ಡಿಕೆಶಿ ಪರ್ಯಾಯ ‘ಶಕ್ತಿ’ ಕೇಂದ್ರ?

7
ಸಿದ್ದರಾಮಯ್ಯ ದೂರವಿಟ್ಟು ಕಾಂಗ್ರೆಸ್‌ ಸಚಿವರಿಗೆ ಉಪಾಹಾರ

ಡಿಕೆಶಿ ಪರ್ಯಾಯ ‘ಶಕ್ತಿ’ ಕೇಂದ್ರ?

Published:
Updated:
Deccan Herald

ಬೆಂಗಳೂರು:  ಒಕ್ಕಲಿಗ ಸಮುದಾಯದ ಪ್ರಭಾವಿ ಪ್ರತಿನಿಧಿ, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌, ‘ಕಾಂಗ್ರೆಸ್‌ ರಾಜಕಾರಣ’ದಲ್ಲಿ ಸಿದ್ದರಾಮಯ್ಯ ವಿರುದ್ಧ ಪರ್ಯಾಯ ಶಕ್ತಿ ಕೇಂದ್ರವೊಂದನ್ನು ಸೃಷ್ಟಿಸಿಕೊಳ್ಳಲು ಹೊರಟಿದ್ದಾರೆಯೇ?

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ದೂರ ಇಟ್ಟು, ಕಾಂಗ್ರೆಸ್‌ ಸಚಿವರಿಗೆ ತಮ್ಮ ಮನೆಯಲ್ಲಿ ಗುರುವಾರ ಬೆಳಿಗ್ಗೆ ಉಪಾಹಾರ ಕೂಟ ಏರ್ಪಡಿಸಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ‌ಚರ್ಚಿಸಿರುವ ಶಿವಕುಮಾರ್‌, ಇಂಥದ್ದೊಂದು ಸಂದೇಶ ರವಾನಿಸಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ.

ಕೂಗಳತೆ ದೂರದಲ್ಲಿರುವ ತಮ್ಮ ‘ಕಾವೇರಿ’ ಮನೆಯಲ್ಲಿ ಸಿದ್ದರಾಮಯ್ಯ ಇದ್ದರಾದರೂ ಅವರಿಗೆ ಆಹ್ವಾನ ಇರಲಿಲ್ಲ. ವಿದೇಶ ಪ್ರವಾಸ ಮುಗಿಸಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಗುರುವಾರ ನಸುಕಿನಲ್ಲಿ ಬೆಂಗಳೂರಿಗೆ ವಾಪಸು ಬಂದಿದ್ದರು. ಆದರೆ, ಅವರಿಗೂ ಈ ‘ಉಪಾಹಾರ ರಾಜಕೀಯ’ಕ್ಕೆ ಆಹ್ವಾನ ನೀಡಿಲ್ಲ.

ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ, ಆಹ್ವಾನ ಇದ್ದರೂ 'ಮುಂಬೈನಲ್ಲಿದ್ದೇನೆ' ಎಂದು ಹೇಳಿ ದೂರ ಉಳಿದರು. ವಿದೇಶಕ್ಕೆ ತೆರಳಿರುವ ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ ಕೂಡಾ ಗೈರಾದರು. ಉಳಿದಂತೆ, ಎಲ್ಲ ಸಚಿವರು ಭಾಗವಹಿಸಿದರು. ಕಾಂಗ್ರೆಸ್ ಮಂತ್ರಿಗಳಿಗೆಂದೇ ಏರ್ಪಡಿಸಿದ್ದ ಕೂಟಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರಿಗೂ ಆಹ್ವಾನ ನೀಡಲಾಗಿತ್ತು.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಶಿವಕುಮಾರ್‌, ‘ಈ ಸಭೆಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸಚಿವ ಸಂಪುಟ ಸಭೆಗೂ ಮುನ್ನ ಈ ರೀತಿ ಭೇಟಿಯಾಗಿ ಚರ್ಚಿಸುವುದು ವಾಡಿಕೆ. ಸರ್ಕಾರದ ಯಂತ್ರ ಸುಗಮವಾಗಿ ಸಾಗಲು ಚರ್ಚೆ ಅಗತ್ಯ. ಹೀಗಾಗಿ, ಸಚಿವರೆಲ್ಲರೂ ಸೇರಿದ್ದೇವೆ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಅವರನ್ನು ಕರೆದಿಲ್ಲ ಎಂದು ವಿಪರೀತ ಅರ್ಥ ಕಲ್ಪಿಸುವುದು ಬೇಡ’ ಎಂದು ಸಮಜಾಯಿಷಿ ನೀಡಿದರು.

‘ಸಿದ್ದರಾಮಯ್ಯ ಅವರ ಮನೆಯಲ್ಲಿ ಈ ಹಿಂದೆ ನಾವೆಲ್ಲ ಭೋಜನ ಕೂಟಕ್ಕೆ ಸೇರಿದ್ದೆವು. ಅದೇ ರೀತಿ ಪರಮೇಶ್ವರ ಅವರ ನಿವಾಸದಲ್ಲೂ ಉಪಾಹಾರ ಕೂಟ ಏರ್ಪಡಿಸಲಾಗಿತ್ತು’ ಎಂದರು.

‘ಬೆಳ್ಳಿತಟ್ಟೆ’ ಉಪಾಹಾರ

ಕ್ರೆಸೆಂಟ್ ರಸ್ತೆಯಲ್ಲಿರುವ ಶಿವಕುಮಾರ್ ಅವರ ಸರ್ಕಾರಿ ನಿವಾಸದಲ್ಲಿ ನಡೆದ ಉಪಾಹಾರ ಕೂಟದಲ್ಲಿ ಸಚಿವರು ‘ಬೆಳ್ಳಿತಟ್ಟೆ’ಯಲ್ಲಿ ತಿಂಡಿ ಸವಿದರು.

ಮುಳಬಾಗಿಲು ದೋಸೆ, ಇಡ್ಲಿ, ವಡೆ, ಚೌಚೌ ಬಾತ್, ಮಸಾಲೆ ದೋಸೆ, ಸೆಟ್, ಪುರಿ, ಸಾಗು, ನೀರ್ ದೋಸೆ, ಪೊಂಗಲ್ ಉಪಾಹಾರದ ವಿಶೇಷವಾಗಿತ್ತು.

* ಶಿವಕುಮಾರ್‌ ಮನೆಯಲ್ಲಿ ನಡೆದ ಉಪಾಹಾರ ಕೂಟಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಹೀಗೆ ಸೇರಿದಾಗ ಸರ್ಕಾರ, ಪಕ್ಷ ಸೇರಿದಂತೆ ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆಯುವುದು ಸಹಜ
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

* ಸಿದ್ದರಾಮಯ್ಯ ಅವರನ್ನು ಯಾವಾಗ ಕರೆಯಬೇಕೊ ಆಗ ಕರೆಯುತ್ತೇವೆ. ಎಲ್ಲದಕ್ಕೂ ಕರೆಯಲು ಸಾಧ್ಯವಿಲ್ಲ. ಹಾಗೆಂದು, ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ
-ಡಿ.ಕೆ. ಶಿವಕುಮಾರ್‌. ಜಲ ಸಂಪನ್ಮೂಲ ಸಚಿವ

ಬರಹ ಇಷ್ಟವಾಯಿತೆ?

 • 14

  Happy
 • 3

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !