ಭಾನುವಾರ, ಅಕ್ಟೋಬರ್ 20, 2019
22 °C
ವಿಧಾನಸಭೆ

ಬಿಎಸ್‌ವೈ ಈಗ ಬರಿ ಮಿಂಚು!– ಕೆಣಕಿದ ಸಿದ್ದರಾಮಯ್ಯ

Published:
Updated:

ಬೆಂಗಳೂರು: ‘ನೀವು ಮೊದಲಿನಷ್ಟು ಜಬರ್ದಸ್ತ್‌ ಇಲ್ಲ. ಹಿಂದೆ ಯಡಿಯೂರಪ್ಪ ಗುಡುಗಿದರೆ...ಎಂಬ ಮಾತಿತ್ತು. ಈಗ ಮೊದಲ ಯಡಿ
ಯೂರಪ್ಪ ಅಲ್ಲ ಬಿಡಿ’ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹಾಸ್ಯದ ಮಾತುಗಳ ಮೂಲಕ ವಿಧಾನಸಭೆಯಲ್ಲಿ ನಗುವಿನ ಲಹರಿ ಹರಿಸಿದರು.  

‘ಎಲ್ಲ ಸೇರಿ ನಿಮ್ಮನ್ನು ಹಣ್ಣು ಮಾಡಿದ್ದಾರೆ. ಈಗ ಗುಡುಗೂ ಇಲ್ಲ, ಮಿಂಚೂ ಇಲ್ಲ. ಹೀಗಿದ್ದ ಮೇಲೆ ಕೇಂದ್ರದಿಂದ ಹೆಚ್ಚಿನ ಅನುದಾನ ಹೇಗೆ ತರಲು ಸಾಧ್ಯ. ನಿಮಗೆ ಆ ಶಕ್ತಿಯೇ ಇಲ್ಲ ’ ಎಂದು ಸಿದ್ದರಾಮಯ್ಯ ಮತ್ತೆ ಕೆಣಕಿದಾಗ, ನಗುವೇ ಬಿಎಸ್‌ವೈ ಅವರ ಉತ್ತರವಾಗಿತ್ತು.

ಆಗ ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಜೆ.ಸಿ.ಮಧುಸ್ವಾಮಿ, ‘ಯಡಿಯೂರಪ್ಪ ಅವರದು ಗುಡುಗು ಇಲ್ಲ, ಆದರೆ ಮಿಂಚು ಇದೆ’ ಎಂದರು.

ಇದಕ್ಕೆ ಧ್ವನಿಗೂಡಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ಹಿಂದೆ ಜೆಡಿಎಸ್‌ನಲ್ಲಿ ಇದ್ದಾಗ ನೀವು ಹೇಗಿದ್ದಿರಿ. ಗಡ್ಡ ಬಿಟ್ಟು ರೆಬೆಲ್‌ ತರ ಇದ್ದಿರಿ. ಈಗ ಗಡ್ಡವೂ ಇಲ್ಲ, ರೆಬೆಲ್ಲೂ ಅಲ್ಲ. ನೀವೂ ಮೆತ್ತಗಾಗಿದ್ದೀರಿ’ ಎಂದು ಕಾಲೆಳೆದರು.

‘ರೈಟ್‌ ಮ್ಯಾನ್‌ ಇನ್‌ ರಾಂಗ್‌ ಪಾರ್ಟಿ’: ‘ಬಸನಗೌಡ ಪಾಟೀಲ ಯತ್ನಾಳ್ ಒಬ್ಬರೇ ಬಿಜೆಪಿಯಲ್ಲಿ ಸತ್ಯ ಹೇಳುತ್ತಾರೆ. ರೈಟ್‌ ಮ್ಯಾನ್‌ ಇನ್‌ ರಾಂಗ್‌ ಪಾರ್ಟಿ’ ಎಂದು ಸಿದ್ದರಾಮಯ್ಯ ಯತ್ನಾಳ್‌ ಅವರನ್ನು ಮಾತಿಗೆಳೆದರು.

‘ನೀವು ಬಲಪಂಥೀಯ ಪಕ್ಷದಲ್ಲಿದ್ದರೂ ನಿಮ್ಮ ಆಲೋಚನೆ ಎಡಪಂಥೀಯ. ನಿಮ್ಮ ನಿಲುವುಗಳಿಗೆ ಖುಷಿ ಪಡುತ್ತೇನೆ’ ಎಂದು ಸಿದ್ದರಾಮಯ್ಯ ಹೇಳಿದಾಗ, ‘ನೀವು ಹೀಗೆ ಹೇಳಿ ಬಿಜೆಪಿಯಿಂದ ಹೊರ ಹಾಕಿಸಬೇಕು ಎಂದು ಇದ್ದೀರಾ’ ಎಂದು ಯತ್ನಾಳ್‌ ನಗುತ್ತಲೇ ಪ್ರಶ್ನಿಸಿದರು.

‘ನಾನು ಬಲಪಂಥೀಯ ಆದ್ದರಿಂದ ರೈಟ್‌ (Right) ಪಾರ್ಟಿಯಲ್ಲೇ ಇದ್ದೇನೆ’ ಎಂದು ಯತ್ನಾಳ್‌ ಹೇಳಿದಾಗ. ‘ಹಿಂದೆ ಅವರು ರೈಲ್ವೆ ಮಂತ್ರಿ ಆಗಿದ್ದರು. ಹೀಗಾಗಿ ರೈಟ್‌ ಟ್ರಾಕಿನಲ್ಲೇ ಇದ್ದಾರೆ’ ಎಂದು ಬಿಜೆಪಿ ಸದಸ್ಯರೊಬ್ಬರು ಮಾತಿನ ಒಗ್ಗರಣೆ ಹಾಕಿದರು.

‘ನೀವು ಯಡಿಯೂರಪ್ಪ ಪರ ಬ್ಯಾಟಿಂಗ್‌ ಮಾಡ್ತಾ ಇದ್ದೀರಿ, ಮುಂದುವರಿಸಿ’ ಎಂದು ಸಿದ್ದರಾಮಯ್ಯ ಹೇಳಿದಾಗ ‘ಮೂರೂ
ವರೆ ವರ್ಷ ಅವರ ಪರ ಬ್ಯಾಟಿಂಗ್‌ ಮಾಡೋನೆ’ ಎಂದರು ಯತ್ನಾಳ್. 

‘ನಾನು ಯಾರಿಗೂ ಹೆದರುವುದಿಲ್ಲ. ಪಕ್ಷದಿಂದ ಹೊರ ಹಾಕಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ನೀವೇ ಹೇಳಿಕ್ಕೆ ಕೊಟ್ಟಿದ್ದೀರಲ್ಲ ಯತ್ನಾಳ್’ ಎಂದು ಸಿದ್ದರಾಮಯ್ಯ ಹೇಳಿದಾಗ, ಯತ್ನಾಳ್‌ ತಲೆ ಆಡಿಸಿದರು. 

Post Comments (+)