ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 20 ಮೀಸಲಾತಿಗೆ ಒತ್ತಾಯ

ಎಸ್‌ಸಿ: ಖಾಸಗಿ ವಲಯದಲ್ಲೂ ಮೀಸಲಾತಿ ಕೊಡಿಸಲು ಹಕ್ಕೊತ್ತಾಯ
Last Updated 20 ನವೆಂಬರ್ 2019, 19:55 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಪರಿಶಿಷ್ಟ ಜಾತಿಯವರಿಗೆ ನೀಡಲಾಗಿರುವ ಮೀಸಲಾತಿ ಪ್ರಮಾಣವನ್ನು ಈಗಿನ ಶೇ 15ರಿಂದ 20ಕ್ಕೆ ಹೆಚ್ಚಿಸಬೇಕು ಎಂಬ ಒಕ್ಕೊರಲ ಬೇಡಿಕೆಯನ್ನು ಸರ್ಕಾರದ ಮುಂದಿಡಲಾಗಿದೆ.

ಇಲ್ಲಿನ ಗಾಂಧಿಭವನದಲ್ಲಿ ಬುಧವಾರ ಮಾಜಿ ಸಚಿವ ಎಚ್. ಆಂಜನೇಯ ನೇತೃತ್ವದಲ್ಲಿನಡೆದ ಪರಿಶಿಷ್ಟ ಜಾತಿಯ ಮೀಸಲಾತಿ ಹೆಚ್ಚಳಕ್ಕೆ ಹಕ್ಕೊತ್ತಾಯ ಸಭೆಯ ಈ ನಿರ್ಧಾರ ಕೈಗೊಳ್ಳಲಾಯಿತು. ಮುಂದಿನ ವಾರ ವಿಧಾನಸೌಧದ ಮುಂಭಾಗದ ಡಾ.ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಯುವನಿಕಾ ಆವರಣದಲ್ಲಿರುವ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ದಾಸ್‌ ಆಯೋಗದ ಕಚೇರಿಯವರೆಗೆ ಪರಿಶಿಷ್ಟ ಜಾತಿಯ ಎಲ್ಲ 101 ಜಾತಿ, ಉಪಜಾತಿಗಳ ಸಮುದಾಯದವರನ್ನು ಒಳಗೊಂಡ ಬೃಹತ್‌ ಮೆರವಣಿಗೆ ನಡೆಸಿ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.

ಪ್ರಾಸ್ತಾವಿಕ ಮಾತನಾಡಿದ ಮಾಜಿ ಸಚಿವ ಎಚ್.ಆಂಜನೇಯ, ಪರಿಶಿಷ್ಟ ಪಂಗಡದವರು ಒತ್ತಾಯ ಮಾಡಿದ್ದಕ್ಕಾಗಿಯೇ ಏಕಸದಸ್ಯ ಆಯೋಗ ರಚನೆಯಾಗಿದೆ. ಅವರಿಗೆ ನಿಜಕ್ಕೂ ಧನ್ಯವಾದ ಹೇಳಬೇಕು. ಪರಿಶಿಷ್ಟ ಜಾತಿಗೆ ನೀಡಲಾಗುವ ಮೀಸಲಾತಿಯನ್ನು ಶೇ 2ರಷ್ಟು ಹೆಚ್ಚಿಸುವ ಪ್ರಸ್ತಾಪ ಇದೆ, ಇದನ್ನು ಶೇ 5ರಷ್ಟು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ನಿವೃತ್ತ ಐಎಎಸ್‌ ಅಧಿಕಾರಿ ಇ.ವೆಂಕಟಯ್ಯ ಅವರು ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಯವರ ಪ್ರಮಾಣದ ಬಗ್ಗೆ ಮಾಹಿತಿ ನೀಡಿ, ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲೇಬೇಕಾಗುತ್ತದೆ ಎಂದರು.

ಇನ್ನೊಬ್ಬ ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ ಅವರು, ಉದ್ಯೋಗದಲ್ಲಿ ಶೇ 3ರಷ್ಟು ಸರ್ಕಾರಿ ಉದ್ಯೋಗಕ್ಕಾಗಿ ಮಾತ್ರ ಹೋರಾಡುವುದರಲ್ಲಿ ಅರ್ಥವಿಲ್ಲ,ಶೇ 97ರಷ್ಟು ಉದ್ಯೋಗ ನೀಡುವ ಖಾಸಗಿ ವಲಯದಲ್ಲೂ ಮೀಸಲಾತಿ ದೊರಕಿಸಲು ಸರ್ಕಾರ ಪ್ರಯತ್ನಿಸಬೇಕು ಎಂದರು. ಹೊರಗುತ್ತಿಗೆ ವ್ಯವಸ್ಥೆ ಜಾರಿಗೆ ತಂದು ಪರಿಶಿಷ್ಟ ಜಾತಿಯವರಿಗೆ ಉದ್ಯೋಗದಿಂದ ವಂಚಿಸಲಾಗುತ್ತಿದೆ ಎಂದರು.

ಹಿರಿಯೂರು ಆದಿಜಾಂಬವ ಮಹಾಸಂಸ್ಥಾನ ಗುರುಪೀಠದ ಜಾಂಬವ ಬ್ರಹ್ಮಾನಂದ ಮುನಿ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT