ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಸ್ಥಳ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ನೆರವು: ಎಚ್‌.ಡಿ. ರೇವಣ್ಣ ಭರವಸೆ

ನವೀಕೃತ ಮಂಜೂಷಾ ವಸ್ತುಸಂಗ್ರಹಾಲಯ ಲೋಕಾರ್ಪಣೆ
Last Updated 24 ಅಕ್ಟೋಬರ್ 2018, 16:45 IST
ಅಕ್ಷರ ಗಾತ್ರ

ಮಂಗಳೂರು: ಧರ್ಮಸ್ಥಳದಲ್ಲಿ ಮುಂದಿನ ವರ್ಷ ನಡೆಯುವ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಸರ್ಕಾರದ ವತಿಯಿಂದ ಎಲ್ಲ ನೆರವು ನೀಡಲಾಗುವುದು. ಈಗಾಗಲೇ ನೇತ್ರಾವತಿ ಸ್ನಾನಘಟ್ಟದಿಂದ ದೇವಳದವರೆಗಿನ ರಸ್ತೆ ಕಾಮಗಾರಿಗೆ ₹ 23 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಹೇಳಿದರು.

ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಪಟ್ಟ ಏರಿ 50 ವರ್ಷಗಳು ಸಂದ ಪ್ರಯುಕ್ತ ಬುಧವಾರ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಸ್ತೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಮಸ್ತಕಾಭಿಷೇಕಕ್ಕೆ ಮುನ್ನವೇ ರಸ್ತೆ ಕಾಮಗಾರಿಗಳು ಮುಕ್ತಾಯವಾಗಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಮಸ್ತಕಾಭಿಷೇಕದ ವೇಳೆ ಯಾವುದೇ ಸಮಸ್ಯೆಯಾಗದಂತೆ ಸರ್ಕಾರ ಎಲ್ಲ ನೆರವು ನೀಡಲಿದೆ’ ಎಂದು ಹೇಳಿದರು. ಸಮಾರಂಭಕ್ಕೆ ಮೊದಲು ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ದಂಪತಿಯನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.

ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್‌ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಹೆಗ್ಗಡೆ ಅವರಿಗೆ ಕರೆ ಮಾಡಿ ಶುಭಕೋರಿದ ವಿಷಯವನ್ನು ತಿಳಿಸಿದರು.

ಹೆಗ್ಗಡೆಯವರು ಹೈದರಾಬಾದ್‌ನ ಸಾಲರ್‌ ಜಂಗ್‌ ಪ್ರಾಚ್ಯ ವಸ್ತು ಸಂಗ್ರಹಾಲಯ ನೋಡಿ ಪ್ರೇರೇಪಣೆ ಪಡೆದು ರೂಪಿಸಿದ ಮಂಜೂಷಾ ವಸ್ತು ಸಂಗ್ರಹಾಲಯವನ್ನು ನವೀಕರಿಸಲಾಗಿದ್ದು, ಈ ಸಂದರ್ಭ ಲೋಕಾರ್ಪಣೆಗೊಳಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌, ಸಂಸದ ನಳಿನ್‌ ಕುಮಾರ್‌ ಕಟೀಲ್‌, ಶಾಸಕ ಹರೀಶ್‌ ಪೂಂಜಾ, ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌, ರಾಜ್ಯ ಸಭಾ ಸದಸ್ಯ ಆಸ್ಕರ್‌ ಫರ್ನಾಂಡಿಸ್‌ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಹೆಗ್ಗಡೆ ದಂಪತಿಯನ್ನು ಸನ್ಮಾನಿಸಲಾಯಿತು. ಧರ್ಮಸ್ಥಳದ ಸಿಬ್ಬಂದಿ ಸಂಗ್ರಹಿಸಿದ ₹ 2.75 ಲಕ್ಷ ಹಣವನ್ನು ಸಿಎಂ ಪರಿಹಾರ ನಿಧಿಗೆ ಸಚಿವ ಯು.ಟಿ. ಖಾದರ್‌ ಮೂಲಕ ಹಸ್ತಾಂತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT