ಬುಧವಾರ, ನವೆಂಬರ್ 20, 2019
27 °C
ಶೆಟ್ಟರ್‌ಗೆ ಧಾರವಾಡ ‘ಹೆಚ್ಚುವರಿ’: ಸವದಿಗೆ ಇಲ್ಲ ಬೆಳಗಾವಿ

ಅಶೋಕ್‌ಗೆ ನಿರಾಸೆ: ‘ರಾಜಧಾನಿ’ ಉಸ್ತುವಾರಿ ಮುಖ್ಯಮಂತ್ರಿ ಕೈಯಲ್ಲಿ

Published:
Updated:

ಬೆಂಗಳೂರು: ಉಪಮುಖ್ಯಮಂತ್ರಿ, ಪ್ರಭಾವಿ ಖಾತೆ ಸಿಗದಿದ್ದರೂ ಜಿಲ್ಲೆಯ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದ ಅನೇಕ ಹಿರಿಯ ಸಚಿವರಿಗೆ ನಿರಾಸೆಯಾಗಿದ್ದು, ಬೆಂಗಳೂರು ಉಸ್ತುವಾರಿಯನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರೇ ಉಳಿಸಿಕೊಂಡಿದ್ದಾರೆ.

ಉಪಮುಖ್ಯಮಂತ್ರಿ ಸ್ಥಾನ ಸಿಗದೇ ಮುನಿಸಿಕೊಂಡಿದ್ದ ಅಶೋಕ ಅವರು ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿಯನ್ನಾದರೂ ಕೊಡಿ ಎಂದು ಹಟಕ್ಕೆ ಬಿದ್ದಿದ್ದರು. ಅವರಿಗೆ ಗ್ರಾಮಾಂತರ ಜಿಲ್ಲೆ ಉಸ್ತುವಾರಿ ನೀಡಲಾಗಿದ್ದು, ಮಂಡ್ಯ ಜಿಲ್ಲೆಯ ಹೆಚ್ಚುವರಿ ಹೊಣೆ ವಹಿಸಲಾಗಿದೆ.

ಖಾತೆ ಹಂಚಿಕೆಯಾಗಿ 26 ದಿನಗಳ ಬಳಿಕ ಜಿಲ್ಲೆಗಳ ಉಸ್ತುವಾರಿಯನ್ನು ಹಂಚಿಕೆ ಮಾಡಿ ಸೋಮವಾರ ಆದೇಶ ಹೊರಡಿಸಲಾಗಿದೆ. 

ಬಿಜೆಪಿಯಲ್ಲಿ ಭವಿಷ್ಯದ ಒಕ್ಕಲಿಗ ನಾಯಕನನ್ನಾಗಿ ಬೆಳೆಸುವ ಉದ್ದೇಶದಿಂದ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರಿಗೆ ಮೊದಲ ಬಾರಿಗೆ ಉಪಮುಖ್ಯಮಂತ್ರಿ ಪಟ್ಟ ದಕ್ಕಿತ್ತು. ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಪ್ರತಿನಿಧಿಸುವ ರಾಮನಗರ ಜಿಲ್ಲೆಯ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ.

ಬೆಳಗಾವಿಯವರಾದ ಲಕ್ಷ್ಮಣ ಸವದಿ ತಮ್ಮ ಜಿಲ್ಲೆಯ ಉಸ್ತುವಾರಿ ಬಯಸಿದ್ದರು. ಅವರಿಗೆ ಬಳ್ಳಾರಿ ಹೊಣೆ ನೀಡಲಾಗಿದೆ. ಜಗದೀಶ ಶೆಟ್ಟರ್‌ ಅವರಿಗೆ ಬೆಳಗಾವಿ ಉಸ್ತುವಾರಿ ನೀಡಿದ್ದು, ರಮೇಶ ಜಾರಕಿಹೊಳಿ ಸಚಿವರಾದರೆ, ಈ ಜಿಲ್ಲೆಯ ಉಸ್ತುವಾರಿ ಬಿಟ್ಟುಕೊಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಉಡುಪಿ ಜಿಲ್ಲೆ ನೀಡಿದ್ದು, ಅವರ ತವರು ಜಿಲ್ಲೆ ಹಾವೇರಿಯ ಪ್ರಭಾರ ನೀಡಲಾಗಿದೆ. ಮುಂದೆ ಬಿ.ಸಿ.ಪಾಟೀಲ ಸಚಿವರಾದರೆ, ಅವರಿಗೆ ಹಾವೇರಿ ಉಸ್ತುವಾರಿ ನೀಡುವ ಸಾಧ್ಯತೆ ಇದೆ. ಚಿತ್ರದುರ್ಗ ಪ್ರತಿನಿಧಿಸುವ ಬಿ. ಶ್ರೀರಾಮುಲು ಬಳ್ಳಾರಿಯತ್ತ ಕಣ್ಣಿಟ್ಟಿದ್ದರು. ಅವರಿಗೆ ರಾಯಚೂರು ಜಿಲ್ಲೆಯ ಉಸ್ತುವಾರಿ ನೀಡಲಾಗಿದ್ದು, ಚಿತ್ರದುರ್ಗ ಜಿಲ್ಲೆಯ ಪ್ರಭಾರ ಹೊಣೆ ಇದೆ. 

ಪ್ರತಿಕ್ರಿಯಿಸಿ (+)