ಕೆಪಿಸಿಸಿ ಈಗ ‘ಯಂಗ್ ಟರ್ಕ್’

7
ಬ್ರಾಹ್ಮಣ–ವೀರಶೈವ ಮಂತ್ರ: ಬಿಜೆಪಿ ಮತಕ್ಕೆ ಕೈಹಾಕುವ ತಂತ್ರ

ಕೆಪಿಸಿಸಿ ಈಗ ‘ಯಂಗ್ ಟರ್ಕ್’

Published:
Updated:

ಬೆಂಗಳೂರು: ಕೆಪಿಸಿಸಿ ಚುಕ್ಕಾಣಿಯನ್ನು ಯುವ ನೇತಾರರಾದ ದಿನೇಶ್‌ ಗುಂಡೂರಾವ್‌ ಹಾಗೂ ಈಶ್ವರ ಖಂಡ್ರೆ ಅವರ ಕೈಗಿಡಲು ಕಾಂಗ್ರೆಸ್‌ ಹೈಕಮಾಂಡ್‌ ಕೈಗೊಂಡ ನಿರ್ಧಾರದ ಹಿಂದೆ ಅದ್ಯಾವ ರಣತಂತ್ರ ಕೆಲಸ ಮಾಡಿದೆ?

ರಾಜ್ಯ ರಾಜಕೀಯ ವಲಯದಲ್ಲಿ ಸದ್ಯ ತೀವ್ರವಾಗಿ ಚರ್ಚೆಯಾಗುತ್ತಿರುವ ಪ್ರಶ್ನೆ ಇದು. ಲೋಕಸಭೆ ಚುನಾವಣೆ ಇನ್ನೇನು ಹೊಸ್ತಿಲಲ್ಲೇ ಇದೆ. ಪಕ್ಷವನ್ನು ‘ಮಹಾ ಸಮರ’ಕ್ಕೆ ಸನ್ನದ್ಧಗೊಳಿಸುವ ತುರ್ತಿರುವ ಹೊತ್ತಿನಲ್ಲಿ ಆ ಹೊಣೆಯನ್ನು ಹಿರಿತಲೆಗಳಿಗಿಂತ ಯುವ ನಾಯಕತ್ವಕ್ಕೆ ವಹಿಸಿಕೊಡುವುದೇ ಸೂಕ್ತ ಎನ್ನುವುದು ಹೈಕಮಾಂಡ್‌ ನಿಲುವಾಗಿದೆ. ಹೀಗಾಗಿ ಇಬ್ಬರೂ ಎಂಜಿನಿಯರಿಂಗ್‌ ಪದವೀಧರರಿಗೆ ಪಕ್ಷ ಕಟ್ಟುವ ಜವಾಬ್ದಾರಿಯನ್ನು ವಹಿಸಲಾಗಿದೆ.

ಈ ನೇಮಕದಿಂದ ಎಂಟು ವರ್ಷಗಳವರೆಗಿನ ಜಿ.ಪರಮೇಶ್ವರ ಅವರ ಆಧಿಪತ್ಯ ಕೊನೆಗೊಂಡಂತಾಗಿದೆ.

ಬ್ರಾಹ್ಮಣ ಹಾಗೂ ವೀರಶೈವ ಸಮುದಾಯಗಳು ಬಿಜೆಪಿಯ ಸಾಂಪ್ರದಾಯಿಕ ಮತಬುಟ್ಟಿಗಳು ಎನ್ನುವುದು ಸಾಮಾನ್ಯ ನಂಬಿಕೆ. ಇದೇ ಸಮುದಾಯಕ್ಕೆ ಸೇರಿದ ಯುವ ಮುಖಂಡರಿಗೆ ಪಕ್ಷದ ನಾಯಕತ್ವವನ್ನು ವಹಿಸಿಕೊಡುವ ನಡೆಯ ಹಿಂದೆ ಲೋಕಸಭಾ ಚುನಾವಣೆ ಕಾಲಕ್ಕೆ ‘ತಾವರೆ ಕೆರೆ’ಯಲ್ಲೂ ಮತಕ್ಕೆ ಗಾಳ ಹಾಕುವ ಉದ್ದೇಶ ಅಡಗಿದೆ ಎನ್ನುತ್ತಾರೆ ಪಕ್ಷದ ಮುಖಂಡರು.

ಕೆ.ಎಚ್‌. ಮುನಿಯಪ್ಪ, ಬಿ.ಕೆ. ಹರಿಪ್ರಸಾದ್‌, ಡಿ.ಕೆ. ಶಿವಕುಮಾರ್‌, ಎಚ್‌.ಕೆ. ಪಾಟೀಲ, ಟಿ.ಬಿ. ಜಯಚಂದ್ರ ಅವರಂತಹ ಘಟಾನುಘಟಿಗಳೆಲ್ಲ ಈ ಹುದ್ದೆಗೆ ಪ್ರಬಲ ಆಕಾಂಕ್ಷಿಗಳಾಗಿದ್ದರು. ಮುನಿಯಪ್ಪ ಹಾಗೂ ಪಾಟೀಲ ಅವರು ಇನ್ನೇನು ತಾವು ಅಧ್ಯಕ್ಷ ಗಾದಿಗೆ ಏರಿಯೇಬಿಟ್ಟೆವು ಎಂದೂ ನಂಬಿದ್ದರು. ಆದರೆ, ಕೊನೆಯ ಗಳಿಗೆಯಲ್ಲಿ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಬೇರೆಯದೇ ಆದ ದಾಳ ಉರುಳಿಸಿದ್ದಾರೆ.

ದಲಿತ ಸಮುದಾಯದ ಜಿ.ಪರಮೇಶ್ವರ ಉಪ ಮುಖ್ಯಮಂತ್ರಿಯಾದರೆ, ಕುರುಬ ಸಮುದಾಯದ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮಾಡಲಾಗಿದೆ. ಅಹಿಂದ ಮತಗಳು ಹೇಗೂ ಪಕ್ಷದ ಜತೆಗಿವೆ ಎಂದು ನಂಬಿರುವ ಮುಖಂಡರು, ಬೆಂಬಲದ ಹರವನ್ನು ವಿಸ್ತರಿಸುವತ್ತ ನೋಟ ಹರಿಸಿದ್ದಾರೆ.

ಚುನಾವಣೆಯಲ್ಲಿ ಪಕ್ಷದ ಪಾಲಿಗೆ ದೊಡ್ಡ ‘ಶಕ್ತಿ’ಯಾಗಿದ್ದ ಎಂ.ಬಿ. ಪಾಟೀಲ ಅವರ ಹೆಸರೂ ಈ ಹುದ್ದೆಗೆ ಪರಿಗಣನೆಯಲ್ಲಿ ಇತ್ತು. ಅವಕಾಶ ನೀಡಲು ರಾಹುಲ್‌ ಮುಂದಾದರೂ ಹಿಂದಿನ ನೀರಾವರಿ ಸಚಿವರು ಮಾತ್ರ ಮನಸ್ಸನ್ನು ಗಟ್ಟಿ ಮಾಡಿಕೊಳ್ಳಲಿಲ್ಲ ಎಂದು ಹೇಳಲಾಗುತ್ತಿದೆ. ಪಾಟೀಲರ ಬದಲು ಖಂಡ್ರೆ ಅವರಿಗೆ ಹೊಣೆಯನ್ನು ಹೊರೆಸಿದ್ದು, ವೀರಶೈವ ಸಮುದಾಯದ ವಿಶ್ವಾಸ ಗಳಿಸುವಲ್ಲಿ ಮಹತ್ವದ್ದಾಗಿದೆ ಎಂದು ಪಕ್ಷದ ಹಲವು ಶಾಸಕರು ಹೇಳುತ್ತಾರೆ. ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾಗಿರುವ ಖಂಡ್ರೆಯವರು ಲಿಂಗಾಯತ ಪ್ರತ್ಯೇಕ ಧರ್ಮ ರಚನೆಗೆ ವಿರುದ್ಧವಾದ ನಿಲುವು ಹೊಂದಿದ್ದಾರೆ. ಖಂಡ್ರೆ ನೇಮಕದ ಮೂಲಕ ಹೈಕಮಾಂಡ್ ಲಿಂಗಾಯತ ಧರ್ಮ ಒಡೆಯುವುದರ ಪರವಾಗಿ ನಿಂತಿಲ್ಲ ಎಂಬ ಸಂದೇಶ ರವಾನಿಸುವುದು ರಾಹುಲ್ ಅಪೇಕ್ಷೆ ಎಂದು ಮೂಲಗಳು ಹೇಳಿವೆ.

ದಿನೇಶ್‌ ಅವರಿಗೆ ಈಗ 48ರ ಹರೆಯ. ಸಣ್ಣ ವಯಸ್ಸಿನಲ್ಲೇ ಕಾರ್ಯಾಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ ಅನುಭವ ಅವರಿಗಿದೆ. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿಯೂ ಅವರು ಕೆಲಸ ಮಾಡಿದ್ದರು. ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಭಿನ್ನಮತ ಉಲ್ಬಣಗೊಂಡಿತ್ತು. ಪರಮೇಶ್ವರ ಅವರು ಉಪ ಮುಖ್ಯಮಂತ್ರಿಯಾಗಿ ಸರ್ಕಾರದ ಹೊಣೆಯಲ್ಲಿ ಬ್ಯುಸಿಯಾಗಿದ್ದಾಗ ಸಿದ್ದರಾಮಯ್ಯನವರು ಬಾದಾಮಿಯಲ್ಲಿ ವಾಸ್ತವ್ಯ ಹೂಡಿದ್ದರು. ಆ ಸಂದರ್ಭದಲ್ಲಿ ಭಿನ್ನಮತೀಯರ ಆಕ್ರೋಶ ಸ್ಫೋಟಗೊಳ್ಳದಂತೆ ದಿನೇಶ್‌ ಸಮನ್ವಯ ಸಾಧಿಸಿದ್ದರು. ಯಾವುದೇ ಬಣಗಳ ಜತೆ ಗುರುತಿಸಿಕೊಳ್ಳದೆ ಎಲ್ಲರನ್ನೂ ಜತೆಗೆ ಕರೆದೊಯ್ಯುವ ಗುಣ ಕೂಡ ಅವರ ನೆರವಿಗೆ ಬಂದಿದೆ.

ದಿನೇಶ್‌ ಅವರು ಎಲ್ಲ ಮುಖಂಡರ ಜತೆ ಒಡನಾಟ ಹೊಂದಿದ್ದಾರೆ ಎಂಬ ಭಾವನೆ ಪಕ್ಷದಲ್ಲಿದ್ದರೂ ಅವರಿನ್ನೂ ಕಿರಿಯರಾಗಿದ್ದಾರೆ; ಎಲ್ಲರೂ ಗೌರವ ನೀಡುವಂತಹ ಹಿರಿಯರಿಗೆ ಅಧ್ಯಕ್ಷ ಸ್ಥಾನ ಕೊಡಬೇಕು ಎಂಬ ವಾದ ಕೂಡ ಕೇಳಿ ಬಂದಿತ್ತು. ಆದರೆ, ಕೃಷ್ಣ ಬೈರೇಗೌಡ, ರಿಜ್ವಾನ್ ಅರ್ಷದ್‌ರಂತಹ ಕಿರಿಯರು ಸಹ ದಿನೇಶ್ ಪರ ಪ್ರಬಲ ಲಾಬಿ ನಡೆಸಿದ್ದರು.

ಅಧ್ಯಕ್ಷಗಿರಿಗೆ ಲಾಬಿ ನಡೆಸಿದ ಮುಖಂಡರು, ‘ಬ್ರಾಹ್ಮಣ ಸಮುದಾಯಕ್ಕೆ ಈಗಾಗಲೇ ಸಭಾಧ್ಯಕ್ಷ (ಕೆ.ಆರ್‌. ರಮೇಶಕುಮಾರ್‌) ಹಾಗೂ ಸಚಿವ ಸ್ಥಾನ (ಆರ್‌.ವಿ. ದೇಶಪಾಂಡೆ) ನೀಡಲಾಗಿದೆ. ಮತ್ತೆ ಅದೇ ಸಮುದಾಯಕ್ಕೆ ಈ ಸ್ಥಾನವನ್ನೂ ಕೊಡುವುದು ಬೇಡ. ಇದರಿಂದ ಉಳಿದ ಸಮುದಾಯಗಳಲ್ಲಿ ಅಸಮಾಧಾನಕ್ಕೆ ಕಾರಣವಾಗುತ್ತದೆ’ ಎಂದು ವಾದಿಸಿದ್ದರು. ಆದರೆ, ಎಐಸಿಸಿ ಅಧ್ಯಕ್ಷರು ಅದ್ಯಾವುದನ್ನೂ ಗಣನೆಗೆ ತೆಗೆದುಕೊಂಡಿಲ್ಲ. ಮೋದಿ ಸರ್ಕಾರದ ವಿರುದ್ಧ ದೊಡ್ಡ ಧ್ವನಿಯಲ್ಲಿ ಮಾತನಾಡುವ ದಿನೇಶ್‌ ಅವರನ್ನೇ ಸಾರಥಿಯನ್ನಾಗಿ ಆಯ್ದುಕೊಂಡಿದ್ದಾರೆ.

ಪ್ರತ್ಯೇಕ ಧರ್ಮದ ವಿಷಯವಾಗಿ ಮುನಿಸಿಕೊಂಡಿರುವ ವೀರಶೈವರನ್ನು ಪಕ್ಷದತ್ತ ಸೆಳೆಯಲು ಖಂಡ್ರೆ ಅವರ ನೇಮಕ ನೆರವಾಗಬಹುದು. ಅಲ್ಲದೆ ಹೈದರಾಬಾದ್‌–ಕರ್ನಾಟಕದಲ್ಲಿ ಪಕ್ಷದ ನೆಲೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಇದರಿಂದ ಸಾಧ್ಯವಾಗಲಿದೆ ಎಂಬ ನಂಬಿಕೆ ಹೈಕಮಾಂಡ್‌ಗೆ ಇದೆ.

****

ಇಬ್ಬರೂ ಯುವ ನಾಯಕರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ
ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ

****

ಪಕ್ಷ ಹಲವು ಸವಾಲುಗಳನ್ನು ಎದುರಿಸುತ್ತಿರುವ ಸನ್ನಿವೇಶದಲ್ಲಿ ಈ ಜವಾಬ್ದಾರಿ ಸಿಕ್ಕಿದೆ. ಎಲ್ಲರನ್ನೂ ಜತೆಗೂಡಿಸಿಕೊಂಡು ಪಕ್ಷ ಕಟ್ಟುತ್ತೇನೆ
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ನಿಯೋಜಿತ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 11

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !