ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೋಟ್‌ ಮಾಡಿದ ಮತಪತ್ರ ವೈರಲ್‌: ಚುನಾವಣಾಧಿಕಾರಿಗೆ ದೂರು

Last Updated 7 ಮೇ 2018, 8:57 IST
ಅಕ್ಷರ ಗಾತ್ರ

ಕೊಪ್ಪ: ಚುನಾವಣಾ ಕರ್ತವ್ಯನಿರತ ನೌಕರರ ಬಿಜೆಪಿಗೆ ಮತ ಹಾಕಿದ ಮತಪತ್ರದ ಛಾಯಾಚಿತ್ರವನ್ನು ವಾಟ್ಸ್ ಆ್ಯಪ್‌ ಗುಂಪಿಗೆ ಹರಿಯಬಿಟ್ಟ ಆರೋಪದಡಿ ನರಸಿಂಹರಾಜಪುರ ಕ್ಯಾಂಪ್ ಮೊಹಲ್ಲಾದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಿಕ್ಷಕ ಬೋಗೇಶಪ್ಪ ವಿರುದ್ಧ ಕೊಪ್ಪ ಬ್ಲಾಕ್ ಕಾಂಗ್ರೆಸ್ ವಕ್ತಾರ ಎಚ್. ಶಶಿಕುಮಾರ್ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

ಚುನಾವಣಾ ಕರ್ತವ್ಯದಲ್ಲಿ ತೊಡಗಿರುವ ಸರ್ಕಾರಿ ನೌಕರರಿಗೆ ಶನಿವಾರ ಎರಡನೇ ಹಂತದ ತರಬೇತಿ ಕಾರ್ಯಾಗಾರವನ್ನು ಪಟ್ಟಣ ಹೊರವಲಯದ ಹಿರೀಕೆರೆಯ ಸಂತ ನೋರ್ಬರ್ಟ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ 800ಕ್ಕೂ ಹೆಚ್ಚು ಸರ್ಕಾರಿ ನೌಕರರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಒಂದು ಕೊಠಡಿಯಲ್ಲಿ ಮತಪತ್ರ ವಿತರಣೆ, ಇನ್ನೊಂದು ಕೊಠಡಿಯ ಕೌಂಟರ್‌ನಲ್ಲಿ ಗೌಪ್ಯ ಮತದಾನಕ್ಕೆ ವ್ಯವಸ್ಥೆ ಮಾಡಿಕೊಡಲಾಗಿತ್ತು.

ಶಿಕ್ಷಕ ಬೋಗೇಶಪ್ಪ ತಾನು ಮತದಾನ ಮಾಡಿದ್ದ ಮತಪತ್ರದ ಛಾಯಾಚಿತ್ರವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಶಿಕ್ಷಕರ ಬಳಗವನ್ನೇ ಹೊಂದಿರುವ ‘ಸ್ನೇಹ ಬಳಗ’ ಹೆಸರಿನ ವಾಟ್ಸ್ ಆ್ಯಪ್ ಗ್ರೂಪ್‌ಗೆ ಹರಿಯಬಿಟ್ಟಿದ್ದು, ಅದು ಎಲ್ಲೆಡೆ ವೈರಲ್ ಆಗಿದೆ. ಬೋಗೇಶಪ್ಪ ತಾಲ್ಲೂಕು ಶಿಕ್ಷಕರ ಸಂಘದ ಉಪಾಧ್ಯಕ್ಷನಾಗಿದ್ದು, ಶಿಕ್ಷಕರ ಸಂಘದ ಅಧ್ಯಕ್ಷ ನಂಜುಂಡಪ್ಪ ಈ ಗ್ರೂಪ್‌ನ ಅಡ್ಮಿನ್ ಆಗಿದ್ದಾರೆ.

ಪ್ರಕರಣದ ಮಾಹಿತಿಗಾಗಿ ಭಾನುವಾರ ಸಂಜೆ ಕ್ಷೇತ್ರ ಚುನಾವಣಾಧಿಕಾರಿಗಳನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಶಶಿಕುಮಾರ್ ಎಂಬವರು ದೂರು ನೀಡಿದ್ದಾರೆ. ನಾನು ಜಿಲ್ಲಾ ಚುನಾವಣಾಧಿಕಾರಿಗೆ ಮಾಹಿತಿ ನೀಡಬೇಕು. ಗಂಭೀರ ವಿಷಯ ಆಗಿರುವುದರಿಂದ ಮಾಹಿತಿ ನೀಡಲು ಸಾಧ್ಯವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT