ಬಿಬಿಎಂಪಿ ಉಪಮೇಯರ್‌ ರಮೀಳಾ ಇನ್ನಿಲ್ಲ

7
ಗುರುವಾರ ತಡರಾತ್ರಿ ಹೃದಯಾಘಾತದಿಂದ ಸಾವು

ಬಿಬಿಎಂಪಿ ಉಪಮೇಯರ್‌ ರಮೀಳಾ ಇನ್ನಿಲ್ಲ

Published:
Updated:

ಬೆಂಗಳೂರು: ಬಿಬಿಎಂಪಿಯ ನೂತನ ಉಪಮೇಯರ್‌ ಆಗಿ ಅಧಿಕಾರ ಸ್ವೀಕರಿಸಿದ್ದ ರಮೀಳಾ ಉಮಾಶಂಕರ್‌ (44) ಅವರು ಗುರುವಾರ ತಡರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತೀವ್ರ ಎದೆನೋವು ಕಾಣಿಸಿಕೊಂಡ ಕಾರಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾಗಡಿರಸ್ತೆ ಹೌಸಿಂಗ್‌ ಬೋರ್ಡ್‌ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಿತ್ತನಹಳ್ಳಿ ತೋಟದಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬ ಸದಸ್ಯರು ತೀರ್ಮಾನಿಸಿದ್ದಾರೆ.

ಉಪಮೇಯರ್ ರಮೀಳಾ ಉಮಾಶಂಕರ್ ನಿಧನದ ಹಿನ್ನೆಲೆಯಲ್ಲಿ ಪಾಲಿಕೆ ತನ್ನೆಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ, ರಜೆ ಘೋಷಿಸಿದೆ. ಮ್ಯೂಸಿಯಂ ರಸ್ತೆಯ ಗುಡ್‌ಶೆಫರ್ಡ್ ಕಾನ್ವೆಂಟ್‌ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಆಯೋಜಿಸಿದ್ದ ಪೂರ್ವವಲಯದ ಆರು ವಿಧಾನಸಭಾ ಕ್ಷೇತ್ರಗಳ ಜನಸ್ಪಂದನಾ ಕಾರ್ಯಕ್ರಮ ರದ್ದಾಗಿದೆ.

ರಮೀಳಾ ಅವರ ಪತಿ ಉಮಾಶಂಕರ್ ಬಿಬಿಎಂಪಿಯ ಮಾಜಿ ಸದಸ್ಯರು. ಕೊಟ್ಟಿಗೆಪಾಳ್ಯ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಮಗಳು ಭೂಮಿಕಾ ರಾಣಿ ಪಿಯುಸಿ ವಿದ್ಯಾರ್ಥಿನಿ.

‘ನಮ್ಮ ಮೆಟ್ರೋ’ಗೆ ಗುರುವಾರವಷ್ಟೇ ಸೇರ್ಪಡೆಯಾದ ಆರು ಬೋಗಿಗಳ ರೈಲೊಂದಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ, ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ, ಸಂಸದ ಪಿ.ಸಿ.ಮೋಹನ್‌ ಹಾಗೂ ಮೇಯರ್ ಗಂಗಾಂಬಿಕೆ ಅವರೊಂದಿಗೆ ಭಾಗವಹಿಸಿದ್ದರು.

ಇದನ್ನೂ ಓದಿ: 22 ವರ್ಷಗಳ ಬಳಿಕ ಮಹಿಳಾ ಜೋಡಿ

ಕಾವೇರಿಪುರ ವಾರ್ಡ್‌ ಕಾರ್ಪೊರೇಟರ್‌ ಆಗಿದ್ದ ರಮೀಳಾ, ಸೆಪ್ಟೆಂಬರ್‌ 28ರಂದು ಜೆಡಿಎಸ್‌ನಿಂದ ಉಪಮೇಯರ್‌ ಸ್ಥಾನಕ್ಕೆ ಆಯ್ಕೆಯಾಗಿದ್ದರು. ಮೇಯರ್‌ ಆಗಿ ಜಯನಗರ ವಾರ್ಡ್‌ನ ಕಾರ್ಪೊರೇಟರ್‌ ಗಂಗಾಂಬಿಕೆ ಅಧಿಕಾರ ಸ್ವೀಕರಿಸಿದ್ದರು.

ಇದರೊಂದಿಗೆ 22 ವರ್ಷಗಳ ಬಳಿಕ ಬಿಬಿಎಂಪಿ ಆಡಳಿತ ಚುಕ್ಕಾಣಿ ಹಿಡಿದ ಮಹಿಳಾ ಜೋಡಿ ಎನಿಸಿದ್ದರು.

ಇದನ್ನೂ ಓದಿ: ‘ನಮ್ಮ ಮೆಟ್ರೊ’ ಸೇರಿದ 6 ಬೋಗಿ ರೈಲು

***

ಪಕ್ಷಕ್ಕೆ ತುಂಬಲಾಗದ ನಷ್ಟ

ಉಪ ಮಹಾಪೌರರಾದ ಶ್ರೀಮತಿ ರಮೀಳಾ ಉಮಾಶಂಕರ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಬಹಳ ನೋವುಂಟಾಗಿದೆ.

ಅತೀ ಚಿಕ್ಕ ವಯ್ಯಸ್ಸಿನ್ನಲ್ಲೇ ಸಮಾಜದ ಬಗ್ಗೆ ಉತ್ತಮ ಕಾಳಜಿ ಹೊಂದಿದ್ದ ಕ್ರಿಯಾಶೀಲಾ ಮಹಿಳೆ ಅವರು. ಉಪ ಮಹಾಪೌರರಾದ ಕೇವಲ ಒಂದೇ ವಾರದಲ್ಲಿ ಬೆಂಗಳೂರು ನಗರದಲ್ಲಿ ಉತ್ತಮ ಕೆಲಸ ಮಾಡಲು ಪ್ರಾರಂಭಿಸಿದ್ದರು.

ಈ ದಿನ ಅವರ ಅಗಲಿಕೆಯಿಂದ ನಮ್ಮ ಪಕ್ಷಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ. ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ತುಂಬಲಿ. ದೇವರು ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ.

–ಎಚ್‌.ಡಿ. ದೇವೇಗೌಡ, ಮಾಜಿ ಪ್ರಧಾನಿ

 

***

ಸುದ್ದಿ ಕೇಳಿ ದಿಗ್ಭ್ರಮೆ​

‘ಬಿಬಿಎಂಪಿ ಉಪ ಮೇಯರ್ ರಮಿಳಾ ಉಮಾಶಂಕರ್ ನಿಧನದ ಸುದ್ದಿ ಕೇಳಿ ದಿಗ್ಭ್ರಮೆಯಾಗಿದೆ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

ನಿನ್ನೆ ತಾನೆ ಮೆಟ್ರೋ ಬೋಗಿ ಚಾಲನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನನ್ನೊಂದಿಗೆ ಮಾತನಾಡಿದ್ದರು. ಮೆಟ್ರೋ ಪ್ರಯಾಣದಲ್ಲಿ ಜೊತೆಯಾಗಿದ್ದ ಅವರು ಬೆಂಗಳೂರು ಅಭಿವೃದ್ದಿ ಕುರಿತು, ಡಿಸಿಎಂ ಪರಮೇಶ್ವರ್, ಮೇಯರ್ ಗಂಗಾಬಿಕೆ ಮತ್ತು ನಾನು ಚರ್ಚಿಸಿದ್ದೆವು.

ನಮ್ಮ ಪಕ್ಷದಲ್ಲಿ ಬಹಳ ವರ್ಷಗಳಿಂದ ಇದ್ದ ಅವರು ಸಮಾಜ ಸೇವೆಯಲ್ಲಿ ತೊಡಗಿದ್ದರು. ಅವರ ನಿಧನಕ್ಕೆ ಸಂತಾಪ ಸೂಚಿಸುತ್ತೇನೆ. ರಮೀಳಾ ಉಮಾಶಂಕರ್ ಅವರ ನಿಧನದ ದುಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ.

–ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಗಣ್ಯರ ಸಂತಾಪ

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಶಾಸಕರಾದ ಅರವಿಂದ ಲಿಂಬಾವಳಿ, ಕೆ.ಜೆ.ಜಾರ್ಜ್, ಯಡಿಯೂರಪ್ಪ ಸೇರಿದಂತೆ ಹಲವು ಹಿರಿಯ ನಾಯಕರು ಉಪಮೇಯರ್ ನಿಧನಕ್ಕೆ ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

ದೇವರು ಇಷ್ಟುಬೇಗ ಕರೆಸಿಕೊಳ್ಳಬಾರದಿತ್ತು: ಯಡಿಯೂರಪ್ಪ

ನಂಬಲು ಆಗುತ್ತಿಲ್ಲ: ಡಾ.ಜಿ.ಪರಮೇಶ್ವರ

ಮನಸ್ಸಿಗೆ ನೋವಾಯಿತು: ಕೆ.ಜೆ.ಜಾರ್ಜ್

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 19

  Sad
 • 3

  Frustrated
 • 0

  Angry

Comments:

0 comments

Write the first review for this !