ಶನಿವಾರ, ನವೆಂಬರ್ 23, 2019
18 °C
‘ವಿಚಾರಣೆಯ ಹೆಸರಲ್ಲಿ ತೀವ್ರ ಕಿರುಕುಳ ನೀಡಲಾಗುತ್ತಿದೆ’ ಎಂಬ ಆರೋಪ

ರಕ್ತ ಜಿನುಗುತ್ತಿದ್ದರೂ ಕರೆದೊಯ್ದ ಇ.ಡಿ. ಅಧಿಕಾರಿಗಳು: ದುಃಖಿಸಿದ ಡಿಕೆಶಿ

Published:
Updated:

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ)ದ ವಿಶೇಷ ನ್ಯಾಯಾಲಯ ನಡೆಸಿದ ವಿಚಾರಣೆ ವೇಳೆ ಶಾಸಕ ಡಿ.ಕೆ. ಶಿವಕುಮಾರ್‌ ಅವರು, ವಿಚಾರಣೆಯ ಹೆಸರಲ್ಲಿ ತೀವ್ರ ಕಿರುಕುಳ ನೀಡಲಾಗುತ್ತಿದೆ ಎಂದು ಇ.ಡಿ. ಅಧಿಕಾರಿಗಳ ವಿರುದ್ಧ ಆರೋಪಮಾಡಿದರು.

‘ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆಸ್ಪತ್ರೆಯಲ್ಲಿ ವೈದ್ಯರು ಸೂಜಿ ಚುಚ್ಚಿದರು. ಆಗ ಕೈಯಲ್ಲಿ ರಕ್ತ ಜಿನುಗುತ್ತಿದ್ದರೂ ನನ್ನನ್ನು ಅಲ್ಲೇ ದಾಖಲು ಮಾಡದೆ ಕರೆದೊಯ್ಯಲಾಯಿತು’ ಎಂದು ಕಟಕಟೆಯಲ್ಲಿ ನಿಂತಿದ್ದ ಶಿವಕುಮಾರ್‌ ನ್ಯಾಯಾಧೀಶರಿಗೆ ವಿವರಿಸಿದರು.

‘ವಿಚಾರಣೆಯ ಹೆಸರಲ್ಲಿ ತೀವ್ರ ಕಿರುಕುಳ ನೀಡಲಾಗುತ್ತಿದೆ. ವಿಶ್ರಾಂತಿಗೂ ಅವಕಾಶ ನೀಡುತ್ತಿಲ್ಲ’ ಎಂದು ಅವರು ಒತ್ತಿ ಬಂದ ದುಃಖವನ್ನು ತಡೆದು ಹೇಳಿದರು.

‘ನನ್ನ ಹತ್ರ 317 ಬ್ಯಾಂಕ್‌ ಖಾತೆ ಇವೆ ಅಂತ ಹೇಳ್ತಾರಲ್ಲ. ಅಷ್ಟೆಲ್ಲಾ ಇದ್ರೆ ಎಲ್ಲಾನೂ ಇವರ ಹೆಸರಿಗೇ ಬರೆದುಬಿಡ್ತೀನಿ. ಚುನಾವಣೆಗೆ ನಿಲ್ಲುವಾಗ ಆಸ್ತಿ, ದುಡ್ಡಿನ ವಿವರ ನೀಡಿರುವುದಿಲ್ಲವಾ’ ಎಂದು ತಮ್ಮ ಸುತ್ತ ನಿಂತಿದ್ದ ಇ.ಡಿ. ಅಧಿಕಾರಿಗಳನ್ನು ನೋಡುತ್ತಲೇ ಶಿವಕುಮಾರ್‌ ಅಲ್ಲೇ ಇದ್ದ ಮಾಧ್ಯಮದವರಿಗೆ ಕನ್ನಡದಲ್ಲೇ ಹೇಳಿದರು.

ಇದನ್ನೂ ಓದಿ: ಡಿಕೆಶಿ ಕಸ್ಟಡಿ ಅವಧಿ ವಿಸ್ತರಣೆ: ಸೆ.17ರಂದು ಜಾಮೀನು ಅರ್ಜಿ ವಿಚಾರಣೆ

ವಿಚಾರಣೆಯ ನಡುವೆ ಬೆಂಬಲಿಗರಿಂದ ಭಾರಿ ಗದ್ದಲ ಕೇಳಿ ಬಂದಿದ್ದರಿಂದ ಶಾಂತವಾಗಿ ಇರುವಂತೆ ನ್ಯಾಯಾಧೀಶರೇ ಗದರಿದ ಪ್ರಸಂಗವೂ ನಡೆಯಿತು.

ನ್ಯಾಯಾಲಯದ ಸಣ್ಣ ಕೊಠಡಿಯಲ್ಲಿ ಭಾರಿ ಜನಸ್ತೋಮ ನೆರೆದಿದ್ದರಿಂದ ವಿಪರೀತ ಸೆಖೆಯಿಂದ ಬಳಲಿದ ಸಿಂಘ್ವಿ ಅವರ ಸಹಾಯಕ ವಕೀಲೆಯೊಬ್ಬರು ತಲೆ ಸುತ್ತಿ ಕುಸಿದುಬಿದ್ದ ಘಟನೆಯೂ ನಡೆಯಿತು.

ಪ್ರತಿಕ್ರಿಯಿಸಿ (+)