ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನೇಮಕಾತಿ ಅಕ್ರಮ: ಸತ್ಯಶೋಧನ ಸಮಿತಿ ರಚನೆ

ತನಿಖೆ
Last Updated 21 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ 2015ರಿಂದ 17ರವರೆಗೆ ನಡೆದ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಸತ್ಯಾಸತ್ಯತೆ ಪರಿಶೀಲಿಸಲು ನಿವೃತ್ತ ನ್ಯಾಯಾಧೀಶ ಎಚ್‌.ಆರ್‌.ದೇಶಪಾಂಡೆ ಅಧ್ಯಕ್ಷತೆಯಲ್ಲಿ ಸತ್ಯಶೋಧನಾ ಸಮಿತಿಯನ್ನು ಆಡಳಿತ ಮಂಡಳಿ ರಚಿಸಿದೆ.

ವಿ.ವಿಯ ಹಿಂದಿನ ಕುಲಪತಿ ಡಾ. ಡಿ.ಪಿ.ಬಿರಾದಾರ ಅವರ ಅವಧಿಯಲ್ಲಿ ಎಂಟು ಮಂದಿ ಸಹಾಯಕ ಪ್ರಾಧ್ಯಾಪಕರು (2016ರ ಏಪ್ರಿಲ್ 30) ಹಾಗೂ ಐದು ಸಹ ಪ್ರಾಧ್ಯಾಪಕರ (2017ರ ಜೂನ್ 3) ನೇಮಕಾತಿ ಮಾಡಲಾಗಿತ್ತು. ಜತೆಗೆ ಕೆಲವರಿಗೆ ಪದೋನ್ನತಿ ನೀಡಲಾಗಿತ್ತು.

ಅವಧಿಗೆ ಮೊದಲೇ ಕೆಲವರಿಗೆ ಪದೋನ್ನತಿ ನೀಡಲಾಗಿದೆ. ಕೆಲಸವೇ ಇಲ್ಲದ ಹಾಗೂ ಅನ್ವಯಿಸದ ಹುದ್ದೆಗಳಿಗೆ ವರ್ಗಾವಣೆ ಮಾಡಿರುವುದರಿಂದಲೂ ಆರ್ಥಿಕ ಹೊರೆಯಾಗಿದೆ ಎಂಬ ದೂರುಗಳು ವಿಶ್ವವಿದ್ಯಾಲಯಕ್ಕೆ ಸಲ್ಲಿಕೆಯಾಗಿದ್ದವು.

ಕಾನೂನು ಬಾಹಿರವಾಗಿ ನೇಮಕಾತಿ, ಪದೋನ್ನತಿಯಿಂದ ವಿ.ವಿಗೆ ವಾರ್ಷಿಕವಾಗಿ ₹1.35ಕೋಟಿ ನಷ್ಟ ಉಂಟಾಗಲಿದೆ. ಇವೆಲ್ಲದಕ್ಕೂ ಡಾ. ಬಿರಾದಾರ ಅವರೇ ನೇರ ಹೊಣೆ ಎಂದು ವಿಶ್ವವಿದ್ಯಾಲಯಕ್ಕೆ ಸಲ್ಲಿಕೆಯಾಗಿದ್ದ ದೂರಿನಲ್ಲಿ ಹೇಳಲಾಗಿತ್ತು.

ಇದೇ ವಿಷಯವಾಗಿ ಮಾರ್ಚ್‌ 23, ಜೂನ್ 27 ಹಾಗೂ ಜುಲೈ 6ರಂದು ಆಡಳಿತ ಮಂಡಳಿ ಸಭೆ ನಡೆದಿತ್ತು. ಕೊನೆಗೆ, ಮೇಲ್ನೋಟಕ್ಕೆ ಆರೋಪಗಳು ಕಂಡು ಬರುತ್ತಿರುವುದರಿಂದ ಸತ್ಯಶೋಧನ ಸಮಿತಿ ರಚಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಸಮಿತಿ ರಚಿಸಲು ಆಗ ಇದ್ದ ಪ್ರಭಾರ ಕುಲಪತಿ ನಿರುತ್ಸಾಹ ತೋರಿದ್ದರು. ಈ ವಿಷಯ ಕುರಿತು ಆ. 3ರಂದು ‘ಇನ್ನೂ ರಚನೆಯಾಗದ ಸತ್ಯಶೋಧನ ಸಮಿತಿ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟಗೊಂಡಿತ್ತು.

ಡಾ. ಎಂ.ಬಿ.ಚೆಟ್ಟಿ ಅವರು ಕುಲಪತಿಯಾಗಿ ನೇಮಕಗೊಂಡ ನಂತರ ಈಚೆಗೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ವಿಶ್ರಾಂತ ಕುಲಪತಿ ಡಾ. ಎಸ್‌.ಎ.ಪಾಟೀಲ, ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಎ.ಎ.ಇಳಕಲ್‌
ಹಾಗೂ ಬಾಗಲಕೋಟೆ ಜಿಲ್ಲಾ ಪಂಚಾಯ್ತಿಯ ಉಪಕಾರ್ಯದರ್ಶಿ ಅಂಬರೀಶ ನಾಯಕ ಅವರು ಸದಸ್ಯರಾಗಿದ್ದಾರೆ. ಕುಲಸಚಿವರು ಸಂಚಾಲಕರಾಗಿ ಎಲ್ಲಾ ಅಗತ್ಯ ದಾಖಲೆಗಳನ್ನು ಸಮಿತಿಗೆ ಒದಗಿಸಬೇಕು. ಸಮಿತಿಯು ಮೂರು ತಿಂಗಳ ಒಳಗಾಗಿ ತನ್ನ ವರದಿಯನ್ನು ವ್ಯವಸ್ಥಾಪನಾ ಮಂಡಳಿಗೆ ಸಲ್ಲಿಸಬೇಕು ಎಂದು ಹೇಳಲಾಗಿದೆ.

ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸಭೆಯಲ್ಲಿ ತನಿಖೆ ನಡೆಸುವಂತೆ ಆರಂಭದಲ್ಲಿ ಸದಸ್ಯರಲ್ಲೇ ಗೊಂದಲ ಉಂಟಾಗಿತ್ತು. ತನಿಖೆಗೆ ಸಮಿತಿ ನೇಮಿಸದಿದ್ದರೆ ಸಭೆಯನ್ನೇ ಬಹಿಷ್ಕರಿಸುವ ಎಚ್ಚರಿಕೆಯನ್ನೂ ಕೆಲವರು ನೀಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

**

ಆಡಳಿತ ಮಂಡಳಿ ಸಮಿತಿಯನ್ನು ರಚಿಸಿದೆ. ಆದರೆ ಸರ್ಕಾರದಿಂದ ಅನುಮತಿ ಪಡೆದು ಮುಂದುವರಿಯಬೇಕು. ಶೀಘ್ರದಲ್ಲಿ ನಿರ್ಧಾರ ಪ್ರಕಟಿಸಲಾಗುವುದು
- ಡಾ. ಎಂ.ಬಿ.ಚೆಟ್ಟಿ, ಕುಲಪತಿ, ಕೃಷಿ ವಿಶ್ವವಿದ್ಯಾಲಯ

**

ಡಾ. ಡಿ.ಪಿ.ಬಿರಾದಾರ ಕುಲಪತಿಯಾಗಿದ್ದಾಗಿನ ಪ್ರಕರಣ
ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವ ಕುರಿತು ದೂರು
ಆಡಳಿತ ಮಂಡಳಿಯಲ್ಲಿ ನಾಲ್ಕು ಬಾರಿ ಇದೇ ವಿಷಯವಾಗಿ ಚರ್ಚೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT