ಭಾನುವಾರ, ಆಗಸ್ಟ್ 9, 2020
21 °C
ಭಾಷಣದ ಪೂರ್ಣಪಾಠ

ಸಾಮೂಹಿಕ ನಾಯಕತ್ವದ ಮೇಲೆಯೇ ನಂಬಿಕೆ: ಡಿ.ಕೆ.ಶಿವಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಗುರುವಾರ ಪದಗ್ರಹಣ ಮಾಡಿದ ಬಳಿಕ ಮಾಡಿದ ಭಾಷಣದ ಪೂರ್ಣ ಪಾಠ ಇಲ್ಲಿದೆ...

ಇದೊಂದು ಐತಿಹಾಸಿಕ ದಿನ. ನನ್ನ ಪಾಲಿಗೆ, ರಾಜ್ಯದ ಎಲ್ಲ ಕಾಗ್ರೆಸಿಗರು, ಕನ್ನಡ ನಾಡಿನ ಜನರಿಗೆ ಇದೊಂದು ವಿಶೇಷ ದಿನ. ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ವೀಕ್ಷಿಸುತ್ತಿರುವ ಎಲ್ಲ ಸ್ವಾಮೀಜಿ, ನಾಯಕರು, ನಮ್ಮ ಪೂಜ್ಯ ಅಜ್ಜಯ್ಯನವರಿಗೆ ನಮಿಸುತ್ತಾ ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ಎಂದು ಕೋರುತ್ತೇನೆ. ಎಲ್ಲರಿಗೂ ತಾಯಿ ಚಾಮುಂಡೇಶ್ವರಿ ಆಶೀರ್ವಾದವಿರಲಿ.

ನಮ್ಮ ಅಧಿನಾಯಕಿ ಶ್ರೀಮತಿ  ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಶ್ರೀಮತಿ ಪ್ರಿಯಾಂಕಾ ಗಾಂಧಿ ಅವರು ವೇಣುಗೋಪಾಲ್ ಅವರ ಜತೆ ಸುದೀರ್ಘ ಚರ್ಚೆ ಮಾಡಿ, ರಾಜ್ಯದ ಎಲ್ಲ ನಾಯಕರ ಬಳಿ ಸಲಹೆ ಪಡೆದು ನನಗೆ ಈ ಜವಾಬ್ದಾರಿಯನ್ನು ಕೊಟ್ಟು ನಿಮ್ಮ ಮುಂದೆ ನಿಲ್ಲಿಸಿದ್ದಾರೆ. ನನಗೆ ಅಧ್ಯಕ್ಷ ಸ್ಥಾನದ ಹಂಬಲ ಇಲ್ಲ. ಆದರೆ ಸವಾಲು ಎದುರಿಸಲು ಉತ್ಸಾಹವಿದೆ. ಸೋನಿಯಾ ಗಾಂಧಿ ಅವರು ಯಾವ ಸಂದರ್ಭದಲ್ಲಿ ನನಗೆ ಈ ಶಕ್ತಿ ಕೊಟ್ಟರು ಎಂಬುದನ್ನು ಮರೆಯಲು ಸಾಧ್ಯವಿಲ್ಲ.

ಡಿ.ಕೆ ಶಿವಕುಮಾರ್ ರಾಜಕೀಯ ಬದುಕು ಮುಗಿಯಿತು. ಬಿಜೆಪಿಯವರು ಕುತಂತ್ರ ಮಾಡಿ ಶಿವಕುಮಾರ್ ಅವರ ಕುಟುಂಬಕ್ಕೆ ನೀಡುತ್ತಿರುವ ಕಿರುಕುಳಕ್ಕೆ ಅವರ ರಾಜಕೀಯ ಅಂತ್ಯವಾಯಿತು ಎನ್ನುವ ಮಾತು ಕೇಳಿಬಂದಿದ್ದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು ತಿಹಾರ್ ಜೈಲಿಗೆ ಬಂದು ನನ್ನನ್ನು ತಮ್ಮ ಸಹೋದರನಂತೆ ಕಂಡು, ಒಂದು ಗಂಟೆಗಳ ಕಾಲ ಧೈರ್ಯ ತುಂಬಿದರು. ಈಗ ನನ್ನನ್ನು ಈ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. 

ನಾನು ಅಧ್ಯಕ್ಷನಾದರೂ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತ. ನಾನು ವೈಯಕ್ತಿಕ ನಾಯಕತ್ವಕ್ಕಿಂತ ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇಟ್ಟವನು. ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂಬುದನ್ನು ನಂಬಿರುವವನು.

ನಾನು ವಿದ್ಯಾರ್ಥಿ ನಾಯಕನಾಗಿದ್ದ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿ ಅವರು ಒಂದು ಮಾತು ಹೇಳಿದ್ದರು. ಅವಕಾಶಗಳು ಸಿಗುವುದಿಲ್ಲ. ಅದನ್ನು ನೀವೇ ಸೃಷ್ಟಿಸಿಕೊಳ್ಳಬೇಕು ಎಂದು ಯುವಕರಿಗೆ ಸಂದೇಶ ಕೊಟ್ಟರು. ನಂತರ ನಾನು ರಾಜೀವ್ ಗಾಂಧಿ ಅವರ ಕಣ್ಣಿಗೆ ಬಿದ್ದೆ.  ನಾನು ವಿದ್ಯಾರ್ಥಿ ನಾಯಕನಾಗಿದ್ದ, ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲೇ ಪಕ್ಷದ ಟಿಕೆಟ್ ಕೊಟ್ಟು ಸನ್ಮಾನ್ಯ ದೇವೇಗೌಡರ ವಿರುದ್ಧ ಸ್ಪರ್ಧಿಸಲು ಅವಕಾಶ ನೀಡಿದರು. ಇದನ್ನು ನಾನು ಮರೆಯಲು ಸಾಧ್ಯವಿಲ್ಲ. ನನ್ನ ಹಾಗೂ ಕಾಂಗ್ರೆಸ್ ಪಕ್ಷದ ನಡುವಣ ಬೆಸುಗೆ ಆರಂಭವಾದ ಬಗೆ ಇದು.

ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ನಾನು ಯಾರಿಗೂ ದ್ರೋಹ ಮಾಡಿಲ್ಲ. ಬಂಗಾರಪ್ಪನವರು, ಎಸ್.ಎಂ ಕೃಷ್ಣ, ಧರಂ ಸಿಂಗ್, ಸಿದ್ದರಾಮಯ್ಯನವರು ಹಾಗೂ ರಾಹುಲ್ ಗಾಂಧಿ ಅವರ ಆದೇಶದ ಮೇರೆಗೆ ಕುಮಾರಸ್ವಾಮಿ ಸಂಪುಟದಲ್ಲೂ ಕೆಲಸ ಮಾಡಿದ್ದೇನೆ. ಆದರೆ ನಾನು ಯಾರಿಗೂ ದ್ರೋಹ ಬಗೆದಿಲ್ಲ. ನಾನು ಹಲವು ತೊಂದರೆ ಅನುಭವಿಸಿದ್ದೇನೆ. ಎಲ್ಲವೂ ಪಕ್ಷಕ್ಕೊಸ್ಕರ. ನಾನು ಯಾರಿಗಾದರೂ ಅನ್ಯಾಯ ಮಾಡಿದ್ದರೆ ಶಿಕ್ಷೆ ಸ್ವೀಕರಿಸಲು ಸಿದ್ಧ. ನನಗೆ ಅಧಿಕಾರ ಕೊಡದಿದ್ದಾಗಲೂ ಪಕ್ಷದ ಬಗ್ಗೆ ಚಕಾರ ಎತ್ತಲಿಲ್ಲ. ಇದೇ ನನ್ನ ಬದ್ಧತೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಕೊಟ್ಟಿರುವ ಶಕ್ತಿ ನನ್ನ ರಕ್ತದ ಕಣ, ಕಣದಲ್ಲಿದ್ದು ನಾನು ಬದುಕಿರುವವರೆಗೂ ಇದನ್ನು ಮರೆಯಲು ಸಾಧ್ಯವಿಲ್ಲ.

ಪಕ್ಷಕ್ಕೆ ದಶ ದೀಪಗಳ ಶಕ್ತಿ

ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕು. ಐದು ಬೆರಳು ಸೇರಿದರೆ ಮಾತ್ರ ಹಸ್ತ. ವಿದ್ಯಾರ್ಥಿ ದಳ, ಮಹಿಳಾ ಕಾಂಗ್ರೆಸ್, ಸೇವಾದಳ, ಯುವ ಕಾಂಗ್ರೆಸ್ ಸೇರಿದಂತೆ ಪಕ್ಷದ ಎಲ್ಲ ಘಟಕಗಳನ್ನು, ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು. ಎಂಥಾ ಸಂದರ್ಭದಲ್ಲಿ ನಾವು ದೀಪ ಬೆಳಗಿದ್ದೇವೆ ಎಂದರೆ ಬುದ್ಧ ಬಸವ ಮನೆಬಿಟ್ಟ ಘಳಿಗೆ, ಯೇಸುಕ್ರಿಸ್ತ ಶಿಲುಬೆಗೇರಿದ ಘಳಿಗೆ, ಪ್ರವಾದಿ ಪೈಗಂಬರ್ ದಿವ್ಯವಾಣಿ ಕೇಳಿದ ಘಳಿಗೆ, ಬಾಬಾಸಾಹೇಬ್ ಅಂಬೇಡ್ಕರ್ ಜನ್ಮತಳೆದ ಘಳಿಗೆ, ಮಹಾತ್ಮ ಗಾಂಧೀಜಿಯವರು ಕಾಂಗ್ರೆಸ್ ಚುಕ್ಕಾಣಿ ಹಿಡಿದ ಘಳಿಗೆ ನಾವು ಹತ್ತು ಮಂದಿ ಸೇರಿ ದಶಜ್ಯೋತಿಯನ್ನು ಹತ್ತು ಬೆರಳುಗಳಿಂದ ಬೆಳಗಿದ್ದೇವೆ. ಇದು ಒಗ್ಗಟ್ಟಿನ ಜ್ಯೋತಿ. 

ಮುಂದಿನ ದಿನಗಳಲ್ಲಿ ಈ ಜ್ಯೋತಿಗೆ ಇನ್ನಷ್ಟು ಶಕ್ತಿ ಬರಬೇಕು. ಈ ಎಲ್ಲ ಸಂಘಟನೆಗಳಿಗೆ ನಾವು ಶಕ್ತಿ ನೀಡದಿದ್ದರೆ ಗುರಿ ಸಾಧಿಸಲು ಸಾಧ್ಯವಿಲ್ಲ. ನಮ್ಮ ಪಕ್ಷವನ್ನು ಮಾಸ್ ಬೇಸ್ ನಿಂದ ಕೇಡರ್ ಬೇಸ್ ಪಾರ್ಟಿಯಾಗಿ ಪರಿವರ್ತಿಸಬೇಕಿದೆ. ಯಾವುದೇ ನಾಯಕನಾದರೂ ಆತ ತನ್ನ ಬೂತ್ ಮಟ್ಟದಿಂದ ಪ್ರತಿನಿಧಿಸಬೇಕು. ಇದಕ್ಕೆ ಕೇರಳ ಮಾಡೆಲ್ ಪ್ರೇರಣೆ. ನಾವೆಲ್ಲರೂ ಸೇರಿ ಎಲ್ಲರಿಗೂ ಸ್ಥಾನಮಾನ ಸಿಗುವಂತೆ ಕಾರ್ಯಕ್ರಮ ರೂಪಿಸೋಣ.

ಸಾಮೂಹಿಕ ನಾಯಕತ್ವಕ್ಕೆ ಆದ್ಯತೆ

ನಾನು ಯಾವುದೇ ನಿರ್ಧಾರ ಕೈಗೊಂಡರೂ ಸಾಮೂಹಿಕವಾಗಿ ಚರ್ಚಿಸಿ, ನಂತರ ತೀರ್ಮಾನಿಸುತ್ತೇನೆ. ವೈಯಕ್ತಿಕ ತೀರ್ಮಾನ ಕೈಗೊಳ್ಳುವುದಿಲ್ಲ. ಯಾವುದೇ ಗುಂಪುಗಾರಿಕೆ ಮೇಲೆ ನನಗೆ ನಂಬಿಕೆ ಇಲ್ಲ. ಯಾವುದೇ ಧರ್ಮ, ಜಾತಿ ಬೇಧ-ಭಾವ ನನಗಿಲ್ಲ. ನಾನು ನಂಬುವುದು ಕೇವಲ ಕಾಂಗ್ರೆಸ್ ಧರ್ಮವನ್ನು ಮಾತ್ರ. ಈ ನಿಟ್ಟಿನಲ್ಲಿ ನಾವೆಲ್ಲರು ಹೆಜ್ಜೆ ಹಾಕಬೇಕು. 

ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷದ ಸದಸ್ಯರಾಗಿರುವುದಕ್ಕೆ ನೀವು ಹೆಮ್ಮೆಪಡಬೇಕು. ನಾವು ಇಂದು ರಾಷ್ಟ್ರದ ಧ್ವಜವನ್ನು ಹೊತ್ತಿದ್ದೇವೆ. ಇದನ್ನು ಬಳಸಿಕೊಳ್ಳಲು ಬಿಜೆಪಿ, ಜನತಾದಳದವರಿಗೆ ಸಾಧ್ಯವೇ? ಖಂಡಿತಾ ಇಲ್ಲ. ನಾವು ವ್ಯಕ್ತಿ ಪೂಜೆ ಬಿಡೋಣ, ಪಕ್ಷ ಪೂಜೆ ಮಾಡೋಣ. ಯಾವ ಹಿಂಬಾಲಕರೂ ನನಗೆ ಬೇಡ. ನಾವು ನಮ್ಮ ನೆರಳನ್ನೇ ನಂಬಲು ಆಗುಗುವುದಿಲ್ಲ. 20, 30 ವರ್ಷ ತಯಾರು ಮಾಡಿದ ನಾಯಕರು ಏನು ಮಾಡಿದರು ಅಂತಾ ನಾವು ನೋಡಿದ್ದೇವೆ.

ರಾಜೀವ್ ಗಾಂಧಿ ಅವರು ಯುವ ಶಕ್ತಿಯ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು. ನಾಯಕರನ್ನು ನಿರ್ಮಿಸುವವನೇ ನಿಜವಾದ ನಾಯಕ. ಪ್ರಜಾಪ್ರಭುತ್ವದಲ್ಲಿ ಪಂಚಾಯ್ತಿಯಿಂದ ಸಂಸತ್ತಿನವರೆಗೆ ನಾಯಕರ ಅಗತ್ಯವಿದೆ. ಹೀಗಾಗಿ ಪಂಚಾಯತ್ ಕಾಯ್ದೆ ತಿದ್ದುಪಡಿ ತಂದಿದ್ದೇವೆ ಎಂದು ರಾಜೀವ್ ಗಾಂಧಿ ಸಾರಿದ್ದರು. ರಾಜೀವ್ ಗಾಂಧಿ ಅವರು ಮತದಾನದ ವಯಸ್ಸನ್ನು 18ಕ್ಕೆ ಇಳಿಸಿದಾಗ, ಬೇರೆ ಪಕ್ಷದವರು ಇದನ್ನು ಪ್ರಶ್ನಿಸಿದ್ದರು. ಆಗ 16ನೇ ವಯಸ್ಸಿಗೆ 10ನೇ ತರಗತಿ ಪಾಸಾದವರನ್ನು ದೇಶ ಕಾಯಲು ಕಳುಹಿಸುತ್ತೇವೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಲು ಪರಿಗಣಿಸದಿದ್ದರೆ ಅವರಿಗೆ ಅನ್ಯಾಯ ಮಾಡಿದಂತೆ ಎಂದು ರಾಜೀವ್ ಗಾಂಧಿ ಹೇಳಿದ್ದರು. ಆ ಮೂಲಕ ಯುವ ಶಕ್ತಿ ಮೇಲೆ ಅಪಾರ ನಂಬಿಕೆ, ವಿಶ್ವಾಸ ಇಟ್ಟಿದ್ದರು. ಇಂದು ತಂತ್ರಜ್ಞಾನವನ್ನು ನಾವು ಬಹಳ ದೊಡ್ಡ ಮಟ್ಟದಲ್ಲಿ ಬಳಸುತ್ತಿದ್ದೇವೆ. ಇದಕ್ಕೆ ಅಡಿಪಾಯ ಹಾಕಿದ್ದೇ ರಾಜೀವ್ ಗಾಂಧಿ ಅವರು. ಅವರ ಪ್ರೇರಣೆಯಿಂದ ನಾನು ಇಂದು ಇಲ್ಲಿ ನಿಂತಿದ್ದೇನೆ.

ಪಕ್ಷ ಅಧಿಕಾರಕ್ಕೇರಲು ಮೆಟ್ಟಿಲಾಗುವ ಆಸೆ

ನನಗೆ ಯಾರು ಎಷ್ಟೇ ತೊಂದರೆ ಕೊಡಲಿ, ಆಮಿಷ ಒಡ್ಡಲಿ, ಕೇಸ್ ಹಾಕಲಿ, ಜೈಲಿಗೆ ಹಾಕಲಿ ಯಾವುದಕ್ಕೂ ನಾನು ಬೆದರುವುದಿಲ್ಲ. ಈ ಡಿ.ಕೆ ಶಿವಕುಮಾರ್ ಜಗ್ಗುವ ಮಗ ಅಲ್ಲ. ಕೆಲವರು ನನ್ನನ್ನು ಕನಕಪುರ ಬಂಡೆ ಅಂತಾರೆ. ಕಲ್ಲು ಪ್ರಕೃತಿ, ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಬಂಡೆಗೆ ಹುಳಿ ಪೆಟ್ಟು ಬಿದ್ದರೆ ಅಡಿಪಾಯದ ಕಲ್ಲಾಗುತ್ತದೆ. ಇನ್ನೂ ಪೆಟ್ಟು ಬಿದ್ದರೆ ಚಪ್ಪಡಿಯಾಗುತ್ತದೆ. ಇನ್ನು ಪೆಟ್ಟು ಬಿದ್ದರೆ ಬಾಗಿಲ ಕಂಬವಾಗುತ್ತದೆ. ಇನ್ನೂ ಪೆಟ್ಟು ಬಿದ್ದರೆ ದೇವರ ಶಿಲೆಯಾಗುತ್ತದೆ. ನಾನು ಶಿಲೆಯಾಗಲು ಬಯಸುವುದಿಲ್ಲ. ಬದಲಿಗೆ ವಿಧಾನಸೌಧದ ಮೆಟ್ಟಿಲ ಕಲ್ಲಾಗುತ್ತೇನೆ. ನೀವು ಆ ಕಲ್ಲಿನ ಮೇಲೆ ನಡೆದುಕೊಂಡು ವಿಧಾನಸೌಧದ ಮೂರನೇ ಮಹಡಿ ತಲುಪಿದರೆ ಸಾಕು. ಅದರಲ್ಲಿ ತೃಪ್ತಿ ಪಡುತ್ತೇನೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬುದೇ ನನ್ನ ಪ್ರಮುಖ ಗುರಿ.

ಕಾಂಗ್ರೆಸ್ ದೇಶಕ್ಕೆ ಅನಿವಾರ್ಯ

ಅನೇಕ ನಾಯಕರು ಕಾಂಗ್ರೆಸ್ ಕಡೆ ಮುಖ ಮಾಡುತ್ತಿದ್ದಾರೆ. ಈ ದೇಶಕ್ಕೆ, ರಾಜ್ಯಕ್ಕೆ ಕಾಂಗ್ರೆಸ್ ಅನಿವಾರ್ಯವಾಗಿದೆ. ಈ ದೇಶದಲ್ಲಿ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ, ಪತ್ರಿಕಾರಂಗದ ಬಗ್ಗೆ ಮಾತನಾಡುತ್ತೇವೆ. ಇವುಗಳನ್ನು ಆಧಾರ ಸ್ತಂಭ ಎನ್ನುತ್ತೇವೆ. ಅದೇ ರೀತಿ ರೈತರು, ಯೋಧರು, ಕಾರ್ಮಿಕರು, ಶಿಕ್ಷಕರು ಈ ದೇಶಕ್ಕೆ ಪ್ರಮುಖ ಸ್ತಂಭಗಳು. ಇಂದು ಅವರ ಪರಿಸ್ಥಿತಿ ಹದಗೆಟ್ಟಿದೆ. ಅವರ ಉದ್ಧಾರಕ್ಕೆ ಶ್ರಮಿಸೋಣ.

ಕೊರೋನಾ ಸಂದರ್ಭದಲ್ಲಿ ನಾವು ಮುಕ್ತ ಮನಸ್ಸಿನಿಂದ ಕೋವಿಡ್ ಸಂತ್ರಸ್ತರಿಗೆ ಸಹಾಯ ಮಾಡಿದ್ದೇವೆ. ಅವರ ಬೆನ್ನೆಲುಬಾಗಿ ನಿಂತೆವು. ಬೇರೆಯವರು ಕೋವಿಡ್ ವಿಚಾರಕ್ಕೂ ಕೋಮು ಲೇಪ ಹಚ್ಚಿದರು. ನಾನು ಹೇಳಿದೆ. ಕೊರೋನಾ ಯಾವುದೋ ಒಂದು ಜಾತಿ, ಧರ್ಮದವರಿಗೆ ಬಂದಿಲ್ಲ ಅಂತಾ. ಇಂದು ರೈತ ಅನ್ನ ಬೆಳೆಯುತ್ತಾನೆ. ಅದಕ್ಕೆ, ಅದನ್ನು ತಿನ್ನುವವರಿಗೆ ಜಾತಿ ಇದೆಯಾ. ಸಿದ್ದರಾಮಯ್ಯ ಅವರು ಅನ್ನ ಭಾಗ್ಯ ಕೊಟ್ಟರು, ಅದನ್ನು ಒಂದು ಜಾತಿಯವರಿಗೆ ಮಾತ್ರ ಕೊಟ್ಟರೆ? ನೇಕಾರರು ಬಟ್ಟೆ ನೇಯುತ್ತಾರೆ. ಅವರು ಜಾತಿ ಆಧಾರದ ಮೇಲೆ ನೇಯುತ್ತಾರಾ? ಸಂಕಷ್ಟದ ಸಂದರ್ಭದಲ್ಲಿ ನನ್ನ ಕರೆಗೆ 5700 ಎನ್ಎಯುಐ, ಯುವ ಕಾಂಗ್ರೆಸ್ ಕಾರ್ಯಕರ್ತರು ರಕ್ತದಾನ ಮಾಡಿದ್ದಾರೆ. ಅವರಿಗೆ ಸೆಲ್ಯೂಟ್ ಮಾಡುತ್ತೇನೆ. ಅವರು ಕೊಟ್ಟ ರಕ್ತಕ್ಕೆ ಜಾತಿ ಇದೆಯಾ? ನಿರ್ದಿಷ್ಟ ಜಾತಿಯವರ ದೇಹವನ್ನು ಮಾತ್ರ ಆ ರಕ್ತ ಸೇರಿದೆಯಾ?

ರೈತ ಬೆಳೆದ ಬೆಲೆ, ಮಾರುಕಟ್ಟೆ  ಕಲ್ಪಿಸಲು ಸಾಧ್ಯವಾಗಲಿಲ್ಲವಲ್ಲ ಮುಖ್ಯಮಂತ್ರಿಗಳೇ, ನಾವು 100 ಕೋಟಿ ರೂಪಾಯಿ  ತರಕಾರಿ ಖರೀದಿಸಿದೆವು. ನಮ್ಮ ಕಾರ್ಯವನ್ನು ರೈತ ಸಂಘಗಳು ಶ್ಲಾಘಿಸಿವೆ.  ದೇಶ ಕಟ್ಟುತ್ತಿರುವ ಕಾರ್ಮಿಕ ಸಮುದಾಯದವರನ್ನು ನೀವು ನಡೆಸಿಕೊಂಡ ರೀತಿ ಎಷ್ಟು ಹೀನಾಯವಾಗಿತ್ತು. ನಿಮ್ಮಿಂದ ಅವರಿಗೆ ಸಮರ್ಪಕ ಹಣ, ಆಹಾರ, ಆರೋಗ್ಯ ಕಿಟ್ ನೀಡಲಾಗಲಿಲ್ಲ. ಬದಲಿಗೆ ಅವರಿಗೆ ನೀಡಬೇಕಾದ ಪರಿಹಾರ ವಸ್ತುಗಳ ಮೇಲೆ ನಿಮ್ಮ ಪಕ್ಷದ, ನಾಯಕರ ಫೋಟೋ ಹಾಕಿಕೊಂಡು ನಿಮ್ಮ ಕಾರ್ಯಕರ್ತರಿಗೆ ಹಂಚಿಕೊಂಡಿರಿ. ಇಲ್ಲದಿದ್ದರೆ ಅವರೇಕೆ ಬೆಂಗಳೂರು ಬಿಟ್ಟು ಹೋಗುತ್ತಿದ್ದರು? ನಾವು ಶ್ರಮಿಕರ ಪರವಾಗಿ, ಅಸಂಘಟಿತ ಕಾರ್ಮಿಕರ ಪರವಾಗಿ ಧ್ವನಿ ಎತ್ತಿದೆವು. ನಾವು ಅವರಿಗೆ ಮಾಸಿಕ  10 ಸಾವಿರ ರುಪಾಯಿ ಕೊಡಲು ಕೇಳಿದೆವು. 5 ಸಾವಿರ ಘೋಷಿಸಿದಿರಿ. ಈವರೆಗೂ ಅದನ್ನೂ ನೀಡಿಲ್ಲ. ಅವರು ಸತ್ತ ಮೇಲೆ ಪರಿಹಾರ ಕೊಡುತ್ತೀರಾ? ಆಪ್, ದಾಖಲೆ ಅಂತಾ ಇಲ್ಲದ ಗೊಂದಲ ಸೃಷ್ಟಿಸಿ ಅವರಿಗೆ ಪರಿಹಾರ ಸಿಗದಂತೆ ಮಾಡಿದ್ದೀರಿ. ಇದರ ವಿರುದ್ಧ ಧ್ವನಿ ಎತ್ತಲು ನಾವಿದ್ದೇವೆ.

ಬಿಜೆಪಿ ಮುಕ್ತ ರಾಜ್ಯ ಮಾಡಲು ನಾವೆಲ್ಲ ಪ್ರತಿಜ್ಞೆ ಮಾಡಬೇಕಿದೆ. ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು ಎಂಬ ತತ್ವದ ಮೇಲೆ ನಾವು ಸಾಗೋಣ. ಆಪರೇಷನ್ ಕಮಲದ ಮೂಲಕ ಹೋದವರು, ಹೋಗುವವರು ಹೋಗಲಿ, ಸಂತೋಷದಿಂದ ಕಳುಹಿಸಿಕೊಡುತ್ತೇವೆ. ಈ ಕಾರ್ಯಕರ್ತರು ಹಾಗೂ ನಾಯಕರಿಗೆ ಪಕ್ಷ ಕಟ್ಟುವ ಶಕ್ತಿ ಇದೆ.

ನೀವು ಇಟ್ಟಿರುವ ಭರವಸೆ ಉಳಿಸಿಕೊಂಡು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ. ನಿಮ್ಮ ಮಗನೆಂದು ಭಾವಿಸಿ ನನ್ನನ್ನು ಸ್ವೀಕರಿಸಿ, ಆಶೀರ್ವಾದ ಮಾಡಿ. ಮಾನವ ಧರ್ಮಕ್ಕೆ ಜಯವಾಗಲಿ. ಈ ಸಮಯದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸುತ್ತಾ ಮುಂದೆ ಸಾಗೋಣ. ಪಕ್ಷ ಕಟ್ಟೊಣ. ಪಕ್ಷಕ್ಕಾಗಿ ಹಗಲಿರುಳು ದುಡಿದ ಎಲ್ಲರಿಗೂ ನಮಿಸುತ್ತೇನೆ. ಕಾರ್ಯಕರ್ತರು ಶಕ್ತಿಯಾದರೆ ನಾವು ಶಕ್ತಿಶಾಲಿಯಾಗುತ್ತೇವೆ. ನೀವು ದುರ್ಬಲರಾದರೆ ನಾವು ದುರ್ಬಲರಾಗುತ್ತೇವೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ದುಡಿದ ಎಲ್ಲರಿಗೂ ಧನ್ಯವಾದಗಳು.

ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ಶುಭಾಶಯ

ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿರುವ ಡಿ.ಕೆ ಶಿವಕುಮಾರ್ ಅವರಿಗೆ ಪಕ್ಷದ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಅವರು ಪತ್ರದ ಮೂಲಕ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರು ಕಾರ್ಯಕ್ರಮದ ವೇಳೆ ದೂರವಾಣಿ ಕರೆ ಮಾಡಿ  ಶುಭಾಶಯ ಹೇಳಿದರು.

ಸೋನಿಯಾ ಗಾಂಧಿ: ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪಕ್ಷದ ಕಾರ್ಯಕರ್ತರು ಹಾಗೂ ನಾಯಕರನ್ನು ತಂತ್ರಜ್ಞಾನದ ಮೂಲಕ ಸಂಘಟಿಸುತ್ತಿರುವ ಪ್ರಯತ್ನದಿಂದ ಸಂತೋಷವಾಗಿದೆ. ಕಾಂಗ್ರೆಸ್ ಪಕ್ಷವು ಸಂವಿಧಾನದ ತತ್ವಗಳನ್ನು ಎತ್ತಿ ಹಿಡಿದು, ಉತ್ತಮ ಸಮಾಜಕ್ಕಾಗಿ ಜನರ ಆಂದೋಲನವಾಗಿದೆ. ಸದ್ಯ ಕರ್ನಾಟಕ ಸೇರಿದಂತೆ ದೇಶ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು, ಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವ ಮೂಲಕ ಪಕ್ಷದ ಸಿದ್ಧಾಂತವನ್ನು ಎತ್ತಿ ಹಿಡಿಯಬೇಕಿದೆ. ಶಿವಕುಮಾರ್ ನೇತೃತ್ವದಲ್ಲಿ ಕೆಪಿಸಿಸಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿದೆ. ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡಲಿದೆ ಎಂಬ ನಂಬಿಕೆ ಇದೆ. ಈ ಮಹತ್ವದ ಸಮಯದಲ್ಲಿ ಕೆಪಿಸಿಸಿಯ ಎಲ್ಲ ಸದಸ್ಯರಿಗೂ ಶುಭ ಕೋರುತ್ತೇನೆ.

ರಾಹುಲ್ ಗಾಂಧಿ: ಸಂಕಷ್ಟದ ಸಂದರ್ಭದಲ್ಲಿ ಪಕ್ಷದ ಜವಾಬ್ದಾರಿ ಹೊತ್ತಿರುವ ಡಿ.ಕೆ ಶಿವಕುಮಾರ್ ಅವರಿಗೆ ಅಭಿನಂದನೆಗಳು. ಪಕ್ಷದಲ್ಲಿ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಜವಾಬ್ದಾರಿ ನಿಮ್ಮ ಮೇಲಿದ್ದು, ನೀವು ಇದನ್ನು ಮಾಡುವ ವಿಶ್ವಾಸ ನನಗಿದೆ. ನಿಮ್ಮ ಮುಂದಿನ ಕಾರ್ಯಗಳಿಗೆ ಶುಭವಾಗಲಿ.

ಪ್ರಿಯಾಂಕ ಗಾಂಧಿ: ಅತ್ಯಂತ ಸಂಕೀರ್ಣ ಪರಿಸ್ಥಿತಿಯಲ್ಲಿ ಪಕ್ಷದ ಜವಾಬ್ದಾರಿಯನ್ನು ನೀವು ವಹಿಸಿಕೊಂಡಿದ್ದೀರಿ. ಎಂತಹ ಕಠಿಣ ಪರಿಸ್ಥಿತಿ ಬಂದರೂ ನಾವು ನಿಮ್ಮ ಜತೆಗೆ ನಿಲ್ಲುತ್ತೇವೆ. ನೀವು ಧೈರ್ಯದಿಂದ ಮುನ್ನುಗ್ಗಿ.  ಪಕ್ಷವನ್ನು ಸದೃಢವಾಗಿ ಸಂಘಟಿಸಿ. ನಿಮಗೆ ಅಭಿನಂದನೆಗಳು.

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ಮುಖಂಡರಾದ ಎಂ. ವೀರಪ್ಪ ಮೊಯ್ಲಿ, ಕೆ.ಎಚ್. ಮುನಿಯಪ್ಪ, ರೆಹಮಾನ್ ಖಾನ್, ಬಿ.ಕೆ. ಹರಿಪ್ರಸಾದ್, ಆರ್.ವಿ. ದೇಶಪಾಂಡೆ ಮತ್ತಿತರ ನಾಯಕರು, ಕೇಂದ್ರ ಹಾಗೂ ರಾಜ್ಯದ ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು ಭಾಗವಹಿಸಿದ್ದರು.

ರಾಜ್ಯದ 19,000 ಕ್ಕೂ ಹೆಚ್ಚು  ಕೇಂದ್ರಗಳಲ್ಲಿ ಡಿಜಿಟಲ್ ಜಾಲತಾಣ ಝೂಮ್ ಸಂಪರ್ಕ ಹಾಗೂ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ 40 ಲಕ್ಷಕ್ಕೂ ಹೆಚ್ಚು ಜನರು ನೇರಪ್ರಸಾರದಲ್ಲಿ ಕಾರ್ಯಕ್ರಮ ವೀಕ್ಷಿಸಿದರು. ಇದಲ್ಲದೆ, ಕನ್ನಡದ ಎಲ್ಲ ಟಿವಿ ಚಾನೆಲ್ಗಳು ಕಾರ್ಯಕ್ರಮವನ್ನು ನೇರಪ್ರಸಾರ ಮಾಡಿದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು