ಸಾಂಸ್ಕೃತಿಕ ಚಟುವಟಿಕೆ: ಸಂಘ–ಸಂಸ್ಥೆಗಳಿಗೆ ಸದ್ಯಕ್ಕಿಲ್ಲ ಆರ್ಥಿಕ ನೆರವು

ಮಂಗಳವಾರ, ಜೂನ್ 18, 2019
23 °C
ನೆರವು ಪ್ರಕ್ರಿಯೆಗೆ ಅಡ್ಡಿಯಾಗಿದ್ದ ಚುನಾವಣೆ ನೀತಿ ಸಂಹಿತೆ

ಸಾಂಸ್ಕೃತಿಕ ಚಟುವಟಿಕೆ: ಸಂಘ–ಸಂಸ್ಥೆಗಳಿಗೆ ಸದ್ಯಕ್ಕಿಲ್ಲ ಆರ್ಥಿಕ ನೆರವು

Published:
Updated:

ಬೆಂಗಳೂರು: ಸಾಂಸ್ಕೃತಿಕ ಚಟುವಟಿಕೆಯಲ್ಲಿ ನಿರತವಾಗಿರುವ 2 ಸಾವಿರ ಸಂಘ–ಸಂಸ್ಥೆಗಳಿಗೆ ಈಗಾಗಲೇ ಸೇರಬೇಕಾಗಿದ್ದ 2018–19ನೇ ಸಾಲಿನ ಧನಸಹಾಯ ಇನ್ನಷ್ಟು ವಿಳಂಬವಾಗಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸರ್ಕಾರ ಸಾಂಸ್ಕೃತಿಕ ಚಟುವಟಿಕೆಯಲ್ಲಿ ನಿರತವಾಗಿರುವ ಸಂಘ–ಸಂಸ್ಥೆಗಳಿಗೆ ಪ್ರತಿ ವರ್ಷ ಧನಸಹಾಯ ನೀಡುತ್ತಿದೆ. ಆದರೆ, 2018–19ನೇ ಸಾಲಿನ ಧನಸಹಾಯ ನೀಡುವ ಪ್ರಕ್ರಿಯೆ ಪೂರ್ಣಗೊಳ್ಳುವ ವೇಳೆಗೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿತ್ತು. ಹಾಗಾಗಿ ಅನುದಾನವು ಸರ್ಕಾರದ ಬೊಕ್ಕಸಕ್ಕೆ ವಾಪಸ್‌ ಆಗುವುದನ್ನು ತಪ್ಪಿಸುವ ಉದ್ದೇಶದಿಂದ ₹13 ಕೋಟಿ ಧನಸಹಾಯದ ಅನುದಾನವನ್ನು ಗಡಿ ಅಭಿವೃದ್ಧಿ ಪ್ರಾಧಿಕಾರದಡಿ ಇರಿಸಲಾಗಿದೆ. ಆದರೆ, ಈ ವಿಚಾರವಾಗಿ ಅಧಿಕಾರಿಗಳ ಜತೆ ಸಚಿವರು ಯಾವುದೇ ಸಭೆ ನಡೆಸಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

‘ಧನ ಸಹಾಯದ ಕಡತ ಸಚಿವರ ಮೇಜಿನ ಮೇಲಿದೆ. ಅವರು ಸಭೆ ಕರೆದು, ಈ ಸಮಸ್ಯೆಗೆ ಪರಿಹಾರ ಸೂಚಿಸಬೇಕು. ಧನ ಸಹಾಯ ನಿಯಮದ ಪ್ರಕಾರ ವರ್ಷಕ್ಕೆ ಒಮ್ಮೆ ಮಾತ್ರ ಅನುದಾನ ಬಿಡುಗಡೆ ಮಾಡಲು ಅವಕಾಶವಿದೆ. ಆದರೆ, ಈ ಬಾರಿ ಪರಿಸ್ಥಿತಿಯೇ ಬೇರೆಯಿದೆ. ಹೀಗಾಗಿ, ಮೊದಲು ಈ ಗೊಂದಲ ನಿವಾರಿಸಿಕೊಳ್ಳಬೇಕಾಗಿದೆ. ಅದೇ ರೀತಿ, ಇಲಾಖೆಯ ವಾರ್ಷಿಕ ಕಾರ್ಯಚಟುವಟಿಕೆಗೆ ಕೂಡ ಹಿನ್ನಡೆಯಾಗುವ ಸಾಧ್ಯತೆಯಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಸದ್ಯ ಸಾಂಸ್ಕೃತಿಕ ಕ್ಷೇತ್ರ ಕಷ್ಟದ ದಿನಗಳನ್ನು ಎದುರಿಸುತ್ತಿವೆ. ಧನಸಹಾಯದ ವಿಚಾರವಾಗಿ ಚುನಾವಣೆ ಪೂರ್ವ ಖುದ್ದು ಸಚಿವರನ್ನು ಭೇಟಿ ಮಾಡಿ, ಅರ್ಹ ಸಂಘ–ಸಂಸ್ಥೆಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಬಳಿಕ ಈ ಬಗ್ಗೆ ಧ್ವನಿಯೆತ್ತಬೇಕಿದೆ. ಆದರೆ, ಸದ್ಯದ ಸ್ಥಿತಿಯಲ್ಲಿ ಅನುದಾನ ಬಿಡುಗಡೆಯಾಗುವ ಭರವಸೆಯಿಲ್ಲ’ ಎಂದು ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ತಿಳಿಸಿದರು. 

‘ಸಂಘ ಸಂಸ್ಥೆಗಳಿಗೆ ಅನುದಾನ ನೀಡುವುದು ಹೊಸ ಯೋಜನೆ ಅಲ್ಲ. ಇದು ಪ್ರತಿವರ್ಷ ನಡೆದುಕೊಂಡು ಬರುತ್ತಿರುವ ಸಾಮಾನ್ಯ ಪ್ರಕ್ರಿಯೆ. ಚುನಾವಣಾ ನೀತಿಸಂಹಿತೆ ಇದಕ್ಕೆ ಅಡ್ಡಿಯಾಗುವುದಿಲ್ಲ. ಹೀಗಾಗಿ, ಅನುದಾನವನ್ನು ಸಂಘ ಸಂಸ್ಥೆಗಳಿಗೆ ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಉದಯಭಾನು ಕಲಾಸಂಘದ ಗೌರವ ಕಾರ್ಯದರ್ಶಿ ಎಂ.ನರಸಿಂಹ ಒತ್ತಾಯಿಸಿದರು.

ಧನಸಹಾಯ ವಿಳಂಬಕ್ಕೆ ಏನು ಕಾರಣ?
ಧನಸಹಾಯ ಕೋರಿ ಸಂಘ–ಸಂಸ್ಥೆಗಳು ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುತ್ತವೆ. ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕರು ದಾಖಲೆಗಳ ಸತ್ಯಾಸತ್ಯತೆ ಪರಿಶೀಲಿಸಿ, ಸಂಘ–ಸಂಸ್ಥೆಗಳ ಪಟ್ಟಿಯನ್ನು ಕೇಂದ್ರ ಕಚೇರಿಗೆ ಕಳುಹಿಸುತ್ತಾರೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಅಕಾಡೆಮಿಗಳ ಅಧ್ಯಕ್ಷರನ್ನು ಒಳಗೊಂಡ ತಜ್ಞರ ಸಮಿತಿ ಧನಸಹಾಯಕ್ಕೆ ಪಟ್ಟಿಯನ್ನು ಅಂತಿಮಗೊಳಿಸುತ್ತದೆ. ಪಟ್ಟಿಯನ್ನು ಪ್ರಧಾನ ಕಾರ್ಯದರ್ಶಿ ಹಾಗೂ ನಿರ್ದೇಶಕರು ಮಗದೊಮ್ಮೆ ಪರಿಶೀಲಿಸಿ, ಸಚಿವರಿಗೆ ಕಡತ ರವಾನಿಸುತ್ತಾರೆ.

ಈ ಬಾರಿ ಅಂತಿಮಗೊಂಡ ಪಟ್ಟಿಯಲ್ಲಿ ಕೆಲವು ಸಂಸ್ಥೆಗಳು ನಕಲಿ ಬಿಲ್‌ಗಳನ್ನು ನೀಡಿವೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕಾರಣಕ್ಕೆ ಕಡತಕ್ಕೆ ಸಹಿ ಹಾಕಲು ಸಚಿವರು ನಿರಾಕರಿಸಿದ್ದರು. ಈ ವೇಳೆಗೆ ಚುನಾವಣೆ ಘೋಷಣೆಯಾದ್ದರಿಂದ ಧನಸಹಾಯ ಪ್ರಕ್ರಿಯೆಗೆ ಅಲ್ಪವಿರಾಮ ಹಾಕಲಾಯಿತು. ಆದರೆ, ನೀತಿ ಸಂಹಿತೆ ಅಂತ್ಯವಾಗುವ ವೇಳೆಗೆ ಹೊಸ ಆರ್ಥಿಕ ವರ್ಷ ಆರಂಭವಾಗುವುದರಿಂದ ಧನಸಹಾಯದ ಅನುದಾನ ಸರ್ಕಾರದ ಬೊಕ್ಕಸಕ್ಕೆ ವಾಪಸ್‌ ಹೋಗುತ್ತಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಗಡಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಧನಸಹಾಯದ ಅನುದಾನವನ್ನು ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಬಡವಾದ ಸಂಘ–ಸಂಸ್ಥೆಗಳು
‘ಧನಸಹಾಯದ ವಿಚಾರವಾಗಿ ನಿರಂತರವಾಗಿ ಹೋರಾಟ ನಡೆಸಲಾಗುತ್ತಿದೆ. ಬಹುತೇಕ ಸಂಘ–ಸಂಸ್ಥೆಗಳು ಧನಸಹಾಯವನ್ನು ಅವಲಂಬಿಸಿಯೇ ಕಾರ್ಯಕ್ರಮ ನೀಡುತ್ತವೆ. ಇದೀಗ ಅನುದಾನ ಬಿಡುಗಡೆಯಾಗದಿದ್ದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿವೆ. ಅದೇ ರೀತಿ, ಸಾಂಸ್ಕೃತಿಕ ಚಟುವಟಿಕೆ ಕೂಡ ಕುಂಠಿತವಾಗುತ್ತದೆ. ಹೀಗಾಗಿ ಆದಷ್ಟು ಶೀಘ್ರ ಸರ್ಕಾರ ತಜ್ಞರ ಸಮಿತಿ ಅಂತಿಮಗೊಳಿಸಿದ ಸಂಘ–ಸಂಸ್ಥೆ ಹಾಗೂ ಕಲಾವಿದರಿಗೆ ಧನಸಹಾಯ ಬಿಡುಗಡೆ ಮಾಡಬೇಕು’ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ 
ಜೆ. ಲೋಕೇಶ್ ಮನವಿ ಮಾಡಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !