ಶನಿವಾರ, ನವೆಂಬರ್ 23, 2019
17 °C
‘ವಿಜ್ಞಾನಿಗಳೊಂದಿಗೆ ಮಾತನಾಡಲು ಸಮಯವಿದೆ, ನೆರೆ ಸಂತ್ರಸ್ತರ ಅಳಲು ಕೇಳಲು ಇಲ್ಲ’

ರಾಜ್ಯದ ಜನರ ಅವಮಾನಿಸಿದ ಮೋದಿ: ಕಾಂಗ್ರೆಸ್‌

Published:
Updated:
Prajavani

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಸ್ರೊ ವಿಜ್ಞಾನಿಗಳೊಂದಿಗೆ ಮಾತನಾಡಲು ಸಮಯವಿದೆ, ನೆರೆ ಸಂತ್ರಸ್ತರ ಅಳಲು ಕೇಳಲು ಸಮಯ ಏಕಿಲ್ಲ? ರಾಜ್ಯಕ್ಕೆ ಬಂದೂ ಸಂತ್ರಸ್ತರ ಸಂಕಷ್ಟಗಳನ್ನು ನಿರ್ಲಕ್ಷಿಸಿದ ಪ್ರಧಾನಿ ಅವರು ರಾಜ್ಯಕ್ಕೆ ಅವಮಾನ ಮಾಡಿದ್ದಾರೆ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ (ಕೆಪಿಸಿಸಿ) ಅಧ್ಯಕ್ಷ ದಿನೇಶ್‌ ಗುಂಡೂರಾವ್ ಆರೋಪಿಸಿದರು.

‘ನೆರೆ ಸಂತ್ರಸ್ತರು ಮನೆ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಪ್ರಧಾನಿ ರಾಜ್ಯಕ್ಕೆ ಬಂದಾಗ ಅವರಿಗೆ ಮನವರಿಕೆ ಮಾಡುವುದಾಗಿ ಇಲ್ಲಿನ ಬಿಜೆಪಿ ನಾಯಕರು ಸುಳ್ಳು ಹೇಳುತ್ತಲೇ ಬಂದರು. ಪ್ರಧಾನಿ ಭೇಟಿಗೆ ನಮಗೂ ಅವಕಾಶ ಕೊಡಲಿಲ್ಲ’ ಎಂದು ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಪ್ರಧಾನಿ ಅವರು ಈ ಮೊದಲೇ ವೈಮಾನಿಕ ಸಮೀಕ್ಷೆ ನಡೆಸಬೇಕಿತ್ತು. ಈಗಲಾದರೂ ಅವರ ಮೇಲೆ ಸರಿಯಾಗಿ ಒತ್ತಡ ಹಾಕುವ ಕೆಲಸ ಮಾಡುತ್ತಿಲ್ಲ. ಈ ಸರ್ಕಾರಕ್ಕೆ ಕಣ್ಣು, ಮೂಗು ಏನೂ ಇಲ್ಲ. ನೆರೆ ಪರಿಹಾರ ಕೈಗೊಳ್ಳುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ವಿಫಲವಾಗಿವೆ’ ಎಂದು ಸಿದ್ದರಾಮಯ್ಯ ಆರೋಪಿಸಿದರು.

‘ರಾಜ್ಯ 25 ಜನ ಸಂಸದರನ್ನು ಕಳುಹಿಸಿದೆ. ಆದರೆ ಪ್ರಧಾನಿ ಮಾತ್ರ ರಾಜ್ಯವನ್ನು ತಾತ್ಸಾರ ಮನೋಭಾವದಿಂದ ನೋಡಿದಂತೆ ಕಾಣಿಸುತ್ತಿದೆ. ರಷ್ಯಾದ ಯಾವುದೋ ಮೂಲೆಗೆ ಒಂದು ದಶಲಕ್ಷ ಡಾಲರ್ ಸಾಲ (₹ 7.16 ಕೋಟಿ) ಘೋಷಣೆ ಮಾಡುತ್ತಾರೆ. ಆದರೆ ರಾಜ್ಯದ ವಿಚಾರದಲ್ಲಿ ಯಾಕೆ ಇಷ್ಟೊಂದು ಕ್ರೂರವಾಗಿ ನಡೆದುಕೊಳ್ಳುತ್ತಿದ್ದಾರೆ?’ ಎಂದು ದಿನೇಶ್‌ ಕೇಳಿದರು.

ಮನೆ ಕಳೆದಕೊಂಡ ಸಂತ್ರಸ್ತರಿಗೆ ₹10 ಲಕ್ಷ ಪರಿಹಾರ, 15 ಗುಂಟೆ ಜಮೀನು ಕೊಟ್ಟು ಪುನರ್ವಸತಿ, ತೆಂಗು, ಮೆಣಸು, ಅಡಿಕೆ, ಕಾಫಿ ಬೆಳೆ ನಾಶಕ್ಕೆ ಎಕರೆಗೆ ₹ 10 ಲಕ್ಷದ ವಿಶೇಷ ಪರಿಹಾರ ಪ್ಯಾಕೇಜ್‌ ಸಹಿತ ಪ್ರಧಾನಿ ಅವರಿಗೆ ಸಲ್ಲಿಸಲು ಸಿದ್ಧಪಡಿಸಿದ ವಿವಿಧ ಬೇಡಿಕಗಳನ್ನು ಅವರು ಮುಂದಿಟ್ಟರು.

ಸರ್ವ ಪಕ್ಷ ಸಭೆ ಕರೆಯಿರಿ: ‘ಕೇಂದ್ರದ ಜತೆ ಪರಿಹಾರವನ್ನು ನೀವು ಕೇಳುವುದಿಲ್ಲ, ನಮಗೆ ಕೇಳಲೂ ಬಿಡುವುದಿಲ್ಲ. ತಕ್ಷಣ ಸರ್ವ ಪಕ್ಷ ಸಭೆ ಕರೆಯಿರಿ ಇಲ್ಲವೇ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಿರಿ. ನೆರೆ ಪರಿಹಾರ ಕುರಿತಂತೆ ಚರ್ಚೆ ಆಗಲೇಬೇಕು’ ಎಂದು ಇಬ್ಬರೂ ಒತ್ತಾಯಿಸಿದರು.

‘ರಾಜೀನಾಮೆ ನೀಡಿರುವ ಐಎಎಸ್‌ ಅಧಿಕಾರಿ ದೇಶದ ಇಂದಿನ ಸ್ಥಿತಿಗತಿ ಬಗ್ಗೆ ಒಳ್ಳೆಯ ಸಂದೇಶ ನೀಡಿದ್ದಾರೆ. ಇಂದು ಎಲ್ಲಾ ಸಂಸ್ಥೆಗಳೂ ಹಾಳಾಗುತ್ತಿವೆ. ಎಲ್ಲಾ ಸಂಸ್ಥೆಗಳೂ ನಿಷ್ಕ್ರಿಯವಾಗಿವೆ. ಅವುಗಳು ಸರ್ಕಾರದ ಕಪಿಮುಷ್ಟಿಯಲ್ಲಿವೆ. ಸುಪ್ರೀಂ ಕೋರ್ಟ್‌ನನ್ಯಾಯಮೂರ್ತಿಗಳು ಬಹಿರಂಗವಾಗಿ ಪತ್ರಿಕಾಗೋಷ್ಠಿ ನಡೆಸಿದ್ದು ಇದೇ ಕಾರಣಕ್ಕಾಗಿ’ ಎಂದು ದಿನೇಶ್‌ ಹೇಳಿದರು.

ಚಂದ್ರಯಾನ–2 ಯೋಜನೆಯಲ್ಲಿ ಇಸ್ರೊ ವಿಜ್ಞಾನಿಗಳ ಸಾಧನೆಯನ್ನು ಅವರು ಪ್ರಶಂಸಿಸಿದರು.

ಪಕ್ಷದ ಸಂಘಟನೆ, ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರಗಳ ಬಗ್ಗೆ ಚರ್ಚಿಸಲು ಇದೇ 12ರಂದು ದೆಹಲಿಗೆ ಹೋಗುತ್ತಿರುವುದಾಗಿ ಅವರು ಹೇಳಿದರು.

‘ವಿನಯ ಕುಲಕರ್ಣಿ ಸಿಲುಕಿಸುವ ಯತ್ನ’

‘ಯೋಗೀಶ್ ಗೌಡ ಗೌಡರ್‌ ಹತ್ಯೆ ಪ್ರಕರಣ ಸಿಬಿಐಗೆ ವಹಿಸಿದ್ದು ಸಹ ದ್ವೇಷ ರಾಜಕಾರಣದ ಭಾಗ’ ಎಂದು ದಿನೇಶ್ ಗುಂಡೂರಾವ್‌ ಹೇಳಿದರು.

‘ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ವಿನಯ್ ಕುಲಕರ್ಣಿ ಅವರನ್ನು ಸಿಲುಕಿಸುವ ಯೋಜನೆ ಅವರದ್ದಾಗಿದೆ. ಅದಕ್ಕಾಗಿ, ಮುಗಿದುಹೋಗಿದ್ದ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ. ಗೌರಿ ಲಂಕೇಶ್‌ ಹತ್ಯೆ ಪ್ರಕರಣವನ್ನು ಭೇದಿಸಿರುವ ನಮ್ಮ ಪೊಲೀಸರಿಗೆ ಯೋಗೀಶ್‌ಗೌಡ ಕೊಲೆ ಬಗೆಹರಿಸಲಾಗದ ಪ್ರಕರಣವಾಗಿತ್ತೇ?’ ಎಂದು ಅವರು ಪ್ರಶ್ನಿಸಿದರು.

 

ಪ್ರತಿಕ್ರಿಯಿಸಿ (+)