ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಮಣಿಸಲು ‘ಗುರು–ಶಿಷ್ಯ’ರ ಪಣ

ಉಪ ಚುನಾವಣೆಯಲ್ಲಿ ಜಂಟಿ ಪ್ರಚಾರ: ಕಾಂಗ್ರೆಸ್‌–ಜೆಡಿಎಸ್‌ ತೀರ್ಮಾನ
Last Updated 20 ಅಕ್ಟೋಬರ್ 2018, 20:32 IST
ಅಕ್ಷರ ಗಾತ್ರ

ಬೆಂಗಳೂರು: 2019 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಸೋಲಿಸಲು ರಾಜ್ಯ ರಾಜಕಾರಣದ ಹಳೇ ‘ಗುರು– ಶಿಷ್ಯ’ರು ಮತ್ತೆ ಕೈ ಜೋಡಿಸಿದ್ದಾರೆ.

ಮಹಾಸಮರಕ್ಕೂ ಮುನ್ನ ನಡೆಯುತ್ತಿರುವ 3 ಲೋಕಸಭಾ ಮತ್ತು 2 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳನ್ನು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ‘ಅಗ್ನಿಪರೀಕ್ಷೆ’ಯಾಗಿ ಸ್ವೀಕರಿಸಿದ್ದಾರೆ.

ಈ ಮಿನಿಸಮರದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪಾಠ ಕಲಿಸುವ ಸಂಕಲ್ಪವನ್ನೂ ಇವರು ಮಾಡಿದ್ದಾರೆ.

12 ವರ್ಷಗಳ ನಂತರ ಇದೇ ಮೊದಲ ಬಾರಿಗೆ ‘ಗುರು–ಶಿಷ್ಯ’ರು ಅಕ್ಕ–ಪಕ್ಕ ಕುಳಿತು ಶನಿವಾರ ಮಾಧ್ಯಮಗೋಷ್ಠಿ ನಡೆಸಿ, ಲೋಕಸಭಾ ಚುನಾವಣೆಯಲ್ಲಿ ಮೋದಿ ಸೋಲಿಸುವ ಪಣ ತೊಟ್ಟಿರುವುದಾಗಿ ಘೋಷಿಸಿದರು.

ಉಭಯ ಪಕ್ಷಗಳ ಮುಖಂಡರಾದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಸಾಕ್ಷಿಯಾದರು.

‘ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ನಮ್ಮ ಸಮಾನ ಶತ್ರುಗಳು. ಇವರನ್ನು ಸೋಲಿಸುವುದೇ ನಮ್ಮ (ಕಾಂಗ್ರೆಸ್–ಜೆಡಿಎಸ್‌) ಕರ್ತವ್ಯ. ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ದೇಶಕ್ಕೆ ಸ್ಪಷ್ಟ ಸಂದೇಶ ನೀಡಲಿದ್ದೇವೆ. ಬಿಜೆಪಿ ವಿರೋಧಿ ಶಕ್ತಿಗಳು ಒಗ್ಗೂಡಲು ಕರ್ನಾಟಕ ಮತ್ತೆ ವೇದಿಕೆಯಾಗಲಿದೆ’ ಎಂದು ಸಿದ್ದರಾಮಯ್ಯ ಸಾರಿದರು.

‘ದೇಶದ ಜಾತ್ಯತೀತ ಶಕ್ತಿಗಳು ಒಂದಾಗಬೇಕು. ದೇವೇಗೌಡರು ಮುಂಚೂಣಿಯಲ್ಲಿ ನಿಂತು, ಜಾತ್ಯತೀತ ಮತಗಳು ವಿಭಜನೆ ಆಗುವುದನ್ನು ತಪ್ಪಿಸಬೇಕು. ಬಿಜೆಪಿ ಮತ್ತು ಕೋಮುವಾದಿಗಳು ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಬೇಕು’ ಎಂದೂ ಕರೆ ಕೊಟ್ಟರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಒಟ್ಟಾಗಿ ಕೆಲಸ ಮಾಡುವುದಿಲ್ಲ ಎನ್ನುವುದು ಸುಳ್ಳು. ಎರಡೂ ಪಕ್ಷಗಳ ಕಾರ್ಯಕರ್ತರು ಬಿಜೆಪಿ ಪರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಉಪಚುನಾವಣೆಯಲ್ಲಿ ಬಿಜೆಪಿ ವಿರುದ್ಧ ನಾವು ಜಂಟಿ ಪ್ರಚಾರ ನಡೆಸಲು ಸಿದ್ಧ. ಅಗತ್ಯವಿದ್ದರೆ, ರಾಮನಗರಕ್ಕೂ ಬಂದು ಜೆಡಿಎಸ್‌ ಪರ ಪ್ರಚಾರ ಮಾಡುತ್ತೇನೆ’ ಎಂದು ಪಕ್ಕದಲ್ಲೇ ಕುಳಿತಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ತಿಳಿಸಿದರು.

‘ನಾವು ಒಟ್ಟಿಗೆ ಸೇರುತ್ತೇವೆ ಎಂಬ ನಿರೀಕ್ಷೆ ಇರಲಿಲ್ಲ. ಇದು 2019 ರ ಲೋಕಸಭಾ ಚುನಾವಣೆಗೆ ಒಂದು ಸೂಚನೆ. ದೇಶ ವ್ಯಾಪಿ ಇದೇ ರೀತಿಯಲ್ಲಿ ಬಿಜೆಪಿ ವಿರುದ್ಧ ಧ್ರುವೀಕರಣ ಆಗಲಿದೆ. ದೇಶದ ರಾಜಕಾರಣಕ್ಕೆ ಹೊಸ ಆಯಾಮ ಸಿಗುತ್ತದೆ. ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸಘಡದಲ್ಲಿ ಅಲ್ಲಿನ ರಾಜಕೀಯ ಸ್ಥಿತಿಗತಿಗೆ ಅನುಗುಣವಾಗಿ ಎಸ್‌ಪಿ ಮತ್ತು ಬಿಎಸ್‌ಪಿ ನಿರ್ಧಾರ ತೆಗೆದುಕೊಂಡಿವೆ. ಲೋಕಸಭಾ ಚುನಾವಣೆಯಲ್ಲಿ ಒಗ್ಗೂಡಿಯೇ ಸೆಣಸಲಾಗುತ್ತದೆ’ ಎಂದು ದೇವೇಗೌಡ ಹೇಳಿದರು.

**

ಕೈ–ದಳ ಮೈತ್ರಿಗೆ ಎಡ ಪಕ್ಷಗಳ ಬೆಂಬಲ

ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಒಗ್ಗಟ್ಟಾಗಿರುವ ಮಿತ್ರಪಕ್ಷಗಳಿಗೆ ಎಡಪಕ್ಷಗಳು ಬೆಂಬಲ ಸೂಚಿಸಿವೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿದ ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ. ಲೋಕೇಶ್, ಎಐಟಿಯುಸಿಯ ಅನಂತ ಸುಬ್ಬರಾವ್, ಸಿ‍‍ಪಿಎಂನ ವಿಜಯಭಾಸ್ಕರ್ ಅವರು ಈ ಕುರಿತು ಮಾತುಕತೆ ನಡೆಸಿದರು.

**

‘ಹಿಂದಿನ ತಪ್ಪುಗಳನ್ನು ಕ್ಷಮಿಸಿ’

‘ಈ ಹಿಂದೆ ಸಾಕಷ್ಟು ತಪ್ಪುಗಳು ಆಗಿವೆ. ಎಡವಿದ್ದೇವೆ. ಇದನ್ನು ರಾಜ್ಯದ ಜನರು ಮನ್ನಿಸಬೇಕು. ನಮ್ಮ ತಪ್ಪುಗಳಿಗೆ ಕ್ಷಮೆ ನೀಡಬೇಕು. ಎರಡೂ ಪಕ್ಷಗಳು ಪರಸ್ಪರ ಹೋರಾಡಿದ್ದೇವೆ. ಗೆದ್ದಿದ್ದೇವೆ, ಸೋತಿದ್ದೇವೆ. ಈಗ ಅದನ್ನೆಲ್ಲ ಮರೆತು ಬಿಟ್ಟಿದ್ದೇವೆ. ಕಾರ್ಯಕರ್ತರೂ ಅವೆಲ್ಲವನ್ನು ಮರೆತು, ಒಗ್ಗಟ್ಟಿನಿಂದ ಬಿಜೆಪಿಯನ್ನು ಸೋಲಿಸಬೇಕು’ ಎಂದು ದೇವೇಗೌಡ ಮನವಿ ಮಾಡಿದರು.

**

ದೇವೇಗೌಡ ಮತ್ತು ಸಿದ್ದರಾಮಯ್ಯ ಕೆಲ ಕಾಲ ಬೇರೆ ಇದ್ದದ್ದು ನಿಜ. ಈ ಜೋಡಿಯ ದೇಹ ಬೇರೆ ಆಗಿದ್ದರೂ ಮನಸ್ಸಿನಲ್ಲಿ ಇಬ್ಬರೂ ಒಟ್ಟಾಗಿಯೇ ಇದ್ದಾರೆ.

-ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT