ಬುಧವಾರ, ಸೆಪ್ಟೆಂಬರ್ 18, 2019
25 °C
ಹಣ ಅಕ್ರಮ ವರ್ಗಾವಣೆ: 4 ದಿನಗಳ ಸತತ ವಿಚಾರಣೆ

ಶಾಸಕ ಡಿಕೆಶಿ ಬಂಧನ: ರಾಜ್ಯಾದ್ಯಂತ ಪ‍್ರತಿಭಟನೆಗೆ ಕಾಂಗ್ರೆಸ್ ಕರೆ

Published:
Updated:

ನವದೆಹಲಿ: ಕಾಂಗ್ರೆಸ್ ಪಕ್ಷದ ‘ಆಪದ್ಬಾಂಧವ’ ಎಂದೇ ಹೆಸರಾಗಿರುವ ಕರ್ನಾಟಕ ಕಾಂಗ್ರೆಸ್‌ನ ಪ್ರಭಾವಿ ಮುಖಂಡ ಡಿ.ಕೆ. ಶಿವಕುಮಾರ್‌ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ದೆಹಲಿಯಲ್ಲಿ ಮಂಗಳವಾರ ರಾತ್ರಿ ಬಂಧಿಸಿದ್ದಾರೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ.

ನಾಲ್ಕು ದಿನಗಳಿಂದ ಅವರನ್ನು ಇ.ಡಿ. ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದರು. ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಈಗ ಅವರನ್ನು ಬಂಧಿಸಲಾಗಿದೆ. ಅವರನ್ನು ಕಸ್ಟಡಿ ತನಿಖೆ ನಡೆಸಬೇಕಾಗಿದೆ ಎಂದು ಇ.ಡಿ. ಅಧಿಕಾರಿಗಳು ಹೇಳಿದ್ದಾರೆ.

ಬುಧವಾರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಕಸ್ಟಡಿಗೆ ಒಪ್ಪಿಸುವಂತೆ ಕೇಳಲಾಗುವುದು ಎಂದೂ ಅವರು ತಿಳಿಸಿದ್ದಾರೆ. 

ಶಿವಕುಮಾರ್‌, ದೆಹಲಿ ಕರ್ನಾಟಕ ಭವನದ ಅಧಿಕಾರಿ ಹನುಮಂತಯ್ಯ ಮತ್ತು ಇತರರ ವಿರುದ್ಧ ಕಳೆದ ಸೆಪ್ಟೆಂಬರ್‌ನಲ್ಲಿ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಇ.ಡಿ. ದಾಖಲಿಸಿಕೊಂಡಿತ್ತು. ತನಿಖೆಗೆ ಹಾಜರಾಗುವಂತೆ ಅವರಿಗೆ ಸಮನ್ಸ್‌ ಜಾರಿ ಮಾಡಲಾಗಿತ್ತು. ಆದರೆ, ಈ ಸಮನ್ಸ್‌ ರದ್ದು ಮಾಡುವಂತೆ ಕೋರಿ ಅವರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಆಗಸ್ಟ್‌ 29ರಂದು ಹೈಕೋರ್ಟ್‌ ವಜಾ ಮಾಡಿತ್ತು. 

ತಮಗೆ ಅಡಗಿಸಿಡಲು ಏನೂ ಇಲ್ಲ ಎಂದು ಹೇಳಿಕೊಂಡಿದ್ದ ಶಿವಕುಮಾರ್‌ ಅವರು ಇ.ಡಿಯ ಮುಂದೆ ತನಿಖೆಗೆ ಶುಕ್ರವಾರ ಹಾಜರಾಗಿದ್ದರು. ಆದರೆ, ಗೌರಿ–ಗಣೇಶ ಹಬ್ಬದ ದಿನವಾದ ಸೋಮವಾರ ತಮಗೆ ವಿಚಾರಣೆಯಿಂದ ವಿನಾಯಿತಿ ನೀಡಬೇಕು ಎಂದು ಅವರು ಮಾಡಿದ ಮನವಿಯನ್ನು ಇ.ಡಿ. ಗಣನೆಗೆ ತೆಗೆದುಕೊಂಡಿರಲಿಲ್ಲ.

‘ನಾನು ಈ ದಿನ ತಂದೆಗೆ ಎಡೆ ಇರಿಸಬೇಕಿತ್ತು. ನನ್ನ ಮಕ್ಕಳ ಜತೆಗೆ ಗಣೇಶ ಹಬ್ಬ ಆಚರಿಸಬೇಕಿತ್ತು. ಆದರೆ ಅದಕ್ಕೆ ಅವಕಾಶ ಕೊಟ್ಟಿಲ್ಲ’ ಎಂದು ದೆಹಲಿಯಲ್ಲಿ ಸೋಮವಾರ ಮಾತನಾಡಿದ್ದ ಅವರು ಹೇಳಿದ್ದರು. ಆಗ ಅವರು ಗದ್ಗದಿತರೂ ಆಗಿದ್ದರು. 

2017ರ ಆಗಸ್ಟ್‌ನಲ್ಲಿ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಇ.ಡಿ. ಅಧಿಕಾರಿಗಳು ಶೋಧ ನಡೆಸಿದ್ದರು. ₹8.6 ಕೋಟಿ ನಗದು ಆಗ ಪತ್ತೆಯಾಗಿತ್ತು. ₹300 ಕೋಟಿಗೂ ಹೆಚ್ಚಿನ ಅಘೋಷಿತ ಆದಾಯಕ್ಕೆ ಸಂಬಂಧಿಸಿ ದಾಖಲೆಗಳು ಸಿಕ್ಕಿವೆ ಎಂದು ಆಗ ಮೂಲಗಳು ಹೇಳಿದ್ದವು.

‘ರಾಜಕೀಯ ಪ್ರೇರಿತ’: 2017 ರಲ್ಲಿ ಗುಜರಾತ್‌ನಿಂದ ರಾಜ್ಯಸಭೆಗೆ ಚುನಾವಣೆ ನಡೆದಿತ್ತು. ಆ ಸಂದರ್ಭದಲ್ಲಿ, ಕಾಂಗ್ರೆಸ್‌ ಶಾಸಕರು ಬಿಜೆಪಿ ಪರವಾಗಿ ಅಡ್ಡಮತದಾನ ಮಾಡಬಹುದು ಎಂಬ ಕಾರಣಕ್ಕೆ ಶಾಸಕರನ್ನು ಕರ್ನಾಟಕಕ್ಕೆ ಕಳುಹಿಸಲಾಗಿತ್ತು. ಶಿವಕುಮಾರ್‌ ಅವರೇ ಈ ಶಾಸಕರನ್ನು ರೆಸಾರ್ಟ್‌ನಲ್ಲಿ ಇರಿಸಿ ರಕ್ಷಿಸಿದ್ದರು. ಭಾರಿ ಜಿದ್ದಾಜಿದ್ದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ಅಹ್ಮದ್‌ ಪಟೇಲ್‌ ಗೆಲುವು ಸಾಧಿಸಿದ್ದರು.

ಆಗ ಕಾಂಗ್ರೆಸ್‌ ಶಾಸಕರಿಗೆ ರಕ್ಷಣೆ ನೀಡಿದ್ದೇ ತಮ್ಮ ವಿರುದ್ಧದ ಆದಾಯ ತೆರಿಗೆ ಶೋಧಕ್ಕೆ ಕಾರಣ ಎಂದು ಕೆಲ ದಿನಗಳ ಹಿಂದೆ ಶಿವಕುಮಾರ್‌ ಟ್ವೀಟ್‌ ಮಾಡಿದ್ದರು. ‘ಪಕ್ಷದ ಶಿಸ್ತಿನ ಸಿಪಾಯಿಯಾಗಿರುವ ನಾನು ಪಕ್ಷ ಹೇಳಿದ್ದನ್ನು ಆಗ ಮಾಡಿದ್ದೆ. ಅದಕ್ಕಾಗಿ ಈಗ ನನ್ನನ್ನು ಗುರಿಯಾಗಿಸಲಾಗುತ್ತಿದೆ. ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ಪೂರ್ಣ ವಿಶ್ವಾಸ ಇದೆ. ಜತೆಗೆ, ಇದನ್ನು ನಾನು ರಾಜಕೀಯವಾಗಿಯೂ ಎದುರಿಸಬಲ್ಲೆ’ ಎಂದು ಟ್ವೀಟ್‌ನಲ್ಲಿ ಅವರು ಹೇಳಿದ್ದರು. 

ಇತ್ತೀಚಿನವರೆಗೆ ಅಧಿಕಾರದಲ್ಲಿದ್ದ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಕೂಟ ಸರ್ಕಾರದಲ್ಲಿ ಶಿವಕುಮಾರ್‌ ಸಚಿವರಾಗಿದ್ದರು. ಅವರು ಕನಕಪುರದ ಹಾಲಿ ಶಾಸಕ. 

ಬಂಧನದವರೆಗೆ

ಆ. 29: ಸಮನ್ಸ್‌ ರದ್ದತಿಗೆ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಕರ್ನಾಟಕ ಹೈಕೋರ್ಟ್‌

ಆ. 29: ವಿಚಾರಣೆಗೆ ಹಾಜರಾಗಲು ಡಿಕೆಶಿಗೆ ಇ.ಡಿ. ಸಮನ್ಸ್‌

ಆ. 30: ಬಂಧನದಿಂದ ರಕ್ಷಣೆ ನೀಡಬೇಕು ಎಂದು ಸಲ್ಲಿಸಿದ್ದ ಅರ್ಜಿ ವಜಾ

ಆ.30: ದೆಹಲಿಯ ಇ.ಡಿ. ಕಚೇರಿಯಲ್ಲಿ ವಿಚಾರಣೆ ಆರಂಭ, ಸತತ ನಾಲ್ಕು ದಿನ ವಿಚಾರಣೆ ಮುಂದುವರಿಕೆ

ಸೆ. 3: ಇ.ಡಿಯಿಂದ ಶಿವಕುಮಾರ್ ಬಂಧನ

ರಾಜ್ಯಾದ್ಯಂತ ಪ‍್ರತಿಭಟನೆಗೆ ‘ಕೈ’ ಕರೆ

ಬೆಂಗಳೂರು: ‘ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದೆ’ ಎಂದು ಆರೋಪಿಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬುಧವಾರ ಪ್ರತಿಭಟನೆ ನಡೆಸುವಂತೆ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಕರೆ ನೀಡಿದೆ.

ತಮ್ಮ ನಾಯಕನ ಬಂಧನವಾಗುತ್ತಿದ್ದಂತೆ ರೊಚ್ಚಿಗೆದ್ದ ಕಾರ್ಯಕರ್ತರು ರಾಮನಗರ ಜಿಲ್ಲೆ ಕನಕಪುರದಲ್ಲಿ ಪ್ರತಿಭಟ ನೆಗೆ ಇಳಿದರು. ಬಸ್‌ಗಳಿಗೆ ಕಲ್ಲು ಹೊಡೆದು, ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದರು.

ಶಿವಕುಮಾರ್ ಪ್ರತಿನಿಧಿಸುವ ಕನಕಪುರ ಕ್ಷೇತ್ರ, ಅವರ ಭಾವ ರಂಗನಾಥ್ ಪ್ರತಿನಿಧಿಸುವ ಕುಣಿಗಲ್ ಕ್ಷೇತ್ರದಲ್ಲಿ ಬುಧವಾರ ಬಂದ್ ನಡೆಸುವಂತೆ ಕರೆ ನೀಡಲಾಗಿದೆ.

ಚಿದಂಬರಂ ಸಾಲಿಗೆ ಸೇರ್ಪಡೆ

ಕೇಂದ್ರದ ಮಾಜಿ ಸಚಿವ ಮತ್ತು ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ.ಚಿದಂಬರಂ ಅವರನ್ನು ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಕಳೆದ ತಿಂಗಳು ಬಂಧಿಸಿತ್ತು.  ಇದೇ 5ರವರೆಗೆ ಅವರು ಸಿಬಿಐ ಕಸ್ಟಡಿಯಲ್ಲಿಯೇ ಇರಲಿದ್ದಾರೆ. ನಾಟಕೀಯ ಬೆಳವಣಿಗೆಗಳ ಬಳಿಕ ಕಳೆದ ತಿಂಗಳು ಅವರನ್ನು ಬಂಧಿಸಲಾಗಿತ್ತು. ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಆಗ ಕಾರಣ ನೀಡಲಾಗಿತ್ತು. 

Post Comments (+)