20 ತಿಂಗಳಲ್ಲಿ 18 ಮಂದಿ ಸಾವು

7
ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಅವ್ಯವಸ್ಥೆ

20 ತಿಂಗಳಲ್ಲಿ 18 ಮಂದಿ ಸಾವು

Published:
Updated:
Deccan Herald

ಕುಶಾಲನಗರ: ಸೋಮವಾರಪೇಟೆ ತಾಲ್ಲೂಕಿನ ಮದಲಾಪುರ ಬಳಿಯ ಬ್ಯಾಡಗೊಟ್ಟ ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ 20 ತಿಂಗಳಲ್ಲಿ 18 ಮಂದಿ ಮೃತಪಟ್ಟಿರುವುದು ನಿರಾಶ್ರಿತರಲ್ಲಿ ಆತಂಕಕ್ಕೆ ಕಾರಣವಾಗಿದೆ.   

ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ದಿಡ್ಡಳ್ಳಿ ದೇವಮಚ್ಚಿ ಮೀಸಲು ಅರಣ್ಯ ಪ್ರದೇಶದಲ್ಲಿ 2017ರಲ್ಲಿ ವಸತಿ ಸೌಲಭ್ಯಕ್ಕಾಗಿ ಗಿರಿಜನರು ನಿರಂತರ ಪ್ರತಿಭಟನೆ ನಡೆಸಿದ್ದರು. ಈ ಹೋರಾಟ ರಾಜ್ಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.

ಬಳಿಕ ಗಿರಿಜನರ ಮನವೊಲಿಸಿದ್ದ ಜಿಲ್ಲಾಡಳಿತ ಬಸವನಹಳ್ಳಿ– ಬ್ಯಾಡಗೊಟ್ಟದಲ್ಲಿ ಪುನರ್ವಸತಿಗೆ ಜಾಗ ನೀಡಿತ್ತು. ಬಸವನಹಳ್ಳಿ
ಯಲ್ಲಿ 500, ಬ್ಯಾಡಗೊಟ್ಟದಲ್ಲಿ 1,500 ಮಂದಿ ತಾತ್ಕಾಲಿಕ ಶೆಡ್‌ಗಳಲ್ಲಿ ವಾಸಿಸುತ್ತಿದ್ದಾರೆ. ಇದೇ ಸ್ಥಳದಲ್ಲಿ ಮನೆ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ.

ಕಾಡು ಬಿಟ್ಟು ಊರು ಸೇರಿರುವ ಗಿರಿಜನರು, ಅಕ್ಕ‍ಪಕ್ಕದ ತೋಟ ಹಾಗೂ ಕುಶಾಲನಗರದ ಅಂಗಡಿಗಳಲ್ಲಿ ಕೂಲಿ ಕೆಲಸ ಮಾಡಿ ಬದುಕು ನಡೆಸುತ್ತಿದ್ದಾರೆ. ಆದರೆ, ಈ ಕೇಂದ್ರದಲ್ಲಿ ಪ್ರತಿ ತಿಂಗಳು ಒಂದೊಂದು ಸಾವು ಸಂಭವಿಸುತ್ತಿರುವುದು ನಿರಾಶ್ರಿತ ಸಮುದಾಯವೇ ಆತಂಕ
ಪಡುವಂತೆ ಮಾಡಿದೆ.

ಸ್ವಚ್ಛತೆ– ಆರೋಗ್ಯದ ಮೇಲಿನ ಕಾಳಜಿ ಕೊರತೆಯಿಂದ ಸಾವುಗಳು ಸಂಭವಿಸಿವೆ ಎಂಬ ಹೇಳುತ್ತಿದ್ದರೂ ಅಡವಿ ದೇವಿ ಆರಾಧಿಸುವ ಗಿರಿಜನರು ಮಾತ್ರ ಇದು ದೇವರ ಶಾಪವೆಂದು ನಂಬಿದ್ದಾರೆ.

ಗಿರಿಜನರು ಬ್ಯಾಡಗೊಟ್ಟಕ್ಕೆ ಬಂದು ಎರಡು ವರ್ಷ ಸಮೀಪಿಸುತ್ತಿದ್ದರೂ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ. ರಸ್ತೆ, ಚರಂಡಿ ಕಾಮಗಾರಿಗಳು ಅಪೂರ್ಣವಾಗಿವೆ. ಹೊಸ ಮನೆ ಸೇರುವ ಕನಸಿನಲ್ಲಿರುವ ನಿರಾಶ್ರಿತರು ಸರಣಿ ಸಾವಿನಿಂದ ಕಂಗಾಲಾಗಿದ್ದಾರೆ.

ಮೂಲ ಸ್ಥಳದತ್ತ ಗಿರಿಜನರು

ಯಡವನಾಡು ತೋಟದಲ್ಲಿ ಮರದಿಂದ ಬಿದ್ದು ಚೋಮ ಎಂಬುವರು ಮೊದಲು ಮೃತಪಟ್ಟಿದ್ದರು. ಈ ಘಟನೆ ಬಳಿಕ ಸರಣಿ ಸಾವುಗಳು ಸಂಭವಿಸಿವೆ.ಕೆಲವರು ಶಿಬಿರದ ಟೆಂಟ್‌ಗಳಲ್ಲಿ, ಮತ್ತೆ ಕೆಲವರು ಆಸ್ಪತ್ರೆಯಲ್ಲಿ ತೀರಿಕೊಂಡಿದ್ದಾರೆ. ಈಗ ಆತಂಕ ಹೆಚ್ಚಾಗಿದೆ. ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಂತೆಯೇ ಮೂಲ ಸ್ಥಳಗಳಾದ ತಿತಿಮತಿ, ಪಾಲಿಬೆಟ್ಟ, ಗೋಣಿಕೊಪ್ಪಕ್ಕೆ ಗಿರಿಜನರು ತೆರಳಿದ್ದಾರೆ. ಹೀಗಾಗಿ, ಪುನರ್ವಸತಿ ಸ್ಥಳದಲ್ಲಿ 354 ಕುಟುಂಬಗಳು ಮಾತ್ರ ನೆಲೆಸಿವೆ.

* ಮುನೇಶ್ವರ ದೇಗುಲ ಎದುರು ಶವ ಸಂಸ್ಕಾರ ಮಾಡಿದ್ದರ ಪರಿಣಾಮ ಇಂಥ ದುರ್ಘಟನೆಗಳು ನಡೆಯುತ್ತಿವೆ. ದೇವರಿಗೆ ಕಪ್ಪು ಕಾಣಿಕೆ ಅರ್ಪಿಸಿದ ಬಳಿಕ ಪರಿಸ್ಥಿತಿ ಸುಧಾರಿಸಿದೆ.
-ಮಲ್ಲಪ್ಪ, ಗಿರಿಜನ ಮುಖಂಡ, ಬ್ಯಾಡಗೊಟ್ಟ

* ಶಿಬಿರದಲ್ಲಿ ಸ್ವಚ್ಛತೆ, ಆರೋಗ್ಯ ಜಾಗೃತಿ ಮೂಡಿಸಲಾಗುತ್ತಿದೆ. ನಿರಂತರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಮೌಢ್ಯದಿಂದ ಹೊರತರುವ ಕೆಲಸ ಮಾಡುತ್ತೇವೆ.

-ಎಚ್.ಕೆ.ಶಾಂತಿ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ, ಸೋಮವಾರಪೇಟೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !