ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಕಟ್ಟಡ ಕುಸಿತ: ಮೃತರ ಸಂಖ್ಯೆ 7ಕ್ಕೆ ಏರಿಕೆ

ಬಹುಮಹಡಿಯ ಮಾಲೀಕರು, ಎಂಜಿನಿಯರ್ ವಿರುದ್ಧ ಪ್ರಕರಣ ದಾಖಲು
Last Updated 20 ಮಾರ್ಚ್ 2019, 18:53 IST
ಅಕ್ಷರ ಗಾತ್ರ

ಧಾರವಾಡ: ಇಲ್ಲಿನ ಕುಮಾರೇಶ್ವರ ನಗರದಲ್ಲಿ ಮಂಗಳವಾರ ಮಧ್ಯಾಹ್ನ ಕುಸಿದ ಬಹುಮಹಡಿ ಕಟ್ಟಡದ ಅಡಿಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯ ಬುಧವಾರವೂ ಮುಂದುವರಿದಿದ್ದು, ಈವರೆಗೆ ಬಾಲಕ ಸೇರಿದಂತೆ 7 ಜನರ ಮೃತದೇಹ ಪತ್ತೆಯಾಗಿವೆ.

ಸತತ 30 ತಾಸು ಕಾರ್ಯಾಚರಣೆ ನಡೆಸಿ 56 ಮಂದಿಯನ್ನು ರಕ್ಷಿಸಲಾಗಿದ್ದು, ಕಟ್ಟಡದ ಅಡಿಯಲ್ಲಿ ಇನ್ನೂ 15ರಿಂದ 20 ಜನ ಸಿಲುಕಿರುವ ಶಂಕೆ ಇದೆ. ಕಾರ್ಯಾಚರಣೆ ನಾಳೆಯೂ ಮುಂದುವರೆಯಲಿದೆ. ಈ ನಡುವೆ ತಮ್ಮ ಸಂಬಂಧಿಕರು ನಾಪತ್ತೆಯಾಗಿದ್ದಾಗಿ 12 ಮಂದಿ ಬುಧವಾರ ದೂರು ಕೊಟ್ಟಿದ್ದಾರೆ.

ರಾಜ್ಯ ಮತ್ತು ಕೇಂದ್ರ ವಿಪತ್ತು ನಿರ್ವಹಣಾ ತಂಡ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸೇರಿದಂತೆ 380ಕ್ಕೂ ಹೆಚ್ಚು ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಇವರೊಂದಿಗೆ ಸ್ಥಳೀಯರೂ ಕೈಜೋಡಿಸಿದ್ದಾರೆ.

ಕುಸಿದ ಕಟ್ಟಡದ ಅಂಚಿನಲ್ಲಿದ್ದವರನ್ನು ಈವರೆಗೆ ರಕ್ಷಿಸಲಾಗಿತ್ತು. ಆದರೆ, ಕಟ್ಟಡ ನೇರವಾಗಿ ಕುಸಿದಿದ್ದರಿಂದ ಮಧ್ಯದಲ್ಲಿ ಸಿಲುಕಿದವರ ಬಳಿ ತೆರಳಲು ಸೂಕ್ತ ಮಾರ್ಗ ದೊರಕಲಿಲ್ಲ. ಹೀಗಾಗಿ ಕಟ್ಟಡದ ಮೂರೂ ಭಾಗಗಳಲ್ಲಿ ರಂಧ್ರ ಕೊರೆದು, ಇದ್ದ ಮಳಿಗೆಗಳ ಬಾಗಿಲು ಒಡೆದು, ಗೋಡೆಯಲ್ಲಿಯೇ ರಂಧ್ರ ಮಾಡುತ್ತಾ ಸ್ಥಳಾವಕಾಶ ಮಾಡಿಕೊಂಡ ಎನ್‌ಡಿಆರ್‌ಎಫ್ ತಂಡ ರಕ್ಷಣಾ ಕಾರ್ಯ ನಡೆಸಿತು.

ಬದುಕುಳಿದಿರುವವರು ಇರಬಹುದಾದ ಸ್ಥಳಕ್ಕೆ ತಲುಪಲು ಸಾಧ್ಯವಾಗದ ಕಾರಣ, ಅಲ್ಲಿ ಸಿಲಿಂಡರ್ ಮೂಲಕ ಆಮ್ಲಜನಕ ನೀಡುವ ಪ್ರಕ್ರಿಯೆ ಮುಂದುವರಿದಿದೆ.

ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಅಗ್ನಿಶಾಮಕ ದಳದ ಡಿಜಿಪಿ ಎಂ.ಎನ್‌.ರೆಡ್ಡಿ ಮಾಹಿತಿ ನೀಡಿ, ‘ಕಟ್ಟಡದ ಅವಶೇಷಗಳ ಅಡಿ ನಾಲ್ಕು ಕಡೆಗಳಲ್ಲಿ ಜನ ಇದ್ದಾರೆ ಎಂಬ ಕುರುಹು ದೊರೆತಿದೆ. ಅವರನ್ನು ರಕ್ಷಣೆ ಮಾಡುವುದು ನಮ್ಮ ಮೊದಲ ಆದ್ಯತೆ’ ಎಂದು ಹೇಳಿದರು.

ಈ ಕಾರ್ಯಾಚರಣೆಯಲ್ಲಿ ಪ್ರತಿಯೊಂದು ಹಂತವೂ ಸವಾಲಾಗುತ್ತಿದ್ದು, ಕೊನೆಯ ವ್ಯಕ್ತಿಯನ್ನು ರಕ್ಷಣೆ ಮಾಡುವವರೆಗೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದರು.

ತಕ್ಷಣದ ಪರಿಹಾರ: ಮೃತಪಟ್ಟವರ ಕುಟುಂಬದವರಿಗೆ ತಕ್ಷಣದ ಪರಿಹಾರವಾಗಿ ತಲಾ ₹ 2 ಲಕ್ಷ, ಗಾಯಗೊಂಡ
ವರಿಗೆ ತಲಾ ₹ 1 ಲಕ್ಷ ನೀಡಲು ನಿರ್ಧರಿಸಲಾಗಿದ್ದು, ಮೃತರ ಅಂತ್ಯಕ್ರಿಯೆಗೆ ₹ 5 ಸಾವಿರ ನೆರವು ನೀಡಲಾಗುವುದು ಎಂದು ಆಯುಕ್ತರು ತಿಳಿಸಿದರು.

ಕಟ್ಟಡದ ಮಾಲೀಕರಾದ ರವಿ ಸಬರದ, ಬಸವರಾಜ ನಿಗದಿ, ಗಂಗಪ್ಪ ಶಿಂತ್ರಿ, ಮಹಾಬಳೇಶ್ವರ ಪುರದಗುಡಿ ಮತ್ತು ಎಂಜಿನಿಯರ್‌ ವಿವೇಕ ಪವಾರ ವಿರುದ್ಧ ಇಲ್ಲಿನ ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಪಾಲಿಕೆಯ ಸಹಾಯಕ ಆಯುಕ್ತ ಸಂತೋಷ ಆನಿಶೆಟ್ಟರ್‌ ದೂರು ನೀಡಿದ್ದಾರೆ.

ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಿರುವ ಪಾಲಿಕೆಯು, ಅದರ ಭಾಗಶಃ ಪೂರ್ಣಗೊಂಡಿರುವ ಕುರಿತು ಮಾತ್ರ ಪ್ರಮಾಣ ಪತ್ರ ನೀಡಿದೆ. ಆದರೆ ಪೂರ್ಣ ಪ್ರಮಾಣ ಪತ್ರ ನೀಡಿಲ್ಲ. ಆರೋಪಿಗಳು ನಾಪತ್ತೆಯಾಗಿದ್ದು, ಶೋಧ ನಡೆಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಮ್ಯಾಜಿಸ್ಟ್ರಿಯಲ್‌ ತನಿಖೆಗೆ ಆದೇಶ

ಕಟ್ಟಡ ಕುಸಿದ ಸ್ಥಳದಲ್ಲಿ ಬುಧವಾರ ಪರಿಶೀಲನೆ ನಡೆಸಿದ ಬೆಳಗಾವಿ ಪ್ರಾದೇಶಿಕ ಆಯುಕ್ತ ತುಷಾರ್‌ ಗಿರಿನಾಥ, ಘಟನೆ ಕುರಿತು ಮ್ಯಾಜಿಸ್ಟ್ರಿಯಲ್‌ ತನಿಖೆಗೆ ಆದೇಶಿಸಿದ್ದಾಗಿ ತಿಳಿಸಿದರು. ಆರೋ‍ಪಿಗಳು ಯಾರೇ ಆಗಿದ್ದರೂ ಎಷ್ಟೇ ಪ್ರಭಾವಿಯಾಗಿದ್ದರೂ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.

‘ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕಳಪೆ ಕಾಮಗಾರಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕಟ್ಟಡ ಮಾಲೀಕರ ವಿರುದ್ಧ ದೂರು ದಾಖಲಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಪರಿಹಾರವಾಗಿ ನೀಡಿದ ಹಣವನ್ನು ತಪ್ಪಿತಸ್ಥರಿಂದಲೇ ವಸೂಲು ಮಾಡಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT