ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ್ಳೆಯವರಿಗೇ ಟಿಕೆಟ್‌ ಕೊಟ್ಟರೆ ಯಾವ ಕಷ್ಟ ಇಲ್ಲ

ರಾಜಕಾರಣದಲ್ಲಿ ಗಾಂಧಿ ತತ್ವ ಅಳವಡಿಕೆ ಸಾಧ್ಯ: ದತ್ತ
Last Updated 21 ಜನವರಿ 2019, 3:33 IST
ಅಕ್ಷರ ಗಾತ್ರ

ಧಾರವಾಡ: ರಾಜಕಾರಣದಲ್ಲಿ ಅಧಿಕಾರ ಮೋಹವನ್ನು ಕೈಬಿಟ್ಟು ಒಳ್ಳೆಯ ವ್ಯಕ್ತಿಗಳಿಗೇ ಟಿಕೆಟ್‌ ಕೊಡುವ ಹೊಸ ದಾರ್ಷ್ಟ್ಯ ಬೆಳೆದಾಗ, ಜನರೂ ಅಂತಹ ಪ್ರಯೋಗಗಳನ್ನು ಬೆಂಬಲಿಸಿ ಮತದಾನ ಮಾಡಿದಾಗ ಗಾಂಧೀಜಿಯ ಮೌಲ್ಯಗಳನ್ನು ರಾಜಕಾರಣದಲ್ಲಿ ಅಳವಡಿಸುವುದು ಕಷ್ಟವೇನಲ್ಲ ಎಂದು ಜೆಡಿಎಸ್‌ ಮುಖಂಡ ವೈ.ಎಸ್‌.ವಿ. ದತ್ತ ಹೇಳಿದರು.

‘ರಾಜಕಾರಣದಲ್ಲಿ ಗಾಂಧೀಜಿಯ ತಾತ್ವಿಕತೆಯನ್ನು ಜೀವಂತಗೊಳಿಸಿಕೊಳ್ಳಲು ಸಾಧ್ಯವೇ’ ಎಂಬ ವಿಷಯದ ಬಗ್ಗೆ ಸಾಹಿತ್ಯ ಸಂಭ್ರಮದಲ್ಲಿ ವಿಚಾರ ಮಂಡಿಸಿದ ಅವರು, ‘ಪ್ರಸ್ತುತ ರಾಜಕಾರಣದಲ್ಲಿ ಆಂತರಿಕ ಪ್ರಜಾಪ್ರಭುತ್ವ ಸತ್ತು ಹೋಗಿದೆ. ವ್ಯಕ್ತಿ ಕೇಂದ್ರಿತವಾಗಿ, ಜಾತಿ ಕೇಂದ್ರಿತವಾಗಿ ಪಕ್ಷಗಳುಟಿಕೆಟ್‌ ಹಂಚಿಕೆ ಮಾಡುವ ಪರಿಪಾಠ ಬೆಳೆದಿದೆ. ಎದುರಾಳಿ ಪಕ್ಷ ಗೂಂಡಾನೊಬ್ಬನಿಗೆ ಟಿಕೆಟ್‌ ಕೊಟ್ಟರೆ ಅದಕ್ಕಿಂತ ಹೆಚ್ಚು ಗೂಂಡಾಗಿರಿ ಸ್ವಭಾವ ಹೊಂದಿರುವವರಿಗೇ ಟಿಕೆಟ್‌ ನೀಡಬೇಕೇ ಎಂಬ ಯೋಚನೆ ಪಕ್ಷದೊಳಗೆ ನಡೆಯುತ್ತಿರುತ್ತದೆ. ಹೀಗಾದಾಗ ಪಕ್ಷ ಸಿದ್ಧಾಂತಕ್ಕೆ ನಿಷ್ಠ, ಪ್ರಾಮಾಣಿಕವಾಗಿರುವ ವ್ಯಕ್ತಿಗೆಟಿಕೆಟ್‌ ದೊರೆಯುವುದಿಲ್ಲ. ಪರಿಣಾಮವೆಂಬಂತೆ ರೆಸಾರ್ಟ್‌ ರಾಜಕಾರಣ ಎಂಬರೂಢಿ ಶುರುವಾಗಿದೆ’ ಎಂದರು.

ಬಿಜೆಪಿ ಮುಖಂಡ ವಾಮನಾಚಾರ್ಯ ಮಾತನಾಡಿ, ‘ಗಾಂಧೀಜಿಯ ವಿಚಾರಗಳು ಒಂದು ತಾತ್ವಿಕತೆಯಾಗಿ ಬಹಳ ಉತ್ತಮವಾದುದೇ. ಆದರೆ, ಅನುಸರಣೆಗೆ ಅನ್ವಯಿಸುವಂತೆ ಅದನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ. ಸಾರ್ವಕಾಲಿಕ ಸತ್ಯ ಎನ್ನುವುದು ಜಗತ್ತಿನಲ್ಲಿ ಯಾವುದೂ ಇಲ್ಲ. ಬ್ರಿಟಿಷ್‌ ಆಳ್ವಿಕೆ ಸಂದರ್ಭದಲ್ಲಿ ಶೋಷಣೆ ತಡೆಯಲು ಉದಯವಾದ ಗಾಂಧೀಜಿ ವಿಚಾರಧಾರೆ ಸ್ವಾತಂತ್ರ್ಯದ ಬಳಿಕ ಮತ್ತೆ ಮುಂದುವರಿಯಲಿಲ್ಲ. ಜವಾಹರಲಾಲ್ ನೆಹರೂ ಅವರೇ ಗಾಂಧೀ ವಿಚಾರಧಾರೆಗೆ ವಿರುದ್ಧವಾಗಿದ್ದರು. ಗಾಂಧೀಜಿ ವಿಚಾರಧಾರೆಗೆ ನಿರಂತರತೆ ಸಿಗಲಿಲ್ಲ. ಆದ್ದರಿಂದ ಕಾರ್ಯಸಾಧುವಾದ ಹೊಸ ವಿಚಾರಗಳನ್ನು ಪ್ರತಿಪಾದಿಸುವ ಹೊಸ ವ್ಯಕ್ತಿಯ ಶೋಧದಲ್ಲಿ ಭಾರತ ಇದೆ’ ಎಂದು ಹೇಳಿದರು.

ಗಾಂಧೀಜಿ ವಿಚಾರವನ್ನು ಈಗಿನ ರಾಜಕಾರಣದಲ್ಲಿ ಅಳವಡಿಸಿಕೊಳ್ಳುವುದು ಕಷ್ಟ ಅಥವಾ ಇಲ್ಲ ಎಂದೇ ಉತ್ತರಿಸುತ್ತ ಮಾತು ಶುರು ಮಾಡಿದ ಕಾಂಗ್ರೆಸ್‌ ಮುಖಂಡ ಪ್ರೊ ಬಿ.ಕೆ. ಚಂದ್ರಶೇಖರ್‌, ‘ಈಗ ನಡೆಯುತ್ತಿರುವ ರೆಸಾರ್ಟ್‌ ರಾಜಕಾರಣಕ್ಕೆ ಪತ್ರಿಕೆಗಳಲ್ಲಿ ವನ್ಯಜೀವಿಗಳಿಗೆ ಬಳಸುವ ಭಾಷೆಯನ್ನು ಬಳಸಲಾಗುತ್ತಿದೆ. ‘ಪೌಚಿಂಗ್‌’ ಮತ್ತು ಆ್ಯಂಟಿ ಪೌಚಿಂಗ್‌ ಸ್ಕ್ವಾಡ್‌ ’ ಎಂಬ ಪದಗಳನ್ನು ಬಳಸುವ ಸ್ಥಿತಿ ರಾಜಕಾರಣದಲ್ಲಿ ನಿರ್ಮಾಣವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ರಭುತ್ವ ಶಕ್ತಿಗಿಂತ ಆತ್ಮಶಕ್ತಿ ಹಾಗೂ ಅದರ ಪ್ರಕಟಗೊಳ್ಳುವಿಕೆ ಆದಾಗ ಸಿದ್ಧಾಂತ ಮತ್ತು ನಿಷ್ಠೆಯಿಂದ ಕೂಡಿದ ರಾಜಕಾರಣ ಸಾಧ್ಯ ಎಂದು ಗಾಂಧೀಜಿ ತೋರಿಸಿಕೊಟ್ಟಿದ್ದರು. ಹಣ ಮತ್ತು ಜಾತಿ ಬಲಕ್ಕಿಂತ ಪ್ರಧಾನವಾಗಿ ಈ ಸಿದ್ಧಾಂತ ಸ್ಥಾನ ಪಡೆಯಬೇಕು’ ಎಂದು ಅವರು ಆಶಿಸಿದರು.

ಕವನಗಳಲ್ಲೇ ತಮ್ಮ ವಿಚಾರ ಮಂಡಿಸಿದ ದತ್ತ

ಎಂದಿನ ಸರಳ ಶೈಲಿಯಲ್ಲಿಯೇ ಮಾತು ಶುರು ಮಾಡಿದ ವೈ.ಎಸ್‌.ವಿ ದತ್ತ ಅವರು ಜಿ.ಎಸ್‌. ಶಿವರುದ್ರಪ್ಪ, ಗೋಪಾಲಕೃಷ್ಣ ಅಡಿಗ, ಬೇಂದ್ರೆ ಮತ್ತು ವಚನವನ್ನು ಉದಾಹರಿಸುತ್ತ ತಮ್ಮ ಅನಿಸಿಕೆಯನ್ನು ಕೆಲವೇ ನಿಮಿಷಗಳಲ್ಲಿ ಮಂಡಿಸಿದರು.

‘...ಕತ್ತಿ ಕೋವಿ ಹಿಡಿಯಲಿಲ್ಲ, ಆದರೂ ಯುದ್ಧ ಮಾಡಿದೆ, ಎಲ್ಲರನ್ನೂ ಕಟ್ಟಿಕೊಂಡೆ, ಆದರೂ ಏಕಾಂಗಿಯಾಗಿದ್ದೆ, ಸಾಯುವಾಗ ಜನಗಣಮನ ಅಧಿನಾಯಕನಾದೆ’ ಎಂದು ಜಿಎಸ್‌ಎಸ್‌ ಕವನ ಹೇಳುತ್ತ ಗಾಂಧಿ ತತ್ವ ಪಾಲಿಸಲು ಕಾರ್ಯಸಾಧುವಾಗಿವೆ ಎಂದು ಪ್ರತಿಪಾದಿಸಿದರು.

ಅಡಿಗರ ‘ನನ್ನ ಅವತಾರ’ ಕವನ ಹೇಳುತ್ತ ಪುಡಾರಿಗಳ ಪಡಿಪಾಟಲು ಅನಾವರಣಗೊಳಿಸಿದರು. ‘....ಹಿಂಸೆ ಕೊನೆಗೆ ಅಹಿಂಸೆಯನ್ನು ಗುಂಡು ಹಾಕಿ ಕೊಂದಿತೊ’ ಎಂಬ ಬೇಂದ್ರೆಯ ಸಾಲುಗಳನ್ನು ಉದ್ಧರಿಸಿ ಮೌಲ್ಯಗಳ ಅಧೋಗತಿಯನ್ನು ವಿವರಿಸಿದರು. ಇಂದಿನ ರೆಸಾರ್ಟ್‌ ರಾಜಕಾರಣವನ್ನು ತಿವಿಯಲು ಜೇಡರದಾಸಿಮಯ್ಯ ಅವರ ವಚನ ಉಲ್ಲೇಖಿಸಿದ ಅವರು, ‘...ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯಿತು ಕಾಣಾ ರಾಮನಾಥ’ ಎನ್ನುತ್ತಿದ್ದಂತೆಯೇ ಸಭೆ ನಗೆಗಡಲಲ್ಲಿ ಮುಳುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT