ಆಪರೇಷನ್‌ ಹಸ್ತ ಯಶಸ್ಸು,; ಕಾಂಗ್ರೆಸ್‌ ಪಾಲಾದ ಧಾರವಾಡ ಜಿ.ಪಂ

7
ಬಿಜೆಪಿಯ ನಾಲ್ವರು ಕಾಂಗ್ರೆಸ್‌ ತೆಕ್ಕೆಗೆ

ಆಪರೇಷನ್‌ ಹಸ್ತ ಯಶಸ್ಸು,; ಕಾಂಗ್ರೆಸ್‌ ಪಾಲಾದ ಧಾರವಾಡ ಜಿ.ಪಂ

Published:
Updated:

ಧಾರವಾಡ: ಪಕ್ಷೇತರ ಸದಸ್ಯರೊಬ್ಬರ ಬೆಂಬಲ ಪಡೆದು, 32 ತಿಂಗಳಿಂದ ಅಧಿಕಾರದ ಗದ್ದುಗೆಯಲ್ಲಿದ್ದ ಬಿಜೆಪಿಯು, ಧಾರವಾಡ ಜಿಲ್ಲಾ ಪಂಚಾಯ್ತಿಯಲ್ಲಿ ಮಂಗಳವಾರ ನಡೆದ ವಿಶ್ವಾಸ ಮತ ಯಾಚನೆಯಲ್ಲಿ ಸೋಲು ಅನುಭವಿಸಿತು.

ಈ ಮೂಲಕ ಕಾಂಗ್ರೆಸ್‌ ನಡೆಸಿದ ‘ಆಪರೇಷನ್‌ ಹಸ್ತ’ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಬಿಜೆಪಿ ತನ್ನ ಅಧಿಕಾರ ಕಳೆದುಕೊಂಡಿದೆ. ಉಪಾಧ್ಯಕ್ಷರಾಗಿರುವ ಪಕ್ಷೇತರ ಸದಸ್ಯ ಶಿವಾನಂದ ಕರಿಗಾರ ಅವರು ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.

ಒಟ್ಟು 22 ಸದಸ್ಯ ಬಲ ಹೊಂದಿರುವ ಜಿಲ್ಲಾ ಪಂಚಾಯ್ತಿಯಲ್ಲಿ ಅಧ್ಯಕ್ಷರ ವಿರುದ್ಧ 16 ಮತಗಳು ಚಲಾವಣೆಯಾದವು. ಇದರಲ್ಲಿ ಕಾಂಗ್ರೆಸ್‌ನ 11 ಸದಸ್ಯರೊಂದಿಗೆ ಬಿಜೆಪಿಯ 4 ಮತ್ತು ಒಬ್ಬರು ಪಕ್ಷೇತರ ಅಭ್ಯರ್ಥಿ ಅಧ್ಯಕ್ಷರ ವಿರುದ್ಧ ಮತ ಹಾಕಿದರು.

ಅಧ್ಯಕ್ಷೆ ಚೈತ್ರಾ ಶಿರೂರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ದಿನದಿಂದ ನಾಪತ್ತೆಯಾಗಿದ್ದ ಬಿಜೆಪಿ ಸದಸ್ಯರಾದ ಗುಡಗೇರಿ ಕ್ಷೇತ್ರದ ಜ್ಯೋತಿ ಬೆಂತೂರು, ಗಳಗಿ ಕ್ಷೇತ್ರದ ಮಂಜವ್ವ ಹರಿಜನ, ತಬಕದ ಹೊನ್ನಳ್ಳಿ ಕ್ಷೇತ್ರದ ಅಣ್ಣಪ್ಪ ದೇಸಾಯಿ ಹಾಗೂ ಗರಗ ಕ್ಷೇತ್ರದ ರತ್ನಾ ಪಾಟೀಲ ಅವರು ಮಂಗಳವಾರ ನಡೆದ ಸಭೆಗೆ ಪೊಲೀಸ್ ಬೆಂಗಾವಲಿನಲ್ಲಿ ಬಂದರು.

ಕಾಂಗ್ರೆಸ್‌ ಮುಖಂಡ ವಿನಯ ಕುಲಕರ್ಣಿ ಆಪ್ತ ಸಹಾಯಕ ಪ್ರಶಾಂತ ಕೇಕರೆ ಅವರು ಸದಸ್ಯರನ್ನು ಬೆಂಗಾವಲಿನಲ್ಲಿ ಕರೆತಂದು ಮತ್ತೆ ಸಭೆಯ ನಂತರ ಕರೆದೊಯ್ದರು.

‘ಇದು ಅನೈತಿಕ ಮತ್ತು ಪಕ್ಷದ್ರೋಹದ ಕೆಲಸವಾಗಿದೆ’ ಎಂದು ಚೈತ್ರಾ ಶಿರೂರ ಆರೋಪಿಸಿದರೆ, ‘ತಾವು ಯಾವುದೇ ಹಣದ ಆಸೆಗೆ ಬಲಿಯಾಗಿಲ್ಲ. ಅಧ್ಯಕ್ಷೆಯ ವರ್ತನೆ ನಮ್ಮನ್ನು ಹೀಗೆ ಮಾಡುವಂತೆ ಪ್ರೇರೇಪಿಸಿತು’ ಎಂದು ಅಧ್ಯಕ್ಷೆ ವಿರುದ್ಧ ಮತ ಹಾಕಿದ ಬಿಜೆಪಿಯ ನಾಲ್ವರು ಸದಸ್ಯರು ಹೇಳಿದರು.

ಎರಡೂ ಪಕ್ಷಗಳು ತಮ್ಮ ಸದಸ್ಯರಿಗೆ ವಿಪ್ ಜಾರಿ ಮಾಡಿದ್ದವು. ಈ ನಡುವೆ ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಬಿಜೆಪಿಯ ನಾಲ್ಕು ಸದಸ್ಯರ ಸದಸ್ಯತ್ವ ರದ್ದುಪಡಿಸಬೇಕು ಎಂದು ಪಕ್ಷದ ಗ್ರಾಮೀಣ ಘಟಕದ ಅಧ್ಯಕ್ಷ ಈರಣ್ಣ ಜಡಿ ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !