ಶುಕ್ರವಾರ, ಜೂನ್ 5, 2020
27 °C

ಮತದಾರರಿಗೆ ಧಾರವಾಡ ಪೇಢಾ: ಅಂಬಿ ಅಭಿಮಾನಿಯಿಂದ ಸುಮಲತಾಗೆ ‘ಗೆಲುವಿನ ಉಡುಗೊರೆ’

ಶಿವಕುಮಾರ ಹಳ್ಯಾಳ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಸುಮಲತಾಗೆ ಅಂಬರೀಷ್‌ ಅಭಿಮಾನಿಯೊಬ್ಬರು ಬರೋಬ್ಬರಿ 500ಕೆ.ಜಿ. ಧಾರವಾಡ ಪೇಢಾಯನ್ನು ಕೊಂಡೊಯ್ಯುತ್ತಿದ್ದಾರೆ.

ಬುಧವಾರ ಮಂಡ್ಯದಲ್ಲಿ ಕೃತಜ್ಞತೆ ಸಲ್ಲಿಸಲು ಹಮ್ಮಿಕೊಂಡಿರುವ ಸಮಾವೇಶಕ್ಕೆ ಬರುವ ಎಲ್ಲರಿಗೂ ಖುದ್ದಾಗಿ ಪೇಢೆ ಹಂಚುವುದಾಗಿ ಧಾರವಾಡದ ನಾರಾಯಣ ಕಲಾಲ ತಿಳಿಸಿದ್ದಾರೆ. ಅಂಬರೀಷ್‌ ಅಭಿಮಾನಿಯಾಗಿರುವ ನಾರಾಯಣ ಅವರು ಇದಕ್ಕಾಗಿಯೇ ₹ 2.10 ಲಕ್ಷ ವ್ಯಯಿಸಿದ್ದಾರೆ.

ಅಂಬರೀಷ್‌ ಹಾಗೂ ಕಲಾಲ ಸ್ನೇಹ, ಅಭಿಮಾನ ಹೊಸತೇನಲ್ಲ. ಈ ಹಿಂದೆ ಅಂಬರೀಷ್‌ ಅವರು, ಯಶ್‌ ಹಾಗೂ ರಾಧಿಕಾ ಮಗುವಿಗೆ ತೊಟ್ಟಿಲು ಕೊಡುವ ಇಂಗಿತ ವ್ಯಕ್ತಪಡಿಸಿದಾಗ ಕಲಘಟಗಿಯ ವಿಶೇಷ ತೊಟ್ಟಿಲನ್ನೂ ಇವರೇ ತಲುಪಿಸಿದ್ದರು. ಇದೀಗ ತಮ್ಮದೇ ಖರ್ಚಿನಲ್ಲಿ ಪೇಢಾ ಖರೀದಿಸಿ, ಮಂಡ್ಯಕ್ಕೆ ತೆರಳುತ್ತಿದ್ದಾರೆ. 

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಲಾಲ, ‘ಬುಧವಾರ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕೃತಜ್ಞತಾ ಸಮಾವೇಶ ನಡೆಯಲಿದೆ. ನಾನೇ ಹೋಗಿ ಸಮಾವೇಶದಲ್ಲಿ ಧಾರವಾಡ ಪೇಢಾ ಹಂಚಲಿದ್ದೇನೆ. ಚುನಾವಣಾ ಫಲಿತಾಂಶ ಹೊರ ಬಿದ್ದ ದಿನವೇ ಧಾರವಾಡದ ಬಾಬುಸಿಂಗ್‌ ಠಾಕೂರ್‌ ಅಂಗಡಿ ಮಾಲೀಕರಾದ ದೀಪಕ ಠಾಕೂರ್‌ ಅವರಿಗೆ 5 ಕ್ವಿಂಟಲ್‌ ಪೇಢಾ ಮಾಡಿ ಕೊಡಲು ಹೇಳಿದ್ದೆ’ ಎಂದು ತಿಳಿಸಿದರು.

ಧಾರವಾಡ ಸಾಧನಕೇರಿ ನಿವಾಸಿಯಾಗಿರುವ ಕಲಾಲ ಬೆಳಗಾವಿಯಲ್ಲಿ ಹೊಟೇಲ್‌ ದುರ್ಗಾ ರೆಸಿಡೆನ್ಸಿಯ ಮಾಲೀಕರಾಗಿದ್ದಾರೆ. ‘ನಮ್ಮ ಹೋಟೆಲ್‌ ಅನ್ನು ರೆಬೆಲ್‌ ಸ್ಟಾರ್‌ ಅಂಬರೀಷ್‌ ಅವರೇಉದ್ಘಾಟಿಸಿದ್ದರು. ಅವರ ಕುಟುಂಬದೊಂದಿಗೆ ನಮ್ಮ ಸ್ನೇಹ ಇಂದಿಗೂ ಅಷ್ಟೇ ಗಟ್ಟಿಯಾಗಿದೆ. ಈಗ ಪೇಢಾ ಹಂಚುವ ಮೂಲಕ ಸುಮಲತಾ ಅಂಬರೀಷ್‌ ಗೆಲುವನ್ನು ಸಂಭ್ರಮಿಸುತ್ತಿದ್ದೇನೆ’ ಎಂದು ಕಲಾಲ ಹೇಳಿದರು.

ಅಂಗಡಿ ಮಾಲೀಕ ದೀಪಕ್ ಠಾಕೂರ್ ಮಾತನಾಡಿ, ‘ಉಡುಗೊರೆಯಾಗಿ ನೀಡುತ್ತಿರುವ ಪೇಢಾವನ್ನು ವಿಶೇಷ ಮುತುವರ್ಜಿಯಿಂದ ಸಿದ್ಧಪಡಿಸಲಾಗಿದೆ. ಪೊಟ್ಟಣದ ಮೇಲೆ ‘ಮಂಡ್ಯ ಸಂಸದರಾಗಿ ಆಯ್ಕೆಯಾಗಿರುವ ಸುಮಲತಾ ಅಂಬರೀಷ್ ಅವರ ವಿಜಯದ ಸಂಕೇತವಾಗಿ ಸವಿ ನೆನಪಿನ ಸಿಹಿ’ ಎಂದು ಮುದ್ರಿಸಲಾಗಿದೆ. ಒಟ್ಟು ₹2.10ಲಕ್ಷ ಮೌಲ್ಯದ 5ಕ್ವಿಂಟಲ್ ಪೇಢೆ ಸಿದ್ಧಪಡಿಸಲು ನಮ್ಮಲ್ಲಿನ ನುರಿತ ಬಾಣಸಿಗರು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ’ ಎಂದು ತಿಳಿಸಿದರು.

ಸ್ವಾಭಿಮಾನಿ ವಿಜಯೋತ್ಸವ ಇಂದು
ಮಂಡ್ಯ: ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸಿರುವ ಎ.ಸುಮಲತಾ ಅವರ ‘ಸ್ವಾಭಿಮಾನಿ ವಿಜಯೋತ್ಸವ’ ನಗರದ ಸಿಲ್ವರ್‌ ಜ್ಯೂಬಿಲಿ ಉದ್ಯಾನದಲ್ಲಿ ಬುಧವಾರ (ಮೇ 29) ನಡೆಯಲಿದೆ.

ಅಂಬರೀಷ್‌ ಜನ್ಮದಿನದಂದೇ ವಿಜಯೋತ್ಸವ ನಡೆಯುತ್ತಿದ್ದು ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಅಂಬರೀಷ್‌ ಭಾವಚಿತ್ರಕ್ಕೆ ಕ್ಷೀರಾಭಿಷೇಕ, ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನೂ ಆಯೋಜಿಸಲಾಗಿದೆ.

ನಟರಾದ ಯಶ್‌, ದರ್ಶನ್‌, ದೊಡ್ಡಣ್ಣ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಅಂಬರೀಷ್‌ ಪುತ್ರ ಅಭಿಷೇಕ್‌ ಗೌಡ ಭಾಗವಹಿಸಲಿದ್ದಾರೆ. ‘ಸ್ನೇಹಶೀಲ‘ ಹಾಗೂ ‘ಅಂಬರೀಷ್; ವ್ಯಕ್ತಿ– ವ್ಯಕ್ತಿತ್ವ ವರ್ಣರಂಜಿತ ಬದುಕು‘ ಪುಸ್ತಕಗಳು ಬಿಡುಗಡೆಯಾಗಲಿವೆ.

**
ಅಂಬಿ ಹಾಗೂ ನಮ್ಮ ಕುಟುಂಬದ ನಡುವೆ ಆತ್ಮೀಯ ಬಾಂಧವ್ಯವಿದೆ. ಅಣ್ಣನ ಮೇಲಿರುವ ಅಭಿಮಾನಕ್ಕಾಗಿ ಕೃತಜ್ಞತೆ ಸಲ್ಲಿಸುವ ಈ ಕಾರ್ಯಕ್ಕೆ ಮುಂದಾಗಿದ್ದೇನೆ.
-ನಾರಾಯಣ ಕಲಾಲ, ಅಂಬರೀಷ್ ಅಭಿಮಾನಿ

**

ಧಾರವಾಡದ ಪೇಢಾ ಮಂಡ್ಯಕ್ಕೆ ಹೋಗುತ್ತಿರುವುದು ಸಂತಸದ ವಿಚಾರ. ಧಾರವಾಡದ ಸಿಹಿಯನ್ನು ಅಲ್ಲಿಯವರೂ ಸವಿಯಲಿ ಎಂಬುದೇ ನಮ್ಮ ಉದ್ದೇಶ.
-ದೀಪಕ ಠಾಕೂರ, ಬಾಬುಸಿಂಗ್‌ ಠಾಕೂರ್‌ ಪೇಢಾ ಮಾಲೀಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು