ಮಂಗಳವಾರ, ಆಗಸ್ಟ್ 20, 2019
22 °C
ಬನಶಂಕರಿ ಬಡಾವಣೆ

ಅಕ್ರಮ ಡಿನೋಟಿಫಿಕೇಷನ್ ಆರೋಪ: ಬಿ ರಿಪೋರ್ಟ್‌ ವಜಾ, ಕುಮಾರಸ್ವಾಮಿ ವಿಚಾರಣೆಗೆ ಆದೇಶ

Published:
Updated:

ಬೆಂಗಳೂರು: ಬನಶಂಕರಿ 5ನೇ ಹಂತದ ಹಲಗೆವಡೇರಹಳ್ಳಿ ವ್ಯಾಪ್ತಿಯಲ್ಲಿ 3 ಎಕರೆ 34 ಗುಂಟೆ ಪ್ರದೇಶವನ್ನು ಸರ್ಕಾರದ ಸ್ವಾಧೀನದಿಂದ ಕೈಬಿಟ್ಟು ಅಕ್ರಮವಾಗಿ ಡಿನೋಟಿಫೈ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ‘ಬಿ’ ರಿಪೋರ್ಟ್‌ ಅನ್ನು ಜನಪ್ರತಿನಿಧಿಗಳ ಕೋರ್ಟ್‌ ವಜಾಗೊಳಿಸಿದೆ.

ಕುಮಾರಸ್ವಾಮಿ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ 19 ಜನ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುವಂತೆ, ‘ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ದ ನ್ಯಾಯಾಧೀಶ ರಾಮಚಂದ್ರ ಡಿ.
ಹುದ್ದಾರ ಆದೇಶಿಸಿದ್ದಾರೆ.

ಈ ಕುರಿತಂತೆ ಚಾಮರಾಜನಗರ ಜಿಲ್ಲೆಯ ಸಂತೇಮರಳ್ಳಿಯ ಮಾಹಿತಿ ಹಕ್ಕು ಕಾರ್ಯಕರ್ತ ಎಂ.ಎಸ್.ಮಹದೇವ ಸ್ವಾಮಿ ಸಲ್ಲಿಸಿದ್ದ ಅರ್ಜಿ ಮೇಲಿನ ಆದೇಶವನ್ನು ನ್ಯಾಯಾಧೀಶ ಹುದ್ದಾರ ಅವರು ಶನಿವಾರ ಪ್ರಕಟಿಸಿದರು.

‘ಅಧಿಕಾರಿ ಬೇಕಾಬಿಟ್ಟಿ ತನಿಖೆ ನಡೆಸಿದ್ದಾರೆ. 18 ಜನ ಆರೋಪಿಗಳು ಅಕ್ರಮ ಎಸಗಲು ಕುಮಾರಸ್ವಾಮಿ ತಮ್ಮ ಅಧಿಕಾರದ ಪ್ರಭಾವ ಬಳಸಿ ಪರೋಕ್ಷ ಸಮ್ಮತಿ ನೀಡಿದ್ದಾರೆ. ಈ ಮೂಲಕ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗುವಂತಿದೆ. ಆದ್ದರಿಂದ ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಮತ್ತು ಕರ್ನಾಟಕ ಭೂ (ನಿರ್ಬಂಧ ಮತ್ತು ವರ್ಗಾವಣೆ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳಡಿ ವಿಚಾರಣೆ ನಡೆಸಿ ಶಿಕ್ಷೆಗೊಳಪಡಿಸುವುದು ಅಗತ್ಯವಿದೆ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ವಿಚಾರಣೆಯನ್ನು ಇದೇ 26ಕ್ಕೆ ಮುಂದೂಡಲಾಗಿದೆ.

Post Comments (+)