ಭಾನುವಾರ, ಆಗಸ್ಟ್ 25, 2019
20 °C

ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಕಾರ; ಅನರ್ಹ ಶಾಸಕರು ಅತಂತ್ರ

Published:
Updated:

ನವದೆಹಲಿ/ಬೆಂಗಳೂರು: ಅನರ್ಹ ಶಾಸಕರು ಸಲ್ಲಿಸಿರುವ ಮೇಲ್ಮನವಿಯನ್ನು ತ್ವರಿತವಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಒಪ್ಪದೇ ಇರುವುದರಿಂದ ಅನರ್ಹಗೊಂಡ 17 ಶಾಸಕರ ಸ್ಥಿತಿ ಸದ್ಯಕ್ಕೆ ಅತಂತ್ರವಾಗಿಯೇ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. 

ವಿಧಾನಸಭೆಯ ಹಿಂದಿನ ಸಭಾಧ್ಯಕ್ಷರು ನೀಡಿರುವ ಆದೇಶದ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯ ತ್ವರಿತ ವಿಚಾರಣೆ ನಡೆಸುವಂತೆ ಅನರ್ಹಗೊಂಡ ಶಾಸಕರು ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿದರು.

ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠದೆದುರು ಈ ವಿಷಯ ಪ್ರಸ್ತಾಪಿಸಿದ ಅನರ್ಹರ ಪರ ಹಿರಿಯ ವಕೀಲ ಮುಕುಲ್‌ ರೋಹಟಗಿ, ಎಲ್ಲ 17 ಜನ ಅನರ್ಹ ಶಾಸಕರು ಜುಲೈ 29 ಹಾಗೂ ಆಗಸ್ಟ್‌ 1ರಂದೇ ಮೇಲ್ಮನವಿ ಸಲ್ಲಿಸಿದ್ದು, ಕೂಡಲೇ ವಿಚಾರಣೆ ನಡೆಸಬೇಕು ಎಂದು ಕೋರಿದರು.

‘ಈ ಮನವಿಯ ಕುರಿತು ರಿಜಿಸ್ಟ್ರಾರ್‌ ಅವರು ಪರಿಶೀಲನೆ ನಡೆಸಿದ ಬಳಿಕ ನಿರ್ಧರಿಸಲಾಗುವುದು’ ಎಂದು ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ ಹಾಗೂ ಅಜಯ್‌ ರಸ್ತೋಗಿ ಅವರಿದ್ದ ಪೀಠ ತಿಳಿಸಿತು.

ಅನರ್ಹಗೊಂಡಿರುವ ಶಾಸಕರು ಯಾವುದೇ ಸಾಂವಿಧಾನಿಕ ಹುದ್ದೆ ಅಲಂಕರಿಸುವಂತಿಲ್ಲ ಹಾಗೂ 15 ವಿಧಾನಸಭೆ ಅವಧಿ (2023 ರವರೆಗೆ) ಮುಗಿಯುವರೆಗೆ  ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಹಿಂದಿನ ಸಭಾಧ್ಯಕ್ಷ ಕೆ.ಆರ್. ರಮೇಶ್‌ ಕುಮಾರ್ ತೀರ್ಪು ನೀಡಿದ್ದರು. 

ಅನರ್ಹಗೊಂಡಿರುವ ಅರ್ಜಿ ಇತ್ಯರ್ಥವಾಗದೇ ಇರುವುದರಿಂದ ಅವರು ತಕ್ಷಣಕ್ಕೆ ಯಡಿಯೂರಪ್ಪನವರ ಸರ್ಕಾರದಲ್ಲಿ ಸಚಿವ ಸ್ಥಾನ ಹೊಂದುವಂತಿಲ್ಲ. ಒಂದು ವೇಳೆ ಉಪಚುನಾವಣೆ ಘೋಷಣೆಯಾದರೆ ಸ್ಪರ್ಧೆ ಮಾಡುವಂತೆಯೂ ಇಲ್ಲ. ಹೀಗಾಗಿ ಅನರ್ಹಗೊಂಡ 17 ಶಾಸಕರ ಸ್ಥಿತಿ ಸದ್ಯಕ್ಕೆ ಅತಂತ್ರವಾಗಿಯೇ ಮುಂದುವರಿಯಲಿದೆ.

Post Comments (+)