ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅತೃಪ್ತಿ ಅದುಮಿಡುವುದು ಅಗತ್ಯ: ದಿನೇಶ್ ಗುಂಡೂರಾವ್

Last Updated 1 ಏಪ್ರಿಲ್ 2019, 7:52 IST
ಅಕ್ಷರ ಗಾತ್ರ

‘ಮೈತ್ರಿ’ ಅಭ್ಯರ್ಥಿಯ ಗೆಲುವು ಮುಖ್ಯ. ಈ ಕಾರಣಕ್ಕೆ, ಸದ್ಯಕ್ಕೆ ಸ್ಥಳೀಯ ನಾಯಕರು, ಕಾರ್ಯಕರ್ತರು ತಮ್ಮ ‌ಅತೃಪ್ತಿ, ಅಸಮಾಧಾನ ಅದುಮಿಟ್ಟುಕೊಳ್ಳುವುದು ಅನಿವಾರ್ಯ’ – ಹೀಗೆಂದವರು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌.

*ಕ್ಷೇತ್ರ ಹಂಚಿಕೆ ಬಳಿಕ ನಿಮ್ಮ ಪಕ್ಷದಲ್ಲಿ ತಲೆದೋರಿರುವ ಆಕ್ರೋಶ ತಣಿಸಲು ಏನು ಮಾಡುತ್ತೀರಿ?

ನಿಜ. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್‌ ಎದುರಾಳಿ. ಮೈತ್ರಿ ಅಂದಾಗ ಗೊಂದಲಗಳು ಸಹಜ. ಕೆಲವು ಕಡೆ ಸಣ್ಣಪುಟ್ಟ ಬಿರುಕು- ಭಿನ್ನಾಭಿಪ್ರಾಯಗಳಿವೆ. ಮಂಡ್ಯ, ಹಾಸನದಲ್ಲಿ ಸ್ವಲ್ಪ ಹೆಚ್ಚಿನದೇ ಗೊಂದಲ ಇದೆ. ಅದೆಲ್ಲ ತಣಿಯುವ ವಿಶ್ವಾಸವಿದೆ. ನಮ್ಮ ಹೊಂದಾಣಿಕೆ ಸಮ್ಮಿಶ್ರ ಸರ್ಕಾರದ ಸುಗಮ ನಡೆ ಮತ್ತು ಲೋಕಸಭೆ ಚುನಾವಣೆಗಷ್ಟೇ ಸೀಮಿತ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಇಲ್ಲ. ತಳಮಟ್ಟದ ಕಾರ್ಯಕರ್ತರಿಗೆ ಈ ಸಂದೇಶ ರವಾನಿಸಿದ್ದೇವೆ.

* ಕಾಂಗ್ರೆಸ್‌ ಪ್ರಬಲವಾಗಿರುವ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದರಿಂದ ಪಕ್ಷ ಸಂಘಟನೆಗೆ ಸಮಸ್ಯೆಯಲ್ಲವೇ?

ಮಂಡ್ಯ, ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ನಾವಿಬ್ಬರೂ ಸಮಬಲರಿದ್ದೇವೆ. ಉಡುಪಿ– ಚಿಕ್ಕಮಗಳೂರು, ಶಿವಮೊಗ್ಗ, ಉತ್ತರಕನ್ನಡ, ವಿಜಯಪುರದಲ್ಲಿ ಕಾಂಗ್ರೆಸ್ ಶಕ್ತಿ ಹೆಚ್ಚು. ಆದರೆ, ತುಮಕೂರು, ಕೋಲಾರ ಬಿಟ್ಟರೆ ಇತರ ಕ್ಷೇತ್ರಗಳನ್ನು ನಾವು ಇತ್ತೀಚೆಗೆ ಗೆದ್ದಿಲ್ಲ. ಮೈತ್ರಿ ಅಂದಾಗ ಕೊಡು– ಕೊಳ್ಳುವಿಕೆ ಅನಿವಾರ್ಯ. ಜೆಡಿಎಸ್‌ಗೆ ಬಿಟ್ಟುಕೊಟ್ಟ ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಕರ್ತರು ಹೊಂದಾಣಿಕೆಯ ರಾಜಕೀಯ ಪರವಾಗಿಲ್ಲ ಎನ್ನುವುದೂ ಸತ್ಯ. ಆದರೆ, ಮೈತ್ರಿ ಧರ್ಮ ಪಾಲಿಸಲೇಬೇಕಾಗಿದೆ. ಆ ದಾರಿಯಲ್ಲೇ ಕೆಲಸ ಮಾಡಬೇಕಿದೆ.

* ನಿಮ್ಮ ಸಂಸದರಿರುವ ತುಮಕೂರು ತ್ಯಾಗ ಮಾಡಬೇಕಾದ ಅನಿವಾರ್ಯ ಸೃಷ್ಟಿಯಾಗಿದ್ದು ಹೇಗೆ?

ಪಕ್ಷದ ಪ್ರಾಬಲ್ಯದ ಆಧಾರದಲ್ಲಿ ಕ್ಷೇತ್ರ ಹಂಚಿಕೊಂಡಿದ್ದೇವೆ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಕ್ಷೇತ್ರಗಳಲ್ಲಿ ಒಂದನ್ನು ಬಿಟ್ಟುಕೊಡುವಂತೆ ಜೆಡಿಎಸ್‌ ಮನವಿ ಮಾಡಿತ್ತು. ತುಮಕೂರು ಮತ್ತು ಮೈಸೂರಿನಲ್ಲಿ ಸಮಬಲವಿದೆ. ನಮ್ಮ ಸಂಸದರಿರುವ ಒಂದು ಕ್ಷೇತ್ರವನ್ನು ಬಿಟ್ಟುಕೊಡಲೇ ಬೇಕಿತ್ತು. ಹಾಗಾಗಿ ತುಮಕೂರು ಬಿಟ್ಟುಕೊಡುವುದು ಅನಿವಾರ್ಯವಾಯಿತು.

* ಅನಿವಾರ್ಯ ಎಂಬ ಕಾರಣಕ್ಕೆ ತಳಮಟ್ಟದ ಕಾರ್ಯಕರ್ತರನ್ನೇ ಕಡೆಗಣಿಸಿದಿರಲ್ಲವೇ?

ತಳಮಟ್ಟದ ಕಾರ್ಯಕರ್ತರೇ ಪಕ್ಷಕ್ಕೆ ಆಧಾರ. ಮೈತ್ರಿಯಿಂದ ನಮ್ಮ ಪಕ್ಷದ ಶಕ್ತಿಗುಂದಲಿದೆ ಎನ್ನುವುದು ಸರಿಯಲ್ಲ. ಜಾತ್ಯತೀತ ನಿಲುವು, ಕೋಮುವಾದದ ವಿರುದ್ಧದ ಧೋರಣೆಯಂತಹ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ನಮಗೂ ಜೆಡಿಎಸ್‌ಗೂ ಸಾಮ್ಯಗಳಿವೆ. ಉಪ ಚುನಾವಣೆಗಳಲ್ಲಿ ಜಂಟಿ ಸ್ಪರ್ಧೆಯಿಂದ ಉತ್ತಮ ಸಾಧನೆ ತೋರಿಸಲು ಸಾಧ್ಯವಾಯಿತು. ಕೋಮುವಾದಿ ಬಿಜೆಪಿಗೆ ಸೋಲುಣಿಸಿ ಹೆಚ್ಚು ಸ್ಥಾನ ಗೆಲ್ಲಬೇಕೆಂಬುದು ನಮ್ಮ ಗುರಿ.

* ಚುನಾವಣಾ ಪ್ರಚಾರ ಸಿದ್ಧತೆ ಹೇಗಿದೆ?

ಎಲ್ಲ ಜಿಲ್ಲೆಗಳಲ್ಲಿ ಜಂಟಿ ಸಮಾವೇಶ ಆಯೋಜಿಸುತ್ತೇವೆ. ಸಿದ್ದರಾಮಯ್ಯ, ಜಿ. ಪರಮೇಶ್ವರ ಹಾಗೂ ನಾನು ಪ್ರವಾಸ ಮಾಡುತ್ತೇವೆ. ರಾಷ್ಟ್ರೀಯ ನಾಯಕರೂ ಬರುತ್ತಾರೆ. ಕೇಂದ್ರ ಸರ್ಕಾರದ ವೈಫಲ್ಯಗಳು, ದೇಶದ ಇಂದಿನ ಸ್ಥಿತಿ, ಭವಿಷ್ಯದ ಚಿತ್ರಣವನ್ನು ಮತದಾರ ಮುಂದಿಡುತ್ತೇವೆ. ಈ ನಿಟ್ಟಿನಲ್ಲಿ ಸ್ಥಳೀಯಮಟ್ಟದ ಕಾರ್ಯಕರ್ತರಿಗೆ ತರಬೇತಿ ನೀಡಿದ್ದೇವೆ. ವಿಧಾನಸಭೆ ಚುನಾವಣೆಯಲ್ಲಿ ಕೊನೆ ಹಂತದಲ್ಲಿ ನಾವು ಎಡವಿದ್ದೆವು. ನಿರೀಕ್ಷೆಯಂತೆ ಪ್ರಚಾರ ಯೋಜನೆ ಕಾರ್ಯಗತಗೊಳಿಸಲು ಆಗಿರಲಿಲ್ಲ. ಆದರೆ, ಈ ಬಾರಿ ನಾವೇ ಮುಂಚೂಣಿಯಲ್ಲಿದ್ದೇವೆ.

* ಮೋದಿ ಎದುರಿಸಲು ರಫೇಲ್‌ ಅಸ್ತ್ರ ಒಂದೇ ಸಾಕೇ?

ರಫೇಲ್‌ ಒಂದೇ ಎಂದಲ್ಲ; ಆ ಹಗರಣವೂ ಮುಖ್ಯ. ‘ನಾ ಖಾವೂಂಗಾ, ನ ಖಾನೆ ದೂಂಗ’ ಎನ್ನುತ್ತಿದ್ದ ಮೋದಿಯವರ ನೆರಳಿನಲ್ಲೇ ನೀರವ್ ಮೋದಿ, ಮೇಹುಲ್‌ ಚೋಸ್ಕಿ ತಿಂದು, ತೇಗಿ ದೇಶ ಬಿಟ್ಟು ಹೋದರು. ರಕ್ಷಣಾ ಸಾಮಗ್ರಿಗಳ ಖರೀದಿ ವಿಚಾರದಲ್ಲಿ ಮಧ್ಯವರ್ತಿ ಇರಬಾರದು ಎಂದಿದ್ದರೂ ರಫೇಲ್‌ ಖರೀದಿಯಲ್ಲಿ ಮೋದಿ ಸಂಧಾನಕಾರರಾಗಿದ್ದಾರೆ. ಚೌಕೀದಾರ್‌ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾರೆ. ಎಚ್‌ಎಎಲ್‌ಗೆ ತಂತ್ರಜ್ಞಾನ ವರ್ಗಾವಣೆ ಆಗದಂತೆ ಅಡ್ಡಗಾಲು ಹಾಕಿದ್ದಾರೆ. ಒಂದು ವೇಳೆ ಇಂಥ ಆರೋಪ ಕಾಂಗ್ರೆಸ್ ಪ್ರಧಾನಿ ಮೇಲೆ ಬರುತ್ತಿದ್ದರೆ ಖಂಡಿತಾ ರಾಜೀನಾಮೆ ಕೊಡುತ್ತಿದ್ದರು.ಆದರೆ, ಮೋದಿ ತಮ್ಮ ಮೇಲಿನ ಆರೋಪಗಳನ್ನು ಒಪ್ಪಿಕೊಳ್ಳುವುದಕ್ಕೂ ತಯಾರಿಲ್ಲ.ಆದರೆ, ಸತ್ಯ ಹೊರಗೆ ಬಂದೇ ಬರುತ್ತದೆ.

* ಅಂದರೆ, ಮೋದಿ ಮೋಡಿ ಈ ಬಾರಿ ಕೆಲಸ ಮಾಡುವುದಿಲ್ಲವೇ?

ಎಲ್ಲಿದೆ ಮೋದಿ ಮೋಡಿ. ಅದೊಂದು ಭ್ರಮೆ- ಸೃಷ್ಟಿ. ಅವರೊಬ್ಬ ಮೋಡಿಗಾರ. ಸುಳ್ಳುಗಾರ. ಬೂಟಾಟಿಕೆಯ ಮಾತುಗಳೇ ಜಾಸ್ತಿ. ಸರ್ವಾಧಿಕಾರಿ ಧೋರಣೆ.ಇದು ಈ ದೇಶಕ್ಕೆ ಗಂಡಾಂತರಕಾರಿ. ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ಪುಲ್ವಾಮಾ ದಾಳಿ ಭದ್ರತಾ ವೈಫಲ್ಯದ ಫಲ.ಆದರೆ, ಅದನ್ನೇ ರಾಷ್ಟ್ರೀಯತೆ ಎಂದು ಬಿಂಬಿಸಿಕೊಂಡು ಜನರನ್ನು ಭಾವನಾತ್ಮಕವಾಗಿ ಕೆರಳಿಸಿ, ಪ್ರಚೋದಿಸುತ್ತಿದ್ದಾರೆ. ದೊಡ್ಡ ಭ್ರಮೆಯೊಂದನ್ನು ಸೃಷ್ಟಿ ಮಾಡಿದ್ದಾರೆ.

ಆದರೆ, ವಾಸ್ತವ ಬೇರೆಯೇ ಇದೆ. ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿರುವ ಮೋದಿ ಹಿಂದೆ ಜನ ಹೋಗಲ್ಲ ಎಂಬ ವಿಶ್ವಾಸವಿದೆ.

* ಮೋದಿ ವೈಫಲ್ಯಗಳನ್ನು ಹೊರತುಪಡಿಸಿ ಪ್ರಚಾರಕ್ಕೆ ಬೇರೆ ತಂತ್ರ ಏನು?

ಯುಪಿಎ ಅವಧಿಯಲ್ಲಿ ನೂರಾರು ಪ್ರಗತಿಪರ ಕಾರ್ಯಕ್ರಮಗಳನ್ನು ನೀಡಿದ್ದೇವೆ. ರಾಹುಲ್ ಈಗಾಗಲೇ ಘೋಷಿಸಿದ ಕನಿಷ್ಠ ಆದಾಯ ಯೋಜನೆ (ನ್ಯಾಯ್‌) ಸೇರಿದಂತೆ ಬೇರುಮಟ್ಟದ ಅಭಿವೃದ್ಧಿಗೆ ಒತ್ತು ನೀಡುವ ಭರವಸೆ ನಮ್ಮದು. ಸಿದ್ದರಾಮಯ್ಯ ಸರ್ಕಾರದ ಸಾಧನೆಯೂ ರಾಜ್ಯದಲ್ಲಿ ಶ್ರೀರಕ್ಷೆಯಾಗಲಿದೆ.

* ಫಲಿತಾಂಶ - ಪರಿಣಾಮದ ಬಗ್ಗೆ ಏನನ್ನುತ್ತೀರಿ?

ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆ ಖಚಿತ. ಅಧಿಕಾರದಾಹ, ಅಹಂಕಾರದ, ಸುಳ್ಳಿನ ಸರ್ಕಾರ ಇರುವುದಿಲ್ಲ. ಜನ ಭಾವನಾತ್ಮಕ ವಿಷಯಗಳಿಗೆ ಮರುಳಾಗುವುದಿಲ್ಲ. ಈ ಹಿಂದಿನ ಚುನಾವಣೆಯಲ್ಲಿ ಕ್ಲೀನ್‌ ಸ್ವೀಪ್‌ ಮಾಡಿದ ರಾಜ್ಯಗಳಲ್ಲಿ ಅವರು ಸ್ಥಾನಗಳನ್ನು ಕಳೆದುಕೊಳ್ಳುತ್ತಾರೆ. ಅವರ ಒಟ್ಟು ಸೀಟುಗಳ ಸಂಖ್ಯೆ ಶೇ 50ರಷ್ಟು ಕಡಿಮೆ ಆಗಲಿದೆ. ರಾಜ್ಯದಲ್ಲೂ ಆಪರೇಷನ್‌ ಕಮಲಕ್ಕೆ ತಡೆ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT