ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟೆಂಡರ್ ಆಗದೇ ಭ್ರಷ್ಟಾಚಾರ ಸಾಧ್ಯವೇ?’

ಶಾಸಕರು ಸುಳ್ಳು ಹೇಳುವುದು ಬಿಡಲಿ; ಸಚಿವ ತಿಮ್ಮಾಪುರ ಆಗ್ರಹ
Last Updated 23 ಮಾರ್ಚ್ 2018, 8:37 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಜಿಲ್ಲಾ ಗಣಿಗಾರಿಕೆ ನಿಧಿ (ಡಿಎಂಎಫ್‌) ಅಡಿ ಮುಧೋಳ ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಇನ್ನೂ ಟೆಂಡರ್ ಆಗಿಲ್ಲ. ಆಗಲೇ ರೊಕ್ಕ ಹೊಡೆಯಲು ಸಾಧ್ಯವೇ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಗುರುವಾರ ಇಲ್ಲಿ ಪ್ರಶ್ನಿಸಿದರು.

‘ಜಿಲ್ಲೆಯ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಬಿಡುಗಡೆಯಾದ ಹಣದಲ್ಲಿ ₹ 16 ಕೋಟಿಯನ್ನು ಮುಧೋಳ ತಾಲ್ಲೂಕಿಗೆ ಹಂಚಿಕೆ ಮಾಡಲಾಗಿದೆ. ಆದರೆ ಇಲ್ಲಿಯವರೆಗೂ ಕಾಮಗಾರಿಗೆ ಟೆಂಡರ್ ಕರೆದಿಲ್ಲ. ಇನ್ನು ಅವ್ಯವಹಾರ ಎಲ್ಲಿಂದ ಬಂತು?’ ಎಂದ ಅವರು, ಸಂಬಂಧಿಸಿದ ದಾಖಲೆಯನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

‘ಹಿಂದೆ ಸ್ಟೋರ್ ಕೀಪರ್ ಆಗಿದ್ದ ಶಾಸಕರಿಗೆ ಇಷ್ಟೂ ಗೊತ್ತಿಲ್ಲವೇ? 15 ವರ್ಷ ತಾವು ನಡೆಸಿದ ಭ್ರಷ್ಟಾಚಾರ ಎಲ್ಲಿ ಹೊರಬರಲಿದೆಯೋ ಎಂಬ ಕಾರಣದಿಂದ ಹಾಗೂ ತಾವು ಮಾಡಿದ್ದನ್ನೇ ತಿಮ್ಮಾಪುರ ಕೂಡ ಮಾಡಬಹುದು ಎಂಬ ಭಾವನೆಯಿಂದ ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

‘ಶಾಸಕರು ಸುಳ್ಳು ಮಾತುಗಳಿಂದ ಜನರನ್ನು ಮೋಸಗೊಳಿಸುವುದು ತರವಲ್ಲ. ಮೆಟಗುಡ್ಡ ಕೆರೆಗೆ ₹ 7 ಕೋಟಿ, ಮುಗಳಖೋಡ ಕೆರೆಗೆ ₹ 9 ಕೋಟಿ ಹಾಕಲಾಗಿದೆ. ಆದರೆ ಹನಿ ನೀರೂ ಬಂದಿಲ್ಲ. ಕೋಟಿಗಟ್ಟಲೇ ಹಣ ಎಲ್ಲಿಗೆ ಹೋಯ್ತು ಎಂಬುದರ ಬಗ್ಗೆ ಜನರಿಗೆ ಉತ್ತರ ಕೊಡಬೇಕು’ ಎಂದು ಆಗ್ರಹಿಸಿದರು.

‘ಮುಧೋಳದಲ್ಲಿ ಮತದಾರರ ಪಟ್ಟಿಯಿಂದ ಹಿಂದೂಗಳ ಹೆಸರು ತೆಗೆಸಿದ್ದಾಗಿ ಶಾಸಕರು ಹೇಳುತ್ತಾರೆ. ಹಾಗಾದರೆ ನಾನು ಎಲೆಕ್ಷನ್ ಕಮೀಷನ್ನಾ, ಅಧಿಕಾರಿಯಾ’ ಎಂದು ತಿಮ್ಮಾಪುರ ಪ್ರಶ್ನಿಸಿದರು. ‘ಹಿಂದಿನ ಚುನಾವಣೆಯಲ್ಲಿ ಬ್ರಾಹ್ಮಣರು, ಲಿಂಗಾಯತರ ಓಣಿಯಲ್ಲಿ ಲಂಬಾಣಿಗರ ಹೆಸರನ್ನು ಸೇರಿಸಿದ್ದು ಯಾರು? ವಿಜಯಪುರದಿಂದ ಕರೆತಂದು ಮತ ಹಾಕಿಸಿದ್ದು ಯಾರು? ಅದಕ್ಕೂ ದಾಖಲೆಗಳಿವೆ’ ಎಂದರು.

‘ರನ್ನ ಉತ್ಸವ ರಾಹುಲ್ ವೈಭವವಾಗಿತ್ತು ಎಂದು ಶಾಸಕರು ಹೇಳಿದ್ದಾರೆ. ಪ್ರೇಕ್ಷಕರ ಸಾಲಿನಲ್ಲಿ ಕುಳಿತು ನಾನು ಉತ್ಸವ ನೋಡಿದ್ದೇನೆ. ಅವರಂತೆ ಹೆಂಡತಿ, ಮಕ್ಕಳನ್ನು ವೇದಿಕೆ ಮೇಲೆ ಕೂರಿಸಿ ಅವರಿಂದಲೇ ಪ್ರಶಸ್ತಿ ಕೊಡಿಸುವ ಕೆಲಸ ಮಾಡಲಿಲ್ಲ’ ಎಂದು ತಿರುಗೇಟು ನೀಡಿದರು.

‘ರಾಹುಲ್‌ ಗಾಂಧಿ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಗೊಳಿಸಲು ರನ್ನ ಉತ್ಸವದ ಅನುದಾನ ಬಳಸಿಕೊಂಡಿರುವುದಾಗಿ ಶಾಸಕರು ಸುಳ್ಳು ಹೇಳಿದ್ದಾರೆ. ಆ ನಿಟ್ಟಿನಲ್ಲಿ ಯಾವುದೇ ತನಿಖೆ ನಡೆಸಲಿ’ ಎಂದ ತಿಮ್ಮಾಪುರ, ‘ರನ್ನ ಉತ್ಸವಕ್ಕೆ ಸಂಘ ಸಂಸ್ಥೆಗಳಿಂದ ಪಡೆದಿರುವ ದೇಣಿಗೆ ಮೊತ್ತ, ಖರ್ಚು–ವೆಚ್ಚದ ಪಟ್ಟಿ ಸಿದ್ಧಪಡಿಸಿ ಸಾರ್ವಜನಿಕವಾಗಿ ಬಿಡುಗಡೆ ಮಾಡಲು ಹಾಗೂ ಅವರಿಗೂ ಒಂದು ಪ್ರತಿ ಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.

‘ದೊರೆತ ಕಡಿಮೆ ಅವಧಿಯಲ್ಲಿಯೇ ಜನರ ಕೆಲಸ ಮಾಡಿಕೊಟ್ಟಿದ್ದೇನೆ. ಕ್ರೀಡಾಂಗಣಕ್ಕೆ ₹ 3.75 ಕೋಟಿ, 11 ಹಳ್ಳಿಗಳಲ್ಲಿ ಕೆರೆ ತುಂಬಿಸುವ ಕೆಲಸ, ಗಣಿಗಾರಿಕೆ ನಿಧಿಯಿಂದ ಬೈಪಾಸ್ ನಿರ್ಮಾಣಕ್ಕೆ ₹ 4 ಕೋಟಿ ಕೊಡಿಸಿದ್ದೇನೆ. ಯುವಕರಿಗೆ, ಸಂಘ–ಸಂಸ್ಥೆಗಳಿಗೆ ನೆರವಾಗಿದ್ದೇನೆ. ಇದನ್ನು ಕಂಡು ಸಹಿಸಲಾರದೇ ಶಾಸಕರು ಭ್ರಮನಿರಸನಗೊಂಡಿದ್ದಾರೆ’ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜು ನಾಯಕ್, ಮುಖಂಡರಾದ ಹನುಮಂತ ಅಡವಿ, ಪಾಂಡುರಂಗ ಹೂವಣ್ಣವರ ಇದ್ದರು.
**
ಕೆಲಸದ ಒತ್ತಡದ ಕಾರಣ ಮುಧೋಳಧ ರನ್ನ ವೈಭವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಲಿಲ್ಲ. ಹಾಗಾಗಿ ಕ್ಷಮೆ ಏಕೆ ಕೇಳಬೇಕು
ಆರ್.ಬಿ.ತಿಮ್ಮಾಪುರ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT