ಟನ್‌ಗೆ ₹ 3ಸಾವಿರಕ್ಕೆ ಪಟ್ಟು; ದರ ಸಂಘರ್ಷ

7
ಕಬ್ಬು ಕಟಾವು ಮಾಡದೇ ಹೋರಾಟ ತೀವ್ರಗೊಳಿಸಲು ರೈತರ ನಿರ್ಧಾರ

ಟನ್‌ಗೆ ₹ 3ಸಾವಿರಕ್ಕೆ ಪಟ್ಟು; ದರ ಸಂಘರ್ಷ

Published:
Updated:
Deccan Herald

ಬೆಳಗಾವಿ: ಟನ್‌ ಕಬ್ಬಿಗೆ ಕನಿಷ್ಠ ₹3 ಸಾವಿರ ದರ ನಿಗದಿಪಡಿಸಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ನಡುವೆ ದರ ಸಂಘರ್ಷ ಆರಂಭವಾಗಿದೆ.

ಕಳೆದ ಹಂಗಾಮಿನ ಬಾಕಿ ಪಾವತಿಸಬೇಕು ಹಾಗೂ ಈ ಹಂಗಾಮಿನಲ್ಲಿ ನ್ಯಾಯಸಮ್ಮತ ದರ ನಿಗದಿಪಡಿಸಬೇಕು ಎಂಬುದು ಬೆಳೆಗಾರರ ಬೇಡಿಕೆ. ಅದು ಈಡೇರದ ಹೊರತು ಕಬ್ಬು ಕಟಾವು ಮಾಡುವುದಿಲ್ಲ ಎಂದು ಬಹುತೇಕರು ಘೋಷಿಸಿದ್ದಾರೆ.

ಕಾರ್ಖಾನೆಗಳಿಗೆ ಕಬ್ಬು ಸಾಗಿಸುವವರನ್ನು ತಡೆಯುತ್ತಿರುವ ರೈತರು, ಹೋರಾಟಕ್ಕೆ ಸಹಕರಿಸುವಂತೆ ಕೋರುತ್ತಿದ್ದಾರೆ. ಪ್ರತಿರೋಧ ತೋರಿದರೆ, ಕಬ್ಬು ತುಂಬಿದ ಲಾರಿ ಅಥವಾ ಟ್ರಾಕ್ಟರ್‌ಗಳ ಚಕ್ರಗಳ ಗಾಳಿ ತೆಗೆದು ಬಿಸಿ ಮುಟ್ಟಿಸುತ್ತಿದ್ದಾರೆ.

23 ಕಾರ್ಖಾನೆಗಳು: ಜಿಲ್ಲೆಯಲ್ಲಿ 23 ಸಕ್ಕರೆ ಕಾರ್ಖಾನೆಗಳಿವೆ. ಈ ಬಾರಿ 2.35 ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಲಾಗಿದ್ದು, ಬಹುತೇಕ ಕಟಾವಿಗೆ ಬಂದಿದೆ. ಕೇಂದ್ರ ಸರ್ಕಾರವು ₹ 2,750 ದರ (ಎಫ್‌ಆರ್‌ಪಿ) ನಿಗದಿಪಡಿಸಿದೆ. ಆದರೆ, ಈ ದರದ ಬಗ್ಗೆ ರೈತರಿಗೆ ಅಸಮಾಧಾನವಿದೆ. ಕನಿಷ್ಠ ₹ 3ಸಾವಿರ ಇರಬೇಕಿತ್ತು ಎಂಬುದು ಅವರ ಬೇಡಿಕೆ. ರಾಜ್ಯ ಸರ್ಕಾರ ಎಸ್‌ಎಪಿ (ರಾಜ್ಯ ಸಲಹಾ ಬೆಲೆ) ನಿಗದಿಪಡಿಸಿಲ್ಲ. ಈ ಸಂಬಂಧ ಸಭೆಗಳನ್ನೂ ನಡೆಸಿಲ್ಲ. ಇದು ಅವರ ಆಕ್ರೋಶಕ್ಕೆ ಕಾರಣವಾಗಿದೆ.‌

‘ಕಳೆದ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ, ಕಾರ್ಖಾನೆಗಳು ಘೋಷಿಸಿದ್ದ ಪ್ರಕಾರ ಟನ್‌ ಕಬ್ಬಿಗೆ ₹ 2,900 ದರ ಪಾವತಿಸಬೇಕು. ವ್ಯತ್ಯಾಸದ ಹಣವನ್ನು ಕೂಡಲೇ ಕೊಡಬೇಕು. ಇಳುವರಿ ಅಧರಿಸಿ ನ್ಯಾಯಯುತ ಬೆಲೆ ನೀಡಬೇಕು. ಅಲ್ಲಿವರೆಗೆ ಕಾರ್ಖಾನೆಗಳನ್ನು ಪ್ರಾರಂಭಿಸಬಾರದು ಎನ್ನುವುದು ನಮ್ಮ ನಿಲುವಾಗಿದೆ. ನಾವು ಕಾರ್ಖಾನೆಗಳ ಎದುರು ಹೋರಾಡುವುದಿಲ್ಲ. ಕಬ್ಬು ಕಟಾವು ಮಾಡದೇ ರೈತರು ಸ್ವಯಂಪ್ರೇರಿತವಾಗಿ ಬೆಂಬಲ ನೀಡುತ್ತಾರೆ’ ಎಂದು ಕಬ್ಬು ಬೆಳೆಗಾರರ ಸಂಘದ ನಿರ್ದೇಶಕ ಮೋಹನರಾವ್ ಶಹಾ ಹೇಳಿದರು.

‘ಬಹುತೇಕ ಕಾರ್ಖಾನೆಗಳು ರಾಜಕಾರಣಿಗಳ ಹಿಡಿತದಲ್ಲಿರುವುದರಿಂದ ಇವುಗಳ ಮೇಲೆ ನಿಯಂತ್ರಣ ಹೇರಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ನೆರೆಯ ಮಹಾರಾಷ್ಟ್ರದಲ್ಲಿ ಟನ್‌ ಕಬ್ಬಿಗೆ ₹ 3 ಸಾವಿರ ಇದ್ದರೆ ನಮ್ಮಲ್ಲಿ ₹ 2ಸಾವಿರ ಸಿಗುತ್ತಿದೆ. ಹೀಗಾಗಿ, ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ’ ಎನ್ನುತ್ತಾರೆ ರೈತ ಮುಖಂಡ ಚೂನಪ್ಪ ಪೂಜೇರಿ.

ಈ ನಡುವೆ, ಗಡಿಯಲ್ಲಿನ ಕೆಲವು ರೈತರು ಮಹಾರಾಷ್ಟ್ರದ ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತಿದ್ದಾರೆ.

**

ಟನ್‌ ಕಬ್ಬಿಗೆ ₹ 2,900 ನೀಡಿದ್ದೇವೆ. ಅತಿ ಹೆಚ್ಚು ದರ ನೀಡಿದ ಕಾರ್ಖಾನೆ ಎಂಬ ಹೆಗ್ಗಳಿಕೆ ನಮ್ಮದು. ಬಾಕಿ ಉಳಿಸಿಕೊಂಡಿಲ್ಲ.

-ಪರಪ್ಪ ಸವದಿ ಅಧ್ಯಕ್ಷ, ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ, ಅಥಣಿ

**

ನಿಯಮಾವಳಿ ಪ್ರಕಾರವೇ ಕಾರ್ಖಾನೆಗಳು ದರ ನಿಗದಿಪಡಿಸಿ ಪಾವತಿಸಬೇಕು. ಕೂಡಲೇ ಬಾಕಿ ಪಾವತಿಸಬೇಕು.

-ಎಸ್.ಬಿ. ಬೊಮ್ಮನಹಳ್ಳಿ, ಜಿಲ್ಲಾಧಿಕಾರಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !