ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೋಸ್ತಿ’ ಗುದ್ದಾಟ ಸ್ಫೋಟ: ಸಿದ್ದರಾಮಯ್ಯ ವಿರುದ್ಧ ತಿರುಗಿಬಿದ್ದ ದೇವೇಗೌಡ

Last Updated 30 ಜನವರಿ 2019, 20:13 IST
ಅಕ್ಷರ ಗಾತ್ರ

ಬೆಂಗಳೂರು: ‘ಮೈತ್ರಿ’ಯಲ್ಲಿ ಹೊಂದಾಣಿಕೆಯಿಲ್ಲ ಎಂದು ಟೀಕಿಸುತ್ತಲೇ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಕಾರ್ಯತಂತ್ರ ಹೆಣೆಯುತ್ತಿರುವ ಮಧ್ಯೆಯೇ ‘ದೋಸ್ತಿ’ಗಳ (ಜೆಡಿಎಸ್‌– ಕಾಂಗ್ರೆಸ್‌) ನಡುವೆ ಆಂತರ್ಯದಲ್ಲಿ ನಡೆಯುತ್ತಿದ್ದ ‘ಗುದ್ದಾಟ’ ಸ್ಫೋಟವಾಗಿದೆ.

ತಮ್ಮ ಮತ್ತು ಕಾಂಗ್ರೆಸ್ ನಡುವೆ ಎಲ್ಲವೂ ಸರಿಯಾಗಿಯೇ ಇದೆ ಎಂದು ಸಮರ್ಥಿಸಿಕೊಳ್ಳುತ್ತಿದ್ದ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರು ಈಗ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧವೇ ತಿರುಗಿಬಿದ್ದಿದ್ದಾರೆ.

ವೈರಿಗಳಂತಿದ್ದ ಈ ನಾಯಕರಿಬ್ಬರೂ ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಹಲವು ಬಾರಿ ಒಟ್ಟಿಗೇ ಕಾಣಿಸಿಕೊಂಡಿದ್ದರು. ಈ ಗುರು-ಶಿಷ್ಯ ನಡುವೆ ಬೂದಿ ಮುಚ್ಚಿದ ಕೆಂಡದಂತಿದ್ದ ಅಸಮಾಧಾನ, ಬುಧವಾರ ನಡೆದ ಜೆಡಿಎಸ್‌ ರಾಷ್ಟ್ರೀಯ ಸಮಾವೇಶದಲ್ಲಿ ಬೀದಿಗೆ ಬಿದ್ದಿದೆ. ಕೇವಲ ಏಳು ತಿಂಗಳ ಸರ್ಕಾರ ದಿನವೂ ಅಭದ್ರತೆಯ ನೆರಳಿನಡಿ ಕಳೆಯುವಂತಾಗಲು ಸಿದ್ದರಾಮಯ್ಯ ಅವರೇ ಕಾರಣ ಎಂಬ ಅನುಮಾನ ಗೌಡರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.

ಕುಮಾರಸ್ವಾಮಿ ಕಾರ್ಯವೈಖರಿಯನ್ನು ಟೀಕಿಸಿದ್ದ ಸಚಿವರಾದ ಸಿ. ಪುಟ್ಟರಂಗಶೆಟ್ಟಿ, ಎಂಟಿಬಿ ನಾಗರಾಜ್, ಶಾಸಕ ಎಸ್.ಟಿ. ಸೋಮಶೇಖರ್, ಸಚಿವ ಮಾಜಿ ಸಚಿವ ಬಸವರಾಜ ರಾಯರಡ್ಡಿ, ‘ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿ’ ಎಂದು ಹೇಳಿದ್ದರು. ಇದರಿಂದ ಬೇಸರಗೊಂಡಿದ್ದ ಕುಮಾರಸ್ವಾಮಿ, ರಾಜೀನಾಮೆ ಕೊಡಲು ಸಿದ್ಧ ಎಂದು ಅಬ್ಬರಿಸಿದ್ದರು. ಅಲ್ಲದೇ, ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ಗೆ ಕರೆ ಮಾಡಿ, ತಮ್ಮ ಅಸಹನೆಯನ್ನೂ ಹೇಳಿದ್ದರು. ಇದರಬೆನ್ನಲ್ಲೆ, ದೇವೇಗೌಡರು ಸಿಡಿದಿರುವುದು ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.

ತಮ್ಮ ಮಾತಿನುದ್ದಕ್ಕೂ ಸಿದ್ದರಾಮಯ್ಯ ಅವರನ್ನು ತಿವಿದ ದೇವೇಗೌಡ, ‘ಮುಂದೇನಾಗುತ್ತೊ‌ ಗೊತ್ತಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು. ಮರುಕ್ಷಣದಲ್ಲೇ, ‘ನಾನು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಆತಂಕಪಡಲು ನಾನು ಬಿಡುವುದಿಲ್ಲ’ ಎಂದು ಹೇಳುವ ಮೂಲಕ ಕಾಂಗ್ರೆಸ್‌ ವರಿಷ್ಠರು ಬೆನ್ನಿಗಿದ್ದಾರೆ ಎಂದು ಸೂಚ್ಯವಾಗಿ ಹೇಳಿದರು.

‘ಕುಮಾರಸ್ವಾಮಿ ಸಂಪರ್ಕಕ್ಕೆ ಸಿಗುತ್ತಿಲ್ಲವೆಂದು ಕಾಂಗ್ರೆಸ್‌ ಶಾಸಕರು ನಿತ್ಯ ಹೇಳಿಕೆ ನೀಡುತ್ತಿದ್ದಾರೆ. ಒಂದು ನಿಗಮ ಬಿಟ್ಟರೆ ಉಳಿದೆಲ್ಲವನ್ನೂ ಅವರು ಹೇಳಿದಂತೆ ಮಾಡಿದ್ದೇವೆ. ಇನ್ನೂ ಹೇಗೆ ಆಡಳಿತ ನಡೆಸಬೇಕು. ನೀವು ಎಷ್ಟು ದಿನ ಹೀಗೆ ನಡೆದುಕೊಳ್ಳುತ್ತೀರಿ. ಪ್ರತಿ ಶಾಸಕರು ಒಂದೊಂದು ಮಾತನಾಡುತ್ತಾರೆ’ ಎಂದು ದೇವೇಗೌಡ ಬೇಸರ ಹೊರಹಾಕಿದರು.

‘ನಾನು ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಪ್ರಧಾನಿಯಾಗಿದ್ದೆ. ಧರಂ ಸಿಂಗ್ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಯಾವುದೇ ಷರತ್ತು ಇರಲಿಲ್ಲ. ಆ ಸರ್ಕಾರ ಪತನಗೊಳ್ಳಲು ನಾನಾಗಲಿ ಕುಮಾರಸ್ವಾಮಿ ಆಗಲಿ ಕಾರಣರಲ್ಲ. ಇವತ್ತು ಅದೇ ಕಾಂಗ್ರೆಸ್ ಬೆಂಬಲದಿಂದ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ. ಅವರಿಗೆ ನೋವಾಗಿದ್ದಕ್ಕೆ ಮುಖ್ಯಮಂತ್ರಿ ಸ್ಥಾನ ಬಿಡಲು ಸಿದ್ಧರಿರುವುದಾಗಿ ಹೇಳಿದ್ದರು’ ಎಂದರು.

‘ಜೆಡಿಎಸ್ ಅಧ್ಯಕ್ಷರಾಗಿದ್ದಾಗ ಸಿದ್ದರಾಮಯ್ಯ ಯಾವ ಕೆಲಸವನ್ನೂ ಮಾಡಿಲ್ಲ. ಆಗ ನನಗಾಗಿರುವ ನೋವು ದೇವರಿಗೆ ಮಾತ್ರ ಗೊತ್ತು. ಸೋನಿಯಾ ಗಾಂಧಿ ಮೇಲೆ ಒತ್ತಡ ಹಾಕಿದರೆ ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತಿದ್ದೆ ಎಂದು ಅವರು ‌ಆಗಾಗ ಹೇಳುತ್ತಿದ್ದರು. ಮೈತ್ರಿ ಸರ್ಕಾರ ರಚನೆ ಬಗ್ಗೆ ಚರ್ಚಿಸಲು ದೆಹಲಿಗೆ ಹೊರಡುವಾಗಲೂ ಸಿದ್ದರಾಮಯ್ಯ ತಮ್ಮನ್ನೇ ಮುಖ್ಯಮಂತ್ರಿ ಮಾಡಬಹುದಿತ್ತು ಎಂದಿದ್ದರು’ ಎಂದು ದೇವೇಗೌಡ ನೆನಪಿಸಿಕೊಂಡರು.

‘ನಾನು ಗುಮಾಸ್ತನ ಹಾಗೆ ಕೆಲಸ ಮಾಡುತ್ತಿದ್ದೇನೆ ಎಂದು ಒಮ್ಮೆ ಅವರು ಹೇಳಿದ್ದು ನಿಜ. ಆದರೆ, ಅದು ಜೆಡಿಎಸ್ ಪಕ್ಷದ ಶಾಸಕರ ಎದುರು ಖಾಸಗಿಯಾಗಿ ಹೇಳಿಕೊಂಡಿದ್ದು. ಮೈತ್ರಿ ಸರ್ಕಾರವನ್ನು ಮುನ್ನಡೆಸುವುದು ಎಷ್ಟು ಕಷ್ಟವಿದೆ ಎಂದು ಅವರು ಅರ್ಥ ಮಾಡಿಕೊಳ್ಳಬೇಕೆಂದು ಆ ರೀತಿಯ ಪದ ಪ್ರಯೋಗ ಮಾಡಿದ್ದು ಬಿಟ್ಟರೆ, ಬೇರಾವ ಉದ್ದೇಶವೂ ಅದರ ಹಿಂದೆ ಇರಲಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಸಿದ್ದರಾಮಯ್ಯ ಅಕ್ರಮದ ಬಗ್ಗೆ ತುಟಿ ಬಿಚ್ಚಿದ್ದೇವಾ?’

‘ಸಿದ್ದರಾಮಯ್ಯ ಸರ್ಕಾರದ ಐದು ವರ್ಷಗಳ ಅಕ್ರಮ– ಸಕ್ರಮಗಳ ಬಗ್ಗೆ ನಾವು ತುಟಿ ಬಿಚ್ಚಿದ್ದೇವಾ’ ಎಂದು ದೇವೇಗೌಡರು ಖಾರವಾಗಿ ಪ್ರಶ್ನಿಸಿದರು.

‘ನೀವು ಮಾಡಿದ ಕೆಲಸಕ್ಕೆ ನಾವು ಮಸಿ ಬಳಿದಿದ್ದೇವಾ. ಬೆಳಗ್ಗೆ ಒಂದು, ಸಂಜೆ ಇನ್ನೊಂದು ಮಾತನಾಡಿ ನಾವು ಮಾಡಿದ ಕೆಲಸಕ್ಕೆ ಮಸಿ ಯಾಕೆ ಬಳಿಯುತ್ತೀರಿ’ ಎಂದು ಅಸಮಾಧಾನ ಹೊರಹಾಕಿದ ಗೌಡರು, ‘ಕುಮಾರಸ್ವಾಮಿ ಇಲ್ಲಿಯವರೆಗೂ ಎಲ್ಲೆ ಮೀರಿ ಮಾತನಾಡಿಲ್ಲ’ ಎಂದೂ ಹೇಳಿದರು.

‘ಆದೇಶ’ಕ್ಕಾಗಿ ಒತ್ತಡ ತಂದರು

‘ನನ್ನ ಮೇಲೆ ಒತ್ತಡ ತಂದು ಕೆಲವು ಆದೇಶಗಳನ್ನು ಮಿತ್ರ ಪಕ್ಷದವರು (ಕಾಂಗ್ರೆಸ್‌) ಮಾಡಿಸಿಕೊಂಡರು. ನಾನೇನಾದರೂ ಮೈತ್ರಿ ಸರ್ಕಾರದಲ್ಲಿ ಮುಂದುವರೆದಿದ್ದೇನೆ ಅಂದಿದ್ದರೆ ಅದು ನಿಮಗಾಗಿ (ಜೆಡಿಎಸ್‌ ಕಾರ್ಯಕರ್ತರು) ಮಾತ್ರ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

‘ಪ್ರಧಾನ ಮಂತ್ರಿ ಸ್ಥಾನಕ್ಕೇ ರಾಜೀನಾಮೆ ಕೊಟ್ಟು ಬಂದ ಕುಟುಂಬ ನಮ್ಮದು. ಇನ್ನು ಈ ಮುಖ್ಯಮಂತ್ರಿ ಸ್ಥಾನ ನೆಚ್ಚಿಕೊಂಡು ಕುಳಿತುಕೊಳ್ಳುತ್ತೇವಾ. ಕಾರ್ಯಕರ್ತರಿಗೆ ಮೋಸ ಮಾಡಿ ಇರಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಕೆಲವರು ನನ್ನ ಬಗ್ಗೆ ಪದೇ ಪದೇ ಚರ್ಚೆ ಮಾಡುತ್ತಾರೆ. ಎಷ್ಟು ದಿನ ಇದನ್ನೆಲ್ಲಾ ಸಹಿಸಿಕೊಳ್ಳಲು ಸಾಧ್ಯ ಹೇಳಿ. ಅಧಿಕಾರ ಏನು ಶಾಶ್ವತವೇ ? ಆ ಕಾರಣಕ್ಕಾಗಿಯೇ ಈ ರೀತಿ ಕೆಲಸ ಮಾಡೋದಕ್ಕಿಂತ ಅಧಿಕಾರ ಬಿಡಲು ಸಿದ್ದ ಎಂದಿದ್ದೇನೆ’ ಎಂದರು.

ಸಂಪುಟ ಸಭೆಯಿಂದ ಹೊರನಡೆದ ಪುಟ್ಟರಾಜು

ಕಾಂಗ್ರೆಸ್‌ನ ಕೆಲವು ಶಾಸಕರ ಹೇಳಿಕೆಯಿಂದ ಕೆಂಡಾಮಂಡಲಗೊಂಡಿರುವ ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಅವರು ಸಂಪುಟ ಸಭೆಯಿಂದ ಹೊರನಡೆದು ಆಕ್ರೋಶ ಹೊರಹಾಕಿದರು.

ಸಚಿವ ಸಂಪುಟ ಸಭೆಯಲ್ಲಿ ಏಳೆಂಟು ವಿಷಯಗಳ ಚರ್ಚೆ ಮುಕ್ತಾಯವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಪುಟ್ಟರಾಜು, ‘ಬಿಡಿಎ ಅಧ್ಯಕ್ಷರೊಬ್ಬರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದಕ್ಕೆ ಕೆಲವು ಕಾಂಗ್ರೆಸ್‌ ನಾಯಕರು ಕುಮ್ಮಕ್ಕು ನೀಡುತ್ತಿದ್ದಾರೆ. ಕೆಲವು ನಾಯಕರ ಉಪಟಳ ಮಿತಿಮೀರುತ್ತಿದೆ. ಇಷ್ಟೆಲ್ಲ ಆದರೂ ಕಾಂಗ್ರೆಸ್‌ನ ಹಿರಿಯ ನಾಯಕರು ಎಚ್ಚರಿಕೆಯನ್ನೂ ನೀಡಿಲ್ಲ ಎಂದು ಕಿಡಿಕಾರಿದರು’ ಮೂಲಗಳು ಹೇಳಿವೆ.

‘ಕುಮಾರಸ್ವಾಮಿ ದೇವರಂತಹ ಮನುಷ್ಯ. ಅವರ ಒಳ್ಳೆಯತನವನ್ನು ಕೆಲವು ನಾಯಕರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ಧೋರಣೆ ಮುಂದುವರಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿ, ಹೊರನಡೆದರು’ ಎಂದು ಮೂಲಗಳು ತಿಳಿಸಿವೆ.

***

ಮುಖ್ಯಮಂತ್ರಿ ಮೇಲೆ ಯಾವ ಒತ್ತಡವನ್ನೂ ಹಾಕಿಲ್ಲ. ಸಮ್ಮಿಶ್ರ ಸರ್ಕಾರದ ಪೂರ್ಣ ಜವಾಬ್ದಾರಿ ಅವರಿಗೆ ಕೊಟ್ಟಿದ್ದೇವೆ. ಅಸಮಾಧಾನ ವ್ಯಕ್ತಪಡಿಸಿದ ಶಾಸಕರ ಜೊತೆ ನಾವು ಮಾತನಾಡುತ್ತೇವೆ.
-ಜಿ.ಪರಮೇಶ್ವರ, ಉಪ ಮುಖ್ಯಮಂತ್ರಿ

**

ಮೈತ್ರಿ ಸರ್ಕಾರದ ಬಗ್ಗೆ ಯಾರೂ ಲಘುವಾಗಿ ಮಾತನಾಡಬೇಡಿ. ಕಾಂಗ್ರೆಸ್‌ನವರು ಲಘುವಾಗಿ ಹೇಳಿಕೆಗಳನ್ನು ನೀಡುತ್ತಿದ್ದರೆ ಪರಿಸ್ಥಿತಿ ನಮ್ಮ ಕೈಮೀರಿ ಹೋಗುತ್ತದೆ. ಅದನ್ನು ನಾವು ಸಹಿಸುವುದೂ ಇಲ್ಲ.
-ಎಚ್.ಡಿ. ದೇವೇಗೌಡ, ಜೆಡಿಎಸ್ ವರಿಷ್ಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT