‘ಗಡಿಪಾರು ಕೇಂದ್ರ' ಸ್ಥಾಪಿಸಲು ಪತ್ರ

7

‘ಗಡಿಪಾರು ಕೇಂದ್ರ' ಸ್ಥಾಪಿಸಲು ಪತ್ರ

Published:
Updated:

ಬೆಂಗಳೂರು: ಅಕ್ರಮವಾಗಿ ನೆಲೆಸಿರುವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕಾಗಿ ರಾಜ್ಯದಲ್ಲಿ ‘ಗಡಿಪಾರು ಕೇಂದ್ರ’ ಸ್ಥಾಪಿಸುವಂತೆ ಕೇಂದ್ರ ಗೃಹ ವ್ಯವಹಾರ ಸಚಿವಾಲಯ ಕಾರ್ಯದರ್ಶಿ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‌ ಹಾಗೂ ಗೃಹ ವ್ಯವಹಾರಗಳ ರಾಜ್ಯ ಸಚಿವ ಕಿರಣ್‌ ರಿಜಿಜು ಅವರನ್ನು ಇತ್ತೀಚೆಗಷ್ಟೇ ದೆಹಲಿಯಲ್ಲಿ ಭೇಟಿಯಾಗಿದ್ದ ಸಂಸದ ಪಿ.ಸಿ.ಮೋಹನ್‌ ಹಾಗೂ ಶಾಸಕ ಅರವಿಂದ ಲಿಂಬಾವಳಿ, ಕೇಂದ್ರ ಸ್ಥಾಪನೆ ಬಗ್ಗೆ ಮನವಿ ಸಲ್ಲಿಸಿದ್ದರು. 

‘ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಅಕ್ರಮ ವಾಸಿಗಳ ಸಂಖ್ಯೆ ಹೆಚ್ಚಿದೆ. ಆಫ್ರಿಕಾ ಹಾಗೂ ಬಾಂಗ್ಲಾದೇಶದವರೇ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮವಾಗಿ ವಾಸವಿರುವ ಮಾಹಿತಿ ಇದೆ. ಮಾದಕವಸ್ತು ಮಾರಾಟ ಸೇರಿದಂತೆ ಹಲವು ಅಪರಾಧ ಚಟುವಟಿಕೆಗಳಲ್ಲಿ ಅವರೆಲ್ಲ ತೊಡಗಿಸಿಕೊಳ್ಳುತ್ತಿದ್ದಾರೆ. ಅದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುತ್ತಿದೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.

‘ವಿದೇಶಿಯರ ಕಾಯ್ದೆ 1948ರ ಸೆಕ್ಷನ್ 3ರ ಪ್ರಕಾರ ಅಕ್ರಮ ವಾಸಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಅದರಡಿಯೇ ಕ್ರಮ ಕೈಗೊಳ್ಳಬಹುದು’ ಎಂದು ಸಲಹೆ ನೀಡಲಾಗಿದೆ.

ಸೂಚನೆಯಂತೆ ಕ್ರಮ: ‘ಸಚಿವಾಲಯದ ಪತ್ರ ಉಲ್ಲೇಖಿಸಿ ರಾಜ್ಯ ಸರ್ಕಾರವು ಸೂಚನೆ ನೀಡಿದರೆ, ತ್ವರಿತವಾಗಿ ಕೇಂದ್ರ ಸ್ಥಾಪನೆ ಮಾಡಲು ಕ್ರಮ ಜರುಗಿಸಲಾಗುವುದು’ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಕಮಲ್ ಪಂತ್‌ ತಿಳಿಸಿದರು.

‘ಬೆಂಗಳೂರಿನ ಪೂರ್ವ ವಿಭಾಗದಲ್ಲೇ ಹೆಚ್ಚಿನ ವಿದೇಶಿಗರು ವಾಸವಿದ್ದಾರೆ. ಮಾದಕ ವಸ್ತು ಮಾರಾಟ ಪ್ರಕರಣಗಳು ಅದೇ ವಿಭಾಗದ ಠಾಣೆಯಲ್ಲಿ ಹೆಚ್ಚಾಗಿ ವರದಿಯಾಗುತ್ತಿವೆ. ಅದೇ ಭಾಗದಲ್ಲಿ ಕೇಂದ್ರ ಸ್ಥಾಪಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಲಾಗುವುದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !