ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಸಂಖ್ಯಾತರಿಗೂ ಹಕ್ಕು: ಆಗ್ರಹ

ವಿಶ್ವ ಹಿಂದೂ ಪರಿಷತ್‌ನ ಕೇಂದ್ರೀಯ ವಿಶ್ವಸ್ಥ ಮಂಡಳಿ ಬೈಠಕ್ ಆರಂಭ
Last Updated 27 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿನ ಸಂಘನಿಕೇತನದಲ್ಲಿ ಶುಕ್ರವಾರ ವಿಶ್ವ ಹಿಂದೂ ಪರಿಷತ್‌ನ ಕೇಂದ್ರೀಯ ವಿಶ್ವಸ್ಥ ಮಂಡಳಿ ಮತ್ತು ಪ್ರಬಂಧ ಸಮಿತಿಯ ಸಂಯುಕ್ತ ಬೈಠಕ್‌ ಆರಂಭಗೊಂಡಿದ್ದು, ಇದೇ 30 ತನಕ ನಡೆಯಲಿದೆ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ವಿಹಿಂಪ ರಾಷ್ಟ್ರೀಯ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ವಿಷ್ಣು ಸದಾಶಿವ, ‘ಧರ್ಮ ನಿರಪೇಕ್ಷತೆಯ ಹೆಸರಿನಲ್ಲಿ ಹಿಂದೂ ವಿರೋಧಿ ನಿಲುವು ಅನುಸರಿಸುತ್ತಿದ್ದವರೇ ಈಗ, ಕುಲ–ಗೋತ್ರ ಹೇಳಿಕೊಂಡು ಮಠ–ಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ. 2014ರ ಬಳಿಕ ಭಾರತದ ಸಮಾಜ ಮಾತ್ರವಲ್ಲ, ಶಾಸನ ಸಭೆಯಲ್ಲೂ ಬದಲಾವಣೆಯಾಗುತ್ತಿದ್ದು, ‘ಹಿಂದೂ’ ಎಂದು ಗರ್ವದಿಂದ ಹೇಳುವ ಕಾಲ ಶುರುವಾಗಿದೆ’ ಎಂದು ಅವರು ಹೇಳಿದರು.

ಬೈಠಕ್ ಉದ್ಘಾಟಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮಾತನಾಡಿ, ‘ಹಿಂದೂ ಸಮಾಜದಲ್ಲಿನ ಜಾತಿ ಭೇದಗಳು ಕಡಿಮೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಈ ಹಿಂದೆ ಧರ್ಮಸ್ಥಳ, ಉಡುಪಿಯಲ್ಲೂ ಇದನ್ನು ಕಂಡಿದ್ದೆವು’ ಎಂದರು.

‘ನಾಲ್ಕೈದು ದಶಕಗಳ ಹಿಂದೆ ಗುಣಮಟ್ಟದ ಶಿಕ್ಷಣಕ್ಕೆ ಕಾನ್ವೆಂಟ್ ಸೇರಬೇಕಿದ್ದರೆ, ಇಂದು ಹಿಂದೂಗಳ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ ನೀಡುತ್ತಿವೆ. ಅದರ ಧ್ಯೇಯವು ಸೇವೆಯಾಗಬೇಕು. ಸ್ವಚ್ಛತೆ, ಗ್ರಾಮೀಣಾಭಿವೃದ್ಧಿ, ಸಮಾನತೆ ನಮ್ಮ ಗುರಿಯಾಗಬೇಕು. ದೇವಸ್ಥಾನಗಳು ಅಭಿವೃದ್ಧಿಯ ಕೇಂದ್ರವಾಗಬೇಕು’ ಎಂದರು. ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ಸ್ವಾಮೀಜಿ ಇದ್ದರು.

ಬೈಠಕ್ ಆಗ್ರಹ: ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಹಿಂಪ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ.ಸುರೇಂದ್ರಕುಮಾರ್ ಜೈನ್, ‘ಸಂವಿಧಾನದ 29 ಮತ್ತು 30ನೇ ಕಲಂಗೆ ತಿದ್ದುಪಡಿ ಮಾಡುವ ಮೂಲಕಅಲ್ಪಸಂಖ್ಯಾತರ ಶಿಕ್ಷಣ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ನೀಡಲಾದ ವಿಶೇಷ ಹಕ್ಕು ಹಾಗೂ ಸೌಲಭ್ಯಗಳನ್ನು ಬಹುಸಂಖ್ಯಾತರ ಸಂಸ್ಥೆಗಳಿಗೂ ವಿಸ್ತರಿಸಬೇಕು ಎಂಬುದು ಬೈಠಕ್ ಆಗ್ರಹ’ ಎಂದು ತಿಳಿಸಿದರು.

‘ಇದರ ಜೊತೆಗೆ ಆಂಧ್ರಪ್ರದೇಶ ಮತ್ತು ತೆಲಂಗಾಣದ ರಾಜ್ಯ ಸರ್ಕಾರಗಳ ಹಿಂದೂ ವಿರೋಧಿ ನೀತಿಗಳು, ದೇಶದಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ, ‘ಇತರ ಧಾರ್ಮಿಕ ನಂಬಿಕೆ’ (other religious persuasion) ಎನ್ನುವ ಮೂಲಕ ಹಿಂದೂ ಸಮಾಜದ ಭಾಗವಾದ ಆದಿವಾಸಿ, ಬುಡಕಟ್ಟುಗಳನ್ನು ಹೊರಗಿಡುವ ಹುನ್ನಾರ, ರಾಮ ಮಂದಿರ ನಿರ್ಮಾಣ ಸೇರಿದಂತೆ ಪ್ರಮುಖ ವಿಚಾರಗಳು ಬೈಠಕ್‌ನಲ್ಲಿ ಚರ್ಚೆಗೆ ಬರಲಿವೆ’ ಎಂದರು.

‘ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮುಸ್ಲಿಂ ಸಮುದಾಯಕ್ಕೆ ತಪ್ಪು ಸಂದೇಶಗಳನ್ನು ನೀಡಿ, ಬೀದಿಗಿಳಿಯುವಂತೆ ಮಾಡಿದ್ದಾರೆ’ ಎಂದು ಖೇದ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT