಲಿ ಮನವಿ ಸಲ್ಲಿಸಿದ್ದಾರೆ. ಆದರೆ, ಜನಪ್ರತಿನಿಧಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

‘ಬೆಳೆ ಉಳಿವಿಗಾಗಿ ತಕ್ಷಣಕ್ಕೆ ನೀರು ಹರಿಸಬೇಕು. ಪ್ರಾಧಿಕಾರ ರಚನೆಯ ನಂತರ ಉಂಟಾಗಿರುವ ತಾಂತ್ರಿಕ ಸಮಸ್ಯೆ ಬಗೆಹರಿಸಬೇಕು. ರಾಜ್ಯ ಸರ್ಕಾರ ಕಾವೇರಿ ವಿಚಾರವನ್ನು ಸೂಕ್ತ ರೀತಿಯಲ್ಲಿ ಪ್ರತಿನಿಧಿಸದ ಕಾರಣ ರೈತರಿಗೆ ಅನಾನುಕೂಲವಾಗಿದೆ. ಶೀಘ್ರ ಸಮಸ್ಯೆ ಬಗೆಹರಿಸಬೇಕು’ ಎಂದು ರೈತ ಮುಖಂಡ ಬಿ.ಬೊಮ್ಮೇಗೌಡ ಒತ್ತಾಯಿಸಿದರು.

‘ರೈತರ ಬೆಳೆಗಳಿಗೆ ನೀರಿನ ಅಗತ್ಯ ಇರುವ ಬಗ್ಗೆ ಕೇಂದ್ರ ನೀರು ನಿರ್ವಹಣಾ ಸಮಿತಿಗೆ ಈಗಾಗಲೇ ವರದಿ ನೀಡಿದ್ದೇವೆ. ಮೇ 29ಕ್ಕೆ ಸಭೆ ನಡೆಯುವ ಸಾಧ್ಯತೆ ಇದೆ. ಸಮಿತಿಯ ನಿರ್ಣಯದಂತೆ ಕ್ರಮ ವಹಿಸಲಾಗುವುದು’ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

ನೀರಾವರಿ ನಿಗಮಕ್ಕೆ ನೋಟಿಸ್‌
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮವು ನಾಲೆಗಳಿಗೆ ನೀರು ಹರಿಸಿತ್ತು. ನೀರು ನಿರ್ವಹಣಾ ಸಮಿತಿಯ ಅನುಮತಿ ಪಡೆಯದೇ ರಾಜಕೀಯ ಒತ್ತಡಕ್ಕೆ ಮಣಿದು ನೀರು ಹರಿಸಲಾಗಿದೆ ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು. ದೂರಿನ ಅನ್ವಯ ಚುನಾವಣಾ ಆಯೋಗ ನಿಗಮಕ್ಕೆ ನೋಟಿಸ್‌ ನೀಡಿತ್ತು. ಇದರಿಂದ ನಿಗಮದ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದು, ರೈತರ ಒತ್ತಾಯಕ್ಕೆ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !