ಸೋಮವಾರ, ಸೆಪ್ಟೆಂಬರ್ 23, 2019
28 °C

ಡೆಂಗಿ ಪರೀಕ್ಷೆ: ₹250ಕ್ಕಿಂತ ಹೆಚ್ಚು ದರ ಪಡೆದರೆ ದೂರು ನೀಡಿ, ಹಣ ವಾಪಸ್ ಪಡೆಯಿರಿ

Published:
Updated:

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗಿ ಸೋಂಕು ಹೆಚ್ಚಾಗುತ್ತಿದೆ. ದರ ನಿಗದಿ ಇದ್ದರೂ ಖಾಸಗಿ ಆಸ್ಪತ್ರೆಗಳು ಪರೀಕ್ಷೆಯ ಹೆಸರಿನಲ್ಲಿ ಹಣ ಕೀಳುವ ಪ್ರವೃತ್ತಿಯನ್ನು ಮುಂದುವರಿಸಿವೆ. ಹೀಗಾಗಿ ಡೆಂಗಿ ಪರೀಕ್ಷೆಗೆ ಹೆಚ್ಚು ಹಣ ಪಡೆದಿದ್ದರೆ ಆರೋಗ್ಯಾಧಿಕಾರಿ ಬಳಿ ದೂರು ನೀಡಿ, ಹಣ ವಾಪಸ್‌ ಪಡೆಯಬಹುದು.

ಸರ್ಕಾರಿ ಆಸ್ಪತ್ರೆಯಲ್ಲಿ ಡೆಂಗಿ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳು ಡೆಂಗಿ ಪರೀಕ್ಷೆಗೆಂದು ಸಾಕಷ್ಟು ಹಣ ಪಡೆಯುತ್ತಿದ್ದ ಕಾರಣ ಸರ್ಕಾರ ಮೂರು ವರ್ಷಗಳ ಹಿಂದೆ ದರ ನಿಗದಿ ಪಡಿಸಿತ್ತು.

ಇದನ್ನೂ ಓದಿ: ಸಿಎಂ, ಮೇಯರ್‌ಗೆ ಮನಕಲಕುವ ಪತ್ರ

ರಾಜ್ಯ ರಾಜಧಾನಿಯಾದ ಬೆಂಗಳೂರಿನ ಬಹುತೇಕ ಆಸ್ಪತ್ರೆಗಳು ಹಾಗೂ ಡಯಾಗ್ನಸ್ಟಿಕ್‌ ಲ್ಯಾಬ್‌ಗಳಲ್ಲಿ ಡೆಂಗಿ ಸಮಗ್ರ ಪರೀಕ್ಷೆಗೆ ₹1,000 ದಿಂದ ₹2,000 ಹಣಪಡೆಯುತ್ತಿವೆ. ಆದರೆ, ಸರ್ಕಾರ ಇದಕ್ಕೆ ನಿಗದಿ ಮಾಡಿರುವುದು ₹500ಗಳು ಮಾತ್ರ.


ಲ್ಯಾಬ್‌ವೊಂದರಲ್ಲಿ ಡೆಂಗಿ ಪರೀಕ್ಷೆಗೆ ತೆಗೆದುಕೊಂಡ ಹಣದ ರಶೀದಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ– ಅಂಶಗಳ ಪ್ರಕಾರ, ಜನವರಿ 1ರಿಂದ ಈವರೆಗೆ ರಾಜ್ಯದಲ್ಲಿ 10,524 ಮಂದಿ ಡೆಂಗಿ ಸೋಂಕು ಹೊಂದಿರುವುದು ದೃಢಪಟ್ಟಿದೆ. ಬೆಂಗಳೂರು ಒಂದರಲ್ಲಿಯೇ ಸುಮಾರು 5 ಸಾವಿರ ಮಂದಿ ಡೆಂಗಿಯಿಂದ ಬಳಲುತ್ತಿದ್ದಾರೆ. ಈ ಸಂದರ್ಭವನ್ನು ಬಳಸಿಕೊಂಡು ಖಾಸಗಿ ಆಸ್ಪತ್ರೆಯವರು ಹಣ ಕೀಳುವುದನ್ನು ರೂಢಿಸಿಕೊಂಡಿದ್ದಾರೆ.

ಇದನ್ನೂ ಓದಿ: ಡೆಂಗಿ: 10 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು

2016ರಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಿದ್ದು, ಆಗ ಡಯಾಗ್ನಸ್ಟಿಕ್‌ ಲ್ಯಾಬ್‌ಗಳು ಪರೀಕ್ಷೆಗೆ ₹1,000ಕ್ಕೂ ಅಧಿಕ ಹಣ ಪಡೆಯುತ್ತಿದ್ದ ಬಗ್ಗೆ ಸಾಕಷ್ಟು ದೂರುಗಳು ಬಂದ ಕಾರಣ ಆರೋಗ್ಯ ಇಲಾಖೆ ಸಭೆ ಕರೆದು ಪರೀಕ್ಷೆಗೆ ಇಂತಿಷ್ಟೇ ಹಣ ಪಡೆಯಬೇಕು ಎಂದು ನಿಗದಿ ಮಾಡಿತು.

ಖಾಸಗಿ ಆಸ್ಪತ್ರೆಗಳು ಐಜಿಎಂ(IgG), ಎನ್‌ಎಸ್‌1(NS1) ಮತ್ತು ಐಜಿಎಂ(IgM) ಪರೀಕ್ಷೆಗೆ ತಲಾ ₹250 ಪಡೆಯಬೇಕು. ಹಾಗೂ ಈ ಮೂರು ಪರೀಕ್ಷೆಗಳನ್ನು ಒಟ್ಟಿಗೆ ಮಾಡಿಸಿದರೆ ₹500 ಪಡೆಯಬೇಕು ಎಂದು ಸರ್ಕಾರ ದರ ನಿಗದಿಗೊಳಿಸಿದೆ. 

ಇದನ್ನೂ ಓದಿ: ‘ಬಿಸ್ಕತ್‌ ಪೊಟ್ಟಣವೂ ಸೊಳ್ಳೆ ಉತ್ಪತ್ತಿಗೆ ಕಾರಣ’

’ಡೆಂಗಿ ಪರೀಕ್ಷೆಗಾಗಿ ಸರ್ಕಾರ ನಿಗದಿಪಡಿಸಿರುವಷ್ಟೇ ಹಣವನ್ನು ಪಡೆಯಬೇಕು. ಅಧಿಕ ಹಣವನ್ನು ಪಡೆಯುವಂತಿಲ್ಲ. ಒಂದು ವೇಳೆ ಪಡೆದರೆ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಬೇಕು’ ಎಂದು ಆರೋಗ್ಯಾಧಿ ಕೋರಿದರು.  ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಪ್ರಕಾಶ್ ಕುಮಾರ್ ತಿಳಿಸಿದರು.

‘ಹೆಚ್ಚು ದರ ಪಡೆಯುವ ಬಗ್ಗೆ ಜನರು ದೂರು ನೀಡಿದರೆ, ಸರ್ಕಾರದ ನಿಯಮವನ್ನು ಪಾಲಿಸುತ್ತಿಲ್ಲ ಎಂದು ಎಚ್ಚರಿಕೆಯ ನೋಟಿಸ್‌ ನೀಡುತ್ತೇವೆ. ನಂತರ ಅವರ ಮೇಲೆ ಶಿಸ್ತು ಕ್ರಮವನ್ನು ಕೈಗೊಳ್ಳಬಹುದು. ಈ ಬಗ್ಗೆ ನಮಗೆ ದೂರುಗಳು ಬಂದಿವೆ. ಅದರ ಆಧಾರ ಮೇಲೆ ಈಗಾಗಲೇ ಕೆಲವು ಲ್ಯಾಬ್‌ಗಳಿಗೆ ನೋಟಿಸ್‌ ಅನ್ನೂ ನೀಡಿದ್ದೇವೆ. ಆಗ ಅವರು ಹೆಚ್ಚುವರಿ ಹಣವನ್ನು ದೂರುದಾರರಿಗೆ ವಾಪಸ್‌ ನೀಡಿದ್ದಾರೆ’ ಎಂದು ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಮೇಶ್‌ ತಿಳಿಸಿದರು.

Post Comments (+)