ಶುಕ್ರವಾರ, ಸೆಪ್ಟೆಂಬರ್ 20, 2019
21 °C
ಡಿಕೆಶಿ ಪರ– ವಿರೋಧದ ಹೇಳಿಕೆ ಸಮರ

‘ಉಪ್ಪು ತಿಂದವರು ನೀರು ಕುಡಿಯಲೇ ಬೇಕು’

Published:
Updated:

ಬೆಂಗಳೂರು: ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ(ಇ.ಡಿ) ವಿಚಾರಣೆಗೆ ಗುರಿಪಡಿಸಿರುವ ವಿಷಯ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ಮಧ್ಯೆ ಮಾತಿನ ಸಮರಕ್ಕೆ ಕಾರಣವಾಗಿದೆ. 

‘ಇ.ಡಿ ವಿಚಾರಣೆಗೂ ಕೇಂದ್ರ ಸರ್ಕಾರಕ್ಕೆ ಸಂಬಂಧವಿಲ್ಲ. ಯಾವುದೇ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಂಡಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕು’ ಎಂದು ಉಪಮುಖ್ಯಮಂತ್ರಿಗಳಾದ ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಗೋವಿಂದ ಕಾರಜೋಳ ಹೇಳಿದ್ದರು. 

ಈ ಮಾತುಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸ ಒದಗಿಸಿತ್ತು. ತಮ್ಮ ಮಾತನ್ನು ಸಮರ್ಥಿಸಿಕೊಂಡಿರುವ ಅಶ್ವತ್ಥನಾರಾಯಣ ಅವರು ಟ್ವೀಟ್ ಮಾಡಿದ್ದಾರೆ. 

ಕಾರಜೋಳ, ‘ಯಾವುದೇ ವ್ಯಕ್ತಿ ಸಂಕಷ್ಟದಲ್ಲಿರುವುದನ್ನು ಕಂಡು ಖುಷಿ ಪಡುವ ಸಂಸ್ಕೃತಿ ನನ್ನದಲ್ಲ.ಶಿವಕುಮಾರ್‌ ಅವರಿಗೆ ಅಪಮಾನ ಮಾಡುವ ಯಾವುದೇ ಮಾತುಗಳನ್ನಾಡಿಲ್ಲ. ಉಪ್ಪು ತಿಂದಿದ್ದರೆ ನೀರು ಕುಡಿಯಬೇಕಾಗುತ್ತೆ ಅಂತ ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ? ತಪ್ಪು ಮಾಡದೇ ಇದ್ದರೆ ಆತಂಕ ಪಡುವ ಅಗತ್ಯವಿಲ್ಲ. ಕ್ಷಮೆ ಕೇಳುವಂತಹ ಹೇಳಿಕೆಯನ್ನು ನಾನು ಯಾವತ್ತೂ ನೀಡುವುದಿಲ್ಲ’ ಎಂದಿದ್ದಾರೆ.

ಸಕ್ಕರೆ ತಿಂದಿದ್ದರೆ?: ಬಿಜೆಪಿ ನಾಯಕರ ಟೀಕೆಗೆ ತಿರುಗೇಟು ಕೊಟ್ಟಿರುವ ಕಾಂಗ್ರೆಸ್‌ನ ವಿ.ಎಸ್. ಉಗ್ರಪ್ಪ, ‘ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಹಿಂದೆ ಜೈಲಿಗೆ ಹೋಗಿದ್ದರು. ಅವರೇನು ಉಪ್ಪು ತಿಂದು ಹೋಗಿದ್ದರೆ ಅಥವಾ ಸಕ್ಕರೆ ತಿಂದು ಹೋಗಿದ್ದರೇ. ಲಕ್ಷ್ಮಣ ಸವದಿ ಹಿಂದೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಪದತ್ಯಾಗಕ್ಕೆ ಮುನ್ನ ಅವರೇನು ಮಾಡಿದ್ದರು’ ಎಂದು ಪ್ರಶ್ನಿಸಿದ್ದಾರೆ. 

‘ಶಿವಕುಮಾರ್ ಶಕ್ತಿ ಮತ್ತು ಆತ್ಮಸ್ಥೈರ್ಯ ಕುಗ್ಗಿಸಲೆಂದೇ, ಬಿಜೆಪಿಯು ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಗಳ ಮೂಲಕ ದ್ವೇಷದ ರಾಜಕಾರಣ ನಡೆಸುತ್ತಿದೆ’ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಆರೋಪಿಸಿದ್ದಾರೆ.

 ಡಿಕೆಶಿ ಕ್ಷಮೆಯಾಚಿಸಿದ ಶ್ರೀರಾಮುಲು

ಚಿತ್ರದುರ್ಗ: ಡಿ.ಕೆ. ಶಿವಕುಮಾರ್ ಕುರಿತು ತಾವು ಆಡಿದ ಮಾತಿಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಕ್ಷಮೆ ಯಾಚಿಸಿದ್ದಾರೆ.

‘ಉಪ್ಪು ತಿಂದವರು ನೀರು ಕುಡಿಯಲೇ ಬೇಕು’ ಎಂಬ ಶ್ರೀರಾಮುಲು ಹೇಳಿಕೆ ಉಲ್ಲೇಖಿಸಿ ಶಿವಕುಮಾರ್ ಸೋಮವಾರ ಕಣ್ಣೀರು ಹಾಕಿದ್ದರು.

‘ಶಿವಕುಮಾರ್‌ ಅಣ್ಣನವರೇ, ನನ್ನ ಹೇಳಿಕೆಯಿಂದ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ. ನಿಮ್ಮನ್ನು ಕೈಮುಗಿದು ಕೇಳುತ್ತೇನೆ. ಈ ವಿಚಾರದಲ್ಲಿ ಇನ್ನು ಮುಂದೆ ನಾನು ಟೀಕೆ ಮಾಡುವುದಿಲ್ಲ’ ಎಂದರು.

Post Comments (+)