ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನರ್ಹ’ರಿಗಾಗಿ ಬಿಜೆಪಿಯಲ್ಲಿ ಕಾದಾಟ

ಅನರ್ಹರಿಗೂ ನಮಗೂ ಸಂಬಂಧವೇ ಇಲ್ಲ–ಸವದಿ l ಡಿಸಿಎಂಗಳಿಗೆ ಸಾಮರ್ಥ್ಯವೇ ಇಲ್ಲ–ಕತ್ತಿ
Last Updated 25 ಅಕ್ಟೋಬರ್ 2019, 19:13 IST
ಅಕ್ಷರ ಗಾತ್ರ

ಬೆಂಗಳೂರು/ಬೆಳಗಾವಿ: ಮೇಲ್ಮನವಿಯ ಹಣೆಬರಹ ಸುಪ್ರೀಂಕೋರ್ಟ್‌ನಲ್ಲಿ ಸದ್ಯಕ್ಕೆ ಇತ್ಯರ್ಥವಾಗದೇ ಅನರ್ಹ ಶಾಸಕರು ಕಂಗಾಲಾಗಿರುವ ಬೆನ್ನಲ್ಲೇ, ಮೈತ್ರಿ ಸರ್ಕಾರ ಕೆಡವಲು ಕಾರಣರಾದವರು ಪಕ್ಷಕ್ಕೆ ಬೇಕೋ ಬೇಡವೋ ಎಂಬ ವಾಗ್ವಾದ ಬಿಜೆಪಿಯಲ್ಲಿ ತಾರಕಕ್ಕೇರಿದೆ.

ಅನರ್ಹರಿಗೂ ಬಿಜೆಪಿಗೂ ಸಂಬಂಧವೇ ಇಲ್ಲವೆಂದು ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಮತ್ತೆ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ. ತಮ್ಮದೇ ಪಕ್ಷದ ‘ನಾಯಕ’ನ ವಿರುದ್ಧ ತಿರುಗಿಬಿದ್ದಿರುವ ಸಚಿವರು, ಶಾಸಕರು ಅನರ್ಹರ ಪರ ನಿಂತಿದ್ದಾರೆ.

‘ಅನರ್ಹತೆ ರದ್ದು ಪಡಿಸುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಮುಗಿದಿದ್ದು, ತೀರ್ಪು ಕಾಯ್ದಿರಿಸಲಾಗಿದೆ. ಏತನ್ಮಧ್ಯೆ, ಪರ–ವಿರೋಧದ ವಾಕ್ಸಮರ ಮುಂದುವರಿದಿದೆ. ಒಂದು ವೇಳೆ ತೀರ್ಪು ತಮ್ಮ ಪರವಾಗಿ ಬಂದರೆ, ಬಿಜೆಪಿ ತಮ್ಮನ್ನು ಸೇರಿಸಿಕೊಂಡು ಉಪಚುನಾವಣೆಯಲ್ಲಿ ಟಿಕೆಟ್ ನೀಡುವುದೇ ಎಂಬ ಆತಂಕ ಶುರುವಾಗಿದೆ’ ಎಂದು ಹೆಸರು ಹೇಳಲಿಚ್ಛಿಸದ ಅನರ್ಹ ಶಾಸಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‌ಈ ಮಧ್ಯೆ ದೆಹಲಿಯಲ್ಲಿ ಮಾತನಾಡಿದ ಅನರ್ಹ ಶಾಸಕ ಎಚ್. ವಿಶ್ವನಾಥ್‌, ‘ಸೂರ್ಯಚಂದ್ರರು ಇರುವ ತನಕ ಉಳಿಯುವಂತಹ ತೀರ್ಪು ಬರಲಿದ್ದು, ನಮಗೆ ನ್ಯಾಯ ಸಿಗಲಿದೆ. ಸವದಿ ಅವರು ಹೇಳಿದ್ದು ಸರಿ ಇದೆ. ನಮಗೂ ಬಿಜೆಪಿಗೂ ಸಂಬಂಧವಿಲ್ಲ. ನಾವು ರಾಜೀನಾಮ ನೀಡಿರುವ ಶಾಸಕರು; ಅವರು ಅಧಿಕಾರದಲ್ಲಿರುವವರು’ ಎಂದು ಹೇಳಿದರು.

ಸವದಿ–ಕತ್ತಿ ಜಿದ್ದಾಜಿದ್ದಿ: ಅನರ್ಹ ಶಾಸಕರ ಅರ್ಜಿ ವಿಚಾರಣೆ ಕುರಿತು ಪ್ರತಿಕ್ರಿಯಿಸಿದ ಲಕ್ಷ್ಮಣ ಸವದಿ, ‘ಅನರ್ಹರು ನಮ್ಮ ಪಕ್ಷಕ್ಕೆ ಬರುವ ಕುರಿತು ಎಲ್ಲೂ ಹೇಳಿಲ್ಲ. ಕಾಂಗ್ರೆಸ್‌ನಿಂದ ಅನ್ಯಾಯವಾಗಿದ್ದಕ್ಕೆ ಕಾನೂನು ಹೋರಾಟ ಮಾಡುತ್ತಿದ್ದಾರೆ. ಅದು ಅವರ ನಡುವಿನ ವ್ಯಾಜ್ಯ. ಹೀಗಾಗಿ, ಇದಕ್ಕೂ ನಮಗೂ ಸದ್ಯಕ್ಕೆ ಸಂಬಂಧವಿಲ್ಲ’ ಎಂದರು.

ಇದಕ್ಕೆ ಕಟುವಾಗಿ ಎದಿರೇಟು ಕೊಟ್ಟ ಉಮೇಶ ಕತ್ತಿ,‘ಅವರಿಂದಲೇ ನೀವು ಡಿಸಿಎಂ ಆಗಿದ್ದೀರಿ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಸರ್ಕಾರ ರಚನೆಯಲ್ಲಿ ಅನರ್ಹ ಶಾಸಕರ ಪಾತ್ರ ಮುಖ್ಯವಾಗಿದೆ. ಇದನ್ನು ಗಮನಿಸಿ, ಅವರಿಗೆ ಉಪಚುನಾವಣೆಯಲ್ಲಿ ಟಿಕೆಟ್‌ ನೀಡಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದು ಪ್ರತಿಪಾದಿಸಿದರು.

ಅಷ್ಟಕ್ಕೆ ಸುಮ್ಮನಾಗದ ಕತ್ತಿ, ‘ಯಾರಾದರೂ ಉಪಮುಖ್ಯಮಂತ್ರಿ ಆಗಬಹುದು. ಸವದಿ, ಕಾರಜೋಳ ಹಾಗೂ ಅಶ್ವತ್ಥನಾರಾಯಣ ಆಗಿದ್ದಾರೆ. ಇವರ‍್ಯಾರೂ ಯಡಿಯೂರಪ್ಪ ಅವರಿಗೆ ಪರ್ಯಾಯವಾಗಲು ಸಾಧ್ಯವಿಲ್ಲ. ಅಂತಹ ಸಾಮರ್ಥ್ಯವೂ ಇಲ್ಲ. ಉಪಮುಖ್ಯಮಂತ್ರಿ ಸ್ಥಾನಕ್ಕೆ ಸಂವಿಧಾನಿಕ ಮಾನ್ಯತೆ ಕೂಡ ಇಲ್ಲ’ ಎಂದು ವ್ಯಂಗ್ಯವಾಡಿದರು.

‘ಯಡಿಯೂರಪ್ಪ ಸೈಕಲ್‌ ತುಳಿದು ಪಕ್ಷ ಕಟ್ಟಿದ್ದಾರೆ. ಮುನಿಸಿಪಾಲಿಟಿಯಿಂದ ಮುಖ್ಯಮಂತ್ರಿ ಸ್ಥಾನದವರೆಗೆ ತಲುಪಿದ್ದಾರೆ. ಅವರಂತಹ ನಾಯಕರು ಇಲ್ಲ. ಅವರಿಗೆ ಪರ್ಯಾಯವಾಗಿ ಸವದಿ ಅವರನ್ನು ಬೆಳೆಸುವ ಬಗ್ಗೆ ಪಕ್ಷ ವಿಚಾರ ಮಾಡಬಾರದು’ ಎಂದೂ ಎಚ್ಚರಿಸಿದರು.

ಉಡುಪಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು, ‘ಅನರ್ಹ ಶಾಸಕರು ನೀಡಿರುವ ‘ಕೊಡುಗೆ’ಯನ್ನು ಮುಕ್ತ ಕಂಠದಿಂದ ಕೊಂಡಾಡಿದರು. ‘ಅನರ್ಹ ಶಾಸಕರು ಇನ್ನೂ ಪಕ್ಷ ಸೇರಿಲ್ಲ. ಪಕ್ಷ ಸೇರ್ಪಡೆಗೊಂಡ ಬಳಿಕ ಯಾರಿಗೆ ಟಿಕೆಟ್‌ ಕೊಡಬೇಕೆಂಬುವುದನ್ನು ಪಕ್ಷ ತೀರ್ಮಾನ ಮಾಡಲಿದೆ’ ಎಂದೂ ಅವರು ಹೇಳಿದರು.

ಸವದಿ ಹೇಳಿಕೆಗೆ ತಿರುಗೇಟು ಕೊಟ್ಟ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ,‘ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದಲೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದನ್ನು ಯಾರು ಮರೆಯಬಾರದು’ಎಂದರು.

***

ಕೆಟ್ಟ ಮೈತ್ರಿ ಸರ್ಕಾರ ಕಿತ್ತೊಗೆಯಲು ಕಾರಣರಾದ ಅನರ್ಹ ಶಾಸಕರು ಸಮಾಜವನ್ನು ರಕ್ಷಣೆ ಮಾಡಿದವರು. ಸತ್ಕಾರ್ಯ ಮಾಡಿರುವ ಅವರಿಗೆ ಮಾನ್ಯತೆ ಸಿಗಬೇಕು

ಡಾ. ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ

ಸ್ಪೀಕರ್ ಅನರ್ಹಗೊಳಿಸಿದ್ದಕ್ಕೆ ಅನರ್ಹರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.ಅನರ್ಹರ ಬಗ್ಗೆನಾವ್ಯಾಕೆ ಚಿಂತೆ ಮಾಡಬೇಕು? ಅಂತಹ ಅಗತ್ಯ ನಮಗಿಲ್ಲ

ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ

ಅನರ್ಹರಿಂದಲೇ ಬಿಜೆಪಿ ಸರ್ಕಾರ ರಚನೆಯಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ<br/>ರುವುದು ಕೂಡ ಅವರಿಂದಲೇ ಎನ್ನುವುದನ್ನು ಸವದಿ ನೆನಪಿಟ್ಟುಕೊಳ್ಳಲಿ

ಉಮೇಶ ಕತ್ತಿ, ಬಿಜೆಪಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT