ಮಂಗಳವಾರ, ಆಗಸ್ಟ್ 3, 2021
24 °C
ಹಾರ ಬದಲಿಸಿಕೊಂಡ ಅಮರ್ತ್ಯ– ಐಶ್ವರ್ಯ

ಡಿ.ಕೆ.ಶಿವಕುಮಾರ್‌ ಮನೆಯಲ್ಲಿ ಹೆಣ್ಣು ನೋಡುವ ಶಾಸ್ತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DK Shivakumar

ಬೆಂಗಳೂರು: ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ‌.ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಮತ್ತು ಕೆಫೆ ಕಾಫಿಡೇ ಸಂಸ್ಥಾಪಕ, ದಿವಂಗತ ವಿ.ಜಿ.ಸಿದ್ಧಾರ್ಥ ಹೆಗ್ಡೆ ಅವರ ಪುತ್ರ ಅಮರ್ತ್ಯ ಹೆಗ್ಡೆ ಅವರ ವಿವಾಹ ಕುರಿತಂತೆ ಈಗಾಗಲೇ ಆಗಿರುವ ಮಾತುಕತೆಯಂತೆ, ಸೋಮವಾರ ಹೆಣ್ಣು ನೋಡುವ ಶಾಸ್ತ್ರ ನಡೆಯಿತು.

ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಐಶ್ವರ್ಯ ಮತ್ತು ಅಮರ್ತ್ಯ ಜೋಡಿ ಪರಸ್ಪರ ಹಾರ ಬದಲಿಸಿಕೊಂಡರು. ಎರಡೂ ಕುಟುಂಬಗಳ ಹಿರಿಯರ ಸಮ್ಮುಖದಲ್ಲಿ ಸಂಭ್ರಮದಿಂದ ಕಾರ್ಯಕ್ರಮ ನಡೆಯಿತು.

ಕಳೆದ ಭಾನುವಾರ ಎಸ್.ಎಂ.ಕೃಷ್ಣ ಮತ್ತು ಅವರ ಪುತ್ರಿ ಮಾಳವಿಕಾ ಅವರು ಡಿ.ಕೆ.ಶಿವಕುಮಾರ್ ಮನೆಗೆ ಬಂದು ವಿವಾಹ ಸಂಬಂಧದ ಬಗ್ಗೆ ಮಾತುಕತೆ ನಡೆಸಿದ್ದರು.

ಕಳೆದ ವರ್ಷ ಜುಲೈ 31ರಂದು ಸಿದ್ಧಾರ್ಥ ಅವರು ಮಂಗಳೂರು ಸಮೀಪದ ನೇತ್ರಾವತಿ ನದಿಗೆ ಬಿದ್ದು ಸಾವಿಗೀಡಾಗಿದ್ದರು. ಕುಟುಂಬದ ಯಜಮಾನನ ಸಾವು ಸಂಭವಿಸಿ ವರ್ಷ ತುಂಬುವ ಮೊದಲು ಶುಭ ಕಾರ್ಯ ನಡೆಸುವಂತಿಲ್ಲ ಎಂಬ ಪದ್ಧತಿ ಇರುವುದರಿಂದ ಆಷಾಢ ಮಾಸ ಮುಗಿದ ಬಳಿಕ ಅದ್ಧೂರಿಯಾಗಿ ವಿವಾಹ ನಿಶ್ಚಿತಾರ್ಥ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಅಮೆರಿಕದಲ್ಲಿ ವ್ಯಾಸಂಗ ಮಾಡಿರುವ ಅಮರ್ತ್ಯ ಹೆಗ್ಡೆ (26) ಅವರು ಸದ್ಯ ತಾಯಿ ಮಾಳವಿಕಾ ಜತೆಗೆ ಕೆಫೆ ಕಾಫಿಡೇ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. ಎಂಜಿನಿಯರಿಂಗ್ ಪದವೀಧರೆ ಐಶ್ವರ್ಯಾ (22) ಅವರು ತಮ್ಮ ತಂದೆಯ ಒಡೆತನದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಸಿದ್ದಾರ್ಥ ಅವರ ಸಾವಿಗೆ ಮೊದಲೇ ಈ ವಿವಾಹ ಸಂಬಂಧದ ಬಗ್ಗೆ ಮಾತುಕತೆ ನಡೆದಿತ್ತು ಎಂದು ಹೇಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು