ಶನಿವಾರ, ಅಕ್ಟೋಬರ್ 19, 2019
22 °C

ಡಿ.ಕೆ.ಶಿವಕುಮಾರ್‌ ಮೇಲ್ಮನವಿ ಅರ್ಜಿ ವಜಾ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು

Published:
Updated:

ಬೆಂಗಳೂರು: ‘ನವದೆಹಲಿಯ ಮನೆಗಳಲ್ಲಿ ದೊರೆತ ದಾಖಲೆ ಇಲ್ಲದ ₹ 8.60 ಕೋಟಿ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ನೀಡಿರುವ ಸಮನ್ಸ್‌ ರದ್ದುಗೊಳಿಸಬೇಕು’ ಎಂದು ಕೋರಿ ಶಾಸಕ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಶಿವಕುಮಾರ್ ಸಲ್ಲಿಸಿದ್ದ ಮೇಲ್ಮನವಿ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ಹಾಗೂ ನ್ಯಾಯಮೂರ್ತಿ ಪಿ.ಎಂ.ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ಪ್ರಕಟಿಸಿದೆ. ‘ಏಕಸದಸ್ಯ ನ್ಯಾಯಪೀಠ ನೀಡಿರುವ ಆದೇಶದಲ್ಲಿ ಯಾವುದೇ ದೋಷವಿಲ್ಲ’ ಎಂದು ಅಭಿಪ್ರಾಯಪಟ್ಟಿದೆ.

ಇದೇ ವೇಳೆ ಪ್ರಕರಣದ ಇನ್ನುಳಿದ ಆರೋಪಿಗಳಾದ ಸಚಿನ್ ನಾರಾಯಣ, ಸುನಿಲ್ ಕುಮಾರ್ ಶರ್ಮ ಹಾಗೂ ಆಂಜನೇಯ ಹನುಮಂತಯ್ಯ ಅವರ ಮೇಲ್ಮನವಿಯನ್ನೂ ಇದೇ ನ್ಯಾಯಪೀಠ ವಜಾಗೊಳಿಸಿದೆ.

‘ವಿಚಾರಣೆಗೆ ಹಾಜರಾದಾಗ ಮೂವರು ಆರೋಪಿಗಳನ್ನು ಬಂಧಿಸಬಾರದು’ ಎಂಬ ಅರ್ಜಿದಾರರ ಪರ ಹಿರಿಯ ವಕೀಲರಾದ ಬಿ.ವಿ.ಆಚಾರ್ಯ ಹಾಗೂ ಡಿ.ಎಂ.ನಂಜುಂಡ ರೆಡ್ಡಿ ಅವರ ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠ, ‘ಮುಂದಿನ ನಾಲ್ಕು ವಾರಗಳವರೆಗೆ ಬಂಧಿಸಬಾರದು’ ಎಂದು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ನಿರ್ದೇಶಿಸಿದೆ.

‘ಇ.ಡಿ ಸಮನ್ಸ್ ಜಾರಿ ಮಾಡಿದರೆ ವಿಚಾರಣೆಗೆ ಹಾಜರಾಗಬೇಕು. ತನಿಖೆಗೆ ಸಹಕರಿಸಬೇಕು’ ಎಂಬ ಷರತ್ತು ವಿಧಿಸಿದೆ.

ಪ್ರಕರಣವೇನು?: 2017ರ ಆಗಸ್ಟ್‌ 2ರಂದು ಆದಾಯ ತೆರಿಗೆ (ಐ.ಟಿ) ಅಧಿಕಾರಿಗಳು ಡಿ.ಕೆ.ಶಿವಕುಮಾರ್‌ಗೆ ಸೇರಿದ ಬೆಂಗಳೂರು ಮತ್ತು ನವದೆಹಲಿಯ ಮನೆಗಳ ಮೇಲೆ ದಾಳಿ ಮಾಡಿ ₹ 8,59,69,100 ಮೊತ್ತವನ್ನು ಜಪ್ತಿ ಮಾಡಿದ್ದಾರೆ.

ಡಿ.ಕೆ.ಶಿವಕುಮಾರ್, ಸಚಿನ್‌ ನಾರಾಯಣ, ಸುನಿಲ್‌ ಕುಮಾರ್‌ ಶರ್ಮ, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ವಿರುದ್ಧ ಆದಾಯ ತೆರಿಗೆ ಕಾಯ್ದೆ–1961ರ ಕಲಂ 277 ಮತ್ತು 278 ಹಾಗೂ ಭಾರತೀಯ ದಂಡ ಸಂಹಿತೆಯ ಕಲಂ 120 ಬಿ, 193 ಹಾಗೂ 199ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

‘ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಇ.ಡಿ ಜಾರಿಗೊಳಿಸಿದ್ದ ಸಮನ್ಸ್‌ ರದ್ದುಗೊಳಿಸಬೇಕು’ ಎಂದು ಕೋರಿ ಆರೋಪಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಅರ್ಜಿಗಳನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಕಳೆದ ತಿಂಗಳ 29ರಂದು ತಿರಸ್ಕರಿಸಿತ್ತು.

ತೀರ್ಪು ಪ್ರಕಟವಾದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲ ಎಂ.ಎಸ್‌.ಶ್ಯಾಮಸುಂದರ್, ‘ವಿಭಾಗೀಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

Post Comments (+)