ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಪ್ರೀತಿಸಿದ ಹಿಂದಿ ಚಿತ್ರರಂಗದ ಹೀರೋ ದೇವಾನಂದ್

Last Updated 9 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಅಪರೂಪಕ್ಕೆ ತಮ್ಮ ಹಳೆಯ ಚಿತ್ರಗಳನ್ನು ನೋಡುತ್ತಿದ್ದ ದೇವಾನಂದ್, ತಮ್ಮ ಮುಂದಿನ ಚಿತ್ರದ ಕೆಲಸವನ್ನು ಮಾಡುವುದನ್ನು ಹೆಚ್ಚು ಇಷ್ಟ ಪಡುತ್ತಿದ್ದರು.

ದೇವಾನಂದ್ ಒಬ್ಬ ಸ್ಟೈಲ್ ಐಕನ್. ಬಹುಶಃ ಭಾರತದ ಪ್ರಥಮ ಫ್ಯಾಶನ್ ಟ್ರೆಂಡ್‌ಸೆಟರ್. ಅವರ ಮೋಹಕ ಕಣ್ಣುಗಳು, ಅರಳಿದ ಮೂಗಿನ ಹೊಳ್ಳೆಗಳು, ತುಂಬು ತುಟಿಗಳು ಹಾಗೂ ಚಿಕ್ಕ, ತುಂಟ ಹುಡುಗನ ನಗೆ ಒಂದೊಂದೂ ವಿಶೇಷವೇ ಸರಿ.

ಜನರಿಗೆ ದೇವಾನಂದ್ ಎಂದರೆ, ಅವರ ವಿಶಿಷ್ಟ ನಡಿಗೆ ಮಾತುಗಾರಿಕೆ ಅಚ್ಚುಮೆಚ್ಚು. ಅವರ ಚೆಕ್ಸ್ ಅಂಗಿಗಳು, ಅಗಲವಾದ ಬೆಲ್ಟ್‌ಗಳು, ದೊಡ್ಡ ದೊಡ್ಡ ಕೈಗಡಿಯಾರಗಳು, ಮಫ್ಲರ್‌ಗಳು, ಜಾಕೆಟ್‌ಗಳು, ಕೊಂಚ ಗಿಡ್ಡಗಿದ್ದ ಪ್ಯಾಂಟು, ತುಸುವೇ ಓರೆಯಾಗಿ ಧರಿಸಿದ ಟೋಪಿಗಳು ಮತ್ತು ಪ್ಯಾಂಟಿನ ಜೇಬಿನ ತುದಿಯಿಂದ ಹೊರ ತೆಗೆಯುತ್ತಿದ್ದ ಅವರ ಬಣ್ಣಬಣ್ಣದ ಸ್ಕಾರ್ಫ್‌ಗಳು ಎಲ್ಲವೂ ವೀಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ್ದವು.

ಮೊದಲ ಕೆಲವು ವರ್ಷಗಳಲ್ಲಿ ನಮ್ಮ ಜನ ಅವರನ್ನು ನಮ್ಮ ದೇಶದ ಗ್ರೆಗರಿ ಪೆಕ್ ಎಂದು ಕರೆದರು. ಕ್ರಮೇಣ ನಮ್ಮ ದೇವಾನಂದ್ ಆದರು.ಅಕ್ಟೋಬರ್ 2007ರ ಮೊದಲ ವಾರದಲ್ಲಿ ದೇವಾನಂದ್ ತಮ್ಮ ಆತ್ಮಕಥೆ ‘ರೊಮಾನ್ಸಿಂಗ್ ವಿತ್ ಲೈಫ್’ ಬಿಡುಗಡೆ ಮಾಡಲು ಬೆಂಗಳೂರಿಗೆ ಬಂದಿದ್ದರು. ಸ್ಟಾರ್ ಹೋಟೇಲ್ ಒಂದರಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನ ಪಡೆದ ಭಾಗ್ಯಶಾಲಿಗಳಲ್ಲಿ ನಾನೂ ಒಬ್ಬ.

ಅಲ್ಲಿಗೆ ಹೋದಾಗ ಸೀಟುಗಳೆಲ್ಲ ಭರ್ತಿಯಾಗಿದ್ದವು. ನಾನು ನೆಲದ ಮೇಲೆ ಕುಳಿತುಕೊಂಡೆ. ಒಬ್ಬ ಸಿನಿಮಾ ವಿದ್ಯಾರ್ಥಿಯಾದ ನನಗೆ ಆ ಪ್ರಖ್ಯಾತ ಸೂಪರ್ ಸ್ಟಾರ್, ಬರಹಗಾರ, ನಿರ್ದೇಶಕ ಮತ್ತು ನಿರ್ಮಾಪಕನ ಮುಂದೆ ನನ್ನ ಸ್ಥಾನ ಎಲ್ಲಿದೆ ಎಂಬುದು ತಿಳಿದಿತ್ತು.

ಸಮಾರಂಭ ಮುಗಿದ ನಂತರ, ಜನರು ನನ್ನನ್ನು ಮಾತಾಡಿಸಲು ಮುಂದೆ ಬಂದರು. ಇದನ್ನು ನೋಡಿದ ದೇವಾನಂದ್ ನನ್ನ ಕುರಿತು ವಿಚಾರಿಸಿದರು. ಆಗ ನಾನೇ ಅವರ ಬಳಿ ತೆರಳಿ ಅವರ ಆಶಿರ್ವಾದ ಪಡೆಯಲು ಬಾಗಿದೆ. ಆ ಕ್ಷಣದಲ್ಲಿ ಅವರ ಮನ ಸೆಳೆಯುವ ಪಾತ್ರಗಳು, ಅವರ ಹಾಡುಗಳು ಮತ್ತು ಚಲನಚಿತ್ರಗಳು ನನ್ನ ಕಣ್ಣುಗಳ ಮುಂದೆ ಕುಣಿದಾಡಿದವು.

ಸಜ್ಜನ ದೇವಾನಂದ್, ನನ್ನನ್ನು ಮುಂಬೈನ ಪಾಲಿ ಹಿಲ್ಸ್‌ನಲ್ಲಿರುವ ತಮ್ಮ ಆನಂದ್ ಸ್ಟುಡಿಯೊಗೆ ಬರಲು ಆಹ್ವಾನಿಸಿದರು. ಅದರಂತೆ ನಾನು ಮುಂಬೈನಲ್ಲಿದ್ದಾಗ ಸಮಯ ನಿಗದಿ ಮಾಡಿಕೊಂಡು, ಆ ಸಮಯಕ್ಕೆ ಸರಿಯಾಗಿ ದೇವಾನಂದ್ ಅವರನ್ನು ನೋಡಲು ಹೋದೆ.
ಈ ಸಂದರ್ಭದಲ್ಲಿ ನನ್ನ ಸಿನಿಮಾ ‘ನೀನೆಲ್ಲೋ ನಾನಲ್ಲೆ’ಯ ಕೆಲವು ತುಣುಕುಗಳನ್ನು ಅವರಿಗೆ ತೋರಿಸಿದೆ. ಅವರ ಪ್ರಶಂಸೆಯಿಂದ ಮೂಕನಾದೆ. ನನ್ನನ್ನು ಹರಸಿದ ದೇವಾನಂದ್, ಅವರೊಂದಿಗೆ ಸಂಪರ್ಕ ಇಟ್ಟುಕೊಳ್ಳಲು ಹೇಳಿದರು.

ಹಾಗೇ ಆತ್ಮೀಯವಾಗಿ ಒಂದು ಕಿವಿಮಾತು ಹೇಳಿದರು. ‘ಅನಿರುದ್ಧ! ಕಭಿ ಮೋಟೆ ಮತ್ ಹೋನಾ’ (ಎಂದಿಗೂ ದಪ್ಪಗಾಗಬೇಡ). ಸದಾ ಫಿಟ್ ಆಗಿರುವವರಿಂದ ದೊರೆತ ಆ ಕಿವಿಮಾತು ನನ್ನ ಸ್ಮೃತಿಪಟಲದಲ್ಲಿ ಕೊರೆದಿಟ್ಟಂತಿದೆ. ಆಗ ಎಂಭತ್ತೈದರ ಹರೆಯದ ದೇವಾನಂದ್ ನನಗಾಗಿ ಸೂಟನ್ನು ಧರಿಸಿ, ತಮ್ಮ ಸ್ಟುಡಿಯೋದಲ್ಲಿ, ತಮ್ಮ ಮುಂದಿನ ಚಿತ್ರದ ಚಿತ್ರಕಥೆಯನ್ನು ತಮ್ಮ ತೊಡೆಯ ಮೇಲಿಟ್ಟುಕೊಂಡು ಕಾಯುತ್ತಿದ್ದರು.

ಅವರು ತಮ್ಮ ಹಳೆಯ ಚಲನಚಿತ್ರಗಳು ಮತ್ತು ಹಾಡುಗಳನ್ನು ನೋಡುವುದೇ ಅಪರೂಪವೆಂದು ಎಲ್ಲೋ ಓದಿದ ನೆನಪು. ವೀಕ್ಷಕರು ದೇವಾನಂದರ ಹಳೆಯ ಸಿನಿಮಾಗಳನ್ನು ಇಷ್ಟಪಟ್ಟರೆ ಇವರು ಯಾವಾಗಲೂ ಮುಂದಿನದನ್ನು ನೋಡುತ್ತಿದ್ದರು. ಹೊಸ ಚಿತ್ರಗಳಲ್ಲಿ ತಮಗಿಂತ ಕಿರಿ ವಯಸ್ಸಿನ ನಾಯಕಿಯರ ಜೊತೆ ನಟಿಸುವುದನ್ನು ಎದುರು ನೋಡುತ್ತಿದ್ದರು.

ನಾನು ಸಾಕಷ್ಟು ಜನ ವಯಸ್ಸಾದವರು ತಮ್ಮ ವೃದ್ಧಾಪ್ಯವನ್ನು ಅನುಭವಿಸಿ, ಮನಸ್ಸಿಗೆ ತಂದುಕೊಂಡಿರುವುದನ್ನು ನೋಡಿದ್ದೇನೆ. ಆದರೆ, ಈ ನಾಯಕನಟ ಎಂದಿಗೂ ಚಿರಯೌವನಿಗರಾಗಿಯೇ ಉಳಿದರು. ಏಕೆಂದರೆ, ಅವರು ವರ್ತಮಾನದಲ್ಲಿ ಜೀವಿಸಲು ಬಯಸುತ್ತಿದ್ದರು. ಭವಿಷ್ಯದ ಕಡೆಗೆ ಹೆಜ್ಜೆ ಹಾಕಲು ಚಾಕಚಕ್ಯತೆಯಿಂದ ಕೆಲಸ ಮಾಡಿದರು. ಬದುಕನ್ನು ಪ್ರೀತಿಸಿದರು.

-ಅನಿರುದ್ಧ

(ನಟ, ಗಾಯಕ, ಬರಹಗಾರ ಮತ್ತು ನಿರ್ದೇಶಕ)
ಕನ್ನಡಕ್ಕೆ: ಜಯಶ್ರೀ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT