ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರ ಕಲ್ಯಾಣ: ದುರ್ಬಳಕೆಗೆ ಹಲವು ಮುಖ

Last Updated 3 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಕುಟುಂಬದವರ ನಿರ್ಲಕ್ಷ್ಯ, ಸಮಾಜದ ಕಡೆಗಣನೆ, ಅವಹೇಳನಗಳನ್ನು ಸಹಿಸಿ ಬದುಕಬೇಕಿರುವ ಅಂಗವಿಕಲರದ್ದು ಹೋರಾಟದ ಬದುಕು. ಶೋಷಣೆಗೆ ಕಡಿವಾಣ ಹಾಕಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅವರಿಗೆ ಕಾಯ್ದೆಯ ಬಲವಿದ್ದರೂ ಪ್ರಯೋಜನವಿಲ್ಲ ಎಂಬ ಪರಿಸ್ಥಿತಿಯ ಮೇಲೆ ಈ ವಾರದ ಒಳನೋಟ ಬೆಳಕು ಚೆಲ್ಲಿದೆ....

ಬೆಂಗಳೂರು: ಅಂಗವಿಕಲರ ಕಲ್ಯಾಣಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರಗಳು ದೊಡ್ಡ ಮೊತ್ತದ ಹಣ ವಿನಿಯೋಗಿಸುತ್ತಿವೆ. ಇದರ ಮೇಲೆ ಕಣ್ಣಿಟ್ಟಿರುವ ಧನದಾಹಿಗಳು, ಸೇವೆ ಹೆಸರಿನಲ್ಲಿ ಸಂಸ್ಥೆಗಳನ್ನು ಸೃಷ್ಟಿಸಿ, ಇಲ್ಲದ ವಿದ್ಯಾರ್ಥಿಗಳನ್ನು ದಾಖಲೆಗಳಲ್ಲಿ ತೋರಿಸಿ, ಕಾರ್ಯಕ್ರಮಗಳನ್ನು ನಡೆಸಿದಂತೆ ದಾಖಲೆ ಸೃಷ್ಟಿಸಿ ಹಣದ ವಂಚನೆ ಆಗುತ್ತಿದೆ.

ಕರ್ನಾಟಕದ ಮಹಾಲೇಖಪಾಲರ, ಲೆಕ್ಕಪರಿಶೋಧಕರ 2017ರ ವರದಿಯಲ್ಲಿಯೂ ದುರ್ಬಳಕೆ ಮತ್ತು ಯೋಜನೆಗಳ ಜಾರಿಯಲ್ಲಿನ ಲೋಪಗಳು ಉಲ್ಲೇಖವಾಗಿವೆ. ವರದಿಯ ಅನುಸಾರ, ಸರ್ಕಾರದ ಅನುದಾನ ಪಡೆದು ಸೇವಾ ಸಂಸ್ಥೆಗಳು ನಡೆಸುತ್ತಿರುವ ಅನೇಕ ಶಾಲೆಗಳಲ್ಲಿ ಮೂಲಸೌಲಭ್ಯಗಳ ಕೊರತೆ ಇದೆ. ಆಟದ ಮೈದಾನ, ದೃಶ್ಯ ಮತ್ತು ಶ್ರವಣ ಪರಿಕರವುಳ್ಳ ಗ್ರಂಥಾಲಯ, ಅಂಗವಿಕಲರು ತಮ್ಮ ವಸ್ತುಗಳನ್ನು ಇಟ್ಟುಕೊಳ್ಳಲು ಅಲ್ಮೆರಾ ಸೌಲಭ್ಯ, ಕುರ್ಚಿ, ಟೇಬಲ್, ಹಾಸಿಗೆ, ಮಂಚ, ಊಟದ ಮನೆ, ಪ್ರತ್ಯೇಕ ವಸತಿ ವ್ಯವಸ್ಥೆ ಇತ್ಯಾದಿ ಸೌಲಭ್ಯಗಳು ಹೆಚ್ಚಿನ ಶಾಲೆಗಳಲ್ಲಿ ಇರಲಿಲ್ಲ.

6 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಶಿಕ್ಷಣ ಒದಗಿಸಲು ರಾಜ್ಯ ಸರ್ಕಾರದ ಅಂಗವಿಕಲ ಮಕ್ಕಳ ಕೇಂದ್ರೀಕೃತ ವಿಶೇಷ ಶಿಕ್ಷಣ ಯೋಜನೆಯಡಿ, ನೋಂದಾ ಯಿತ ಎನ್.ಜಿ.ಒಗಳು ಶಾಲೆ ನಡೆಸಲು ಸರ್ಕಾರ ಅನುದಾನ ನೀಡುತ್ತಿದೆ. ಅನುದಾನ ಕಾಲಕಾಲಕ್ಕೆ ಪರಿಷ್ಕೃತವಾಗಲಿದೆ.

2010ರಲ್ಲಿ ಯೋಜನೆ ಆರಂಭವಾದಾಗ ‘ಡೇ ಸ್ಕಾಲರ್’ ಮಕ್ಕಳಿಗೆ ಪ್ರತಿ ತಿಂಗಳಿಗೆ, ಪ್ರತಿ ವಿದ್ಯಾರ್ಥಿಗೆ ₹ 4,000, ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಈ ಮೊತ್ತ 5,000 ನಿಗದಿಯಾಗಿತ್ತು. ಪ್ರಸ್ತುತ ಸುಮಾರು 150ಕ್ಕೂ ಹೆಚ್ಚು ಇಂಥ ಶಾಲೆಗಳಿಗೆ ಅನುದಾನ ನೀಡಲಾಗುತ್ತಿದೆ.

ಆದರೆ ವೆಚ್ಚ ಕುರಿತ ಲೆಕ್ಕಪರಿಶೋಧನೆ ಆಗಿಲ್ಲ ಎಂಬ ಅಂಶ ವರದಿಯಲ್ಲಿ ಉಲ್ಲೇಖವಾಗಿದೆ. ಶಾಲೆಗಳಿಗೆ ತೆರಳಿ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಆದರೆ, ಸರ್ಕಾರಕ್ಕೆ ಕ್ರಮಕೈಗೊಂಡ ಕುರಿತು ದಾಖಲೆಗಳನ್ನು ಸಲ್ಲಿಸಿಲ್ಲ. ಹಣ ದುರ್ಬಳಕೆಯ ವಾಸನೆ ಗುರುತಿಸಿ ಸಿಎಜಿ ತನ್ನ ವರದಿಯಲ್ಲಿ ಈ ಶಾಲೆಗಳಿಗೂ ಎಸ್.ಡಿ.ಎಂಸಿ ಮಾದರಿಯಲ್ಲಿ ನಿರ್ವಹಣಾ ಸಮಿತಿ ರಚಿಸಬೇಕು ಎಂದು ಸಲಹೆ ಮಾಡಿತ್ತು.

* ಬೆಳಗಾವಿಯಲ್ಲಿ ಅಂಗವಿಕಲರ ವಸತಿ ಶಾಲೆ ಇರುವುದು ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ. ಶಾಲೆಯಲ್ಲಿರುವುದು ಎರಡೇ ಶೌಚಾಲಯ. ಅದೂ, ಹೊರ ಆವರಣದಲ್ಲಿ. ಈ ಶಾಲೆಗೆ 2015-16ರವರೆಗೆ ಹಿಂದಿನ ಮೂರು ವರ್ಷಗಳಲ್ಲಿ ಬಿಡುಗಡೆ ಆಗಿದ್ದ ಅನುದಾನ ₹ 43.06 ಲಕ್ಷ.

* ಕೆಂಗೇರಿಯಲ್ಲಿರುವ ವಸತಿ ಶಾಲೆಯೊಂದರಲ್ಲಿ ದಾಖಲೆ ಪ್ರಕಾರ 57 ವಿದ್ಯಾರ್ಥಿಗಳಿದ್ದರು. ಅಧಿಕಾರಿಗಳು ಪರಿಶೀಲಿಸಿದಾಗ ನಾಲ್ವರು ಸದಸ್ಯರ ಕುಟುಂಬವೂ ನೆಲೆಸಿದ್ದುದು ಪತ್ತೆಯಾಗಿತ್ತು. ಕಲಿಕೆಗೆ ಬೇಕಾದ ಕುರ್ಚಿ, ಮೇಜುಗಳು ಇರಲಿಲ್ಲ. ಈ ಶಾಲೆಗೆ ಮೂರು ವರ್ಷಗಳಲ್ಲಿ ಮಂಜೂರಾಗಿದ್ದ ಅನುದಾನ ₹ 26.50 ಲಕ್ಷ.

* ಬೆಂಗಳೂರಿನ ಮಂಡೂರು ಗ್ರಾಮದಲ್ಲಿನ ಬುದ್ದಿಮಾಂದ್ಯರ ವಸತಿ ಶಾಲೆಯಲ್ಲಿ ತರಗತಿಗಳು ಇದ್ದುದು ಮೊದಲ ಮಹಡಿಯಲ್ಲಿ. ಹಗಲಿನ ಹೊತ್ತು ತರಗತಿಗಳು ನಡೆದರೆ ರಾತ್ರಿ ಅದು ಡಾರ್ಮಿಟರಿ ಆಗಿ ಪರಿವರ್ತನೆ ಆಗುತ್ತಿತ್ತು. ವಸತಿ ಶಾಲೆ ಆಗಿದ್ದರೂ ಹಾಸಿಗೆ, ಮಂಚ, ಉಣ್ಣೆ ಹೊದಿಕೆ, ಗ್ರಂಥಾಲಯ, ಮಕ್ಕಳಿಗೆ ಆಟೋಟ ತಾಣ ಸಹಿತ ಅಗತ್ಯ ಮೂಲ ಸೌಲಭ್ಯವೂ ಇರಲಿಲ್ಲ. ಹಾಜರಿಯಲ್ಲಿ ಇದ್ದ ಮಕ್ಕಳ ಸಂಖ್ಯೆ 88. ಅಧಿಕಾರಿಗಳ ಭೇಟಿ ವೇಳೆ ಕಂಡು ಬಂದಿದ್ದು 50 ಮಾತ್ರ. ಈ ಶಾಲೆಗೆ ಸರ್ಕಾರ 2015-16ರವರೆಗೆ ಮೂರು ವರ್ಷಗಳಲ್ಲಿ ಬಿಡುಗಡೆ ಮಾಡಿದ್ದ ಅನುದಾನ ₹ 100.13 ಲಕ್ಷ.

* ವಿಜಯಪುರದ ಜಾಲ್ಕಿಯಲ್ಲಿರುವ ವಸತಿ ಶಾಲೆಯದ್ದೂ ಇದೇ ಪರಿಸ್ಥಿತಿ. 1 ರಿಂದ 7ನೇ ತರಗತಿವರೆಗಿನ ಮಕ್ಕಳಿರುವ ಶಾಲೆಯಲ್ಲಿ ಇದ್ದಿದ್ದು ನಾಲ್ಕು ಕೊಠಡಿಗಳು. ಹಗಲಿನ ಹೊತ್ತು ತರಗತಿ, ರಾತ್ರಿ ಡಾರ್ಮೆಟರಿ. ಹತ್ತಿರದ ಸರ್ಕಾರಿ ಶಾಲೆಯ ಶೌಚಾಲಯವನ್ನೇ ಈ ಮಕ್ಕಳು ಬಳಕೆ ಮಾಡುತ್ತಿದ್ದರು. ಹಾಜರಿಯಲ್ಲಿ 75ಮಕ್ಕಳಿದ್ದರೂ ಪರಿಶೀಲಿಸಿದಾಗ ಕಂಡುಬಂದಿದ್ದು 44 ಮಕ್ಕಳಷ್ಟೇ. ಮೂರು ವರ್ಷಗಳಲ್ಲಿ ಈ ಶಾಲೆಗೆ ಬಿಡುಗಡೆಯಾಗಿದ್ದ ಅನುದಾನ ₹ 25.49 ಲಕ್ಷ.

* ಕಲಬುರ್ಗಿಯ ಅಫಜಲಪೂರ ಶಾಲೆಯಲ್ಲಿ 1,250 ಚದರ ಅಡಿಯ ಕಟ್ಟಡದಲ್ಲಿ ದಾಖಲೆ ಪ್ರಕಾರ 72 ವಿದ್ಯಾರ್ಥಿಗಳಿಗೆ ಆಶ್ರಯ ನೀಡಲಾಗಿತ್ತು. ಪರಿಶೀಲನೆ ನಡೆಸಿದಾಗ ಕಂಡುಬಂದುದು 23 ವಿದ್ಯಾರ್ಥಿಗಳು ಮಾತ್ರ. ಶಾಲೆಗೆ 3 ವರ್ಷಗಳಲ್ಲಿ ಬಿಡುಗಡೆ ಯಾದ ಅನು ದಾನ ₹ 52.80 ಲಕ್ಷ.

ಅಂಗವಿಕಲರಿಗೆ ಹಲವು ಯೋಜನೆಗಳು ಪರಿಣಾಮಕಾರಿಯಾಗಿ ತಲುಪುವುದೆಷ್ಟು?

ಅಂಗವಿಕಲರ ಏಳಿಗೆಗಾಗಿ ಇರುವ ಯೋಜನೆಗಳನ್ನು ಐದು ಭಾಗವಾಗಿ ಇಲಾಖೆ ವಿಂಗಡಿಸಲಿದೆ. ಅವುಗಳು.

1. ಶೈಕ್ಷಣಿಕ,

* ಶ್ರವಣದೋಷವುಳ್ಳ ಮಕ್ಕಳಿಗೆ ವಿಶೇಷ ಶಾಲೆಗಳು

* ದೃಷ್ಟಿದೋಷವುಳ್ಳ ಮಕ್ಕಳಿಗಾಗಿ ವಿಶೇಷ ಶಾಲೆಗಳು

* ಅಂಗವಿಕಲ ಮಕ್ಕಳ ಕೇಂದ್ರೀಕೃತ ವಿಶೇಷ ಶೈಕ್ಷಣಿಕ ಯೋಜನೆ

* ಅನುದಾನಿತ ವಿಶೇಷ ಶಾಲೆಗಳು

* ಅಂಗವಿಕಲ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಪ್ರೋತ್ಸಾಹಧನ ಯೋಜನೆ

* ಉನ್ನತ ಶಿಕ್ಷಣ ಪಡೆಯಲು ಶುಲ್ಕ ಮರುಪಾವತಿ ನೆರವು

* ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ಲ್ಯಾಪ್ ಟಾಪ್.

* ಉಪಗ್ರಹ ಆಧಾರಿತ ಶಿಕ್ಷಣ

* ಬ್ರೈಲ್ ಮುದ್ರಣಾಲಯ

* ವಿಶೇಷ ಶಿಕ್ಷಕರ ತರಬೇತಿ ಕೇಂದ್ರ

2. ಉದ್ಯೋಗ ಮತ್ತು ತರಬೇತಿ

* ಸರ್ಕಾರಿ ಹುದ್ದೆಗಳಲ್ಲಿ ಸಿ ಮತ್ತು ಡಿ ವೃಂದದಲ್ಲಿ ಶೇ 5, ಎ ಮತ್ತು ಬಿ ವೃಂದದಲ್ಲಿ ಶೇ 4ರಷ್ಟು ಮೀಸಲಾತಿ.

* ಅಂಗವಿಕಲರ ನೌಕರರು, ತರಬೇತುದಾರರಿಗೆ ವಸತಿ ನಿಲಯ

* ನಿರುದ್ಯೋಗ ಭತ್ಯೆ

* ಉದ್ಯೋಗ ಕೋಶ

3. ಪುನರ್ವಸತಿ ಯೋಜನೆಗಳು

* ಸಾಧನ, ಸಲಕರಣೆಗಳ ಪೂರೈಕೆ

* ಯಂತ್ರಚಾಲಿತ ದ್ವಿಚಕ್ರವಾಹನ

* ಅಂಗವಿಕಲತೆ ಕಡಿಮೆ ಮಾಡಲು ವೈದ್ಯಕೀಯ ನೆರವು

* ಜಿಲ್ಲಾ, ಗ್ರಾಮೀಣ ಮಟ್ಟದಲ್ಲಿ ಪುನರ್ವಸತಿ ಕೇಂದ್ರ

* ಮಂದಮತಿ ಮಹಿಳೆಯರ ಅನುಪಾಲನಾ ಗೃಹ

* ಅಂಗವಿಕಲರ ಪುರುಷ, ಮಹಿಳೆಯರ (ತರಬೇತಿದಾರರ) ವಸತಿ ನಿಲಯಗಳು

4. ಸಾಮಾಜಿಕ ಭದ್ರತಾ ಯೋಜನೆಗಳು

* ಪೋಷಣಾ ಭತ್ಯೆ,. ಶೇ 40 ಅಂಗವಿಕಲತೆ ಇದ್ದಲ್ಲಿ ಮಾಸಿಕ ರೂ. 600, ಶೇ 75ಕ್ಕಿಂತ ಹೆಚ್ಚಿದ್ದರೆ ಮಾಸಿಕ ರೂ. 1,400

* ಅಂಗವಿಕಲರಿಗೆ ಗುರುತಿನ ಚೀಟಿ ನೀಡುವ ಯೋಜನೆಸ

* ಮಾನಸಿಕ ಅಸ್ವಸ್ಥರಿಗೆ ಆರೈಕೆಗಾಗಿ ಬೆಂಗಳೂರು, ಬೆಳಗಾವಿಯಲ್ಲಿ ಮಾನಸ ಕೇಂದ್ರಗಳು

* ಮಾಹಿತಿ ಮತ್ತು ಸಲಹಾ ಕೇಂದ್ರ

* ಬುದ್ದಿಮಾಂದ್ಯ ತಂದೆ, ತಾಯಿ ಪೋಷಕರಿಗೂ ವಿಮೆ ಸೌಲಭ್ಯ

* ಅಂಗವಿಕಲರನ್ನು ಮದುವೆಯಾದ ಸಾಮಾನ್ಯರಿಗೆ ಪ್ರೋತ್ಸಾಹ ಧನ ನೀಡುವುದು.

ಇಲ್ಲದ ಸಂಸ್ಥೆ ಹೆಸರಿನಲ್ಲಿ 500 ರಸೀದಿ

ಅಂಗವಿಕಲರ ಸೌಲಭ್ಯಗಳ ದುರ್ಬಳಕೆ ಆಗುತ್ತಿರುವ ಪ್ರಮುಖ ಕ್ಷೇತ್ರ ಕ್ರೀಡೆ. ಕ್ರೀಡೆ ಆಯೋಜಿಸುವ, ಕ್ರೀಡಾ ಪರಿಕರಗಳನ್ನು ವಿತರಿಸುವ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ದುರ್ಬಳಕೆ ಆಗುತ್ತಿದೆ. ಬಿಲ್ ಮಂಜೂರಿಗೆ ಅಧಿಕಾರಿಗಳಿಗೆ ಬೇಕಿರುವುದು ರಸೀದಿ ಮಾತ್ರ. ಸಂಸ್ಥೆಯ ಅಸ್ತಿತ್ವ ಗಣನೆಗೆ ಬರುವುದಿಲ್ಲ.

ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಾಧನೆ, ಮತ್ತು ಪ್ರತಿಭೆ ಯೋಜನೆಯಡಿ ಕ್ರೀಡೆಗೆ ಉತ್ತೇಜನ ನೀಡಲಿದೆ. ಕ್ರೀಡೆಗಳ ಆಯೋಜನೆ, ಪರಿಕರ ವಿತರಿಸಲು ನೆರವು ನೀಡಲಿದೆ.

ಕೆಂಗೇರಿಯಲ್ಲಿರುವ ಸಿ.ಕೆ.ರೇಮಂಡ್ ಸ್ಪೋರ್ಟ್ ವೇರ್ ಮತ್ತು ಕೆಂಗೇರಿ ಉಪನಗರದಲ್ಲಿರುವ ಬೂಟ್ ಬಜಾರ್ ಮಳಿಗೆಗಳ ಹೆಸರಿನಲ್ಲಿ 2017ರಲ್ಲಿಯೇ ಇಲಾಖೆಗೆ ಈ ಎರಡು ಅಂಗಡಿಗಳಿಂದಲೇ ಸುಮಾರು 500 ರಸೀದಿಗಳನ್ನು ಪಡೆದು ಸಲ್ಲಿಸಲಾಗಿತ್ತು.

ದುರ್ಬಳಕೆ ವಾಸನೆ ಹಿಡಿದ ಅಧಿಕಾರಿಗಳು ಅಂಗಡಿಯನ್ನು ಪತ್ತೆ ಮಾಡಲು ಹೋಗಿದ್ದರು. ಉಲ್ಲೇಖಿತ ವಿಳಾಸದಲ್ಲಿ ಈ ಹೆಸರಿನ ಅಂಗಡಿಗಳೇ ಇರಲಿಲ್ಲ ಎಂಬುದು ಕಂಡುಬಂತು ಅಂತಿಮವಾಗಿ ಅಂಗಡಿಯನ್ನು ಪತ್ತೆ ಮಾಡಿಕೊಡಿ ಎಂದು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು, ಅಂಥ ಹೆಸರಿನ ಯಾವುದೇ ಅಂಗಡಿಗಳು ಉಲ್ಲೇಖಿತ ವಿಳಾಸದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಇಲ್ಲ ಎಂದು ಷರಾ ಬರೆದು ವರದಿ ನೀಡಿದ್ದರು.

ಯುಡಿಐಡಿ: ಅಕ್ರಮಗಳಿಗೆ ಕಡಿವಾಣ ಹಾಕುವುದೇ?

ಅಂಗವಿಕಲ ಫಲಾನುಭವಿಗಳನ್ನು ಗುರುತಿಸುವಲ್ಲಿ, ಕೇಂದ್ರೀಕೃತ ದಾಖಲಾತಿ ಹಾಗೂ ಏಕರೂಪ ವ್ಯವಸ್ಥೆ ಇಲ್ಲದಿರುವುದೇ ಸದ್ಯ ಬಹುತೇಕ ಭ್ರಷ್ಟಾಚಾರ ಕಾರ್ಯಗಳಿಗೆ ಹೆದ್ದಾರಿ ಆಗಿತ್ತು. ಈಗ ಇಂಥ ಪ್ರವೃತ್ತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅರ್ಹ ಅಂಗವಿಕಲರಿಗೆ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) ನೀಡುವ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ.

ಆಧಾರ್ ಕಾರ್ಡ್ ಮಾದರಿಯಲ್ಲಿ ಅಂಗವಿಕಲರಿಗೆ ನೀಡುವ ವಿಶಿಷ್ಟ ಗುರುತು ಪತ್ರ ಯುಡಿಐಡಿ. ಕೇಂದ್ರದ ಈ ಯೋಜನೆ ಜಾರಿಗೆ ರಾಜ್ಯದಲ್ಲಿ ಅಂಗವಿಕಲರ ಕಲ್ಯಾಣ ಇಲಾಖೆಯ ನೋಡಲ್ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಲಿದೆ. ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಯ ಸಹಯೋಗ ಪಡೆಯಲಾಗುತ್ತದೆ.

ಅಂಗವಿಕಲರ ಅಂಗವಿಕಲತೆ ಸ್ವರೂಪ, ಪ್ರಮಾಣ ಕುರಿತು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ವಿಶಿಷ್ಟ ಗುರುತು ಚೀಟಿ, ಸಂಖ್ಯೆ ನೀಡಲಾಗುತ್ತದೆ. ಪೂರ್ಣ ವಿವರ ಕೇಂದ್ರೀಕೃತ ವ್ಯವಸ್ಥೆಯಡಿ ದಾಖಲಾಗಲಿದೆ, ದೇಶದ ಯಾವುದೇ ಜಿಲ್ಲೆ, ಭಾಗದಲ್ಲಿ ನಿರ್ದಿಷ್ಟ ಫಲಾನುಭವಿಗೆ ದೊರೆತಿರುವ ಸೌಲಭ್ಯ, ವಿವರ ಸಿಗಲಿವೆ.

ಒಬ್ಬರಿಗೇ ಎರಡೆರಡು ಬಾರಿ ಸೌಲಭ್ಯ ಸಿಗುವುದು ಅಥವಾ ಸೇವಾ ಸಂಸ್ಥೆಗಳು ಒಬ್ಬರೇ ಅಂಗವಿಕಲ ವ್ಯಕ್ತಿಯನ್ನು ಎರಡು ಜಿಲ್ಲೆಗಳಲ್ಲಿ ಹಾಜರುಪಡಿಸಿ ಅನುದಾನ ಕಬಳಿಸುವ ಕ್ರಮಗಳಿಗೆ ಇದರಿಂದ ಕಡಿವಾಣ ಬೀರಲಿದೆ ಎನ್ನುತ್ತಾರೆ ಅಧಿಕಾರಿಗಳು. ಈಗಾಗಲೇ ಯುಡಿಐಡಿ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡು ಸಮಿತಿಗಳು ರಚನೆ ಆಗಿದೆ. ಅಂಗವಿಕಲ ಎಂದು ಗುರುತಿಸಲಾದವರಿಗೆ ನೀಡಲಾಗಿರುವ ಪ್ರಮಾಣಪತ್ರಗಳ ಮರು ತಪಾಸಣೆಯೂ ಆಗಲಿದೆ. ಸಮಿತಿಗಳು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಗುರುತಿಸುವ ಆಯಾ ಕ್ಷೇತ್ರದ ಪರಿಣತ ವೈದ್ಯರು ಅಂಗವಿಕಲತೆಯನ್ನು ಪರಿಶೀಲಿಸಲಿದ್ದು, ಸಮಿತಿ ಪ್ರಮಾಣಪತ್ರ ನೀಡಲಿದೆ.

ನಡೆಯದ ಸಲಹಾ ಮಂಡಳಿ ಸಭೆ: ಸಿಎಂಗೆ ಸಮಯ ಸಿಗುತ್ತಿಲ್ಲ

ಅಂಗವಿಕಲರ ಏಳಿಗೆಗೆ ಕೈಗೊಳ್ಳಬೇಕಾದ ಕ್ರಮಗಳು, ಅಹವಾಲು ಆಲಿಸುವುದು, ಯೋಜನೆಗಳ ಅನುಷ್ಠಾನ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲು ರಾಜ್ಯಮಟ್ಟದಲ್ಲಿ ಅಂಗವಿಕಲರ ಸಲಹಾ ಸಮಿತಿ ಮಂಡಳಿಯನ್ನು ರಚಿಸಲಾಗಿದೆ. 2018ರ ಮಾರ್ಚ್ ತಿಂಗಳಲ್ಲಿ ಹಾಲಿ ಇರುವ ಮಂಡಳಿ ರಚನೆ ಆಗಿದೆ. ವಿಪರ್ಯಾಸವೆಂದರೆ, ಸಮಿತಿ ರಚನೆಯಾಗಿ ಒಂದೂವರೆ ವರ್ಷ ಕಳೆದರೂ ಈವರೆಗೆ ಒಮ್ಮೆಯೂ ಸಭೆ ನಡೆದಿಲ್ಲ.

ಈ ಅವಧಿಯಲ್ಲಿ ರಾಜ್ಯ ಮೂವರು ಮುಖ್ಯಮಂತ್ರಿಗಳನ್ನು ಕಂಡಿದೆ. ಮಂಡಳಿ ರಚನೆಯಾದಾಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ. ನಂತರದ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಎಚ್.ಡಿ. ಕುಮಾರಸ್ವಾಮಿ, ಈಗ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಆದರೆ, ಮಂಡಳಿಗೆ ಸಭೆ ಸೇರಲು ಇನ್ನೂ ಕಾಲ ಕೂಡಿಲ್ಲ!

ಮುಖ್ಯಮಂತ್ರಿಗಳೇ ಇದರ ಅಧ್ಯಕ್ಷರು. ಸಂಬಂಧಿಸಿದ ಇತರೆ ಇಲಾಖೆಗಳ ಸಚಿವರು, ಅಧಿಕಾರಿಗಳು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಮಂಡಳಿ ಸದಸ್ಯರಾಗಿರುತ್ತಾರೆ. ಪರಿಶಿಷ್ಟ ಕೋಟಾದಡಿ ರಂಗಪ್ಪ ದಾಸರ, ಬುದ್ಧಿಮಾಂದ್ಯರ ಕೋಟಾದಡಿ ಅಂಗವಿಕಲ ಯಶಸ್ವಿ ಅವರೂ ಇದರ ಸದಸ್ಯರಾಗಿದ್ದಾರೆ. ಮಂಡಳಿಯ ಸಭೆಯೇ ಸೇರುವುದಿಲ್ಲ. ನಾವು ಏನು ಸಲಹೆ ಕೋಡುವುದು, ಯಾರಲ್ಲಿ ಅಹವಾಲು ಹೇಳಿಕೊಳ್ಳುವುದು ಎಂಬುದು ಈ ಇಬ್ಬರು ಸದಸ್ಯರ ಪ್ರಶ್ನೆ.

ನಕಲಿ ಪ್ರಮಾಣಪತ್ರವೂ ಮಾನ್ಯ: ಸೌಲಭ್ಯ ಪಡೆಯಲು ಪೂರಕವಾಗಿ ಪ್ರಮಾಣಪತ್ರ ಸಲ್ಲಿಕೆ ಕಡ್ಡಾಯ. ಹೀಗೆ ‘ಸಾಧನೆ’ ಹೆಸರಿನಡಿ ನೆರವು ಕೋರಿ ಅಂಗವಿಕಲರೊಬ್ಬರು ‘ಕೇರಂ ಮೆನ್ಸ್ ಡಬಲ್ಸ್’ನಲ್ಲಿ ಪ್ರಶಸ್ತಿ ಗೆದ್ದಿದ್ದೇನೆ ಎಂದು ಪ್ರಮಾಣಪತ್ರ ಸಲ್ಲಿಸುತ್ತಾರೆ. ಅಧಿಕಾರಿಗಳು ಪ್ರಮಾಣಪತ್ರದ ಸತ್ಯಾಸತ್ಯತೆ ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ.

ಹಾಜರಾತಿ ಏರುಪೇರು: ಯಲಹಂಕದಲ್ಲಿ ಇರುವ ವಸತಿ ಶಾಲೆಯೊಂದರಲ್ಲಿ 2017ನೇ ಸಾಲಿನಲ್ಲಿ ಹಾಜರಾತಿ ಪ್ರಕಾರ ಜೂನ್ ತಿಂಗಳಲ್ಲಿ 23 ಜನರು ಇರುತ್ತಾರೆ. ಜುಲೈ ತಿಂಗಳಲ್ಲಿ 54 ಜನರಿರುತ್ತಾರೆ. ಆಗಸ್ಟ್ ತಿಂಗಳಲ್ಲಿ 48 ಜನರು ಇರುತ್ತಾರೆ. ಸೆಪ್ಟೆಂಬರ್ ತಿಂಗಳಲ್ಲಿ 53 ಜನರು ಆಗುತ್ತಾರೆ. ಡಿಸೆಂಬರ್ ತಿಂಗಳಿಗೆ ಈ ಸಂಖ್ಯೆ 32ಕ್ಕೆ ಇಳಿದು ಬಿಡುತ್ತದೆ. ಹೆಚ್ಚುವರಿ ಮಕ್ಕಳ ಸೇರ್ಪಡೆ ಆಗಿದೆ ಎಂಬುದನ್ನು ಒಪ್ಪಿದರೂ, ಏಕಾಏಕಿ ಮುಂದಿನ ತಿಂಗಳಲ್ಲೇ ಹೇಗೆ ಕಡಿಮೆ ಆಗುತ್ತದೆ ಎಂಬುದು ಪ್ರಶ್ನೆ. ದೂರು ಇಲಾಖೆಯ ಅಧಿಕಾರಿಗಳ ಪರಿಶೀಲನೆಯಲ್ಲಿದೆ.

ಅಂಗವಿಕಲರ ಪರ ಹೋರಾಟ ನಡೆಸುತ್ತಿರುವ ಜಿ.ಎನ್.ನಾಗರಾಜ್, ಚಂದ್ರಶೇಖರ ಕುಟ್ಟಪ್ಪ ಅವರು, ಅಂಗವಿಕಲರ ಶಿಕ್ಷಣ, ಕ್ರೀಡೆ ಮತ್ತು ಸೌಲಭ್ಯಗಳ ವಿತರಣೆ ಮೂರು ಕ್ಷೇತ್ರಗಳಲ್ಲಿ ಹೆಚ್ಚಿನ ಅವ್ಯವಹಾರ ಆಗುತ್ತಿದೆ. ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಜರುಗಿಸಿ ಕಡಿವಾಣ ಹಾಕಿದರೆ ಅರ್ಹ ಫಲಾನುಭವಿಗಳಿಗೆ ನಿಜವಾದ ಅರ್ಥದಲ್ಲಿ ಸೌಲಭ್ಯಗಳು ತಲುಪುವುದು ಸಾಧ್ಯವಿದೆ. ಆ ನಿಟ್ಟಿನಲ್ಲಿ ಕ್ರಮ ಆಗಬೇಕಿದೆ ಎನ್ನುತ್ತಾರೆ.

ಜಿ.ಎನ್.ನಾಗರಾಜ್
ಜಿ.ಎನ್.ನಾಗರಾಜ್

ಯಾರು ಏನಂತಾರೆ?

* ರಾಜ್ಯದಲ್ಲಿ ಅಂಗವಿಕಲರಿಗೆ ಇರುವ ಹೊಸ ಕಾನೂನು ಪೂರ್ಣಪ್ರಮಾಣದಲ್ಲಿ ಜಾರಿಗೆ ಬರಬೇಕು. ಈಗಾಗಲೇ ಇರುವ ಯೋಜನಗಳು,

ಸ್ಥಳೀಯ ಸಂಸ್ಥೆಗಳು, ಜನಪ್ರತಿನಿಧಿಗಳು, ಸರ್ಕಾರ ತನ್ನ ಕಲ್ಯಾಣ ಯೋಜನೆಗಳಲ್ಲಿ ನೀಡಬೇಕಾಗಿರುವ ಹಣದ ಬಳಕೆ ಪೂರ್ಣವಾಗಿ ಜಾರಿಗೆ ಬರಬೇಕು. ಶಿಕ್ಷಣ, ಕ್ರೀಡೆ, ವಿವಿಧ ಪರಿಕರಗಳನ್ನು ವಿತರಿಸುವ ಯೋಜನೆಗಳಲ್ಲಿ ಸಾಕಷ್ಟು ಭ್ರಷ್ಟಾಚಾರಗಳಿವೆ. ಇದನ್ನು ತೊಡೆದುಹಾಕಿ, ಅಂಗವಿಕಲರಿಗೆ ವಿನಿಯೋಗಿಸುವ ಪ್ರತಿ ಪೈಸೆಯೂ ಅರ್ಹ ಫಲಾನುಭವಿಗೆ ತಲುಪುತ್ತಿರುವುದನ್ನು ಖಾತರಿಪಡಿಸಿಕೊಳ್ಳಲು ಸರ್ಕಾರ ಕ್ರಮವಹಿಸಬೇಕು.

ಜಿ.ಎನ್.ನಾಗರಾಜ್,ಅಧ್ಯಕ್ಷರು, ರಾಜ್ಯ ಅಂಗವಿಕಲರ ಮತ್ತು ಪಾಲಕರ ಒಕ್ಕೂಟ.

ರಂಗಪ್ಪ ದಾಸರ
ರಂಗಪ್ಪ ದಾಸರ

* ಘನತೆಯ, ಸಮಾನವಾದ ಜೀವನ ಒದಗಿಸಬೇಕು ಎಂಬುದು ನಮ್ಮ ಪ್ರಾಥಮಿಕ ಆಗ್ರಹ. ಮನೆ, ಸಮಾಜ ಹಾಗೂ ಒಟ್ಟಾರೆ ಸರ್ಕಾರದಲ್ಲಿ ಅಂಗವಿಕಲರ ಬಗ್ಗೆ ಇರುವ ತಿಳಿವಳಿಕೆಯೇ ಬದಲಾಗಬೇಕು. ಎಲ್ಲರಂತೆ ಬದುಕುವ ವಾತಾವರಣ ಕಲ್ಪಿಸಬೇಕು ಎಂಬ ಮನಸ್ಥಿತಿ ಎಲ್ಲೆಡೆ ಬೆಳೆಯಬೇಕು. ಈಗಲೂ ಅಂಗವಿಕಲರ ಪೈಕಿ ಶೇ 50ಕ್ಕೂ ಹೆಚ್ಚಿನ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಹೋದರೂ ಅಲ್ಲಿ ಅಂಗವಿಕಲ ಸ್ನೇಹಿ ವಾತಾವರಣವೇ ಇರುವುದಿಲ್ಲ. ಅದು ಬದಲಾಗಬೇಕು. ಅಂಗವಿಕಲರನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ಉದ್ಯೋಗಗಳನ್ನು ಸೃಷ್ಟಿಸಬೇಕು.

ರಂಗಪ್ಪ ದಾಸರ,ಸದಸ್ಯ, ಕರ್ನಾಟಕ ರಾಜ್ಯ ಅಂಗವಿಕಲರ ಸಲಹಾ ಸಮಿತಿ

ಚಂದ್ರಶೇಖರ ಪುಟ್ಟಪ್ಪ
ಚಂದ್ರಶೇಖರ ಪುಟ್ಟಪ್ಪ

* ಪ್ರತ್ಯೇಕ ಸಚಿವಾಲಯ ಅಗತ್ಯ. ಇಲಾಖೆಯ ಅಂಕಿ ಅಂಶ, ವಾಸ್ತವ ಸ್ಥಿತಿಗೂ ತಾಳೆ ಆಗುತ್ತಿಲ್ಲ. ಹೀಗಾಗಿ, ಹೊಸದಾಗಿ ಅಂಗವಿಕರ ಗಣತಿ ಆಗಬೇಕು. ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹೆಚ್ಚಿಸಬೇಕು. ಮುಖ್ಯವಾಗಿ ಅಂಗವಿಕಲರನ್ನು ಅವರ ಅಂಗವಿಕಲತೆಗಿಂತಲೂ ಹೆಚ್ಚು ಬಾಧಿಸುತ್ತಿರುವುದು ಇಲಾಖೆಯಲ್ಲಿನ, ಯೋಜನೆಗಳನ್ನು ತಲುಪಿಸುವುದರಲ್ಲಿ ಆಗುತ್ತಿರುವ ಭ್ರಷ್ಟಾಚಾರದಿಂದ. ಇದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಅಂಗವಿಕಲರಿಗೆ ಪ್ರತ್ಯೇಕವಾದ ಗುರುತುಪತ್ರ ನೀಡಬೇಕು ಹಾಗೂ ಆದ್ಯತೆ ಮೇರೆಗೆ ನೀಡಲಾಗುವ ಸೌಲಭ್ಯಗಳನ್ನು ಆಧಾರ್ ಸಂಖ್ಯೆಗೆ ಜೋಡಣೆ ಮಾಡಬೇಕು.

ಚಂದ್ರಶೇಖರ ಪುಟ್ಟಪ್ಪ,ಕಾರ್ಯಾಧ್ಯಕ್ಷ, ರಾಜ್ಯ ಅಂಗವಿಕಲರ ರಕ್ಷಣಾ ಸಮಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT