ಸೋಮವಾರ, ಮಾರ್ಚ್ 1, 2021
29 °C
ಎನ್‌.ಎ.ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯ ಸ್ಥಿತಿ

ಇಬ್ಬರು ವಿದ್ಯಾರ್ಥಿಗಳಿಗೆ ಇಪ್ಪತ್ತು ಸಿಬ್ಬಂದಿ!

ಇ.ಎಸ್‌. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ರಾಜ್ಯದ ಏಕೈಕ ಪೊಲೀಸರ ಮಕ್ಕಳ ವಸತಿ ಶಾಲೆಯಲ್ಲಿ (ಎನ್‌.ಎ.ಮುತ್ತಣ್ಣ ಸ್ಮಾರಕ ಶಾಲೆ) ವಿದ್ಯಾರ್ಥಿಗಳ ಸಂಖ್ಯೆ ಎರಡು. ಆದರೆ ಈ ಮಕ್ಕಳಿಗಾಗಿ ಒಂಬತ್ತು ಶಿಕ್ಷಕರು, ಪ್ರಾಂಶುಪಾಲರು ಸೇರಿ 20 ಸಿಬ್ಬಂದಿ ಇದ್ದಾರೆ!

1997ರಲ್ಲಿ ಆರಂಭವಾದ ಈ ಶಾಲೆಯು ಆರನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಪೊಲೀಸರ ಮಕ್ಕಳಿಗೆ ವಸತಿ ಸಹಿತ ಶಿಕ್ಷಣ ನೀಡುತ್ತಿದೆ. ಹಿಂದೊಮ್ಮೆ ಇಲ್ಲಿ ಗರಿಷ್ಠ 148 ವಿದ್ಯಾರ್ಥಿಗಳು ಇದ್ದರು. ಆದರೆ ಇಷ್ಟೊಂದು ಕುಸಿತ ಕಂಡಿರಲಿಲ್ಲ.

ಶಾಲೆಯು ಎರಡು ವರ್ಷಗಳಿಂದ ಉತ್ತಮ ಫಲಿತಾಂಶ ದಾಖಲಿಸಿಲ್ಲ. ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ 38 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ, ಶಿಕ್ಷಕರ ಗುತ್ತಿಗೆಯನ್ನು ನವೀಕರಿಸಿರಲಿಲ್ಲ. ಜತೆಗೆ ಆಮೂಲಾಗ್ರ ಬದಲಾವಣೆಗೆ ಕೈ ಹಾಕಿತು.

ಇದಕ್ಕೆ ವ್ಯಾಪಕ ವಿರೋಧವೂ ವ್ಯಕ್ತವಾಯಿತು. ಶಿಕ್ಷಕರ ಪರವಾಗಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸರ್ಕಾರಕ್ಕೆ ಮತ್ತು ಪೊಲೀಸ್ ಇಲಾಖೆಗೆ ಪತ್ರ ಬರೆದು, ಈಗಿರುವ ಶಿಕ್ಷಕರನ್ನೇ ನೇಮಿಸಿಕೊಳ್ಳುವಂತೆ ಒತ್ತಾಯಿಸಿದ್ದರು.

‘ಶಾಲೆಯಲ್ಲಿರುವ ಮಕ್ಕಳಿಗೆ ಬಲವಂತವಾಗಿ ವರ್ಗಾವಣೆ ಪತ್ರ ಕೊಟ್ಟು ಕಳುಹಿಸಲಾಗುತ್ತಿದೆ. ಆ ಮೂಲಕ ಶಾಲೆಯನ್ನೇ ಮುಚ್ಚುವ ಹುನ್ನಾರ ನಡೆದಿದೆ’ ಎಂದೂ ಆರೋಪಿಸಿದ್ದರು.

ಜೂನ್ 28ಕ್ಕೆ ಹಿಂದೆ ಇದ್ದ ಶಿಕ್ಷಕರಿಗೇ ನೇಮಕಾತಿ ಪತ್ರ ನೀಡಿದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ‘ಫಲಿತಾಂಶ ಕುಸಿತ ದಾಖಲಾಗಿದ್ದರಿಂದ ಕಾರಣ ಹುಡುಕಲು ಸಮಿತಿ ರಚಿಸಲಾಗಿತ್ತು. ಅದರ ವರದಿ ಸಿಗುವುದು ತಡವಾಗಿದ್ದರಿಂದ ನೇಮಕಾತಿ ಪತ್ರ ನೀಡುವುದೂ ತಡವಾಯಿತು. ಫಲಿತಾಂಶದ ಕಾರಣದಿಂದಾಗಿ ವಿದ್ಯಾರ್ಥಿಗಳನ್ನು ಅವರ ಪಾಲಕರು ಕರೆದುಕೊಂಡು ಹೋಗುತ್ತಿದ್ದಾರೆ. ಇದರಲ್ಲಿ ಇಲಾಖೆಯ ಪಾತ್ರವೇನೂ ಇಲ್ಲ’ ಎಂದು ಸ್ಪಷ್ಟಪಡಿಸಿದ್ದರು.

ಸದ್ಯ ಈ ಶಾಲೆಯಲ್ಲಿ 8ನೇ ತರಗತಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಹತ್ತನೇ ತರಗತಿಯಲ್ಲಿದ್ದ 19 ವಿದ್ಯಾರ್ಥಿಗಳು ಬೇರೆಡೆ ಹೋಗಿದ್ದಾರೆ. ಸಾಕಷ್ಟು ಹೋರಾಟದ ನಂತರ ನೇಮಕಾತಿ ಪತ್ರ ಪಡೆದ ಶಿಕ್ಷಕರು ಉಳಿದಿರುವ ಇಬ್ಬರು ವಿದ್ಯಾರ್ಥಿಗಳಿಗೆ ಪಾಠ ಮಾಡುವ ಅನಿವಾರ್ಯತೆ ಎದುರಾಗಿದೆ.

ಈ ಶಾಲೆಗೆ ಸೇರಬಯಸುವ ಪೊಲೀಸರ ಮಕ್ಕಳಿಗೆ ಇಲ್ಲಿ ಪ್ರವೇಶ ಪರೀಕ್ಷೆ ನಡೆಯುತ್ತದೆ. 2019ರಲ್ಲಿ ಪರೀಕ್ಷೆ ಬರೆದ ಒಟ್ಟು 91 ಮಕ್ಕಳಲ್ಲಿ 65 ಮಂದಿ ಪ್ರವೇಶಕ್ಕೆ ಅರ್ಹತೆ ಪಡೆದಿದ್ದರು. ಇವರಲ್ಲಿ 52 ವಿದ್ಯಾರ್ಥಿಗಳು ದಾಖಲಾಗಿದ್ದರು. ಆದರೆ ನಂತರದ ಬೆಳವಣಿಗೆಯಲ್ಲಿ ಆ ಎಲ್ಲಾ ವಿದ್ಯಾರ್ಥಿಗಳು ಮರಳಿ ಹೋಗಿದ್ದಾರೆ.

‘ಶಾಲೆಯಲ್ಲಿ ಶಿಕ್ಷಕರಿಲ್ಲದ ಕಾರಣ, ಸ್ವ ಇಚ್ಛೆಯಿಂದ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದೇವೆ’ ಎಂಬ ಪತ್ರವನ್ನು ಶಾಲೆಗೆ ನೀಡಿರುವ ಪಾಲಕರು, ಮಕ್ಕಳ ಟಿ.ಸಿ. ಪಡೆದಿದ್ದಾರೆ ಎಂದೆನ್ನಲಾಗಿದೆ.

*
ಕಡಿಮೆ ಫಲಿತಾಂಶದಿಂದಾಗಿ ಪಾಲಕರು ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ. ಸದ್ಯ ಇಬ್ಬರು ವಿದ್ಯಾರ್ಥಿಗಳಿದ್ದಾರೆ, ಮುಂದೆ ಹೆಚ್ಚಿನ ವಿದ್ಯಾರ್ಥಿಗಳು ಸೇರುವ ವಿಶ್ವಾಸವಿದೆ.
-ರಾಘವೇಂದ್ರ ಸುಹಾಸ್, ಐಜಿಪಿ, ಉತ್ತರ ವಲಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು