ಮಕ್ಕಳಿಗೆ ಆಶ್ರಯ ಕಲ್ಪಿಸಿದ ನ್ಯಾಯಾಧೀಶ

7
ಪತ್ನಿಯನ್ನು ಕೊಲೆಗೈದ ಪತಿಗೆ ಜೈಲು ಶಿಕ್ಷೆ

ಮಕ್ಕಳಿಗೆ ಆಶ್ರಯ ಕಲ್ಪಿಸಿದ ನ್ಯಾಯಾಧೀಶ

Published:
Updated:
Deccan Herald

ಚಿತ್ರದುರ್ಗ: ಕೊಲೆ ಹಂತಕನಿಗೆ 11 ದಿನಗಳಲ್ಲಿ ಜೈಲುಶಿಕ್ಷೆ ವಿಧಿಸಿ ಇತಿಹಾಸ ಸೃಷ್ಟಿಸಿದ್ದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ, ಅಪರಾಧಿಯ ಇಬ್ಬರು ಪುತ್ರರಿಗೆ ಆಶ್ರಯ ಕಲ್ಪಿಸುವ ಮೂಲಕ ಜನ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

ಪತ್ನಿ ಸಾಕಮ್ಮ (26) ಅವರನ್ನು ಕೊಲೆ ಮಾಡಿದ ಪತಿ ಶ್ರೀಧರ್ (28) ಎಂಬಾತನಿಗೆ ಜುಲೈ 9ರಂದು ನ್ಯಾಯಧೀಶರು ಶಿಕ್ಷೆ ವಿಧಿಸಿದ್ದರು. ದಂಪತಿಯ ಪುತ್ರರಾದ ಧನುಷ್‌ (3) ಹಾಗೂ ಮೈಲಾರಿ (2) ಅಜ್ಜಿ ಬಳಿ ಆಶ್ರಯ ಪಡೆದಿದ್ದು, ಇವರಿಗೆ ಸ್ವಂತ ಸೂರು ಕಲ್ಪಿಸಲು ನ್ಯಾಯಾಧೀಶರು ಮುಂದಾಗಿದ್ದಾರೆ.

ಪಂಚಾಯತ್ ರಾಜ್‌ ಇಲಾಖೆಯ ಅಂಬೇಡ್ಕರ್ ಆವಾಸ್‌ ಯೋಜನೆಯಡಿ ಮಂಜೂರಾದ ₹ 1.6 ಲಕ್ಷ ಅನುದಾನದಲ್ಲಿ ಮನೆ ನಿರ್ಮಿಸಲು ಚಿತ್ರದುರ್ಗ ತಾಲ್ಲೂಕಿನ ಬಗ್ಗಲರಂಗವ್ವನಹಳ್ಳಿಯಲ್ಲಿ ಬುಧವಾರ ಭೂಮಿ ಪೂಜೆ ನೆರವೇರಿಸಿದರು. ನ್ಯಾಯಾಧೀಶರೇ ಮುತುವರ್ಜಿ ವಹಿಸಿ ಮಕ್ಕಳಿಗೆ ಆಶ್ರಯ ಕಲ್ಪಿಸಿರುವುದನ್ನು ಗ್ರಾಮಸ್ಥರು ಶ್ಲಾಘಿಸಿದರು.

ತಾಯಿಯನ್ನು ಕಳೆದುಕೊಂಡ ಪುಟಾಣಿ ಮಕ್ಕಳ ತಂದೆ ಕೂಡ ಜೈಲು ಸೇರಿದ್ದಾನೆ. ಆದೇಶ ಹೊರಡಿಸುವ ದಿನ ಅಪರಾಧಿಯ ಕೋರಿಕೆಗೆ ಸ್ಪಂದಿಸಿದ ನ್ಯಾಯಾಧೀಶರು, ಮಕ್ಕಳಿಗೆ ಆಶ್ರಯ ಕಲ್ಪಿಸುವ ಭರವಸೆ ನೀಡಿದ್ದರು. ಅನಾಥರಾದ ಇಬ್ಬರು ಮಕ್ಕಳಿಗೆ ₹ 2.5 ಲಕ್ಷ ಪರಿಹಾರಕ್ಕೆ ಸಂತ್ರಸ್ತರ ಪರಿಹಾರ ನಿಧಿಗೆ ಶಿಫಾರಸು ಮಾಡಿದ್ದಾರೆ. ಇಬ್ಬರು ಮಕ್ಕಳಿಗೆ ಪ್ರತಿ ತಿಂಗಳು ತಲಾ ₹ 1 ಸಾವಿರ ನೀಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೂ ಸೂಚಿಸಿದ್ದಾರೆ.

ನ್ಯಾಯಧೀಶರ ಶಿಫಾರಸಿಗೆ ಸ್ಪಂದಿಸಿದ ಪಂಚಾಯತ್‌ ರಾಜ್‌ ಇಲಾಖೆ ಎರಡು ವಾರದಲ್ಲಿ 25X28 ಸುತ್ತಳತೆಯ ನಿವೇಶನ ಮಂಜೂರು ಮಾಡಿದೆ. ಮನೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಅಡಿಪಾಯ ಹಾಕಲಾಗಿದೆ.

‘ಶಿಕ್ಷೆ ವಿಧಿಸುವುದಷ್ಟೇ ನ್ಯಾಯಾಧೀಶರ ಕೆಲಸವಲ್ಲ. ನೊಂದವರಿಗೆ ಸರಿಯಾದ ನ್ಯಾಯ ಸಿಗಬೇಕು. ಸಂತ್ರಸ್ತರಿಗೆ ಪರಿಹಾರ ನೀಡಲು ನ್ಯಾಯಾಂಗ ಇಲಾಖೆಯಲ್ಲಿ ಅವಕಾಶವಿದೆ. ಅತ್ಯಾಚಾರ, ದೊಂಬಿ, ಗಲಾಟೆ, ಕೊಲೆ ಸೇರಿದಂತೆ ಇತರ ಪ್ರಕರಣಗಳಲ್ಲಿ ಸಂತ್ರಸ್ತರಾದವರಿಗೆ ಪರಿಹಾರ ನೀಡುವಂತೆ ಶಿಫಾರಸು ಮಾಡುವ ಅಧಿಕಾರ ನ್ಯಾಯಾಧೀಶರಿಗೆ ಇದೆ. ಸಂತ್ರಸ್ತರ ಪರಿಹಾರ ನಿಧಿಯಿಂದ ಸಿಗುವ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟು ಮಕ್ಕಳಿಗೆ ಶಿಕ್ಷಣ ಕೊಡಿಸಿ’ ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ್‌ ಎಂ.ಜೋಶಿ, ‘ಕೊಲೆ ಪ್ರಕರಣದ ತನಿಖೆ ನಡೆಸಿ ಎರಡು ದಿನಗಳಲ್ಲಿ ದೋಷಾರೋಪಪಟ್ಟಿ ಸಲ್ಲಿಕೆ ಮಾಡಿದೆವು. ಘಟನೆ ಸಂಭವಿಸಿದ 36 ದಿನಗಳ ಒಳಗಾಗಿ ಸಂತ್ರಸ್ತ ಮಕ್ಕಳಿಗೆ ಪರಿಹಾರ ಸಿಕ್ಕಿದೆ. ಮಕ್ಕಳ ನೋವಿಗೆ ಸ್ಪಂದಿಸಿದ ತೃಪ್ತಿ ಸಿಕ್ಕಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಪಿ.ಎನ್. ರವೀಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ದಿಂಡಲಕೊಪ್ಪ, ವಕೀಲರ ಸಂಘದ ಅಧ್ಯಕ್ಷ ಎನ್.ಬಿ. ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಸಿ.ಶಿವು ಯಾದವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಸ್.ರಾಜಾನಾಯ್ಕ್, ಪ್ರಧಾನ ಸರ್ಕಾರಿ ಅಭಿಯೋಜಕ ಬಿ.ಬಿ.ಜಯರಾಂ, ಬೆಳಗಟ್ಟ ಗ್ರಾಮಪಂಚಾಯಿತಿ ಅಧ್ಯಕ್ಷೆ ಜಯಮ್ಮ ಇದ್ದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !