ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ಕುರಿತು ವರದಿ ಕೇಳಿದ ಪಿಡಬ್ಲ್ಯೂಡಿ

7

ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ಕುರಿತು ವರದಿ ಕೇಳಿದ ಪಿಡಬ್ಲ್ಯೂಡಿ

Published:
Updated:

ಬೆಂಗಳೂರು: ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ತೆರವಿನ ಕುರಿತ ಕೇಂದ್ರ ಸರ್ಕಾರದ ಪತ್ರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್‌ ಅವರಿಂದ ಲೋಕೋಪಯೋಗಿ ಇಲಾಖೆ ವರದಿ ಕೇಳಿದೆ.

‘ನಿಷೇಧ ತೆರವಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಒಪ್ಪಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರದ ಅಧಿಕೃತ ಒಪ್ಪಿಗೆ ಬೇಕಿದೆ’ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಮಂತ್ರಾಲಯದ ಕಾರ್ಯದರ್ಶಿ ವೈ.ಎಸ್. ಮಲಿಕ್‌ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಜುಲೈ 21ರಂದು ಪತ್ರ ಬರೆದಿದ್ದರು.

‘ಈ ಬಗ್ಗೆ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆಯೂ ಆಲೋಚನೆ ನಡೆಸಬೇಕಿದೆ. ಕೇಂದ್ರ ಪರಿಸರ ಮಂತ್ರಾಲಯದಿಂದ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ ಒಪ್ಪಿಗೆ ಪಡೆಯಬೇಕಿದೆ’ ಎಂದು ಇಲಾಖೆಯ ಕಾರ್ಯದರ್ಶಿ ಕೃಷ್ಣಾ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.

ಎಚ್.ಡಿ.ರೇವಣ್ಣ, ‘ವಾಹನ ನಿರ್ಬಂಧ ವಾಪಸ್‌ ಕೋರಿ ಸುಪ್ರೀಂ ಕೋರ್ಟ್‌ಗೆ ಕೇರಳ ಸರ್ಕಾರ ಈ ವರ್ಷದ ಜನವರಿಯಲ್ಲಿ ವಿಶೇಷ ಅರ್ಜಿ ಸಲ್ಲಿಸಿತ್ತು. ಕೇಂದ್ರ ಭೂ ಸಾರಿಗೆ ಮಂತ್ರಾಲಯದ ಅಧ್ಯಕ್ಷತೆಯಲ್ಲಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಮುಖ್ಯ ಕಾರ್ಯದರ್ಶಿಗಳು, ಕೇಂದ್ರ ಪರಿಸರ ಇಲಾಖೆಯ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್‌ ಅವರನ್ನು ಒಳಗೊಂಡ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿತ್ತು. ಸಮಿತಿ ಏಪ್ರಿಲ್‌ನಲ್ಲಿ ಸಭೆ ನಡೆಸಿ ಪರ್ಯಾಯ ಸಾರಿಗೆ ವ್ಯವಸ್ಥೆ ಬಗ್ಗೆ ಚರ್ಚಿಸಿದೆ. ಸುಪ್ರೀಂ ಕೋರ್ಟ್‌ ಮುಂದೆ ಮಂಡಿಸಲಿರುವ ಪ್ರಸ್ತಾವನೆ ಬಗ್ಗೆ ಒಪ್ಪಿಗೆ ಕೋರಿ ಮಲ್ಲಿಕ್‌ ಅವರು ರಾಜ್ಯಕ್ಕೆ ಪತ್ರ ಬರೆದಿದ್ದಾರೆ’ ಎಂದರು.

‘ಬಂಡೀಪುರ ಅರಣ್ಯ ಪ್ರದೇಶದಲ್ಲಿ ಕರ್ನಾಟಕದ ಭಾಗದಲ್ಲಿ 24.20 ಕಿ.ಮೀ.ಗಳಲ್ಲಿ ಹಾಗೂ ಕೇರಳ ರಾಜ್ಯದ 10.4 ಕಿ.ಮೀ.ಗಳಲ್ಲಿ ಒಂದು ಕಿ.ಮೀ. ಉದ್ದದ 5 ಎಲಿವೇಟೆಡ್‌ ಕಾರಿಡಾರ್‌ಗಳನ್ನು ನಿರ್ಮಿಸಲು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ಈ ಕಾರಿಡಾರ್‌ಗಳ ಕೆಳಗೆ ರಸ್ತೆಯನ್ನು ತೆಗೆದು ಅರಣ್ಯ ಬೆಳೆಸಿ ವನ್ಯಜೀವಿಗಳ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದೂ ತಿಳಿಸಿದ್ದಾರೆ. ಉಳಿದ ನೆಲಮಟ್ಟದ ಭಾಗದಲ್ಲಿ ಎರಡೂ ಬದಿಗಳಲ್ಲಿ 8 ಅಡಿ ಎತ್ತರದ ಕಬ್ಬಿಣದ ಬೇಲಿಗಳನ್ನು ನಿರ್ಮಿಸಲು ಪ್ರಸ್ತಾಪಿಸಲಾಗಿದೆ. ಈ ವಿಷಯ ಸುಪ್ರೀಂ ಕೋರ್ಟ್‌ನಲ್ಲಿದೆ. ಕೋರ್ಟ್‌ ಸೂಚನೆಯಂತೆ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !