ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರಕ್ಕೇರಿದ ಪ್ರಚಾರ: ಗಲಾಟೆ, ಗದ್ದಲ

ಮಣ್ಣು ಅಡ್ಡಹಾಕಿ ಗ್ರಾಮಕ್ಕೆ ಪ್ರವೇಶಿಸದಂತೆ ಕಾಂಗ್ರೆಸ್‌ ಕಾರ್ಯಕರ್ತರಿಗೆ ತಡೆ
Last Updated 6 ಮೇ 2018, 10:57 IST
ಅಕ್ಷರ ಗಾತ್ರ

ಹೊಳೆನರಸೀಪುರ: ವಿಧಾನಸಭೆ ಚುನಾವಣೆಯ ಮತದಾನದ ದಿನ ಸಮೀಪಿಸುತ್ತಿರುವಂತೆ ತಾಲ್ಲೂಕಿನಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ಗಲಾಟೆ, ಗದ್ದಲ ಹೆಚ್ಚಾಗುತ್ತಿದ್ದು ಆರೋಪ ಪ್ರತ್ಯಾರೋಪಗಳು, ದೂರು ಪ್ರತಿದೂರು ದಾಖಲಾಗುತ್ತಿದೆ.

ಜೆಡಿಎಸ್‌ ಕಾರ್ಯರ್ತರು ನಮ್ಮ ಪ್ರಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಬಾಗೂರು ಮಂಜೇಗೌಡ ಆರೋಪಿಸಿದರೆ, ಕಾಂಗ್ರೆಸ್‌ ಅಭ್ಯರ್ಥಿ ಅನಧಿಕೃತವಾಗಿ ವಾಹನಗಳಲ್ಲಿ ಹಣ, ಹೆಂಡ ಹಂಚುತ್ತಿದ್ದಾರೆ ಎಂದು ಪ್ರಜ್ವಲ್‌ ರೇವಣ್ಣ ಆರೋಪಿಸಿ ದಾಖಲೆ ಒದಗಿಸುತ್ತೇನೆ ಎಂದಿದ್ದಾರೆ.

ಶುಕ್ರವಾರ ಕಾಂಗ್ರೆಸ್‌ ಅಭ್ಯರ್ಥಿ ಬಾಗೂರು ಮಂಜೇಗೌಡ ಹಳೇಕೋಟೆ ಹೋಬಳಿ ಬಸವನಾಯಕನ ಹಳ್ಳಿಗೆ ಕಾರ್ಯಕರ್ತರ ಜೊತೆಯಲ್ಲಿ ಪ್ರಚಾರಕ್ಕೆ ತೆರಳುವಾಗ ರಸ್ತೆಗೆ ಮಣ್ಣನ್ನು ಅಡ್ಡಹಾಕಿ ಕಾಂಗ್ರೆಸ್‌ ಕಾರ್ಯಕರ್ತರನ್ನು ಗ್ರಾಮಕ್ಕೆ ಪ್ರವೇಶಿಸದಂತೆ ತಡೆಯಲು ಪ್ರಯತ್ನ ನಡೆದಿತ್ತು. ಕಾಂಗ್ರೆಸ್‌ ಕಾರ್ಯಕರ್ತರು ಮಣ್ಣನ್ನು ಸರಿಸಿ ಗ್ರಾಮಕ್ಕೆ ತೆರಳಿ ಪ್ರಚಾರ ಮಾಡುವ ವೇಳೆ ಇದೇ ಗ್ರಾಮದಲ್ಲಿ ಮಹಿಳೆಯೊಬ್ಬರು ಮಂಜೇಗೌಡರಿಗೆ ಆರತಿ ಎತ್ತಿ ಶುಭ ಹಾರೈಸಿದರೆ ಗ್ರಾಮದ ಕೆಲವರು ಜಯಕಾರ ಹಾಕಿದರು.

ಇದೇ ಸಂದರ್ಭದಲ್ಲಿ ಜೆಡಿಎಸ್‌ ಬೆಂಬಲಿಗರು ಎಚ್‌.ಡಿ. ರೇವಣ್ಣ ಪರ ಜಯಕಾರ ಕೂಗುವಾಗ ಗದ್ದಲ ಉಂಟಾಗಿತ್ತು. ಪೊಲೀಸರು ಮಧ್ಯ ಪ್ರವೇಶಿಸಿ ಆಗಬಹುದಾಗಿದ್ದ ಗಲಾಟೆಯನ್ನು ತಪ್ಪಿಸಿದರು.

ಹಂಗರಹಳ್ಳಿ ಹಾಗೂ ಹನುಮನಹಳ್ಳಿಯಲ್ಲೂ ಕಾಂಗ್ರೆಸ್‌ ಕಾರ್ಯಕರ್ತರನ್ನು ತಡೆಯುವ ಯತ್ನ ನಡೆಯಿತಾದರೂ ಅದೇ ಊರಿನ ಕೆಲವರು, ಪೊಲೀಸರು ಹಾಗೂ ಅರೆ ಮಿಲಿಟರಿ ಪಡೆಯವರು ಆಗಮಿಸಿ ಪ್ರಚಾರಕ್ಕೆ ಅನುವು ಮಾಡಿಕೊಟ್ಟರು. ಕಾಂಗ್ರೆಸ್‌ ಅಭ್ಯರ್ಥಿಗೆ ಹಳೇಕೋಟೆ ಹೋಬಳಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು ಇದರಿಂದ ಜೆಡಿಎಸ್‌ ಮುಖಂಡರ ನೆಮ್ಮದಿಗೆ ಭಂಗ ಉಂಟಾಗಿದೆ. ಆದ್ದರಿಂದ ನಮ್ಮನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದ ಕಾಂಗ್ರೆಸ್‌ ಕಾರ್ಯಕರ್ತರು ಚುನಾವಣಾಧಿಕಾರಿಗಳಿಗೆ ದೂರಿದ್ದೇವೆ ಎಂದರು.

‘ತಾಲ್ಲೂಕಿನಲ್ಲಿ ಕೆಲವು ಸರ್ಕಾರಿ ನೌಕರರು ಹತ್ತಾರು ವರ್ಷಗಳಿಂದ ಇಲ್ಲಿಯೇ ಉಳಿದಿದ್ದು ಅವರು ಜೆಡಿಎಸ್‌ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ. ನೀರಾವರಿ ಇಲಾಖೆಯ ಎಇಇ ಮಹದೇವ ಪ್ರಸಾದ್‌, ಎಇಇ ಪುಟ್ಟರಾಜು, ಎಇಇ ಸೋಮಶೇಖರ್‌, ಇ.ಓ ತಮ್ಮಣ್ಣೇಗೌಡ, ಪುರಸಭೆ ಮುಖ್ಯಾಧಿಕಾರಿ ಬಿ.ಸಿ. ಬಸವರಾಜು, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ದೇವರಾಜೇಗೌಡ, ಹಳೇಕೋಟೆ ರಾಜಸ್ವ ನಿರೀಕ್ಷಕ ಶಿವಕುಮಾರ್‌, ಎ.ಇ. ಪ್ರಭು, ಉಪನ್ಯಾಸಕ ಟಿ.ಎಸ್‌. ಕುಮಾರಸ್ವಾಮಿ, ಪಿಡಬ್ಲುಡಿ ಎಇಇ ಮಲ್ಲಿಕಾರ್ಜುನ್‌, ಇವರನ್ನು ಚುನಾವಣೆ ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಚುನಾವಣಾಧಿಕಾರಿಗೆ ದೂರು ನೀಡಿದ್ದೇವೆ' ಎಂದು ತಿಳಿಸಿದರು.

‘ಕಾಂಗ್ರೆಸ್‌ಗೆ ಸೋಲುವ ಭೀತಿ’

‘ಕಾಂಗ್ರೆಸ್‌ ಅಭ್ಯರ್ಥಿಗೆ ಸೋಲುವ ಭೀತಿ ಉಂಟಾಗಿದೆ. ಅಕ್ರಮವಾಗಿ ಹಣ ಮತ್ತು ಹೆಂಡವನ್ನು ಹಂಚಿ ಮತಗಳಿಸುವ ಪ್ರಯತ್ನದಲ್ಲಿದ್ದಾರೆ. ರೇವಣ್ಣ ಅವರು ಉತ್ತಮ ಕೆಲಸಗಳನ್ನು ಮಾಡಿದ್ದು ಇವರಿಗಿಂತ ಒಳ್ಳೆಕೆಲಸಮಾಡಲು ಸಾಧ್ಯ ಇಲ್ಲ ಎಂದು ಭಾವಿಸಿರುವ ಕೆಲವರು ನಮ್ಮ ಗ್ರಾಮಕ್ಕೆ ಯಾರೂ ಬೇಡ ರೇವಣ್ಣನವರೇ ಸಾಕು ಎಂದು ಕೆಲವು ಕಡೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಕಾಂಗ್ರೆಸ್‌ ನವರು ಇದನ್ನೇ ದೊಡ್ಡದು ಮಾಡಿ ಜೆಡಿಎಸ್‌ ನಾಯಕರ ಹೆಸರನ್ನು ಕೆಡಿಸಲು ಪ್ರಯತ್ನ ಮಾಡುತ್ತಿದ್ದಾರೆ' ಎಂದು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹನುಮನಹಳ್ಳಿ ರಂಗಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT