ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕಮಾಂಡ್ ತೀರ್ಮಾನಕ್ಕೆ ಬದ್ಧ: ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌

Last Updated 25 ಮೇ 2019, 18:42 IST
ಅಕ್ಷರ ಗಾತ್ರ

ಬೆಂಗಳೂರು: ‘ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷದ ಸೋಲಿನ ನೈತಿಕ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ. ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಇಷ್ಟು ಕಡಿಮೆ ಸೀಟು ಬರುತ್ತದೆ ಎಂದು ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ಸೋಲಿಗೆ ಹಲವು ಕಾರಣಗಳಿವೆ. ಆ ಎಲ್ಲ ಅಂಶಗಳ ಕುರಿತ ಸಮಗ್ರ ವರದಿಯನ್ನು ಎಐಸಿಸಿಗೆ ಸಲ್ಲಿಸುತ್ತೇನೆ’ ಎಂದರು.

‘ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷ ಸ್ಥಾನವನ್ನು ಪಕ್ಷ ನನಗೆ ನೀಡಿತ್ತು. ಚುನಾವಣೆಯಲ್ಲಿ ನಮ್ಮ ನಿರೀಕ್ಷೆ ತಲುಪಲು ನಮಗೆ ಸಾಧ್ಯವಾಗಿಲ್ಲ. ಜನರ ತೀರ್ಮಾನವನ್ನು ಒಪ್ಪಿಕೊಳ್ಳಲೇಬೇಕು. ರಾಜಕೀಯದಲ್ಲಿ ಸೋಲು, ಗೆಲುವು ಇರುತ್ತದೆ. ಸೋಲಿನಿಂದ ಧೃತಿಗೆಡುವ ಪ್ರಶ್ನೆಯೇ ಇಲ್ಲ. ನಮ್ಮ ಕಾರ್ಯಕ್ರಮ, ಸಿದ್ಧಾಂತ ಮುಂದುವರಿಯಲಿದೆ’ ಎಂದರು.

‘ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೀರಾ’ ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸದ ದಿನೇಶ್‌, ‘ನನಗೆ ಅಧಿಕಾರ ಮುಖ್ಯವಲ್ಲ. ಇದೇ ಕುರ್ಚಿಯಲ್ಲಿ ಕುಳಿತುಕೊಳ್ಳುವ ಬಯಕೆಯೂ ಇಲ್ಲ. ಶಿಷ್ಟಾಚಾರದ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ. ಎಲ್ಲ ಮಾಹಿತಿಯನ್ನು ಎಐಸಿಸಿಗೆ ರವಾನಿಸುತ್ತೇನೆ. ಏನು ಮಾಡಬೇಕೆಂದು ಹೈಕಮಾಂಡ್ ನಿರ್ಧರಿಸಲಿದೆ’ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ದಿನೇಶ್‌, ‘ಮೈತ್ರಿ ನಡುವೆ ಉತ್ತಮವಾಗಿ ಸಮನ್ವಯದಿಂದ ಕೆಲಸ ಮಾಡಿಕೊಂಡು ಹೋಗುತ್ತಿದ್ದರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬಹುದಿತ್ತು. ಮೈತ್ರಿ ಮುಂದುವರಿಸುವ ಜೊತೆಗೆ ಮತ್ತಷ್ಟು ಒಗ್ಗಟ್ಟಿನಿಂದ ಕೆಲಸ ಮಾಡಲು ಎರಡೂ ಪಕ್ಷಗಳ ನಾಯಕರು ಸಂಕಲ್ಪ ತೊಟ್ಟಿದ್ದೇವೆ’ ಎಂದರು.

ಪಕ್ಷದ ನಾಯಕರ ವಿರುದ್ಧ ರೋಷನ್‌ ಬೇಗ್‌ ನೀಡಿದ ಹೇಳಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ, ‘ಬೇಗ್‌ ಅವರಿಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ. ಅವರು ಉತ್ತರಿಸದೇ ಇದ್ದರೆ ಎಐಸಿಸಿ ಜೊತೆ ಚರ್ಚಿಸಿ ಶಿಸ್ತುಕ್ರಮ ತೆಗೆದುಕೊಳ್ಳುವ ಬಗ್ಗೆ ತೀರ್ಮಾನಿಸಲಾಗುವುದು’ ಎಂದರು.

‘ಪಕ್ಷದಲ್ಲಿ ಶಿಸ್ತು ಕಾಪಾಡುವುದು ಕೂಡಾ ಮುಂದಿನ ದಿನಗಳಲ್ಲಿ ಮುಖ್ಯ ಕಾರ್ಯಸೂಚಿಯಾಗಲಿದೆ. ಶಿಸ್ತು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು ಖಚಿತ’ ಎಂದೂ ದಿನೇಶ್ ಎಚ್ಚರಿಕೆ ನೀಡಿದರು.

29ರಂದು ಸಿಎಲ್‌ಪಿ ಸಭೆ

‘ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ (ಸಿಎಲ್‌ಪಿ) ಇದೇ 29ರಂದು ನಡೆಯಲಿದೆ. ಸಭೆಯಲ್ಲಿ ಸೋಲಿನ ಕುರಿತು ಗಂಭೀರ ಪರಾಮರ್ಶೆ ನಡೆಸುತ್ತೇವೆ. ಪ್ರತಿಯೊಬ್ಬ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸುತ್ತೇವೆ‘ ಎಂದು ದಿನೇಶ್‌ ಗುಂಡೂರಾವ್‌ ತಿಳಿಸಿದರು.

‘ಸದ್ಯದಲ್ಲೇ ಕೆಪಿಸಿಸಿ ಪದಾಧಿಕಾರಿಗಳ ಸಭೆಯನ್ನೂ ಕರೆಯಲಾಗುವುದು. ಪಕ್ಷ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಏನೇನು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂಬ ಬಗ್ಗೆಯೂ ತೀರ್ಮಾನಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT