ಭಾನುವಾರ, ಡಿಸೆಂಬರ್ 8, 2019
22 °C

ಕಾಂಗ್ರೆಸ್ ಪಟ್ಟಿ: ಮುಂದುವರಿದ ಕಸರತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಅನರ್ಹ ಶಾಸಕರ ವಿಚಾರಣೆ ಬುಧವಾರಕ್ಕೆ ಮುಂದೂಡಿದ್ದು, ಅಂದು ಬರುವ ತೀರ್ಪು ನೋಡಿಕೊಂಡು ವಿಧಾನಸಭೆ ಉಪಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಕಾಂಗ್ರೆಸ್ ಮುಖಂಡರು ನಿರ್ಧರಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಮುಖಂಡರು ಸುದೀರ್ಘ ಚರ್ಚೆ ನಡೆಸಿದರು. ಚುನಾವಣೆ ನಡೆಯಲಿರುವ 15 ಕ್ಷೇತ್ರಗಳಿಗೂ ತಾತ್ಕಾಲಿಕ ಪಟ್ಟಿ
ಯನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದಾರೆ.

ಬೆಳಗಾವಿಯಲ್ಲಿ ಮಂಗಳವಾರ ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಅಲ್ಲಿಂದ ವಾಪಸ್ ಬಂದ ನಂತರ, ಕೋರ್ಟ್ ತೀರ್ಪು ನೋಡಿಕೊಂಡು ಪಟ್ಟಿಗೆ ಅಂತಿಮ ರೂಪ ನೀಡಲಿದ್ದಾರೆ. ಗುರುವಾರ ಪಕ್ಷದ ವರಿಷ್ಠರಿಗೆ ಪಟ್ಟಿ ಸಲ್ಲಿಸುವ ಸಾಧ್ಯತೆಗಳಿವೆ. ವರಿಷ್ಠರ ಒಪ್ಪಿಗೆ ಸಿಕ್ಕ ನಂತರ ಅಧಿಕೃತವಾಗಿ ಹೆಸರು ಪ್ರಕಟಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಕ್ಷೇತ್ರವಾರು ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲಾಗಿದ್ದು, ತಾತ್ಕಾಲಿಕ ಪಟ್ಟಿ ಸಿದ್ಧಪಡಿಸಲಾಗಿದೆ. ಮತ್ತೊಮ್ಮೆ ಚರ್ಚಿಸಿ ಪಟ್ಟಿ ಅಂತಿಮಗೊಳಿಸಲಾಗುತ್ತದೆ’ ಎಂದು ಮುಖಂಡರೊಬ್ಬರು ತಿಳಿಸಿದರು.

ಒಂದಾದ ಸಿದ್ದರಾಮಯ್ಯ, ಪರಮೇಶ್ವರ್

ಸಿದ್ದರಾಮಯ್ಯ ಕರೆದಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಹಾಗೂ ಇತರ ಸಭೆಗಳಿಂದ ಅಂತರ ಕಾಯ್ದುಕೊಂಡಿದ್ದ ಶಾಸಕ ಜಿ.ಪರಮೇಶ್ವರ ಅವರು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ಉಪಚುನಾವಣೆ ಸಂಬಂಧ ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಸಿದ್ದರಾಮಯ್ಯ, ಪರಮೇಶ್ವರ್ ಅಕ್ಕಪಕ್ಕ ಕುಳಿತಿದ್ದರು. ಇಬ್ಬರೂ ಪರಸ್ಪರ ಮಾತುಕತೆಯಲ್ಲಿ ತೊಡಗಿದ್ದು ಕಂಡುಬಂತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು