ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗರು ಇನ್ನೂ ಎದ್ದಿಲ್ಲ: ಇದು ಸಾಂಕೇತಿಕ– ನಂಜಾವಧೂತ ಸ್ವಾಮೀಜಿ

ಡಿ.ಕೆ.ಶಿವಕುಮಾರ್‌ ಬಂಧನ ಖಂಡಿಸಿ ಪ್ರತಿಭಟನೆ
Last Updated 12 ಸೆಪ್ಟೆಂಬರ್ 2019, 0:39 IST
ಅಕ್ಷರ ಗಾತ್ರ

ಶಾಸಕ ಡಿ.ಕೆ.ಶಿವಕುಮಾರ್‌ ಬಂಧನ ಖಂಡಿಸಿ ವಿಶ್ವ ಒಕ್ಕಲಿಗರ ಒಕ್ಕೂಟದಡಿ ವಿವಿಧ ಸಂಘಟನೆಗಳು ಇಂದು ಬೆಳಿಗ್ಗೆ 10 ಗಂಟೆಗೆ ‘ರಾಜಭವನ ಚಲೋ’ ನಡೆಸುತ್ತಿವೆ. ಹೀಗಾಗಿ ರಾಜಧಾನಿಯಲ್ಲಿ ಇಂದು ಟ್ರಾಫಿಕ್‌ ಸಮಸ್ಯೆ ನಿರೀಕ್ಷಿತ. ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಿ ಜನ ಟ್ರಾಫಿಕ್‌ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು. ಇಂದಿನ ಹೋರಾಟದಲ್ಲಿ ಯಾವೆಲ್ಲ ನಾಯಕರು ಪಾಲ್ಗೊಳ್ಳಲಿದ್ದಾರೆ, ಯಾರು ಏನು ಹೇಳಲಿದ್ದಾರೆ, ಪ್ರತಿಭಟನೆ ಸಾಗುವ ರೀತಿಯ ಕುರಿತಕ್ಷಣ ಕ್ಷಣದಮಾಹಿತಿ ಇಲ್ಲಿ ಲಭ್ಯವಿದೆ.‌

ಮ. 3.15:ಒಕ್ಕಲಿಗರು ಇನ್ನೂ ಎದ್ದಿಲ್ಲ: ಇದು ಸಾಂಕೇತಿಕ–ನಂಜಾವಧೂತ ಸ್ವಾಮೀಜಿ

ಒಕ್ಕಲಿಗ ಸಮುದಾಯದವರಿಗೆ ಅನ್ಯಾಯವಾದರೆ ಸಮಾಜ ಎದ್ದು ನಿಲ್ಲುವುದು ನಿಶ್ಚಿತ. ಇಂದು ನಡೆದಿರುವುದು ಸಾಂಕೇತಿಕ ಪ್ರತಿಭಟನೆ ಮಾತ್ರ ಎಂದು ನಂಜಾವಧೂತ ಸ್ವಾಮೀಜಿ ಎಚ್ಚರಿಸಿದ್ದಾರೆ.

ನಗರದ ಫ್ರೀಡಂ ಪಾರ್ಕ್ ಬಳಿ ಬುಧವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು ಕಾನೂನಿಗೆ ಸದಾ ಗೌರವ ನೀಡುತ್ತಿದ್ದ ಡಿಕೆಶಿ ಅವರನ್ನು ನಡೆಸಿಕೊಂಡ ಕ್ರಮ ಸರಿ ಇಲ್ಲ. ಅವರಿಗೂ ಉದ್ಯಮಿ ಸಿದ್ದಾರ್ಥ ಅವರಿಗೆ ಒದಗಿದ ಗತಿ ಆಗಬಾರದು. ಸಮಾಜ ಅವರೊಂದಿಗೆ ಇದೆ ಎಂಬುದನ್ನು ನೆನಪಿಸಲು ಈ ಬೃಹತ್ ಪ್ರತಿಭಟನಾ ನೆರವಣೆಗೆ ನಡೆದಿದೆ ಎಂದರು.

ಮ. 2.31:ಕಾವೇರಿ ಹೋರಾಟದಲ್ಲಿ ಡಿಕೆಶಿ ನೀಡಿದ್ದ ನೆರವಿಗೆ ಕೃತಜ್ಞತೆ ಸಲ್ಲಿಸಲು ನಾರಾಯಾಣಗೌಡರು ಪ್ರತಿಭಟನೆಗೆ ಬಂದಿದ್ದಾರೆ: ನಂಜಾವದೂತ ಸ್ವಾಮೀಜಿ

ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ಅವರು ಪ್ರತಿಭಟನೆಯಲ್ಲಿ ಭಾಗಹಿಸಿದ್ದಾರೆ. ಕಾವೇರಿ ಹೋರಾಟದ ವೇಳೆ ಡಿಕೆಶಿ ತಮ್ಮ ಸ್ವಂತ ದುಡ್ಡಿನಿಂದ ರಕ್ಷಣಾ ವೇದಿಕೆ ಹೋರಾಟಗಾರರಿಗೆಜಾಮೀನು ಕೊಡಿಸಿದರು. ಅವರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಹೋರಾಟದಲ್ಲಿ ನಾರಾಯಣಗೌಡ ಪಾಲ್ಗೊಂಡಿದ್ದಾರೆ ಎಂದು ನಂಜಾವದೂತ ಶ್ರೀಗಳು ಹೇಳಿದರು.

ಮ. 12.50:ಡಿಕೆಶಿ ಬಂಧನ ವಿರೋಧಿಸಿ ಭಾರಿ ಸಂಖ್ಯೆಯಲ್ಲಿ ಸೇರಿದ ಜನ

ಶಾಸಕ ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ವಿವಿಧ ಒಕ್ಕಲಿಗ ಸಂಘಟನೆಗಳ ವತಿಯಿಂದ ಬುಧಾವಾರ ನಡೆದ ಪ್ರತಿಭಟನಾ ಮೆರವಣಿಗೆ ಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು.

ಮಧ್ಯಾಹ್ನ 12.30 ಸುಮಾರಿಗೆ ನ್ಯಾಷನಲ್ ಕಾಲೇಜು ಮೈದಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ 2 ಗಂಟೆ ಹೊತ್ತಿಗೆ ಫ್ರೀಡಂ ಪಾರ್ಕ್ ಸಮೀಪಕ್ಕೆ ತಲುಪಿತು.

ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಇದೀಗ ಮಾತನಾಡುತ್ತಿದ್ದಾರೆ.

ಭಾರಿ ಸಂಖ್ಯೆಯಲ್ಲಿ ಜನ: 50 ಸಾವಿರಕ್ಕೂ ಅಧಿಕ ಮಂದಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಒಕ್ಕಲಿಗರು ತಮ್ಮ ಒಗ್ಗಟ್ಟು ಪ್ರದರ್ಶಿಸಿದರು.

ಶಾಂತಿಯುತವಾಗಿ ಮೆರವಣಿಗೆ ನಡೆದಿದ್ದು, ಹಲವೆಡೆ ಸಂಚಾರ ದಟ್ಟಣೆ ಉಂಟಾಯಿತು.

ಮ. 12.50:ಮಧ್ಯಾಹ್ನದ ಹೊತ್ತಿಗೆ ಪ್ರತಿಭಟನೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು.

ಮ. 12.16: ಕೇಂದ್ರದ ದ್ವೇಷ ರಾಜಕಾರಣ ಸಹಿಸಲು ಸಾಧ್ಯವಿಲ್ಲ: ದಿನೇಶ್ ಗುಂಡೂರಾವ್

ಬೆಂಗಳೂರು: ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡಬಾರದು ಎಂಬ ಸಂದೇಶ ಬೃಹತ್ ಜನಸಮೂಹದ ಮೂಲಕ ವ್ಯಕ್ತವಾಗಿದೆ ಎಂದು ಕೆಪಿಸಿಸೊ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಇಲ್ಲಿ ಇಂದು 50 ಸಾವಿರದಷ್ಡು ಜನ ಸೇರಲಿದ್ದು, ಇದು ಕೇಂದ್ರಕ್ಕೆ ನೀಡುವ ಪ್ರತ್ಯುತ್ತರ ಎಂದರು.

ಕೇಂದ್ರ ಸರ್ಕಾರ ಐಟಿ. ಇಡಿ ಇಲಾಖೆ ಗಳನ್ನು ದುರ್ಬಳಕೆ ಮಾಡುವುದು ಪ್ರಜಾಪ್ರಭುತ್ವ ಕ್ಕೆ ಅಪಾಯಕಾರಿ. ಡಿಕೆಶಿ ಅವರು ತನಿಖೆಗೆ ಸಹಕಾರ ನೀಡಿದ ಮೇಲೂ ಅವರಿಗೆ ಕಿರುಕುಳ ನೀಡುವ ಸಲುವಾಗಿಯೇ ಅವರನ್ನು ಬಂಧಿಸಲಾಗಿದೆ ಎಂದರು.

3 ತಿಂಗಳಲ್ಲಿ ಬ್ಯಾಂಕುಗಳಿಂದ 32 ಸಾವಿರ ಕೋಟಿ ಲೂಟಿಯಾಗಿದೆ. ಅದನ್ನು ತಡೆಯಲು ಏನು ಕ್ರಮ ಕೈಗೊಂಡಿದ್ದೀರಿ ಎಂದು ಅವರು ಪ್ರಶ್ನಿಸಿದರು.

ವಿರೋಧ ಪಕ್ಷದವರನ್ನು ಮುಗಿಸುವ ತಂತ್ರವನ್ನು ಸಹಿಸಲು ಸಾಧ್ಯವಿಲ್ಲ. ಜನ ಇದರ ವಿರುದ್ಧ ಎದ್ದು ನಿಂತಿದ್ದಾರೆ. ಇದನ್ನು ಕೇಂದ್ರಕ್ಕೆ ತಡೆಯಲು ಸಾಧ್ಯವಿಲ್ಲ ಎಂದರು.

ಮ. 12.10: ಐ.ಟಿ, ಇ.ಡಿಯನ್ನು ಕೇಂದ್ರ ಸರ್ಕಾರನಾಯಿಗಳಂತೆ ಬಳಸಿಕೊಳ್ಳುತ್ತಿದೆ ಎಂದು ಮಾಜಿ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ.

ಮ. 12.00: ನಂಜಾವದೂತ ಸ್ವಾಮೀಜಿಗಳ ಆಗಮನದ ನಂತರ ರಾಜಭವನ ಚಲೋ ಮೆರವಣಿಗೆ ಆರಂಭ

ಬೆ. 11.58: ಡಿಕೆಶಿ ಬೆಂಬಲಿಸಿ ಪ್ರತಿಭಟನೆ ತಪ್ಪು:ಸಂಸದ ಬಿ.ಎನ್.ಬಚ್ಚೇಗೌಡ ಟೀಕೆ

ಬೆ. 11.46: ಒಕ್ಕಲಿಗ ಸಮಾಜಕ್ಕೆ ಕಳಂಕ ತರಲು ಯತ್ನ

ಬೆಂಗಳೂರು: ಒಕ್ಕಲಿಗ ಸಮಾಜಕ್ಕೆ ಕಳಂಕ ತರುವ ಯತ್ನ ನಡೆಯುತ್ತಿದ್ದು, ಇದನ್ನು ಒಗ್ಗಟ್ಟಿನಿಂದ ಎದುರಿಸಬೇಕು ಎಂಬ ಆಶಯ ಒಕ್ಕಲಿಗ ಸಮಾಜದ ನಾಯಕರಿಂದ ವ್ಯಕ್ತವಾಗಿದೆ.

ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆರಂಭವಾಗಿರುವ ಪ್ರತಿಭಟನಾ ಪ್ರದರ್ಶನದಲ್ಲಿ ಒಕ್ಕಲಿಗ ಮುಖಂಡ ರವಿಶಂಕರ್ ಅವರು ಈ ಮನವಿ ಮಾಡಿದರು.

ಇನ್ನೂರಕ್ಕೂ ಅಧಿಕ ಒಕ್ಕಲಿಗ ಸಂಘಟನೆಗಳು ಒಗ್ಗಟ್ಟಿನಿಂದ ಶಿವಕುಮಾರ್ ಅವರ ಬೆನ್ನಿಗಿವೆ ಎಂದರು.

ಬೆ. 11.32: ಶಾಸಕ ಕೃಷ್ಣ ಬೈರೇಗೌಡ, ಸೌಮ್ಯಾ ರೆಡ್ಡಿ, ನಾರಾಯಣ ಸ್ವಾಮಿ, ಚೆಲುವರಾಯಸ್ವಾಮಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.ನ್ಯಾಷನಲ್ ಕಾಲೇಜು ಮೈದಾನದಲ್ಲಿ ಇದೀಗ 10 ಸಾವಿರದಷ್ಟು ಜನ ಜಮಾಯಿಸಿದ್ದಾರೆ.

ಬೆ. 11.15: ಈಗಾಗಲೇ ಪ್ರತಿಭಟನಾ ಸಭೆ ಆರಂಭವಾಗಿದೆ.ಆದರೆ ದೂರದ ಊರುಗಳಿಂದ ಜನ ಇನ್ನೂ ಸ್ಥಳಕ್ಕೆ ಬರುತ್ತಿರುವುದರಿಂದ ಮೆರವಣಿಗೆ ಆರಂಭವಾಗುವುದು ವಿಳಂಬವಾಗಲಿದೆ. ಹುಬ್ಬಳ್ಳಿ, ವಿಜಯಪುರ ಜಿಲ್ಲೆಗಳಿಂದಲೂ ಜನ ಪ್ರತಿಭಟನೆಗೆ ಆಗಮಿಸಿದ್ದಾರೆ.

ಬೆ. 11.00:ಸಮುದಾಯದ ಮುಖಂಡರಆಗಮನಕ್ಕಾಗಿ ಕಾಯುತ್ತಿರುವ ಡಿಕೆಶಿ ಅಭಿಮಾನಿಗಳು. ಸದ್ಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮೂರು ಸಾವಿರದಷ್ಟು ಜನ ಇದ್ದು, ಇದೀಗ ದೊಡ್ಡ ಸಂಖ್ಯೆಯಲ್ಲಿ ಜನಬರತೊಡಗಿದ್ದಾರೆ

ಬೆ. 10.43:ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಪ್ರತಿಭಟನೆ ಆರಂಭ

ಬೆಂಗಳೂರು: ಶಾಸಕ ಡಿ.ಶಿವಕುಮಾರ್ ಬಂಧನ ವಿರೋಧಿಸಿ ವಿವಿಧ ಒಕ್ಕಲಿಗ ಸಂಘಟನೆಗಳ ನೇತೃತ್ವದಲ್ಲಿ, ಕಾಂಗ್ರೆಸ್, ಜೆಡಿಎಸ್ ಬೆಂಬಲದೊಂದಿಗೆ ಪ್ರತಿಭಟನೆಗೆ ನಗರದ ನ್ಯಾಷನಲ್ ಕಾಲೇಜು ಮೈದಾನ ಸಜ್ಜಾಗಿದೆ.

ಈಗಾಗಲೇ ನೂರಾರು ಮಂದಿ ಮೈದಾನದಲ್ಲಿ ಸೇರಿದ್ದು, ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಲಾರಂಭಿಸಿದ್ದಾರೆ

ಎಲ್ಲರ ಕೈಯಲ್ಲಿ ಡಿಕೆಶಿ ಅವರ ಭಾವಚಿತ್ರ ಇದ್ದು, ಹಲವರು ಡಿಕೆಶಿ ಹೆಸರಿನ ಬಿಳಿ ಟೊಪ್ಪಿ ಧರಿಸಿದ್ದಾರೆ

ಪೊಲೀಸರು ಬಿಗಿ ಬಂದೋಬಸ್ತ್ ಕಲ್ಲಿಸಿದ್ದು, ಸ್ವಲ್ಪ ಹೊತ್ತಿನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಲಿದೆ.

ಪ್ರತಿಭಟನಾ ಮೆರವಣಿಗೆ ಫ್ರೀಡಂ ಪಾರ್ಕ್ ತಲುಪಲಿದ್ದು, ಅಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ. ಬಳಿಕ ನಿಯೋಗವೊಂದು ರಾಜಭವನಕ್ಕೆ ತೆರಳಿ ಮನವಿ ಸಲ್ಲಿಸಲಿದೆ.

ಮೆರವಣಿಗೆ ಹಿನ್ನೆಲೆಯಲ್ಲಿ ಸಂಚಾರ ದಟ್ಡಣೆಯಾಗುವ ನಿರೀಕ್ಷೆ ಇದೆ.

ಒಕ್ಕಲಿಗ ವಿರೋಧಿ ಬಿಜೆಪಿ: ಪ್ರತಿಭಟನೆಯ ಕೇಂದ್ರ ಬಿಂದು ಬಿಜೆಪಿ ಆಗಿದ್ದು, ಒಕ್ಕಲಿಗ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಸಾಗಿದೆ. "ಒಕ್ಕಲಿಗರ ವಿರೋಧಿ ಬಿಜೆಪಿಗೆ ಧಿಕ್ಕಾರ" ಎಂಬ ಘೋಷಣೆ ಮೊಳಗುತ್ತಿದೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಬಿ.ಎಸ್.ಯಡಿಯೂರಪ್ಪ ವಿರುದ್ಧವೂ ಘೋಷಣೆ ಮೊಳಗುತ್ತಿದೆ.

ಬೆ. 10.30:ಪ್ರತಿಭಟನಾ ಸಭೆ ನಡೆಯುವ ನ್ಯಾಷನಲ್‌ ಕಾಲೇಜು ಮೈದಾನದಲ್ಲಿನ ದೃಶ್ಯ

ಬೆ. 10.00:ಕರ್ನಾಟಕ ಕಾಂಗ್ರೆಸ್‌ನ ವಕ್ತಾರೆ ಲಾವಣ್ಯ ಬಲ್ಲಾಳ್‌ ಅವರ ಟ್ವೀಟ್‌

ಬೆ. 9.30:ಹೋರಾಟಕ್ಕೆ ಹಾಸನದಿಂದಲೂ ಅಭಿಮಾನಿಗಳು

ಹಾಸನ: ಹೋರಾಟಕ್ಕೆ ತೆರಳುತ್ತಿದ್ದವರಿಗೆ ಬೆಳಗ್ಗಿನ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.
ಹಾಸನ: ಹೋರಾಟಕ್ಕೆ ತೆರಳುತ್ತಿದ್ದವರಿಗೆ ಬೆಳಗ್ಗಿನ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

ಹಾಸನ: ಡಿಕೆಶಿ ಬೆಂಬಲಿಸಿಬೆಂಗಳೂರಿನಲ್ಲಿ ನಡೆಯುತ್ತಿರುವ ಒಕ್ಕಲಿಗರ ಒಕ್ಕೂಟದ ಹೋರಾಟಕ್ಕೆ ಹಾಸನ ಜಿಲ್ಲೆಯಿಂದಲೂಬೆಂಬಲಿಗರು ತೆರಳಿದ್ದಾರೆ. ಜಿಲ್ಲೆಯ ಎಂಟು ತಾಲ್ಲೂಕುಗಳಿಂದ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಹೊರಟಿದ್ದಾರೆ. ಹಿರೀಸಾವೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಎಲ್ಲರಿಗೂ ಉಪಾಹಾರದ ವ್ಯವಸ್ಥೆ ಮಾಡಿದ್ದಾರೆ. ಗೋಪಾಲಸ್ವಾಮಿ ಎಂಬುವವರ ನೇತೃತ್ವದಲ್ಲಿ ಒಟ್ಟಿಗೆ ಎಲ್ಲರೂ ಬೆಂಗಳೂರಿಗೆ ತೆರಳಲಿದ್ದಾರೆ.

ಬೆ. 8.30:ಪ್ರತಿಭಟನೆಗಾಗಿ ಬೆಂಗಬಲಿಗರುಬೆಂಗಳೂರಿನತ್ತ

ರಾಮನಗರ: ಸಚಿವ ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ ಒಕ್ಕಲಿಗ ಸಮುದಾಯ ಸಂಘಟನೆಗಳು ಬುಧವಾರ ಬೆಂಗಳೂರಿನಲ್ಲಿ ನಡೆಸಲಿರುವ ಪ್ರತಿಭಟನೆಯಲ್ಲಿ ಜಿಲ್ಲೆಯ‌ ಸಾವಿರಾರು‌ ಮಂದಿ ಪಾಲ್ಗೊಳ್ಳಲಿದ್ದಾರೆ‌.

ರಾಮನಗರ, ಕನಕಪುರ ಸೇರಿದಂತೆ ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಿಂದ ಕಾರ್ಯಕರ್ತರು ಈಗಾಗಲೇ ಬಸ್ ಗಳಲ್ಲಿ ಬೆಂಗಳೂರಿನತ್ತ ತೆರಳುತ್ತಿದ್ದಾರೆ. ಅವರಿಗಾಗಿ ಕೆ ಎಸ್ ಆರ್ ಟಿಸಿ ಹಾಗೂ ಖಾಸಗಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಕನಕಪುರ ಒಂದರಿಂದಲೇ ಐದು ಸಾವಿರಕ್ಕೂ ಹೆಚ್ಚು ಡಿಕೆಶಿ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಒಕ್ಕಲಿಗ ಸಮುದಾಯದ ಮುಖಂಡರು ತಿಳಿಸಿದರು.

ಬೆ. 8.00:ನನ್ನ ಅಣ್ಣನಿಗೆ ನೀಡುತ್ತಿರುವಬೆಂಬಲ ಮತ್ತು ಆಶಿರ್ವಾದಕ್ಕೆ ಕೃತಜ್ಞತೆ – ಸಂಸದ ಡಿ.ಕೆ.ಸುರೇಶ್‌

ಬೆ.7.50: ಬೆಂಬಲಕ್ಕೆ ನಿಂತವರಿಗೆ ಧನ್ಯವಾದ ಹೇಳಿದ ಡಿಕೆಶಿ

ಬೆ.7.40: ಪ್ರತಿಭಟನೆ ಶಾಂತಿಯುತವಾಗಿರಲಿ–ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ

ಬೆ. 7.40: ಪ್ರತಿಭಟನಾಕಾರರ ಉದ್ದೇಶಿಸಿಸಚಿವ ಸಿ.ಟಿ. ರವಿ ಟ್ವೀಟ್‌

ಬೆ. 7.30:ಪ್ರತಿಭಟನೆ ವಿರೋಧಿಸಿ ಕಂದಾಯ ಸಚಿವ ಆರ್‌.ಅಶೋಕ್‌ ಟ್ವೀಟ್‌

ಬೆ. 7.20:ಪ್ರತಿಭಟನಾ ಮೆರವಣಿಗೆ ವೇಳೆ ಅಹಿತಕರ ಘಟನೆ ಸಂಭವಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ. ಕಿಡಿಗೇಡಿ ಕೃತ್ಯ ನಡೆದರೆ ಆಯೋಜಕರಾದ 10 ಸಂಘಟನೆಗಳ ಪ್ರಮುಖರೇ ಹೊಣೆ –ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್‌

ಬೆ. 7.15:ನ್ಯಾಷನಲ್‌ ಕಾಲೇಜು ಮೈದಾನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆ ನಡೆಯಲಿದೆ. ಸುಮಾರು 30 ಸಾವಿರದಿಂದ 35 ಸಾವಿರ ಜನರು ಭಾಗವಹಿಸಲಿದ್ದಾರೆ.12 ಜಿಲ್ಲೆಗಳಿಂದ ಜನರು ಬರುವ ನಿರೀಕ್ಷೆ ಇದೆ. ಕನಕಪುರ, ರಾಮನಗರ, ಕುಣಿಗಲ್‌, ಮಾಗಡಿ ಮತ್ತು ಬೆಂಗಳೂರು ಉತ್ತರ, ಕೋಲಾರ ಭಾಗದಿಂದ ಹೆಚ್ಚಿನ ಜನರು ಬರುವ ಸಾಧ್ಯತೆಗಳಿದೆ ಎಂದು ಸಂಘಟಕರೇ ತಿಳಿಸಿದ್ದಾರೆ.

ಮಧ್ಯಾಹ್ನ 3 ಗಂಟೆಯವರೆಗೆ ಸಜ್ಜನ್‌ ರಾವ್‌ ವೃತ್ತ, ಮಿನರ್ವ ಸರ್ಕಲ್‌, ಹಡ್ಸನ್‌ ವೃತ್ತದಲ್ಲಿ ಸಂಚಾರ ವ್ಯತ್ಯಯ ಉಂಟಾಗಲಿದೆ. ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ.

ಪ್ರತಿಭಟನೆಯಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ, ಮಠಾಧೀಶರು, ಶಾಸಕರು, ಸಮುದಾಯದ ಗಣ್ಯರು ಭಾಗಿಯಾಗಲಿದ್ದಾರೆ.

ಬೆ.7.00 :ವಾಹನ ಸಂಚಾರ: ಪರ್ಯಾಯ ಮಾರ್ಗ‌

* ಮೆಜೆಸ್ಟಿಕ್‌ನಿಂದ ಮಾರ್ಕೆಟ್ ಕಡೆಗೆ ಹೋಗಲು ಎನ್.ಆರ್. ಜಂಕ್ಷನ್, ದೇವಾಂಗ ಜಂಕ್ಷನ್, ಸುಬ್ಬಯ್ಯ ವೃತ್ತ, ಪೂರ್ಣಿಮಾ ಜಂಕ್ಷನ್, ಊರ್ವಶಿ, ಲಾಲ್‍ಭಾಗ್‌ ಮುಖ್ಯದ್ವಾರ, ಲಾಲ್‍ಭಾಗ್ ಪಶ್ಚಿಮದ್ವಾರ, ಜೆ.ಸಿ. ರಸ್ತೆ, ಪುರಭವನದ ಮುಖಾಂತರ ಹೋಗಬೇಕು

* ರಿಚ್‍ಮಂಡ್ ವೃತ್ತದಿಂದ ಬರುವವರು ಹಡ್ಸನ್ ವೃತ್ತ, ದೇವಾಂಗ ಜಂಕ್ಷನ್, ಸುಬ್ಬಯ್ಯ ವೃತ್ತ, ಲಾಲ್‍ಬಾಗ್ ಪಶ್ಚಿಮದ್ವಾರ, ಜೆ.ಸಿ. ರಸ್ತೆ, ಪುರಭವನದ ಮುಖಾಂತರ ಮುಂದೆ ಸಾಗಬಹುದು.

* ರಿಚ್‍ಮಂಡ್ ವೃತ್ತದ ಕಡೆಯಿಂದ ಮೆಜೆಸ್ಟಿಕ್ ಹೋಗಲು ಹಡ್ಸನ್ ವೃತ್ತ, ಪಿ.ಎಸ್. ಜಂಕ್ಷನ್, ಪೊಲೀಸ್ ಕಾರ್ನರ್, ಕಬ್ಬನ್ ಉದ್ಯಾನ ಒಳಭಾಗ, ಫಿಶ್ ಕ್ಯಾಂಟೀನ್, ಕೆ.ಆರ್. ವೃತ್ತ, ಹಳೇ ಅಂಚೆ ಕಚೇರಿ ರಸ್ತೆ ಮೂಲಕ ಹೋಗಬಹುದು.

* ಕ್ವೀನ್ಸ್ ರಸ್ತೆ ಕಡೆಯಿಂದ ಬರುವ ವಾಹನಗಳು ಸಿ.ಟಿ.ಓ. ವೃತ್ತ, ಪೊಲೀಸ್ ತಿಮ್ಮಯ್ಯ ವೃತ್ತ, ಅಂಬೇಡ್ಕರ್ ಬೀದಿ, ಕೆ.ಆರ್. ವೃತ್ತ, ಹಳೇ ಅಂಚೆ ಕಚೇರಿ ರಸ್ತೆ ಮೂಲಕ ಸಾಗಬಹುದು.

* ಮೆಜೆಸ್ಟಿಕ್‌ನಿಂದ ಶಾಂತಿನಗರ, ಸಿಟಿ ಮಾರ್ಕೆಟ್, ಹೊಸೂರು ರಸ್ತೆ ಕಡೆಗೆ ಹೋಗುವ ವಾಹನಗಳು ಸಂಗೊಳ್ಳಿ ರಾಯಣ್ಣ ವೃತ್ತ, ಶೇಷಾದ್ರಿ ರಸ್ತೆ, ಮೇಲು ಸೇತುವೆ ಮತ್ತು ಕೆಳಸೇತುವೆ, ಹಳೇ ಜೆ.ಡಿ.ಎಸ್ ಕಚೇರಿ, ರೇಸ್ ಕೋರ್ಸ್ ರಸ್ತೆ, ಚಾಲುಕ್ಯ ವೃತ್ತ, ಸಿ.ಐ.ಡಿ., ಮಹಾರಾಣಿ ಮೇಲು ಸೇತುವೆ, ಕೆ.ಆರ್.ವೃತ್ತದ ಮೂಲಕ ಮುಂದೆ ಸಾಗಬಹುದು.

* ಮೆಜೆಸ್ಟಿಕ್‌ನಿಂದ ಎಚ್ಎಎಲ್, ಕೆ.ಆರ್.ಪುರಂ ಕಡೆಗೆ ಹೋಗಲು ಸಂಗೊಳ್ಳಿ ರಾಯಣ್ಣ ವೃತ್ತ, ಶೇಷಾದ್ರಿ ರಸ್ತೆ, ಮೇಲು ಸೇತುವೆ ಮತ್ತು ಕೆಳಸೇತುವೆ, ರೇಸ್ ಕೋರ್ಸ್ ರಸ್ತೆ, ಚಾಲುಕ್ಯ ವೃತ್ತ, ರಾಜಭವನ ಜಂಕ್ಷನ್, ಅಲಿ ಆಸ್ಕರ್ ರಸ್ತೆ, ಕಾಫಿ ಬೋರ್ಡ್, ಇನ್‍ಫೆಂಟ್ರಿ ರಸ್ತೆ ಮೂಲಕ ಮುಂದೆ ಸಾಗಬಹುದು.

* ಹಲವು ರಸ್ತೆಗಳಲ್ಲಿ ಸಂಚಾರಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

ಷರತ್ತುಬದ್ಧ ಅನುಮತಿ

* ಅನುಮತಿ ನೀಡಿದ ವೇಳೆ ಮತ್ತು ಮಾರ್ಗಕ್ಕೆ ಬದ್ಧರಾಗಿರಬೇಕು
* ಸಾರ್ವಜನಿಕರ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡಬಾರದು
* ಪ್ರಚೋದನಾಕಾರಿ ಹೇಳಿಕೆ ನೀಡಬಾರದು
*ಧ್ವನಿವರ್ಧಕಗಳು ನಿಗದಿಪಡಿಸಿ ಶಬ್ದ ಮಟ್ಟ ಮೀರಬಾರದು
*ಅಹಿತಕರ ಘಟನೆ ಸಂಭವಿಸಿದರೆ ಅರ್ಜಿದಾರರೇ ಹೊಣೆ
* ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಬಾರದು
* ಅನುಮತಿ ನೀಡಿದ ಸ್ಥಳದಲ್ಲಿ ಕಾರ್ಯಕ್ರಮ ನಡೆಯಬೇಕು
* ರಸ್ತೆಗಿಳಿದು ರಸ್ತೆ ಬಂದ್, ವಾಹನಗಳ ಸಂಚಾರಕ್ಕೆ ಅಡಚಣೆ ಮಾಡಬಾರದು
* ಪಟಾಕಿ ಹಚ್ಚುವುದು, ವಸ್ತುಗಳನ್ನು ಸುಟ್ಟುಹಾಕಬಾರದು
* ಪೊಲೀಸರ ಸೂಚನೆ ಪಾಲಿಸಬೇಕು
* ಸಾರ್ವಜನಿಕರ ಆಸ್ತಿಪಾಸ್ತಿ, ಜೀವಹಾನಿ ಮಾಡಬಾರದು
* ಯಾವುದೇ ಆಯುಧಗಳನ್ನು ತರಬಾರದು
* ಬಲವಂತವಾಗಿ ಅಂಗಡಿ ಮುಂಗಟ್ಟು ಬಂದ್‌ ಮಾಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT