ಮಂಗನ ಕಾಯಿಲೆ: ಸತ್ತಿದ್ದ ಮಂಗಗಳಲ್ಲಿ ವೈರಸ್ ಪತ್ತೆ

7
ಪ್ರಯೋಗಾಲಯದ ವರದಿಯಲ್ಲಿ ಸೋಂಕು ದೃಢ

ಮಂಗನ ಕಾಯಿಲೆ: ಸತ್ತಿದ್ದ ಮಂಗಗಳಲ್ಲಿ ವೈರಸ್ ಪತ್ತೆ

Published:
Updated:

ಸಾಗರ/ಕಾರ್ಗಲ್: ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಈಚೆಗೆ ಮೃತಪಟ್ಟಿದ್ದ ಮಂಗಗಳಲ್ಲಿ ಮಂಗನ ಕಾಯಿಲೆಗೆ ಸಂಬಂಧಿಸಿದ ವೈರಸ್ ಇರುವುದು ದೃಢಪಟ್ಟಿದೆ.

ತಾಲ್ಲೂಕಿನ ಸಿರಿವಂತೆ, ಬಂದಗದ್ದೆ, ಲಿಂಗದಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಸತ್ತಿದ್ದ ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಿ, ಅಂಗಾಂಶ ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಾಣು ಪ್ರಯೋಗಾಲಯ ಸಂಸ್ಥೆಗೆ ಕಳುಹಿಸಲಾಗಿತ್ತು.

ಪ್ರಯೋಗಾಲಯದಿಂದ ವರದಿ ಬಂದಿದ್ದು, ಸತ್ತ ಮಂಗಗಳಲ್ಲಿ ಮಂಗನ ಕಾಯಿಲೆ ವೈರಸ್ ಇರುವುದು ಕಂಡುಬಂದಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಮುನಿ ವೆಂಕಟರಾಜು ತಿಳಿಸಿದ್ದಾರೆ.

ಯಾವ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆ ವೈರಸ್ ದೃಢಪಟ್ಟಿದೆಯೋ ಅಲ್ಲಿನ 5 ಕಿ.ಮೀ. ವ್ಯಾಪ್ತಿಯ ಜನರಿಗೆ ಕಾಯಿಲೆ ಹರಡದಂತೆ ತಡೆಯಲು ಲಸಿಕೆ ಹಾಕಲು ಹಾಗೂ ಡಿಎಂಪಿ ತೈಲ ವಿತರಿಸಲು ಆರೋಗ್ಯ ಇಲಾಖೆ ಮುಂದಾಗಲಿದೆ ಎಂದು ಅವರು ಹೇಳಿದ್ದಾರೆ.

ಅರಲಗೋಡು ಗ್ರಾಮ ಪಂಚಾಯಿತಿ ಮತ್ತು ಸರಹದ್ದಿನ ಗ್ರಾಮಗಳಲ್ಲಿನ ಕಾಯಿಲೆ ನಿಯಂತ್ರಿಸಲೆಂದೇ 10,710 ಚುಚ್ಚುಮದ್ದನ್ನು ಈಗಾಗಲೇ ನೀಡಲಾಗಿದೆ. ಬುಧವಾರ ಉತ್ತರ ಕನ್ನಡ ಜಿಲ್ಲೆಯಿಂದ ಬಂದ ಕೀಟಾಣು ಶಾಸ್ತ್ರಜ್ಞರ ತಂಡವು ಜೈವಿಕ ತಂತ್ರಜ್ಞಾನದ ಮೂಲಕ ಕೀಟಾಣುಗಳಲ್ಲಿರುವ ವೈರಸ್‌ಗಳನ್ನು ಪತ್ತೆಹಚ್ಚಲು ಅರಲಗೋಡು ಭಾಗದ ಉಣಗುಗಳನ್ನು ಸಂಗ್ರಹಿಸುತ್ತಿದೆ.

ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಲ್ಲಿ ಒಂದು ಹಾಗೂ ಬಿಳಚಿಕಟ್ಟೆಯಲ್ಲಿ ಎರಡು ಮಂಗಗಳ ಮೃತ ದೇಹ ಪತ್ತೆಯಾಗಿವೆ. ಮರಣೋತ್ತರ ಪರೀಕ್ಷೆ ನಡೆಸಿ, ಮಂಗಗಳನ್ನು ಸುಡಲಾಗಿದೆ.

6 ಮಂದಿ ಮಣಿಪಾಲ ಆಸ್ಪತ್ರೆಗೆ

ಕಾರ್ಗಲ್: ಶಂಕಿತ ಮಂಗನ ಕಾಯಿಲೆ ಜ್ವರದಿಂದ ಬಳಲುತ್ತಿದ್ದ ಆರು ಮಂದಿಯನ್ನು ಬುಧವಾರ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ತಿಳಿಸಿದರು.

ರಾಘವೇಂದ್ರ ಭಟ್ ಬಣ್ಣುಮನೆ, ಸೋಮರಾಜು ನಂದಿಹಕ್ಲು, ಪುಷ್ಪದಂತ ಮಂಡವಳ್ಳಿ, ಸವಿತಾ ತುಮರಿ, ರವಿ ನಂದೋಡಿ, ರಾಜಾಮತಿ ಅರಲಗೋಡು ಇವರಲ್ಲಿ ಜ್ವರ ಕಂಡುಬಂದಿದೆ ಎಂದು ಹೇಳಿದರು.

ಸಂತ್ರಸ್ತ ಕುಟುಂಬಗಳಿಗೆ ತಲಾ ₹ 1 ಲಕ್ಷ ಪರಿಹಾರ

ಕಾರ್ಗಲ್ ಸಮೀಪದ ಅರಲಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆಯಿಂದ ಮೃತಪಟ್ಟ 6 ಕುಟುಂಬಗಳಿಗೆ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ತಲಾ ₹ 1 ಲಕ್ಷ ವೈಯಕ್ತಿಕ ಸಹಾಯ ನೀಡಿದ್ದಾರೆ.

ಪಾರ್ಶ್ವನಾಥ ಜೈನ್ ಮಂಡವಳ್ಳಿ, ಲೋಕರಾಜ್ ಮರಬಿಡಿ, ಮಂಜುನಾಥ ಕಂಚೀಕೈ, ರಾಮಮ್ಮ ಕಂಚೀಕೈ, ಶ್ವೇತಾ ಜೈನ್ ಜೇಗಳ, ಕೃಷ್ಣಪ್ಪ ಜೇಗಳ ಅವರ ಕುಟುಂಬಸ್ಥರಿಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪರಿಹಾರ ವಿತರಿಸಿದರು.

ಕಂಬನಿ ಮಿಡಿದ ಕಾಗೋಡು: ಮೃತಪಟ್ಟ ಕಾಲೇಜು ವಿದ್ಯಾರ್ಥಿನಿ ಶ್ವೇತಾ ಜೈನ್ ತಾಯಿ ಲತಾ ಜೈನ್ ಅವರ ಆಕ್ರಂದನವನ್ನು ನೋಡಿದ ಕಾಗೋಡು ತಿಮ್ಮಪ್ಪನವರು ಕಂಬನಿ ಮಿಡಿದರು. ‘ಪರಿಹಾರ ಸ್ವೀಕರಿಸಿ ನಾನೇನು ಮಾಡಲಿ, ನನ್ನ ಮಗಳನ್ನು ನನಗೆ ತಂದು ಕೊಡಲು ಸಾಧ್ಯವಿದೆಯೇ’ ಎಂದು ಲತಾ ಗೋಳಾಡಿದ್ದು ಮನಕಲಕುವಂತಿತ್ತು.

ಮಂಗಗಳ ಶವದಲ್ಲಿ ಸೋಂಕು ಪತ್ತೆ

ಉಡುಪಿ: ಕುಂದಾಪುರ ತಾಲ್ಲೂಕಿನಲ್ಲಿ ಈಚೆಗೆ ಮೃತಪಟ್ಟ ಮಂಗಗಳ ಶವಗಳಲ್ಲಿ ಮಂಗನ ಸೋಂಕು ಇರುವುದು ಪ್ರಯೋಗಾಲಯದ ಪರೀಕ್ಷೆಯಿಂದ ದೃಢಪಟ್ಟಿದೆ.

ಕೆಲವು ದಿನಗಳ ಹಿಂದೆ ಮೃತ ಮಂಗಗಳ ದೇಹದ ಭಾಗವನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ವರದಿ ಬಂದಿದ್ದು, ಸೋಂಕು ಇರುವುದು ಪತ್ತೆಯಾಗಿದೆ.

ಮತ್ತೊಂದೆಡೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಚಿಕಿತ್ಸೆಗೆ ದಾಖಲಾಗಿದ್ದ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ 83 ರೋಗಿಗಳಲ್ಲಿ 28 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ಸದ್ಯ 22 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ಗುಣಮುಖರಾಗಿ ತೆರಳಿದ್ದಾರೆ.

3 ಮಂಗಗಳ ಶವ ಪತ್ತೆ: ಕಾರ್ಕಳ ತಾಲ್ಲೂಕಿನ ಮಂಜರ್ಪಲ್ಕೆ ಸಮೀಪ ಎರಡು ಹಾಗೂ ಕಾರ್ಕಳ ಸಾಲ್ಮಾರ ಕಾಬೆಟ್ಟುವಿನಲ್ಲಿ 1 ಸೇರಿದಂತೆ ಒಟ್ಟು 3 ಮಂಗಗಳ ಶವ ಬುಧವಾರ ಪತ್ತೆಯಾಗಿವೆ.

ಮಂಜರ್ಪಲ್ಕೆಯಲ್ಲಿ ದೊರೆತ ಮಂಗನ ಶವ ಒಡೆದಿದೆ. ಸಾಲ್ಮಾರದಲ್ಲಿ ದೊರೆತ ಮಂಗ ರಂಗೂನ್ ವರ್ಗಕ್ಕೆ ಸೇರಿದ್ದು, ವಿದ್ಯುತ್ ಸ್ಪರ್ಶದ ಕಾರಣ ಮೃತಪಟ್ಟಿದೆ ಎನ್ನಲಾಗಿದೆ. ಹೀಗಾಗಿ ಮಂಗಗಳ ಶವ ಪತ್ತೆಯಿಂದಾಗಿ ಮಂಗನ ಕಾಯಿಲೆ ಬಗ್ಗೆ ಖಚಿತತೆಯಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !