ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಂಭ್ರಮಕ್ಕೆ ನೋವಿನ ವಿದಾಯ

ಸಂಕುಚಿತತೆ ದೂರ ಮಾಡಲು ಒಗ್ಗಟ್ಟಿನಿಂದ ಶ್ರಮಿಸೋಣ: ರಾಘವೇಂದ್ರ ಪಾಟೀಲ
Last Updated 20 ಜನವರಿ 2019, 19:40 IST
ಅಕ್ಷರ ಗಾತ್ರ

ಧಾರವಾಡ: ‘ಸಂಭ್ರಮ ಉದ್ಘಾಟಿಸಿದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಆಶಯ ಭಾಷಣದಲ್ಲಿ ಸಂಭ್ರಮವನ್ನು ಸಂಕಟವೂ ಹಿಂಬಾಲಿಸುತ್ತದೆ ಎಂದು ಹೇಳಿದರು. ನಾವು ಸಂಭ್ರಮ ಮತ್ತು ಸಂಕಟವನ್ನು ಶಬ್ದಶಃ ಅನುಭವಿಸಿದೆವು. ...’

ಧಾರವಾಡ ಸಾಹಿತ್ಯ ಸಂಭ್ರಮದ ಸಮಾರೋಪದ ವೇದಿಕೆಯಲ್ಲಿ ಭಾನುವಾರ ನಡೆದ ನಾಟಕೀಯ ಬೆಳವಣಿಗೆಗೆ ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್‌ನ ಅಧ್ಯಕ್ಷ ರಾಘವೇಂದ್ರ ಪಾಟೀಲ ಅವರು ವೇದಿಕೆಯಿಂದಲೇ ಪ್ರತಿಕ್ರಿಯಿಸಿದ್ದು ಹೀಗೆ.

‘ಬರಗೂರು ಹೇಳಿದ ಮಾತುಗಳು ನಿಜವಾದವು. ನಾವು ಯಾವುದನ್ನೂ ಬಿಟ್ಟುಕೊಡಲು ಆಗುವುದಿಲ್ಲ. ಸಂಭ್ರಮ ಮತ್ತು ಸಂಕಟ ಎರಡೂ ಒಟ್ಟಿಗೇ ನಡೆಯುತ್ತಿರಬೇಕು’ ಎನ್ನುವ ಮೂಲಕ ಏನೇ ಅಡಚಣೆ ಬಂದರೂ ಸಾಹಿತ್ಯ ಸಂಭ್ರಮ ಮುಂದುವರಿಯಲಿದೆ ಎಂದು ಸೂಚ್ಯವಾಗಿ ತಿಳಿಸಿದರು.

‘ನಾವೆಲ್ಲ ಒಟ್ಟಿಗೆ ಇರೋಣ ಎಂದು ಬರಗೂರು ಅವರ ಬಳಿ ಹೇಳಿದ್ದೆ. ಅದಕ್ಕವರು ಒಟ್ಟಿಗಿರಲೆಂದೇ ಬಂದಿದ್ದೇನೆ ಎಂದು ಪ್ರತಿಕ್ರಿಯಿಸಿದ್ದರು. ನಾವೆಲ್ಲ ಒಗ್ಗಟ್ಟಿನಿಂದ ಇರುವ ಮೂಲಕ, ನಮ್ಮ ಮನಸುಗಳನ್ನು ಹಾಳು ಮಾಡುತ್ತಿರುವ ಎಲ್ಲ ರೀತಿಯ ಸಂಕುಚಿತತೆ ಹಾಗೂ ಕಲ್ಮಶಗಳನ್ನ ದೂರ ಮಾಡೋಣ. ಇದಕ್ಕೆ ಬೇಕಾದ ಕೆಲಸಗಳನ್ನೂ ಮಾಡೋಣ’ ಎಂಬ ಸಂದೇಶ ಸಾರಿದರು.

‘ನಿವೃತ್ತ ಸೈನಿಕರು ಬಂದು ಮನವಿ ಕೊಟ್ಟಾಗ, ಸಮಾರೋಪದಲ್ಲಿ ನಿಮ್ಮ ಪ್ರತಿನಿಧಿಗಳಿಗೂ ಮಾತನಾಡಲೂ ಅವಕಾಶ ಕೊಡುತ್ತೇನೆ ಎಂದು ಆಹ್ವಾನ ನೀಡಿದ್ದೆ. ಸೈನಿಕರಿಗೆ ಆದ ನೋವಿಗೆ ನಮ್ಮ ಟ್ರಸ್ಟ್‌ ಪರವಾಗಿ ಕ್ಷಮೆ ಕೇಳಿದೆ. ಸಂಕಟ, ಗೊಂದಲ ಬಗೆಹರಿಯಿತು ಎಂದು ಭಾವಿಸಿದ್ದೆ. ಬಳಿಕ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಏಳು ಸಂಶೋಧನಾ ವಿದ್ಯಾರ್ಥಿಗಳು ಬಂದು ಮತ್ತೆ ಮನವಿ ಕೊಟ್ಟರು. ಅದನ್ನೂ ಸ್ವೀಕರಿಸಿ, ಅವರಿಗೆ, ‘ನೀವು ಹೀಗೆಲ್ಲ ಮಾಡಬಾರದು. ಇದೇ ತರಹ ಮಾಡುವುದಾದರೆ ಮುಂದೆ ಸಂಭ್ರಮ ಆಚರಿಸಲು ಆಗುವುದಿಲ್ಲ’ ಎಂದು ಬುದ್ಧಿಮಾತು ಹೇಳಿದ್ದೆ’

‘ಆ ಬಳಿಕ ನಿವೃತ್ತ ಸೈನಿಕರ ಒಂದು ತಂಡ ಹಿರಿಯ ಅಧಿಕಾರಿ ನೇತೃತ್ವದಲ್ಲಿ ಬಂದು ಪ್ರತಿಭಟನೆ ನಡೆಸಿತು. ಕ್ಷಮೆ ಕೇಳಬೇಕು ಎಂದು ಷರತ್ತು ಹಾಕಿದರು. ನಾವು ಯಾರೂ ವಿಶ್ವನಾಥನ್‌ ಹೇಳಿಕೆಗೆ ಒಪ್ಪಿಗೆ ಸೂಚಿಸಿಲ್ಲ. ಸಭೆಯಲ್ಲೇ ಮೇಜರ್‌ ಸಿದ್ದಲಿಂಗಯ್ಯ, ವಿಜ್ಞಾನಿ ಪ್ರಕಾಶ್‌ ಸೇರಿದಂತೆ ಅನೇಕ ಸಭಿಕರು ಅವರ ಹೇಳಿಕೆ ವಿರುದ್ಧ ಪ್ರತಿಭಟಿಸಿದ್ದರು ಎಂಬುದನ್ನೂ ಅವರ ಗಮನಕ್ಕೆ ತಂದೆ. ಸೈನಿಕರ ಭಾವನೆಗೆ ಘಾಸಿಯಾಗಿದ್ದಕ್ಕೆ ನಮ್ಮ ವಿಷಾದ ಇದೆ. ಈ ಬಗ್ಗೆ ಕ್ಷಮೆಯನ್ನೂ ಕೇಳಿದ್ದೇವೆ ಎಂಬುದನ್ನೂ ಅರುಹಿದ್ದೆ’

‘ನಾಳೆ ಪತ್ರಿಕೆಯಲ್ಲಿ ನಿಮ್ಮ ಹೇಳಿಕೆ ಬರದಿದ್ದರೆ ಇನ್ನೊಮ್ಮೆ ಕ್ಷಮೆ ಕೇಳಬೇಕು ಎಂದರು. ಅದಕ್ಕೂ ಒಪ್ಪಿದೆ. ಇವೆಲ್ಲ ಆದ ಬಳಿಕವೂ ಕೆಲವು ಸ್ನೇಹಿತರು ವೇದಿಕೆ ಏರಿ ಈ ಥರ ಮಾಡಿದ್ದು ನೋವು ತಂದಿದೆ’ ಎಂದು ಭಾವುಕರಾಗಿ ಹೇಳಿದರು.

‘ಗಿರಡ್ಡಿ ಅವರಿಗೆ ಅರ್ಪಿಸಿದ ಸಾಂಸ್ಕೃತಿಕ ಸಂಭ್ರಮ ಇದು. ಪ್ರಾಯೋಜಕರಿಂದ ಹಾಗೂ ಪ್ರತಿನಿಧಿಗಳಿಂದಾಗಿ ಇದು ಅಚ್ಚುಕಟ್ಟಾಗಿ ನಡೆದಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ’ ಎಂದು ಹೇಳುವಾಗ ಅವರ ಧ್ವನಿ ಗದ್ಗದಿತವಾಗಿತ್ತು.

ಬೆಚ್ಚಿಬಿದ್ದ ಪುಟ್ಟ ಬಾಲಕಿ

ಬಿಜೆಪಿ ಕಾರ್ಯಕರ್ತರು ವೇದಿಕೆ ಏರಿ ದಾಂದಲೆ ನಡೆಸುತ್ತಿದ್ದಂತೆಯೇ ಪುಟ್ಟ ಬಾಲಕಿಯೊಬ್ಬಳು ಅಕ್ಷರಶಃ ಬೆಚ್ಚಿಬಿದ್ದಳು.

ತಾಯಿಯನ್ನು ಬಿಗಿದಪ್ಪಿದ ಬಾಲಕಿ, ‘ಅಮ್ಮಾ ಮನೆಗೆ ಹೋಗೋಣ. ಅವರು ನಮಗೂ ಹೊಡೆಯುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದಳು.

ಅಷ್ಟರಲ್ಲಿ ಪೊಲೀಸರು ಕಿಡಿಗೇಡಿಗಳನ್ನು ಹೊರಗೆ ಕರೆದೊಯ್ದು ಸಭಾಂಗಣದ ಬಾಗಿಲು ಮುಚ್ಚಿದರು.

‘ಅಮ್ಮ ಬಾಗಿಲು ಮುಚ್ಚಿದರು. ನಮಗೆ ಹೊರಗೆ ಹೋಗಲಾಗದು. ಅವರು ಮತ್ತೆ ಬಂದು ಹೊಡೆದರೆ ಏನು ಮಾಡುವುದು’ ಎಂದು ಅಳಲಾರಂಭಿಸಿದಳು.

ಮಗುವನ್ನು ಸಮಾಧಾನಪಡಿಸುವಷ್ಟರಲ್ಲಿ ತಾಯಿ ಹೈರಾಣಾದರು.

‘ಸಂಭ್ರಮಪಟ್ಟು ಸಂಕಟ ಹಂಚಿಕೊಳ್ಳುತ್ತೇವೆ’

ಮೂರು ದಿನಗಳ ಗೋಷ್ಠಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಹಿರಿಯ ಲೇಖಕ ಕೃಷ್ಣಮೂರ್ತಿ ಹನೂರ, ‘ಶಿವ ವಿಶ್ವನಾಥನ್‌ ಭಾಷಣಕ್ಕೆ ಮುನ್ನ ಕೆ.ವಿ.ಅಕ್ಷರ ಅವರು ರಾಷ್ಟ್ರೀಯತೆಯ ಬಗ್ಗೆ ಒಳ್ಳೆ ಪೀಠಿಕೆ ಹಾಕಿದ್ದರು. ಭಾವುಕತೆ ಎಂಬ ಅರಿವಳಿಕೆಯನ್ನು ಧರ್ಮ, ಜಾತಿ ಅಥವಾ ಮತಗಳಿಗೆ ಅನ್ವಯಿಸಿದರೆ ಅದರ ಅಪಾಯ ಏನು ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದರು. ಶಿವ ವಿಶ್ವನಾಥನ್‌ ಅವರು ಬಿರುಸಾಗಿ ಮಾತನಾಡಿದ್ದೇ ಕೆಲವು ಸಹೋದರರನ್ನು ಕೆರಳಿಸುವಂತೆ ಮಾಡಿತೋ ಏನೊ’ ಎಂದರು.

ಬರಗೂರು ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಹನೂರು, ‘ಇಲ್ಲಿ ಸಾಹಿತ್ಯ ಕಾರ್ಯಕ್ರಮದಲ್ಲಿ ಸ್ನೇಹಿತರನ್ನು ಎದುರುಗೊಂಡಾಗ ಸಂಭ್ರಮವಾಗುತ್ತದೆ. ಬಳಿಕ ಸಂಕಟ ಹಂಚಿಕೊಳ್ಳುತ್ತೇವೆ. ಹಾಗಾಗಿ ಸಂಭ್ರಮ– ಸಂಕಟ ಎರಡೂ ಇಲ್ಲಿದೆ’ ಎಂದರು.

*ಶಿವ ವಿಶ್ವನಾಥನ್‌ ಅವರು ಇಡೀ ಭಾರತೀಯ ಸೈನ್ಯಕ್ಕೆ ಅನ್ವಯವಾಗುವಂತೆ ಹೇಳಿಕೆ ನೀಡಿದ್ದರೆ ಅದನ್ನು ಸಾಹಿತ್ಯ ಸಂಭ್ರಮ ಒಪ್ಪುವುದಿಲ್ಲ. ತಿರಸ್ಕರಿಸುತ್ತದೆ.

-ರಾಘವೇಂದ್ರ ಪಾಟೀಲ, ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್‌ನ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT