ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಪಕ್ಷ ಕಟ್ಟಿ ಬೆಳೆಸುತ್ತೇನೆ, ಯಾವ ಶಾಸಕರೂ ಎದೆಗುಂದಬಾರದು: ದೇವೇಗೌಡ

ಬೆಂಗಳೂರಿನಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆ
Last Updated 5 ಜೂನ್ 2019, 5:00 IST
ಅಕ್ಷರ ಗಾತ್ರ

ಬೆಂಗಳೂರು: ’ನಾನು ಸೋಲು ಕಂಡಾಗಲೆಲ್ಲ ಮತ್ತೆ ಪಕ್ಷವನ್ನು ನೆಲಮಟ್ಟದಿಂದ ಕಟ್ಟಿ ಬೆಳೆಸಿದ್ದೇನೆ. ಯಾವ ಶಾಸಕರೂ ಎದೆಗುಂದಬಾರದು. ಮೈತ್ರಿ ಸರ್ಕಾರಕ್ಕೆ ಒಂದಿಷ್ಟು ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ‘ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಜೆಡಿಎಸ್ ಶಾಸಕರಿಗೆ ಭರವಸೆ ನೀಡಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜೆಪಿ ನಗರದ ನಿವಾಸದಲ್ಲಿ ಮಂಗಳವಾರ ರಾತ್ರಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರನ್ನುದ್ದೇಶಿಸಿ ಮಾತನಾಡಿದ ಅವರು, ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಧೈರ್ಯ ತುಂಬಿದರು.

‘ಆಪರೇಶನ್ ಕಮಲದ ಭೀತಿಗೆ ಸರ್ಕಾರ ಸಿಲುಕಬಾರದು. ನಮ್ಮ ಪಕ್ಷದ ಯಾವ ಶಾಸಕರೂ ಅತ್ತಿತ್ತ ಹೊರಳಬಾರದು. ನಮ್ಮ ಪಕ್ಷದ ಶಾಸಕರು ಕ್ಷೇತ್ರಗಳ ಅಭಿವೃದ್ಧಿ ಕಡೆಗೆ ಗಮನ ಕೊಟ್ಟು ಕೆಲಸ ಮಾಡಿದರೆ ಸಾಕು. ಪಕ್ಷವನ್ನು ಮತ್ತೇ ಹೇಗೆ ಕಟ್ಟಬೇಕು ಎಂಬುದು ನನಗೆ ಗೊತ್ತು’ ಎಂದು ಹೇಳಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ‘ಜೆಡಿಎಸ್ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ. ನಮ್ಮ ಪಕ್ಷದ ಶಾಸಕರು ಕಾರ್ಯಕ್ರಮಗಳ ಪಟ್ಟಿ ಕೊಟ್ಟರೆ ಸಾಕು. ಅವುಗಳ ಅನುಷ್ಠಾನ ನನ್ನ ಜವಾಬ್ದಾರಿ. ಈಗಾಗಲೇ ಸಾಕಷ್ಟು ಕೆಲಸಗಳಿಗೆ ಸರ್ಕಾರ ಆಧ್ಯತೆ ನೀಡಿದೆ. ಪಕ್ಷಕ್ಕೆ ಧಕ್ಕೆ ಆಗುವ ರೀತಿಯಲ್ಲಿ ಯಾರೂ ಮಾತನಾಡಬಾರದು’ ಎಂದು ಮನವಿ ಮಾಡಿದರು.

ಸಭೆಯಲ್ಲಿ ಸರ್ಕಾರ ಸುರಕ್ಷಿತವಾಗಿಡುವ ದೃಷ್ಟಿಯಿಂದ ಯಾವುದೇ ಕ್ಷಣದಲ್ಲಿ ರಾಜೀನಾಮೆ ನೀಡಲು ಎಲ್ಲ ಸಚಿವರೂ ಸಿದ್ದರಿದ್ದೇವೆ ಎಂದು ಸಚಿವರು ಅಭಯ ನೀಡಿದರು ಎನ್ನಲಾಗಿದೆ.

ಇತ್ತೀಚೆಗೆ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಸಚಿವ ಸಾ.ರಾ.ಮಹೇಶ್ ವಿರುದ್ಧ ವಾಗ್ದಾಳಿ ನಡೆಸಿದ ಘಟನೆಯೂ ಸಭೆಯಲ್ಲಿ ಚರ್ಚೆಗೆ ಬಂದಾಗ, ಇಬ್ಬರಿಗೂ ವರಿಷ್ಠ ದೇವೇಗೌಡ ಹಿತವಚನ ಹೇಳಿದರು ಎನ್ನಲಾಗಿದೆ. ಆಗ ಸಿಎಂ ಕುಮಾರಸ್ವಾಮಿ ಇಬ್ಬರನ್ನೂ ಸಂತೈಸಿ, ಪರಸ್ಪರ ಹಸ್ತಲಾಘವ ಮಾಡಿಸುವಲ್ಲಿ ಯಶಸ್ವಿಯಾದರು ಎನ್ನಲಾಗಿದೆ.

ಸಭೆಯಲ್ಲಿ ಬಹುತೇಕ ಸಚಿವರು, ಶಾಸಕರು ಪಾಲ್ಗೊಂಡಿದ್ದರು. ಆದರೆ ವಿಧಾನ ಪರಿಷತ್‌ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಪಾಲ್ಗೊಂಡಿರಲಿಲ್ಲ.

ಕಣ್ಣೀರಿಟ್ಟ ದೇವೇಗೌಡ, ಕರಗದ ವಿಶ್ವನಾಥ್

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್.ವಿಶ್ವನಾಥ್ ರಾಜಿನಾಮೆ ಕೊಟ್ಟ ವಿಚಾರ ಸಭೆಯಲ್ಲಿ ಪ್ರಸ್ತಾಪಿಸಿದ ವರಿಷ್ಠ ಎಚ್.ಡಿ.ದೇವೇಗೌಡರು ಭಾವುಕರಾಗಿ ಕಣ್ಣೀರಿಟ್ಟ ಘಟನೆ ನಡೆದಿದೆ ಎನ್ನಲಾಗಿದೆ.

ನಿಮ್ಮ ರಾಜೀನಾಮೆ ಪತ್ರ ಅತ್ಯಂತ ಅದ್ಭುತವಾಗಿದೆ. ಯಾವುದೇ ಟೀಕೆ-ವಿರೋಧ ಇಲ್ಲದೇ ಎಲ್ಲವನ್ನೂ ಸತ್ಯ ಹೇಳಿದ್ದೀರಿ. ಆದರೆ ಇಂತಹ ಪರಿಸ್ಥಿತಿಯಲ್ಲಿ ನೀವು ರಾಜಿನಾಮೆ ಕೊಟ್ಟರೆ ನಾನು ಏನು ಮಾಡಲಿ. ನಿಮ್ಮಂತಹ ಜನನಾಯಕರು ಯಾವುದೇ ಜವಾಬ್ದಾರಿಯಿಂದ ಹಿಂದೆ ಸರಿಯಬಾರದು. ನಿಮ್ಮನ್ನು ನೋಡಿ ಕಿರಿಯರು ಬೆಳೆಯಬೇಕು. ದಯಮಾಡಿ ರಾಜೀನಾಮೆ ವಾಪಸ್ ಪಡೆಯಿರಿ ಎಂದು ಮನವಿ ಮಾಡಿದರು.

ಇದಕ್ಕೆ ದನಿಗೂಡಿಸಿದ ಸಿಎಂ ಕುಮಾರಸ್ವಾಮಿ, ಅಣ್ಣಾ ನೀವು ರಾಜಿನಾಮೆ ನೀಡಬೇಡಿ. ನೀವು ಏನು ಆಗಬೇಕು ಎಂಬುದನ್ನು ಹೇಳಿ, ಅದನ್ನು ಮಾಡೋಣ. ಆದರೆ ರಾಜಿನಾಮೆ ಕೊಡಬೇಡಿ ಎಂದು ಅವಲತ್ತುಕೊಂಡರು. ಆಗ ಸಭೆಯಲ್ಲಿದ್ದ ಹಲವಾರು ಶಾಸಕರು ದನಿಗೂಡಿಸಿ, ನೀವು ಅಧ್ಯಕ್ಷರಾಗಿ ಮುಂದುವರಿಯಿರಿ ಎಂದು ಒತ್ತಾಯಿಸಿದರು.

ಆಗ ಪ್ರತಿಕ್ರಿಯೆ ನೀಡಿದ ವಿಶ್ವನಾಥ್, ನಾನು ಈಗಾಗಲೇ ರಾಜೀನಾಮೆ ನೀಡಿದ್ದೇನೆ. ಈಗ ವಾಪಸ್ ಪಡೆಯುತ್ತೇನೆ ಎನ್ನಲಾಗಲ್ಲ. ಸದ್ಯಕ್ಕೆ ಆ ವಿಷಯ ಚರ್ಚೆ ಬೇಡ ಎಂದು ನಯವಾಗಿಯೇ ತಿರಸ್ಕರಿಸಿದರು ಎನ್ನಲಾಗಿದೆ. ಆಗ ದೇವೇಗೌಡರು, ಇನ್ನೂ ಒಂದು ದಿನ ಸಮಯ ತೆಗೆದುಕೊಳ್ಳಿ. ಆಮೇಲೆ ರಾಜೀನಾಮೆ ವಾಪಸ್ ಪಡೆದ ಬಗ್ಗೆ ಪ್ರಕಟಿಸಿ ಎಂದು ಮನವಿ ಮಾಡಿದರಾದರೂ ಅದಕ್ಕೆ ವಿಶ್ವನಾಥ್ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT