ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಿಕೆಶಿ ಆಸ್ತಿಗಳ ಸಂಖ್ಯೆ 300ಕ್ಕೂ ಅಧಿಕ’

ಕ್ರಿಕೆಟ್‌ನ ತ್ರಿಶತಕದಂತೆ ಸಂಪಾದನೆಯಲ್ಲೂ ದಾಖಲೆ!
Last Updated 18 ಅಕ್ಟೋಬರ್ 2019, 4:26 IST
ಅಕ್ಷರ ಗಾತ್ರ

ನವದೆಹಲಿ: ‘ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್) ಕಾಯ್ದೆ ಅಡಿ ಬಂಧನಕ್ಕೆ ಒಳಗಾಗಿರುವ ಡಿ.ಕೆ. ಶಿವಕುಮಾರ್ ಹಾಗೂ ಅವರ ಕುಟುಂಬ ಸದಸ್ಯರು 300ಕ್ಕೂ ಅಧಿಕ ಆಸ್ತಿ ಸಂಪಾದಿಸಿದ್ದಾರೆ’.

ಜಾರಿ ನಿರ್ದೇಶನಾಲಯ(ಇ.ಡಿ)ದ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿದ್ದ ಆದೇಶ ಪ್ರಶ್ನಿಸಿ ಶಿವಕುಮಾರ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ವೇಳೆ ಗುರುವಾರ, ಇ.ಡಿ. ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ. ನಟರಾಜ್‌ ದೆಹಲಿ ಹೈಕೋರ್ಟ್‌ಗೆ ಈ ವಿವರ ನೀಡಿದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ತಂಡದ ವೀರೇಂದ್ರ ಸೆಹ್ವಾಗ್‌ ತ್ರಿಶತಕದ ದಾಖಲೆ ಬರೆದಿದ್ದರು. ಆರೋಪಿ ಶಿವಕುಮಾರ್‌ ಕ್ರಿಕೆಟರ್‌ ಅಲ್ಲದೆಯೇ ದಾಖಲೆ ಸ್ಥಾಪಿಸಿದ್ದಾರೆ. ಕಲ್ಪನೆಗೂ ನಿಲುಕದ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿದ್ದಾರೆ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದರು.

ಪ್ರಕರಣದ ವಿಚಾರಣೆಗಾಗಿ 14 ಜನರಿಗೆ ಸಮನ್ಸ್ ನೀಡಲಾಗಿದೆ. ಶಿವಕುಮಾರ್‌ ಹೊರತುಪಡಿಸಿ ಯಾರನ್ನೂ ಆರೋಪಿ ಮಾಡಿಲ್ಲ ಎಂದು ಅವರು ವಿವರಿಸಿದರು.

ಆರೋಪಿ ಹಾಗೂ ಸಂಬಂಧಿಗಳ ಒಟ್ಟು317 ಬ್ಯಾಂಕ್‌ ಖಾತೆಗಳು ತನಿಖಾಧಿಕಾರಿಗಳಲ್ಲಿ ಶಂಕೆ ಮೂಡಿಸಿದೆ. ಶಿವಕುಮಾರ್‌ ಹೆಸರಲ್ಲಿ 24, ಸೋದರ ಡಿ.ಕೆ.ಸುರೇಶ್ ಹೆಸರಲ್ಲಿ 27, ತಾಯಿ ಗೌರಮ್ಮ ಹೆಸರಲ್ಲಿ 38 ಆಸ್ತಿಗಳಿವೆ. ಇವು ಪಿತ್ರಾರ್ಜಿತ ಎಂದು ಹೇಳಿಕೊಂಡರೂ ನಗದು ವ್ಯವಹಾರದೊಂದಿಗೇ ಖರೀದಿಸಿದ ದಾಖಲೆಗಳಿವೆ. ಆದರೆ, ಆದಾಯದ ಮೂಲ ತೋರಿಸಲಾಗಿಲ್ಲ ಎಂದು ಅವರು ಹೇಳಿದರು.

ತನಿಖೆ ಪ್ರಗತಿಯಲ್ಲಿದ್ದು, ಪ್ರಭಾವಿಯಾದ ಆರೋಪಿ ತನಿಖೆಗೂ ಸಹಕರಿಸಿಲ್ಲ. ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯೂ ಇದೆ. ಆರೋಪಿ ಅಪರಾಧಿ ಅಲ್ಲ ಎಂದು ಮನವರಿಕೆ ಆಗುವವರೆಗೆ ಜಾಮೀನು ನೀಡಕೂಡದು ಎಂದು ನಟರಾಜ್‌ ವಾದ ಮಂಡಿಸಿದರು.

ಇದೇ ವೇಳೆ ಇ.ಡಿ. ಮಹಿಳಾ ಅಧಿಕಾರಿಯೊಬ್ಬರು ನ್ಯಾಯಾಲಯದ ಅನುಮತಿ ಪಡೆದು ನ್ಯಾಯಮೂರ್ತಿ ಸುರೇಶಕುಮಾರ್‌ ಕೈತ್‌ ಅವರ ಬಳಿ ತೆರಳಿ ಕೆಲವು ಮಹತ್ವದ ದಾಖಲೆಗಳ ಕುರಿತು ಮಾಹಿತಿ ನೀಡಿದರು.

ಆರೋಪಿಯ ಆಸ್ತಿ ಹಾಗೂ ಬ್ಯಾಂಕ್ ಖಾತೆಗಳ ಪ್ರಮಾಣವೇ ಕಪೋಲಕಲ್ಪಿತ. ಅವರ ದೆಹಲಿ ನಿವಾಸದಲ್ಲಿ ದೊರೆತಿದ್ದು ಕೇವಲ ₹ 41 ಲಕ್ಷ. ಮಿಕ್ಕ ಹಣವು ಸುನಿಲ್‌ ಶರ್ಮಾ, ಆಂಜನೇಯ ಅವರ ಮನೆಗಳಲ್ಲಿ ದೊರೆತಿದೆ. ಆ ಹಣ ತಮ್ಮದೇ ಎಂದು ಅವರು ಒಪ್ಪಿಕೊಂಡರೂ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ ವಾದಿಸಿದರು.

ವಾಸ್ತವದಲ್ಲಿ ಈ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಅವಕಾಶವೇ ಇಲ್ಲ. ಆದರೂ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುತ್ತಿರುವ ನಟರಾಜ್‌ ಅವರಿಗೆ ಬುದ್ಧಿವಂತಿಕೆಗಾಗಿ ನೊಬೆಲ್ ಪ್ರಶಸ್ತಿ ಇದ್ದರೆ ನೀಡಬಹುದು ಎಂದು ಅವರು ವ್ಯಂಗ್ಯವಾಡಿದರು.

ಆದೇಶ ಕಾಯ್ದಿರಿಸಿದ ನ್ಯಾಯಪೀಠ

ಡಿ.ಕೆ. ಶಿವಕುಮಾರ್‌ ಅವರ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ದೆಹಲಿ ಹೈಕೋರ್ಟ್‌ ಆದೇಶವನ್ನು ಕಾಯ್ದಿರಿಸಿದೆ.

ಜಾಮೀನು ಅರ್ಜಿಗೆ ಆಕ್ಷೇಪ ಸಲ್ಲಿಸಲು ವಿಚಾರಣೆ ಆರಂಭವಾಗಿ 20 ನಿಮಿಷ ಕಳೆದರೂ ನ್ಯಾಯಾಲಯಕ್ಕೆ ಹಾಜರಾಗದ ಇ.ಡಿ. ಪರ ವಕೀಲರ ನಡೆಗೆ ನ್ಯಾಯಮೂರ್ತಿ ಕೈತ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಿರಿಯ ವಕೀಲರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಯವರು, ಇದೇ 19ರೊಳಗೆ ಲಿಖಿತ ವಾದ ಮಂಡಿಸುವಂತೆ ಸೂಚಿಸಿದ ಆದೇಶವನ್ನು ಕಾಯ್ದಿರಿಸಿದ್ದರು.

4.15ಕ್ಕೆ ಬಂದ ಇ.ಡಿ. ಪರ ವಕೀಲರು ವಿಚಾರಣೆ ಆರಂಭಿಸುವಂತೆ ಮಾಡಿಕೊಂಡ ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠ ಸಂಜೆ 4.30ಕ್ಕೆ ವಿಚಾರಣೆ ಆರಂಭಿಸಿ 6.30ರವರೆಗೆ ವಾದ ಆಲಿಸಿದ ಬಳಿಕ ಆದೇಶ ಕಾಯ್ದಿರಿಸಿದ್ದಾಗಿ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT