ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹತೆ ರದ್ದಾದರೆ ‘ಅರ್ಹ’ರು ಮರಳಿ ಪಕ್ಷಕ್ಕೆ!

ಉಪ ಚುನಾವಣೆ ಸದ್ಯಕ್ಕೆ ಅನುಮಾನ?
Last Updated 16 ಅಕ್ಟೋಬರ್ 2019, 19:46 IST
ಅಕ್ಷರ ಗಾತ್ರ

ಬೆಂಗಳೂರು: 17 ಶಾಸಕರನ್ನು ಅನರ್ಹಗೊಳಿಸಿರುವ ಹಿಂದಿನ ಸಭಾಧ್ಯಕ್ಷರ ತೀರ್ಪನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದರೆ ಆಗ ‘ಅರ್ಹ’ಗೊಳ್ಳುವವರ ಪೈಕಿ ಅನೇಕರು ಕಾಂಗ್ರೆಸ್ ಬಾಗಿಲು ತಟ್ಟಲು ಅಣಿಯಾಗಿದ್ದಾರೆಯೇ?

ಇಂತಹದೊಂದು ಚರ್ಚೆ ರಾಜಕೀಯ ಪಕ್ಷಗಳ ಪಡಸಾಲೆಯಲ್ಲಿ ದಟ್ಟವಾಗಿ ನಡೆಯುತ್ತಿದೆ. ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿಯ ಬಗ್ಗೆ ಇದೇ 22ರಂದು ಸುಪ್ರೀಂಕೋರ್ಟ್‌ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಅನರ್ಹತೆ ರದ್ದುಪಡಿಸಿದರೆ, ಎಲ್ಲರೂ ಆಯಾ ಪಕ್ಷ ಪ್ರತಿನಿಧಿಸುವ ಶಾಸಕರಾಗಿಯೇ ಮುಂದುವರಿಯಲಿದ್ದಾರೆ. ಹಾಗಾದಲ್ಲಿ ಡಿಸೆಂಬರ್‌ 5ರಂದು ನಿಗದಿಯಾಗಿರುವ 15 ಕ್ಷೇತ್ರಗಳ ಉಪಚುನಾವಣೆ ಕೂಡ ನಡೆಯುವುದಿಲ್ಲ ಎಂಬ ಚರ್ಚೆಯೂ ಶುರುವಾಗಿದೆ.

ವಾಪಸ್ ಲೆಕ್ಕ ಬಿರುಸು: ಬಿಜೆಪಿ ವರಿಷ್ಠರ ನಿರ್ಲಕ್ಷ್ಯ ಧೋರಣೆ, ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತೆ ಮೇಲುಗೈ ಸಾಧಿಸಿರುವುದು ಅನರ್ಹ ಶಾಸಕರು ಪಕ್ಷಕ್ಕೆ ಮರಳಲು ಚಿಂತನೆ ನಡೆಸಿರುವುದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಕೊಟ್ಟಿದ್ದ ಭರವಸೆಯಂತೆ ಬಿಜೆಪಿ ವರಿಷ್ಠರು ನಡೆದುಕೊಂಡಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೂ ಸಮರ್ಪಕವಾದ ನೆರವು ನೀಡುತ್ತಿಲ್ಲ. ಡಿಸೆಂಬರ್ ಹೊತ್ತಿಗೆ ಮುಖ್ಯಮಂತ್ರಿ ಬದಲಾಗಲಿದ್ದಾರೆ ಅಥವಾ ವಿಧಾನಸಭೆ ವಿಸರ್ಜನೆಯಾಗಿ ಮತ್ತೊಂದು ಸಾರ್ವತ್ರಿಕ ಚುನಾವಣೆ ಎದುರಿಸಬೇಕಾಗುತ್ತದೆ ಎಂಬ ಚರ್ಚೆಗಳೂ ಆರಂಭವಾಗಿವೆ.

ರಾಜೀನಾಮೆ ನೀಡುವ ಮುನ್ನ ಉಪಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ನೀಡುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ, 2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದವರು ಈಗ ಬಂಡಾಯ ಸ್ಪರ್ಧೆಗೆ ಅಣಿಯಾಗುತ್ತಿದ್ದಾರೆ. ಅವರನ್ನು ಸುಮ್ಮನಿರಿಸುವ ಯತ್ನವನ್ನು ವರಿಷ್ಠರು ಮಾಡಿಲ್ಲ. ಪರಾಜಿತ ಅಭ್ಯರ್ಥಿಗಳು ಸ್ಪರ್ಧಿಸಿದರೆ ಗೆಲುವು ಕಷ್ಟವಾಗಬಹುದು ಎಂಬ ತರ್ಕಕ್ಕೆ ಬಂದಿರುವ ಅನರ್ಹ ಶಾಸಕರು, ಅನರ್ಹತೆ ರದ್ದಾದರೆ ಪಕ್ಷದಲ್ಲೇ ಉಳಿದುಕೊಳ್ಳುವ ಬಗ್ಗೆ ಪರಸ್ಪರ ಚರ್ಚೆ ನಡೆಸಿದ್ದಾರೆ.

‘ಅನರ್ಹ ಶಾಸಕರ ಪೈಕಿ ಏಳೆಂಟು ಜನ ವಾಪಸ್ ಬಗ್ಗೆ ಪಕ್ಷದ ನಾಯಕರ ಜತೆ ಚರ್ಚೆ ನಡೆಸಿದ್ದಾರೆ. ಕೋರ್ಟ್‌ನಲ್ಲಿ ಇತ್ಯರ್ಥವಾಗುವವರೆಗೆ ಏನೂ ಆಗುವುದಿಲ್ಲ. ಆ ಬಳಿಕ, ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ತಿಳಿಸಿದರು.

ಯಾರು ಬರಲ್ಲ?: ಜೆಡಿಎಸ್‌ನ ಮೂವರು ಪಕ್ಷಕ್ಕೆ ವಾಪಸ್ ಬರುವ ಹೋಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌ನ ರಮೇಶ ಜಾರಕಿಹೊಳಿ, ಶ್ರೀಮಂತ ಪಾಟೀಲ, ಶಿವರಾಮ ಹೆಬ್ಬಾರ್ ವಾಪಸ್ ಆಗುವುದಿಲ್ಲ. ಐಎಂಎ ವಂಚನೆ ಪ್ರಕರಣದ ಭಯದಿಂದಾಗಿ ಆರ್. ರೋಷನ್ ಬೇಗ್ ಕೂಡ ವಾಪಸ್ ಆಗುವ ಆಲೋಚನೆಯಲ್ಲಿ ಇಲ್ಲ. ಉಳಿದ 10 ಜನರ ಪೈಕಿ, ಬೈರತಿ ಬಸವರಾಜ್‌ ಹಾಗೂ ಎಸ್‌.ಟಿ. ಸೋಮಶೇಖರ್‌ ಗೊಂದಲದಲ್ಲಿದ್ದಾರೆ. ಉಳಿದೆಲ್ಲರೂ ವಾಪಸ್ ಆದರೆ, ಅವರು ಕೂಡ ಅದೇ ಹಾದಿ ಹಿಡಿಯಬಹುದು ಎಂಬ ಚರ್ಚೆ ರಾಜಕೀಯ ವಲಯದಲ್ಲಿದೆ.

**

ಜೆಡಿಎಸ್‌ನ ಮೂವರು ಅನರ್ಹ ಶಾಸಕರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ, 15 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುತ್ತೇವೆ
ಎಚ್‌. ಡಿ. ದೇವೇಗೌಡ, ಜೆಡಿಎಸ್ ವರಿಷ್ಠ

**

ಪಕ್ಷ ದ್ರೋಹ ಮಾಡಿ ಅನರ್ಹರಾಗಿರುವವರನ್ನು ಯಾವುದೇ ಕಾರಣಕ್ಕೂ ಮತ್ತೆ ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವುದಿಲ್ಲ. ಯಾವುದೇ ಒತ್ತಡಕ್ಕೂ ಒಳಗಾಗಿ ಅವಕಾಶ ನೀಡುವುದಿಲ್ಲ
- ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT